Previous ನಂಬಿದೆ ಗುರುವೆ ನಂಬಿದೆ ಸ್ವಾಮಿ ನಿಬ್ಬಣಕ್ಕೆ ಹೋಗುತೈದೇನೆ Next

ಒಲ್ಲೆನೊಕತನವ ಒಲ್ಲೆ, ನಾನಾರೆ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಒಲ್ಲೆನೊಕತನವ ಒಲ್ಲೆ, ನಾನಾರೆ
ಕೊಲ್ಲ ಬಂದಾನೆನೆ ಕೋಪದಲಿ ನಲ್ಲ |ಪಲ್ಲವಿ|

ಮಾವನೆಂಬುವ ನನ ಮನವ ನೋಯಿಸಿದನೆ
ಆವಾಗ ನಮ್ಮತ್ತೆ ಅಣಕವಾಡುವಳು
ಭಾವನೆಂಬವ ಕೆಂಡ, ಬಲು ಬಾಧಿಸುತಿಹ
ಬೇವುತಲಿರ್ದೆನು ಮತ್ತಿನ್ನಾರಿಗೆ ಹೇಳುವೆ |೧|

ಮನೆಯಾತನ ಕೊಂದು, ಮಾವನ ಹಳ್ಳವ ಕೂಡಿ
ಬಿನುಗು ಭಾವದಿರನು ಬೀದಿಪಾಲು ಮಾಡಿ
ನನಗೆ ವೈರಿಯಾದ ಅತ್ತೆನೆ ಕೊಂದು
ಮನಸು ಬಂದಲ್ಲಿ ನಾನಿಪ್ಪೆನೆಲೆ ತಾಯಿ |೨|

ಮುನ್ನಿನ ಪ್ರಮಥಗಣಂಗಳೆನ್ನ ಬಂಧುಬಳಗ
ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲಿಪ್ಪ
ಚೆನ್ನಮಲ್ಲಿಕಾರ್ಜುನನೆನ್ನನೊಲಿದಡೆ
ಇನ್ನಿತ್ತ ಬಾರೆ ನಾನೆಲೆ ತಾಯೆ |೩|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ನಂಬಿದೆ ಗುರುವೆ ನಂಬಿದೆ ಸ್ವಾಮಿ ನಿಬ್ಬಣಕ್ಕೆ ಹೋಗುತೈದೇನೆ Next