Previous ಕರ್ಮ ಕಾಯನು ಅಲ್ಲ ಲಿಂಗದೊಳು ಮೆಚ್ಚಿ Next

ನುಡಿಯಲಾಗದಿನ್ನು....

ರಚನೆ: -ಪ್ರಥಮ ಶೂನ್ಯ ಪೀಠಾಧೀಶ ಅಲ್ಲಮ ಪ್ರಭು


ನುಡಿಯಲಾಗದಿನ್ನು ನುಡಿಯಲಾಗದಿದ್ದು
ನುಡಿಯಲಾಗದಿನ್ನು ಜಡಮರ್ತ್ಯರೊಡನೆ || ಪ ||

ಗಗನಾಕಾರದ ಮಂಟಪದೊಳಗೆ
ಹೊಗಲುಪಾಯವಿತ್ತೆಂದುದು ಘನ
ಕಂಗಳು ಲಿಂಗ ಕರಸ್ಥಲ ಜಂಗಮ
ಬಂದ ಸಂಬಂಧವನರಿಯರಾಗಿ || ೧ ||

ಆದಿಲಿಂಗವೆಂಬುದು ಬೇರಿಲ್ಲ ಕಾಣಿ ಭೋ
ಪಂಗಡದೆಗೆದು ಮಡಿಯದಿರಿ ಭೋ
ಪಂಗಡದೆಗೆದು ನುಡಿವರಿಗೊಂದೆ ಲೋಕವಿತ್ತು
ಮುಂದಿರ್ದ ಘನವ ನೀವರಿಯಿರಲವೋ || ೨ ||

ತಲೆಯೊಳಗೆ ನಾಲಗೆಯ ಗುಡೆದೆವೆಂದು
ಹಲವು ಪರಿಯಲಿ ನೀವುಗಳುಯಿದಿರಿ ಭೋ
ಅನ್ನಪಾನದ ಹಂಗು ಬೆನ್ನಿಂದ ಬಿಡದು
ಇನ್ನು ಸಂಸಾರಿ ನಿನಗನುಭವವೇ || ೩ ||

ವಿದ್ಯಬುದ್ದಿ ಪರಸಂಬಂಧದ ಮೇಲೆ
ಹೊದ್ದುವುದಹಂಕಾರ ಘನವಾಗಿ
ವಿದ್ಯದಿ ತಾವು ಬಲ್ಲಿದರೆಂಬರು
ಸತ್ತರು ಹಿರಿಯರು ಹಲಬರು || ೪ ||

ಕಂಗಳು ಲಿಂಗ ಕರಸ್ಥಲ ಜಂಗಮ
ಇಂತೆಂದುದು ಲಿಂಗಸಂಬಂಧವು
ಇದನೊಲ್ಲೆನೆಂಬವರಾದ ಲೋಕಕ್ಕೆ
ಹೋದಡೇನು ವಾಯ ವಾಯ ಗುಹೇಶ್ವರ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಕರ್ಮ ಕಾಯನು ಅಲ್ಲ ಲಿಂಗದೊಳು ಮೆಚ್ಚಿ Next