ಕುಸುಮಷಟ್ಪದಿ
ಹೆಮ್ಮಗಳು ನಾ ನಿಮ್ಮ
ನೆಮ್ಮಿಕೊಂಡಿರುವೆನೈ?
ಗಮ್ಮನೇ ಎನ್ನುವನು ಕರೆಯ ಬನ್ನಿ || ಪ ||
ಸುವ್ವಿ, ಚೆನ್ನಣ್ಣನಿಗೆ
ಸುವ್ವಿ, ಮಡಿವಾಳನಿಗೆ
ಸುವ್ವಿ ನಮ್ಮಪ್ಪ ಬಸವಯ್ಯನಡಿಗೆ
ಸುವ್ವಿ, ಅಜಗಣ್ಣನಿಗೆ
ಸುವ್ವಿ, ಸತ್ಯಣ್ಣನಿಗೆ
ಸುವ್ವಿ ನಮ್ಮಯ್ಯ ಪ್ರಭುರಾಯನಡಿಗೆ || ೧ ||
ಸುವ್ವಿ, ಹಳ್ಳಯ್ಯನಿಗೆ
ಸುವ್ವಿ, ಧೂಳಯ್ಯನಿಗೆ
ಸುವ್ವಿ ನಮ್ಮಯ್ಯ ಶ್ವಪಚಯ್ಯನಡಿಗೆ
ಸುವ್ವಿ, ಭೀಮಯ್ಯನಿಗೆ
ಸುವ್ವಿ ಕಕ್ಕಯ್ಯನಿಗೆ
ಸುವ್ವಿ ನಮ್ಮಯ್ಯ ಚೆನ್ನಯ್ಯನಡಿಗೆ || ೨ ||
ನಮ್ಮವರ ಪಾಡುವೆನು
ನಮ್ಮವರ ಪೊಗಳುವೆನು
ನಮ್ಮವರನಾವಗಂ ಹರಸುತಿಹೆನು
ನಮ್ಮವರು ಬರುವುದನು
ಉಮ್ಮಳಿಸಿ ನೋಡುವೆನು
ಹಮ್ಮೈಸುವೆನು ಮನದಿ ಬಾರದಿರಲು || ೩ ||
ಕುಟ್ಟುತ್ತ ಬೀಸುತ್ತ
ನೆಟ್ಟನೇ ನಮ್ಮ ಒಡ
ಹುಟ್ಟಿದ ಪುರಾತರನು ಹಾಡುತಿಹೆನು
ಕಷ್ಟಘನ ಮರ್ತ್ಯದಾ
ಬಟ್ಟೆ ನಾನೊಲ್ಲೆ ಕೃಪೆ
ಹುಟ್ಟದೇ ನಮ್ಮವರು ಕರೆಯಿರಯ್ಯಾ || ೪ ||
ನೀರ ಹೊಳೆಯಲಿ ನಿಂದು
ದಾರಿಯನು ನೋಡುವೆನು
ಬಾರದಿರೆ ಮನದೊಳಗೆ ಕರಗಿ ಕೊರಗಿ
ಆರೈದು ಮತ್ತೊಮ್ಮೆ
ದೂರ ದೃಷ್ಟಿಯನಿತ್ತು
ಸಾರಿ ನೋಡುವೆ ನಿಲುಕಿ ಅಳಲಿ ಬಳಲಿ || ೫ ||
ಬಂದವರ ಬರುವವರ
ನಿಂದವರ ನೆರೆದವರ
ಕುಂದದಲೆ ಕೇಳುವನು ನಮ್ಮವರನು
ಹಿಂದಾದ ದುಃಖದಲಿ
ನೊಂದನೈ ನಮ್ಮವರು
ಎಂದಿಗೆ ಎನ್ನುವನು ಕರೆಯಬಹರೋ || ೬ ||
ಪದುಳವೇ ನಮ್ಮವರ
ಪದಪದ್ಮ ಎನ್ನುವೆನು
ಪದಪಿಂದ ಕರೆದೊಯ್ಯಲೊಲ್ಲರೇಕೆ
ಉದಯಾಸ್ತಮಾನದಲ್ಲಿ
ಕುದಿದು ಕೋಟಲೆಗೊಂಬೆ
ಹೃದಯ ತಾ ಕರಗದೇ ನಮ್ಮವರಿಗೆ || ೭ ||
ಅಳಲುವೆನು ಮನದೊಳಗೆ
ಬಳಲುವೆನು ಬಾರದಿರೆ
ಕಳೆಯೇರುವೆನು ಒಮ್ಮೆ ನೆನೆದು ನೆನೆದು
ಮಲಹರನ ಶರಣರಾ
ಬಲವ ನೋಡುವೆನೊಮ್ಮೆ
ಸಲೆಯನ್ನ ಕನಸಿಂಗೆ ಬಾರರೆನುತ || ೮ ||
ಹಿಂದುಳಿಯಿತಮವಾಸ್ಯೆ
ಮುಂದೆ ಹುಣ್ಣಿಮೆ ಬಂತು
ಎಂದಿಗೇ ಎನ್ನನ್ನು ಕರೆಯಬಹರೋ
ನೊಂದು ಸುಯ್ಗರೆಯುವೆನು
ಬೆಂದು ಬೆಂಡಾಗುವೆನು
ಚಂದವೇ ತಮಗೆನ್ನ ನೋಡದಿಹುದು || ೯ ||
ತರಗೆಲೆಯು ಗಿರುಕೆನಲು
ಹೊರಗೆ ನಾನಾಲಿಸುವೆ
ಬರವಿಲ್ಲದಿರೆ ಮನದಿ ಸುಯ್ಗರೆವೆನು
ಪರರ ಶಿಶುವೆಂದೆನುತ
ಶರಣರೂ ಎನ್ನುವನು
ಮರೆದರೋ ಎಂದೆನುತ ಹೆದರುತಿಹೆನು || ೧೦ ||
ಶರಣರೊಳು ಸುಖದುಃಖ
ದಿರವ ಹೇಳುವೆ ನಾನು
ಪರರೆನ್ನ ಚಿಂತೆಯನ್ನರಿಯರಾಗಿ
ಅರಸು ಷಡಕ್ಷರಿಯ
ವರರೆನ್ನ ಕಾಡಿದರೆ
ಶರಣರಿಗೆ ಹೇಳಿ ನಾ ಕಳೆವೆನಯ್ಯಾ || ೧೧ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ