ಎಲ್ಲ ಶರಣರ ನೆನೆದು | ಸಾರೆ ಚಲ್ಯಾದೆ ಮುಕುತಿ |
ತಾನೇ ತಾನಾಗಿ |
- ರಾಗ: ಸಾಳಗ
ತಾನೇ ತಾನಾಗಿ ತಾನಿದಿರೆನ್ನದ
ತಾನೇ ಪ್ರತಿಯಲ್ಲದಪ್ರತಿಮ |ಪ|
ತಾನೇ ತನ್ನಿಂ ತೋರುವ ತೋರಿಕೆ
ತಾನೇ ತನ್ನಿಂದಾದುದನು
ತಾನೇ ತನ್ನಿಂ ತನ್ನನೆ ತಿಳಿಯಲು
ತಾನೇ ತನ್ನಿಂದನ್ಯವೊಂದುಂಟೆ |೧|
ತಾನೇ ಅಷ್ಟತನುವಿನೊಳು ಸಿಲುಕಿರ್ದು
ತಾನೇ ಮೀರಿ ತೋರ್ಪಾತ ತಾನೆ
ತಾನೇ ತನ್ನ ಘನತೆಯಿಂದಿರ್ಪನ ತಾ
ನಾನರಿತೆನೆಂಬುದು ದಿಟವಹುದೆ |೨|
ತಾನೆ ಸನ್ಮಣಿಮುಕುರದಂತಿರುತಿರ್ಪ
ತಾನೆ ಪ್ರತಿಯಿಟ್ಟು ತೋರ್ಪ ತಾನೆ
ತಾನೆ ತಾನೆಂದರಿದ ನಿಜಾತ್ಮನು
ತಾನೆ ಸೌರಾಷ್ಟ್ರ ಸೋಮೇಶ ತಾನೆ |೩|
ಗ್ರಂಥ ಋಣ: ಡಾ. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”
ಎಲ್ಲ ಶರಣರ ನೆನೆದು | ಸಾರೆ ಚಲ್ಯಾದೆ ಮುಕುತಿ |