Previous ಉಳುಹಿರಯ್ಯ ಶಿವನೊಳಗೆ ಮೋಹವಿರೆ ತಾನೆ ಶಿವನು Next

ಸರ್ವಾಂಗವನು ಸಲಿಸುವೆನು

ಕುಸುಮಷಟ್ಪದಿ

ಎನ್ನ ಸರ್ವಾಂಗವನು
ನಿನ್ನ ಪರಿಣಾಮಕ್ಕೆ
ಚೆನ್ನಾಗಿ ಸಲಿಸುವೆನು” ಎಲೆ ಲಿಂಗವೆ || ಪ ||

ಎನ್ನ ಹೃದಯವು ನಿಮಗೆ
ಉನ್ನತದ ಮನೆಯಯ್ಯ
ಎನ್ನ ಮುಖ ಮಖಶಾಲೆ ನಿಮಗಪ್ಪುದು
ಎನ್ನ ನವಚಕ್ರಗಳು
ಬಿನ್ನಣದ ನವನೆಲೆಯು
ಹೊನ್ನ ಉಪ್ಪರಿಗೆಯಾಗಿಪ್ಪುದಯ್ಯ || ೧ |

ಎನ್ನ ಹೃತ್ಕಮಲವದು
ರನ್ನ ಖಚಿತಗಳಪ್ಪ
ನಿನ್ನ ಶಯನಕೆ ಮಂಚವಾಗಿರ್ಪುದು
ಎನ್ನ ಜ್ಞಾನವು ನಿಮಗೆ
ಉನ್ನತದ ತಲೆಗಿಂಬು
ಎನ್ನಯಾಚಾರವೇ ಚರಣಭಟನು || ೨ ||

ಎನ್ನ ಶ್ರೋತ್ರವು ನಿಮ್ಮ
ಸನ್ನುತದ ನುಡಿಗಳನು
ಭಿನ್ನವಿಲ್ಲದೆ ಕೇಳ್ವ ದಾಸಿ ನಿಮಗೆ
ಎನ್ನ ತ್ವಕ್ಕದು ಚಲುವ
ನಿನ್ನ ಚರಣವ ತೊಳೆವ
ಮನ್ನಣೆಯ ತೊತ್ತಾಗಿ ಇರ್ಪುದಯ್ಯ || ೩ ||

ಎನ್ನ ನಯನವು ನಿಮಗೆ
ರನ್ನ ಬೆಳಗಿನ ಜ್ಯೋತಿ
ಎನ್ನ ಪ್ರಾಣವು ನಿಮಗೆ ಗಂಧಭರಣಿ
ಎನ್ನ ಜಿಹ್ವೆಯು ನಿಮಗೆ
ಮನ್ನಣೆಯ ತಾಂಬೂಲ
ಹೊನ್ನಪಡಿಗಮದಾಗಿ ಮೆರೆದಿರ್ಪುದು || ೪ ||

ಎನ್ನ ಕರಗಳು ಯೆರಡು
ನಿನ್ನ‍ ಪಾದವನೊಲಿದು
ಚೆನ್ನಾಗಿ ತೊಳೆವಂಥ ಹೆಂಗಳಯ್ಯ
ಎನ್ನ ಕಾಲುಗಳೆರಡು
ನಿನ್ನ ಮಜ್ಜನಗಳಿಗೆ
ಪನ್ನೀರುಗಳ ತರುವ ತೊತ್ತಿರಯ್ಯ || ೫ ||

ಎನ್ನ ಪ್ರಾಣವು ಇದುವೆ
ನಿನ್ನ ರತಿಸುಖಗಳಿಗೆ
ಭಿನ್ನವಿಲ್ಲದೆಯಪ್ಪ ಸತಿಯು ಬಳಿಕ
ಎನ್ನ ಮನವದು ಬಿಡದೆ
ಎನ್ನ ನಿನ್ನನು ತಂದು
ಚೆನ್ನಾಗಿ ಒಂದು ಗೂಡಿಪ ಕೆಳದಿಯು || ೬ ||

ಇಂತು ಸರ್ವಾಂಗವನು
ಮುಂತೆನ್ನ ಪ್ರಾಣವನು
ಸಂತತಂ ಲಿಂಗ ತಾ ಕೈಕೊಳುತಿರೆ
ಭ್ರಾಂತಿ ಭ್ರಮೆಯಳಿಯಿತ್ತು.
ಚಿಂತೆಯಿನ್ನೇಕಯ್ಯ
ಕಂತುಹರ ಶಿವಷಡಕ್ಷರಿಲಿಂಗವ || ೭ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಉಳುಹಿರಯ್ಯ ಶಿವನೊಳಗೆ ಮೋಹವಿರೆ ತಾನೆ ಶಿವನು Next