Previous ಎಂತ ಕನಸ ಕಂಡೆ! ಎಲ್ಲವು ತಾನು Next

ಶಿವನ ಪೂಜೆ ಮಾಡು ಮನವೆ

ಭೋಗಷಟ್ಪದಿ

ಶಿವನ ಪೂಜೆ ಮಾಡು ಮನವೆ
ಶಿವನ ಮಂತ್ರ ನೆನೆಯೊ ಮನವೆ
ಶಿವನ ಭಕ್ತರುಗಳ ಕೂಡಿ ಆಡುತಿರು ಕಂಡ್ಯಾ || ಪಲ್ಲವಿ ||

ಹಲವುಜನ್ಮಗಳಲಿ ಬಂದು
ತೊಳಲಿ ಬಳಲಿ ಬಹಳ ನೊಂದೆ
ಸ್ವಲ್ಪದಿಂದ ದೊರಕಿರುವೀ ಮನುಜಜನ್ಮವು
ಒಲಿದು ಗುರುವಿನಂಘಿವಿಡಿದು
ಬಲುಮೆಯಿಂದ ಸಾಧಿಸುವುದು
ಮಲತ್ರಯಗಳೊಳಗೆ ಸಿಲುಕಿ ಕೆಡಲು ಬೇಡ ಕಂಡ್ಯಾ || ೧ ||

ಸಾಧಿಸುವುದು ಅವರ ಭೇದ
ಭೇದಿಸುವುದು ಅಂಗಸ್ಥಲವು
ನಾದಬಿಂದು ಕಳೆಗಳೊಳಗೆ ತಿಳಿದು ನೋಡುತಾ
ಆದಿ ಮಧ್ಯ ಅಂತ್ಯವಿಡಿದು
ಸಾಧಿಸುತಲಿ ಕಾಣಬಹುದು
ವಾದಹಿಂಗಿ ಲಿಂಗಸಂಗವಾಗಿ ಇರು ಕಂಡ್ಯಾ || ೨ ||

ಇಂದು ರವಿಗಳೆರಡು ಪಥವು
ಒಂದೆಯಾಗಿ ಮೂಲಮಂತ್ರ
ಹೊಂದಿ ತನುವಿನೊಳಗೆ ತಾನು ಆಟವಾಡುತಾ
ಚಂದದಿಂದ ಮೂರು ಮಾಗಿ
ಸಂದುವಿಲ್ಲದಾಂಗೆಯಿರಲು
ಇಂದುಧರನು ಷಡಾಕ್ಷರಿಯ ಲಿಂಗನೊಲಿವನು || ೩ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು

ಪರಿವಿಡಿ (index)
Previous ಎಂತ ಕನಸ ಕಂಡೆ! ಎಲ್ಲವು ತಾನು Next