ಶಿವಲಿಂಗದೊಳಗಣ ಜಂಗಮಲಿಂಗ | ಓರಂತೆ ಮನಸೋತೆ |
ಸಂಗನೆಂದಂತೆ ಎಂದನಾಗಿ |
ರಾಗ: ಗುಂಡಾಕ್ರೀ
ಸಂಗನೆಂದಂತೆ ಎಂದನಾಗಿ ಸಂಗವಾಯಿತ್ತು
ಸಂಗನ ಬಸವಣ್ಣಂಗೆ ||ಪ||
ಸಂಗವಾಯಿತ್ತು ನಯನ ಲಿಂಗದಲ್ಲಿ ಲೀಯವಾಗಿ
ಸಂಗವಾಯಿತ್ತು ಶ್ರೋತ್ರವನ್ಯವನಾಲಿಸದೆ
ಸಂಗವಾಯಿತ್ತು ಘ್ರಾಣ ಪರಿಮಳವ ತೀವಿ ತಂದು
ಸಂಗವಾಯಿತ್ತು ಮಹದಲ್ಲರ್ಪಿಸಿ ಮಹಾಪ್ರಸಾದಿಯಾದ ||1||
ಸಂಗವಾಯಿತ್ತು ಜಿಹ್ವೆ ಲಿಂಗದ ರುಚಿಯನೆ ಅರಿದು
ಸಂಗವಾಯಿತ್ತು ಹಿಂಗದಲ್ಲಿಯೇ ತಲ್ಲೀಯವಾಗಿ
ಸಂಗವಾಯಿತ್ತು ಬಲ್ಲೆನರಿಯೆನೆಂಬ ಸಂದಳಿದು
ಸಂಗವಾಯಿತ್ತು ಮಹದಲ್ಲಿ ಮಹಾಪ್ರಸಾದಿಯಾದ ||2||
ಸಂಗವಾಯಿತ್ತು ಸ್ಪರ್ಶನ ಕ್ರಮವನರಿದು
ಸಂಗವಾಯಿತ್ತು ಸ್ಪರ್ಶನದಿಂದ ಪರಮ ಸುಖಿಯಾದನು
ಸಂಗವಾಯಿತ್ತು ಭಾವಸ್ಪರ್ಶನ ಜೀವಸ್ಪರ್ಶನ ಹಿಂಗಿ
ಸಂಗವಾಯಿತ್ತು ಪ್ರಾಣಸ್ಪರ್ಶನದಿಂ ಪ್ರಸಾದಿಯಾದ ||3||
ಸಂಗವಾಯಿತ್ತು ಲಿಂಗ ಮನ ಮಸ್ತಕದಲ್ಲಿ
ಸಂಗವಾಯಿತ್ತು ಸಂದಳಿದು ನಿಜರೂಪಾಗಿ
ಸಂಗವಾಯಿತ್ತು ಭೃಂಗ ಸಂಪಿಗೆಯ ಗ್ರಹಿಸಿದಂತೆ
ಸಂಗವಾಯಿತ್ತು ಮಹದಲ್ಲಿ ಮಹಾಪ್ರಸಾದ ಸಂಯುತವಾಗಿ ||4||
ಸಂಗವಾಯಿತ್ತು ಜ್ಞಾತೃ-ಜ್ಞಾನ-ಜ್ಞೇಯವನತಿಗಳೆದು
ಸಂಗವಾಯಿತ್ತು ನಿಷ್ಪತಿಪದವೆ ತಾನಾಗಿ
ಸಂಗವಾಯಿತ್ತು ಚಿದ್ಘನ ಬೆಳಗಿನ ಬೆಳಗಿನೊಳಗೆ
ಸಂಗವಾಯಿತ್ತು ಕೂಡಲಚೆನ್ನಸಂಗನಲ್ಲಿ ಬಸವಣ್ಣಂಗೆ ||5||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”
ಶಿವಲಿಂಗದೊಳಗಣ ಜಂಗಮಲಿಂಗ | ಓರಂತೆ ಮನಸೋತೆ |