Previous ಧ್ಯಾನದೊಳೆಂದಿಹೆನೋ ಯುಗವನಂತವು ಹೋಗುತಿರುತಿಹವು Next

ಎನ್ನಪರಾಧವ ನೋಡದೆ ರಕ್ಷಿಸು

ಪರಿವರ್ಧಿನಿಷಟ್ಪದಿ

ಎನ್ನಪರಾಧವ ನೋಡದೆ ರಕ್ಷಿಸು ಪನ್ನಗಧರವರ ಮೂರ್ತಿ ಕೃಪಾಕರ
ಚನ್ನ ಷಡಕ್ಷರ ಲಿಂಗವೆ ಎನಗೊಲಿದೊಮ್ಮಿಗೆ ಕೃಪೆಯಾಗು || ಪ ||

ಕ್ಷುಲ್ಲನು ಕ್ಷುದ್ರನು ಪರರಭಿಮಾನಕೆ
ಭುಲ್ಲವಿಸುವಖಿಲ ಕಪಟಾತ್ಮಕ ಬಹು
ಸುಳ್ಳನು ಕಳ್ಳರ ಮೇಳಾಪನು ಮನ ತಲ್ಲಣಿಸದೆ ಪಾಪ
ವೆಲ್ಲನು ಮಾಡುವ ದುರ್ಜನ ದುರ್ಮುಖ
ನಿಲ್ಲದೆ ಸತ್ಪುರುಷರ ನಿಂದಿಸುತಿಹ
ಖುಲ್ಲಾತ್ಮಕನವಗುಣಗಳ ನೋಡದೆ ಒಮ್ಮಿಗೆ ಕೃಪೆಯಾಗು || ೧ |

ಕನ್ಯಾರ್ಥವ ಪತಿಕರಿಸುತ ಭೂಮಿಯ
ಮನ್ನಣೆಯಳಿದಿಹ ದಾಸಿಯ ದುಷ್ಕುಲ
ವೆನ್ನದೆ ವರ್ತಿಪ ಶಿಶ್ನಪರಾಯಣ ಕಾಮುಕನಜ್ಞಾನಿ
ಸನ್ನುತ ಗುರುಚರವಾಕ್ಯವ ಮೀರಿಯೆ
ಭಿನ್ನವ ಮಾಡಿ ಶಿವಾಗಮಶಾಸ್ತ್ರಗ
ಳೆನ್ನದೆ ಮುಂದಣ ಸದ್ಧತಿಯರಿಯೆನು ಒಮ್ಮಿಗೆ ಕೃಪೆಯಾಗು || ೨ ||

ಈಕ್ಷಿಸಲೊಲ್ಲದೆ ಲಿಂಗವ ವನಿತಾ
ವಕ್ಷೋಜಾನನ ಕಟಿ ಪೊರೆವಾರವ
ನೀಕ್ಷಿಪಪೇಕ್ಷಾ ತಾಮಸದಿಂದಲಿಮತಿ ಮಸಳಿಸಿತಡಗಿ
ತಿಲಕ್ಷಿಸಲೊಲ್ಲದೆ ಹಿರಿಯರ ವಚನವ
ಭಕ್ಷಣೆಗೋಸುಗ ಡಂಭಕರೂಪನು
ಮೋಕ್ಷವನರಿಯದ ಗುಪ್ತದ್ರೋಹಿಗೆ ಒಮ್ಮಿಗೆ ಕೃಪೆಯಾಗು || ೩ ||

ಖಳನು ಪಾಪಿಷ್ಠನು ಭವಿಧೂರ್ತರ‍
ಮೇಳನು ಹಿ೦ಸೆಗೆ ಹೆದರದೆ ಹಿರಿಯರ
ಝಾಳಿಸಿ ನುಡಿದಪಕೀರ್ತಿಯ ಪಡೆದನಕಾಕು ವಿಚಾರನಿಗೆ
ಢಾಳಕತನದಲಿ ವಾಗ್ದಾಲದೊಳತಿ
ಕಾಲನ ಬಾಧೆಗೆ ಬಿದ್ದು ಪುನರ್ಭವ
ಮಾಲೆಯ ಕೊರಳಿಗೆ ತೊಡರಿಸಿಕೊಂಬನಿಗೊಮ್ಮಿಗೆ ಕೃಪೆಯಾಗು || ೪ ||

ಹೀನನು ಬಹುಮುಖಶಾಸ್ತ್ರವ ಕಲಿತನು
ಜ್ಞಾನವ ಮಾನಿಗಳು ಧಿಕ್ಕರಿಸುವಾ
ನಾನಾಕೃತ್ಯವನೆಸಗಿ ಗುರೂನ್ನತನಾಗದೆ ಭವಭವದ
ಕಾನನದೊಳು ಕಣ್ಗಾಣದೆ ತಿರುಗುವ
ವಾನರನಂತೆ ಪರಾಪರಮುಕ್ತಿಯ
ನೇನೆಂದರಿಯದ ಬಹುಮುಖ ಜಡನಿಗೆ ಒಮ್ಮಿಗೆ ಕೃಪೆಯಾಗು || ೫ ||

ಸುರಪಶುವಿಗೆ ಗೊಡ್ಡಾವಿನ ಸಂಗವೆ
ಸುರತರುವಿದ್ದಂತೆಲುವದ ಮರನಂ
ವರಚಿಂತಾಮಣಿ ಇರುತಿರೆ ಗಾಜಿನ ಚಟಿಕೆಯ ಹಿಡಿವಂತೆ
ಹರಮಂತ್ರವು ಪಂಚಾಕ್ಷರಿ ಇರುತಿರೆ
ಪರಿಪರಿ ಕೃತಕದ ಮಂತ್ರವ ಬಯಸುತ
ನರರುಗಳಂದದಿ ನಿರಯಕೆ ಬೀಳೂನಿಗೊಮ್ಮಿಗೆ ಕೃಪೆಯಾಗು || ೬ ||

ಅವಗುಣಗಳನಿನ್ನಾರಿಗೆ ಹೇಳಲಿ?
ತವ ಗುರುವಾಕ್ಯವ ಮೀರಿದ ಕಾರಣ
ಶಿವನೊಲಿಯನು ಶಿವನೊಲಿಯದಿರಲು ಶಿವಶರಣರು ಒಲಿಯರಲಾ
ಭವ ಹೀಗಾದರೆಯೆಂದಿಗೆ ಬಿಡುವದು
ತವೆಯಾನಂದದಯಾಂಬುಧಿ ಭವಗಿರಿ
ಪವಿಯೇ ರಕ್ಷಿಸು ಕೊರತೆಯದಾರಿಗೆ ಒಮ್ಮಿಗೆ ಕೃಪೆಯಾಗು || ೭ ||

ತಂದೆಯ ಮಾತನು ಮೀರಲು ಶಿಕ್ಷೆಯು
ಒಂದಾದಡೆ ಉಂಟಲ್ಲದೆ ಸದ್ಗುರು
ತಂದೆಯ ಮಾತನ್ನು ಮೀರಲು ಶಿಕ್ಷೆಯು ಎಂದಿಗು ಉಂಟಷ್ಟೆ.
ಮುಂದಾದ ಸದ್ಗುರುವಿಂದಲ್ಲದೆ ಶಿವ
ನಿಂದಾದೊಡೆ ಶಿಕ್ಷೆಯು ತಾನಹುದಾ
ನಂದ ದಯಾಪರಸಿಂಧುವ ಹರನೇ ಒಮ್ಮೆಗೆ ಕೃಪೆಯಾಗು || ೮ ||

ಸುರಧನು ತೃಣಕಣ ಮರುತನ ಜ್ಯೋತಿಯ
ಯಿರವತಿ ಸಂಧ್ಯಾರಾಗವು ಜ್ವಲಿಸಿರೆ
ಕರಿ ಶುಂಡಾಲದ ಶಿಶುವಸಿಧಾರೆಗೆಯೊಡ್ಡಿದ ಕುರಿಯೆಂದು
ಅರಿದರಿದೀತನು ನಿತ್ಯವೆನುತ್ತಲಿ
ಹರಿಯಜ ಸುರಮನು ಮುನಿಗಳು ಕೆಟ್ಟಾ
ಪರಿಯೇಂ ವ್ಯರ್ಥದಿ ನಾ ಕೆಡಲಾರನು ಒಮ್ಮಿಗೆ ಕೃಪೆಯಾಗು

ಮೇರುವ ಸಾರುವ ವಾಯಸ ಕನಕ ಶ
ರೀರಮದಾಗಿರದಾರಿಗೆ ಪರುಷವು
ಸೇರಿದ ಕಬ್ಬಿಣದವಗುಣವಳಿಯದ ದಾರಿಗೆ ಕೊರತೆಯದು
ಘೋರಭವಾಟವಿಯಾನಲನುರಿಯೊಳು
ಘೋರುಂಗೊಳುತಿಹನಾರಯ್ಯದರಿರೆ
ಸಾರಿಯೆ ತಟ್ಟುವ ಕೊರತೆಯದಾರಿಗೆ ಒಮ್ಮಿಗೆ ಕೃಪೆಯಾಗು

ತರುಗಳ ಗುಣಗಳ ನೋಡಿತೆ ಚಂದನ
ಪರುಷವು ಲೋಹದ ಅವಗುಣವರಸಿತೆ
ಅರಿಯಿತ ಕೀಟಕ ಗುಣವನು ಭ್ರಮರವು ಆ ಪರಿಯಂದದಲಿ
ಬರಿಯವಗುಣಿಯಲಿ ಸದ್ಗುಣವರಸದೆ
ಪರಮಚಿದಂಬುಧಿಯದ್ವಯನಘಹರ
ಗುರುವ ಷಡಕ್ಷರಲಿಂಗವ ಎನಗೊಲಿದೊಮ್ಮಿಗೆ ಕೃಪೆಯಾಗು || ೧೧ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಧ್ಯಾನದೊಳೆಂದಿಹೆನೋ ಯುಗವನಂತವು ಹೋಗುತಿರುತಿಹವು Next