*
ರಚನೆ: ಧರ್ಮಗುರು ಬಸವೇಶ್ವರ
ಮನಭಾವ ಕರುಣದೊಳ ಹೊರಗೆ ತೆರಹಿಲ್ಲದಿಹ
ಘನಲಿಂಗ ಸಂಗದಿಂ ಸುಖಿಯಾದೆನು || ಪ ||
ಪರತತ್ವಲಿಂಗ ಕೈಸಾರಲಾ ಲಿಂಗದೊಳು
ತೆರಹಿಲ್ಲದಿಹ ಭಾವ ದೃಷ್ಟಿನಟ್ಟು
ಹರುಷ ಹರಿವರಿದು ಮನ ಬೆರಸಿ ಪುಳಕಗಳೊಗೆದು
ಕರಗಿ ಸುರಿವಶ್ರುಜಲ ಮೆರೆದಪ್ಪಿ || ೧ ||
ಸೆರೆ ನೆಗೆದು ಕಠದೊಳು ಗದುಗದುಕೆ ಮೂಡಿ ತನು
ಹೊರೆಯೇರಿ ಸರ್ವಾಂಗ ಕರಗಿ ಕೊರಗಿ
ನೆರೆವ ಭವದುರವಣಿಯ ತವಕದಿಂದ ಲಿಂಗದೊಳು
ಪರವಶೀಭಾವ ತಲ್ಲೀಯವಾಗಿ || ೨ ||
ನೀವಲ್ಲದೆನಗೆ ಮತ್ತೇನು ತೋರದು ನಿಮ್ಮ
ಧ್ಯಾನದಿಂದಿರುಳು ಹಗಲೆಂದರಿಯೆನು
ಮಾನಸಾ ವಚನ ಕಾಯದೊಳು ಸಂದಳಿದು ನಿಮ
ಗಾನೊಲಿದು ಎನ್ನನೊಚ್ಚುತಗೊಟ್ಟೆನು || ೩ ||
ನಚ್ಚಿ ಮನ ಮೆಚ್ಚಿ ಒಚ್ಚತವೋಗಿ ಲಿಂಗದೊಳು
ಬೆಚ್ಚಂತೆ ಪ್ರಾಣಪದ ಸಂಗವಾಗಿ
ಬಿಚ್ಚಿ ಬೇರಿಲ್ಲದಿಹ ಬೆಳಗೆನ್ನನೊಳಕೊಂಡು
ಸಚ್ಚಿದಾನಂದದಿಂ ಮೈಮರೆದೆನು || ೪ ||
ಲಿಂಗಭಾವವೆ ಭಾವ ಲಿಂಗ ಪ್ರಾಣವೆ ಪ್ರಾಣ
ಲಿಂಗವಂಗದೊಳಂಗ ಬೇರಿಲ್ಲದೆ
ಲಿಂಗಸಂಗವೆ ಸಂಗ ಸ್ವಯವಾಗಿ ಕೂಡಲಾ
ಸಂಗ ನಿಮ್ಮೊಳು ಕೂಡಿ ಸುಖಿಯಾದೆ || ೫ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”