Previous ನಿಮ್ಮನರಿಯದೆ ಎಂದಿಗಪ್ಪುದೋ Next

ಧರೆಯ ಭೋಗವಸ್ಥಿರ

ಭೋಗಷಟ್ಪದಿ

ಧರೆಯ ಭೋಗದಸ್ಥಿರವನು
ಅರಿವ ಹಾಗೆ ಪೇಳ್ವೆ ಕೇಳು
ಅರಿದು ತಿಳಿದು ಮರೆದು ಶಿವನ ಭಜಿಸು ಸಂತತ || ಪ ||

ಪುರದೊಳೋರ್ವ ವಿದ್ಯೆಧರನು
ಹಿರಿದು ದಿವಸ ದೊರೆಯ ಕಾದು
ಹೊರಡದಿರಲು ಒಂದು ತಂತ್ರ ನೆನೆದನೆಂತೆನೆ
ಸುರರ ಚರನು ಹೊರಗೆ ಬಂದು
ಪುರದ ಬಾಗಿಲೊಳಗೆ ನಿಂದು
ದೊರೆಯ ಬರಲು ಹೇಳಿರೆಂದು ವನಕೆ ಬಂದನು || ೧ ||

ಓಡಿ ಹೋಗಿ ದೊರೆಗೆ ಹೇಳೆ
ನೋಡಿ ಬನ್ನಿರೆನುತ ಕಳುಹೆ
ನೋಡಿ ಬಂದು ಜೀಯ ದಿಟವು ಎನುತ ಹೇಳಲು
ಗಾಡನೆದ್ದು ಗಜದ ಶಿರದಿ
ರೂಢನಾಗಿ ಸೇನೆಸಹಿತ
ಓಡಿ ಬರಲು ವನದ ಮಧ್ಯದೊಳಗೆ ಸಂದಣಿ || ೨ ||

ಅನಿತರಿಂದ ಮುಂದೆ ಬರಲು
ಕನಕಮಯದ ಬಾಗಿಲಲ್ಲಿ
ಮಿನುಗುತಿರ್ಪ ಮೇಲುಕೋಟೆ ರತ್ನ ಕಲಶವು
ಅನಿತರಿಂದ ಮುಂದೆ ಬರಲು
ಕನಕಪೀಠದಲ್ಲಿ ಇಂದ್ರ
ನನುಪಮದ ಸುವೋಲಗವನು ನೃಪತಿ ಕಂಡನು || ೩ ||

ಆವದಾವ ಕಡೆಗೆ ನೋಡೆ
ತೀವಿದಾನೆ ಕುದುರೆ ಮಂದಿ
ಭಾವಿಸಲ್ಕೆ ಅರಿದು ಕನಕರಥಗಳಿರ್ಪವು
ದೇವಕನ್ನೆಯರುಗಳಖಿಳ
ತೀವಿಯಿರಲು ಓಲಗದೊಳು
ಭೂಮಿಯಾಣ್ಮ ಕಂಡು ತಲೆಯ ತೂಗುತಿರ್ದನು || ೪ ||

ತಳಿತ ಸತ್ತಿಗೆಗಳು ಕೋಟಿ
ಬಳಸಿಯಲ್ಲಿಯೊಪ್ಪುತಿಹವು
ಮಿಳಿತ ಚಾಮರಗಳು ಕೋಟಿ ಢಾಳಿಸುತ್ತಿರೆ
ಬಳಸಿ ಸುರರು ಯಕ್ಷರುಗಳು
ಕುಳಿತು ಇರಲು ಓಲಗದೊಳು
ಒಳಗೆಯೊಳಗೆ ನೃಪತಿ ಹೆದರಿ ಕೈಯ ಮುಗಿದನು || ೫ ||

ಕೈಯ ಮುಗಿದು ಕುಳ್ಳರಿಸುತ
ಜೀಯ ಇದುವೆ ವಿದ್ಯೆಯೆನಲು
ಒಯ್ಯನೆಲ್ಲ ಬಯಲು ಮಾಡಿ ಹೋಗಲಾ ನೃಪಂ
ಮೈಯ ಮರೆದು ಬೆರಗುವಟ್ಟು
ಜೀಯ ಇದುವೆ ಚೋದ್ಯವೆನಲು
ಕೈಯನೆತ್ತಿ ವಿದ್ಯೆಧರನು ಪೊಗಳೆ ಕಂಡನು || ೬ ||

ಸಾಂಗವಾಗಿ ಧರೆಯ ಭೋಗ
ಕಂಗಳಿಂಗೆ ತೋರುತಿಹುದು
ಹಿಂಗಿಹೋಹುದನಿತು ಬೇಗ ಇದರ ತೆರನೊಲು
ಮಂಗಳಾತ್ಮ ಷಡಕ್ಷರಿಯ
ಲಿಂಗದಡಿಯ ಭಜಿಸು ನಿನಗೆ
ಅಂಗವಹುದು ನಿತ್ಯಪದವು ನಂಬು ಮಾನವ || ೭ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ನಿಮ್ಮನರಿಯದೆ ಎಂದಿಗಪ್ಪುದೋ Next