ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ
ತೂಗಿದೆನು ನಿಜದುಯ್ಯಾಲೆ ನಾ
ಬೀಗಿದೆನು ನೆನವು ನಿಶ್ಚಲದಲ್ಲಿಗೆ |ಪಲ್ಲವಿ|
ನಿಲ್ಲದೆ ಧರೆಯ ಮೇಲೆ ನೆಟ್ಟ
ಎರಡಾಲಿಕಲ್ಲಿನ ಕಂಭವು
ಮೇಲೆ ಮಾಣಿಕದ ತೊಲೆ
ಕೀಲಿಟ್ಟು ಜಾಣನಾಡಿದೆನುಯ್ಯಾಲೆ |೧|
ಸರವು ನಾಲ್ವರ ಹತಿಯೊಳು ಭರದಿಂದ
ಅರಿತ ಮಣೆಯಾರ ನಿಲಿಸಿ
ಅರಿದ ತೊಲೆಯ ಕಟ್ಟಲು ಆ ಉಯ್ಯಾಲೆ
ಹರಿಯುತೊದೆಯಿತು ಮುಂದಕ್ಕೆ |೨|
ನಾದದ ಕಲ್ಲ ಕಟ್ಟಿಯದರೊಳಗೆ
ಭೇದಿಸುವ ಬಿಂದುಜಲವು
ಆಧಾರದ ಕಳೆಮೊಳೆಯೊಳು ಕೊಳವನದ
ಆದಿಲಿಂಗನ ಪಾಡುತ |೩|
ಮುತ್ತುಮಾಣಿಕ್ಯದ ರತ್ನದ ತೊಡಿಗೆಯನು
ಸತ್ಯಮುಖಿಯರು ತೊಟ್ಟರು
ಅರ್ತಿಯಿಂ ರಾಗ ಮಾಡಿ ಪಾಡಿದರು
ಸತ್ಯಜ್ಞಾನದ ಶೃತಿಯೊಳು |೪|
ಕೊಳಲು ಕಹಳೆಯ ಡೋಲಿನ ರವಸಕ್ಕೆ
ನಲಿದು ಒಡೆಯಿತು ಮುಂದಕ್ಕೆ
ಹೊಳೆವ ವಜ್ರದ ಕಂಭದ ಬೆಳಗಿನ
ಒಳಗೆ ಆಡಿದೆನುಯ್ಯಲ |೫|
ಈಡಾಪಿಂಗಳನಾಳದ ಬೆಳಗಿನೊಳ
ಗಾಡಲೊದೆಯಿತು ಮುಂದಕ್ಕೆ
ನಾಡು-ದೇಶವು ನೋಡಲಾ ಉಯ್ಯಾಲೆ
ಗಾಡಿ ಸುಷುಮ್ನೆಯ ಕೂಡಿತು |೬|
ಆರು ಚಕ್ರವನು ದಾಂಟಿ ಆರು ಉಯ್ಯಾಲೆ
ಹೋರ ಒದೆಯಿತು ಮುಂದಕ್ಕೆ
ಮೀರಿದ ಸ್ಥಲದಿ ನಿಂದು ಚೆನ್ನಮಲ್ಲನೊಳು
ಬೆರೆದು ಆಡಿದೆನುಯ್ಯಾಲೆ |೭|
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”