ದಯಾಮಯ ಗುರು ಕರುಣಾಮಯ
ಕರುಣಾಮಯ ಗುರು ಪ್ರೇಮಾಮಯ || ಪ ||
ಪರಮಸ್ವರೂಪನು ತಾನಂತೆ
ಅರಿಯಲು ಭಕ್ತಿಯು ಬೇಕಂತೆ
ಒಲಿದರೆ ಪಾವನವನಂತೆ
ಸಂಸಾರದ ಭಯ ಅವಗಿಲ್ಲಂತೆ || ೧ ||
ಗುರುವಿಗೆ ಸಮನಾರಿಲ್ಲಂತೆ
ಗುರುಪಾದವ ನಂಬಿರಬೇಕಂತೆ
ದೃಢತೆಯು ತನಗಿರಬೇಕಂತೆ
ದೃತಿಗೆಡದೆ ತಾನಿರಬೇಕಂತೆ || ೨ ||
ಪಾಪಿಗೆ ತಾ ಬಹುದೂರಂತೆ
ದುರ್ಮಾರ್ಗಿಗೆ ಕಾಣನು ಗುರುವಂತೆ
ಕುಟಿಲರಿಗೆ ಒಲಿಯನು ತಾನಂತೆ
ಕುಹಕಿಗೆ ಎಂದೂ ಸಿಗನಂತೆ || ೩ ||
ಜ್ಞಾನವೇ ತನ್ನುಸಿರಾಗಿಹುದು
ಉಸುರಲು ಪಾವನವಾಗುವುದು
ಸೇವೆಯ ಸಾಧನೆಯಾಗಿಹುದು
ಗುರು ಕರುಣೆಯೇ ಧನ್ಯನ ಮಾಡುವುದು || ೪ ||
ಶರಣಾಗತರನು ಕಾಯುವನು
ಪರಮಾನಂದವನುಣಿಸುವನು
ನಿಜಭಕ್ತಿಗೆ ಗುರು ತಲೆಬಾಗುವನು
ಭವ ಜಲದಿಯ ದಾಟಿಸಿ ಕಾಯುವನು || ೫ ||
ನಾ ನೀನೆಂಬುದ ಅಳಿಯೆಂದ
ಮದ ಮತ್ಸರಗಳ ನೀ ಸುಡು ಎಂದ
ದುರುಳರಿಗೆ ನಾ ದೂರೆಂದ
ದುರಹಂಕಾರಿಗೆ ತಾ ಸಿಗನೆಂದ || ೬ ||
ಸದ್ಗುರು, ದೊರೆಯುವುದು ದುರ್ಲಭವು
ದೊರೆತರೆ ಜನ್ಮವು ಪಾವನವು
ಸಾರುತಲಿರುವವು ಶಾಸ್ತ್ರಗಳು
ಗುರು ಪರಮೇಶ್ವರನು ಅಹುದೆಂದು || ೭ ||
ಅಚ್ಯುತ ಅನಂತ ಶ್ರೀಗುರುವೆ
ಚಿನ್ಮಯ ಚಿದ್ಘನ ನೀ ಗುರುವೆ
ಗುರು ಕಣ್ಣೇಶ್ವರ ಬಾ ಗುರುವೆ
ಕರಜೋಡಿಸಿ ನಾ ಶಿರಬಾಗುವೆ || ೮ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”