ಭಾಮಿನಿಷಟ್ಪದಿ
ಅಂಗಜಾರಿಗೆ ಮೆಚ್ಚಿ ಮರುಳಾ
ಗಂಗಭಾವವ ತೊರೆದು ಕೃತ್ಯವ
ಹಿಂಗಿ ಹೊರಗನು ಮರೆವ ಸುಖವದು ಎಂದಿಗಾದಪುದೊ || ಪ ||
ಎಳೆಯಚಂದ್ರನ ಧರಿಸಿದಾತಗೆ
ಒಲೆವ ಫಣಿಕುಂಡಲದ ಗರುವಗೆ
ಪುಲಿಯ ಚರ್ಮವನುಟ್ಟು ಗಜಚರ್ಮವನು ಪೊದೆದವಗೆ
ಹೊಳೆವ ಕೆಂಜೆಡೆ ಮುಗುಳು ನಗೆಗಳ
ಚೆಲುವ ಶಿವನಿಗೆ ಮೆಚ್ಚಿ ಮರುಳಾ
ಗಳಿದು ತನುಗುಣ ವರಿಯದಿರ್ಪುದು ಎಂದಿಗಾದಪುದೋ || ೧ |
ಭಸಿತಕಾಂತಿಯ ಕಾಯದಾತಗೆ
ಮಿಸುಪ ಫಣಿ ಕಂಕಣದ ನೀರಗೆ
ಹಸಿಯ ಶಿರಮಾಲೆಯನು ಕೊರಳೊಳು ಧರಿಸಿ ದಾತನಿಗೆ
ಬಸಿಯ ಶೂಲದಿ ಹೆಣನ ಪಿಡಿದಿಹ
ಅಸಮನೇತ್ರಗೆ ಮೆಚ್ಚಿ ಮರುಳಾ
ಗಶನವುದಕವ ತೊರೆವುದದು ತಾನೆಂದಿಗಾದಪುದೋ || ೨ ||
ಕೊರಳ ಗರಳದ ರೇಖೆಯಾತಗೆ
ಮರುಳುಗಣ ಕೂಡಾಡುವಾತಗೆ
ಹರಿ ಸುರೇಂದ್ರರ ಹೆಣ್ಣ ತೊತ್ತಿರ ಮಾಡಿಕೊಂಡವಗೆ
ಸರಸಿಜಾಸನ ಶಿರವ ಕರದೊಳು
ಧರಿಸಿದಾತಗೆ ಮಚ್ಚಿ ಮರುಳಾ
ಗಿರುಳು ಹಗಲೆಂದರಿಯದಿಹ ಸುಖವಂದಿಗಾದಪುದೋ || ೩ ||
ತನ್ನ ಮೋಹದಿ ನೆನೆವ ಭಕುತರ
ಮುನ್ನವೇ ತಾ ನೆನೆವ ಮೋಹದಿ
ತನ್ನನೊಲಿಸುವ ಶರಣರಿಗೆ ತಾ ಮುನ್ನನೊಲಿವವಗೆ
ಹೊನ್ನು ಹಾವಿಗೆ ಮೆಟ್ಟಿ ಸುಳಿವಗೆ
ಎನ್ನ ಮನ ತಾ ಮೆಚ್ಚಿ ಮರುಳಾ
ಗಿನ್ನು ಹೊರಬಳಕೆಗಳ ಮರೆವುದು ಎಂದಿಗಾದಪುದೋ || ೪ ||
ಬೆರಳನಾದರು ಕೊಟ್ಟು ಆತಗೆ
ಕುರುಳನಾದರು ಕೊಟ್ಟು ಅವನಿಗೆ
ಇರದೆ ತನುಮನ ಧನವನೆಲ್ಲವ ಸೂರೆಗೊಟ್ಟವಗೆ
ಗರುವನಾತನ ಇಚ್ಛೆಯೊಳು ನಾ
ನಿರುತ ಒಲಿಸಿಯೇ ಮೆಚ್ಚಿ ಮರುಳಾ
ಗಿರುತ ಜಡನಿದ್ರೆಗಳ ಮರೆವುದು ಎಂದಿಗಾದಪುದೋ || ೫ ||
ಚಂದ್ರಕೋಟಿಯ ಪ್ರಭೆಗಳೊಬ್ಬುಳಿ
ಸಾಂದ್ರಮಾಗಿಯೆ ಪುರುಷ ಕೃತಿಯಿಂ
ಚಂದವಡೆದಿಹ ಚೆಲುವದೇವಗೆ ಮೆಚ್ಚಿ ಮರುಳಾಗಿ
ಬಂದಡರಿಯದ ಬೈದಡರಿಯದೆ
ನಿಂದಡರಿಯದೆ ನೆರೆದಡರಿಯದೆ
ಕೊಂದಡರಿಯದೆ ಹೊರಗೆ ಮರೆವುದು ಎಂದಿಗಾದಪುದೋ || ೬ ||
ಕಂತುಕೋಟಿಯ ರೂಪಪಾದದೊ
ಳಾಂತ ಚೆಲುವಿನ ಶಿವಷಡಕ್ಷರ
ಕಾಂತನಿಗೆ ನಾಸಿಕ್ಕಿ ಹೊರಗನು ಮರೆದು ಮರುಳಾಗಿ
ನಿಂತೊಡೆಲ್ಲಿಯು ಕುಂತೊಡೆಲ್ಲಿಯು
ಭ್ರಾಂತನಂದದಿ ಕಲ್ಲು ಮರನಾ
ಗಿಂತು ಪರವಶದಂಗಭಾವವು ಎಂದಿಗಾದಪುದೋ || ೭ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ