Previous ಕಿವಿಯನೊಡ್ಡಿ ಕೇಳಲಾಗದು ಭಕ್ತಹೃದಯವಾಸ Next

ನಿಮ್ಮ ನಿಜಪದ

ಭೋಗಷಟ್ಪದಿ

ಲೋಕದವರ ಭಕ್ತಿಯುಕ್ತಿ
ಸಾಕು ಸೊಗಸದೆನಗೆ ನಿನಗೆ
ಏಕವಾಹ ಪರಿಯ ಮನವ ಬಯಸುತಿರ್ಪೆನು || ಪ ||

ಎನ್ನ ಒಡೆಯ ಎನ್ನ ದೇವ
ಎನ್ನ ಕರ್ತ ಬಂದನೆಂದು
ಉನ್ನತಾಸನವನು ಇಕ್ಕಿ ಕೈಯ ಮುಗಿವರು
ಹೊನ್ನು ಹೆಣ್ಣು ಹಿಡಿದು ಅವರು
ಚುನ್ನವಾಡುತಿಹರು ಅವರ
ಭಿನ್ನ ಭಕ್ತಿಯನ್ನು ಕಂಡು ಸಾಕು ಸೊಗಸದು || ೧ |

ಲೀಲೆಯಿಂದ ಮನೆಗೆ ಕರೆದು
ಹಾಲುತುಪ್ಪಗಳನ್ನು ನೀಡಿ
ವೀಳೆಯವನು ಕೊಡುವ ಭಕ್ತಿಯಿಂದಲಿರ್ಪರು
ಮೇಲೆ ವನಿತೆ ಧನವು ಭೂಮಿ
ಮಾಲೆಯೊಳಗೆ ಸಿಲ್ಕಿ ನಲಿದು
ಲೋಲವಾಡುವವರ ಭಕ್ತಿ ಸಾಕು ಸೊಗಸದು || ೨ ||

ಇಚ್ಛೆಯಿಲ್ಲದಿರಲು ಅವರು
ಮೆಚ್ಚಿ ಪೂಜೆ ಮಾಡುತಿಹರು
ನಿಚ್ಚನಿಚ್ಚ ಕಂಡು ಅವರ ದುರ್ಗುಣಂಗಳ
ಬಿಚ್ಚಿ ಎತ್ತಿ ನುಡಿಯೆ ಮೋರೆ
ಕಿಚ್ಚಿನಂತೆ ಮಾಡುತಿಹರು
ಹುಚ್ಚರುಗಳ ಭಕ್ತಿ ಸಾಕು ಎನಗೆ ಸೊಗಸದು || ೩ ||

ಒಳ್ಳಿತಾಗಿ ಓದಿ ಹಾಡಿ
ಲಲ್ಲೆ ನುಡಿಯ ನುಡಿಯಲವರ
ಎಲ್ಲಿ ಗಮಿಸಬೇಡಿ ನೀವು ನಮ್ಮ ಮನೆಯೊಳು
ಇಲ್ಲಿ ಕ್ಷಮಿಸಿ ಎಂದ ಬಳಿಕ
ಎಳ್ಳನನಿತು ವಿಗಡೆ ತೋರ್ವ
ಜೊಳ್ಳುಗಾರರವರ ಭಕ್ತಿ ಸಾಕು ಸೊಗಸದು || ೪ ||

ಮರ್ತ್ಯರುಗಳು ಮಾಳ್ಪ ಭಕ್ತಿ
ವ್ಯಕ್ತವಾಗಿ ತೋರದೆನಗೆ
ನಿತ್ಯವಾಗಿ ತೋರುತಿಹುದು ನಿಮ್ಮ ನಿಜಪದ
ನಿತ್ಯ ನಿಮ್ಮ ಚರಣಯುಗವ
ಚಿತ್ತ ಮೆಚ್ಚಿ ಅಗಲದಂತೆ
ಕರ್ತೃ ಶಿವಷಡಕ್ಷರಾಂಕ ಮಾಡು ಎನ್ನನು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಕಿವಿಯನೊಡ್ಡಿ ಕೇಳಲಾಗದು ಭಕ್ತಹೃದಯವಾಸ Next