ಭೋಗಷಟ್ಪದಿ
ವಿರತಿ ವಿರತಿ ಎಂಬರಯ್ಯ
ವಿರತಿ ಸುಲಭವಲ್ಲವಯ್ಯ
ವಿರತಿ ತನುವಿನಾಶೆಯಳಿದೊಡಾತ ವಿರತನು || ಪ ||
ಅನ್ನವನ್ನು ಉಳಿದು ತನುವ
ಸಣ್ಣಿಸಿರಲು ಬಹುದು ವಸ್ತ್ರ
ವನ್ನು ಬಿಟ್ಟು ದಿಗಂಬರದೊಳಡಾಬಹುದೆಲೈ
ಎಣ್ಣೆ ನೀರನುಳಿದು ಜಡೆಗ
ಳನ್ನು ಮಾಡಿಕೊಳಲು ಬಹುದು
ತನ್ನ ದೇಹಭಾವವಳಿದೊಡಾತ ವಿರತನು || ೧ |
ತನ್ನ ನಿಜವ ತಿಳಿದು ನೋಡಿ
ತನ್ನ ತನುವಿದಲ್ಲ ಕೃತಕ
ವನ್ನು ಹಿಡಿದು ಆಡಬಾರದೆಂದು ತಿಳಿವುತ
ಅನ್ಯರುಗಳ ಒಡವೆಯಂತೆ
ತನ್ನ ತನುವಿನಲ್ಲಿ ಮೋಹ
ವನ್ನು ಉಳಿದು ಆಡಬಲ್ಲಡಾತ ವಿರತನು || ೨ ||
ಕರಿಯು ಕರಡಿ ವ್ಯಾಘ್ರ ಸಿಂಹ
ಉರಗ ಸಿಡಿಲು ಚೋರರಿಂದ
ಮರಣಭೀತಿ ಇಲ್ಲದಿರ್ದೊಡಾತ ಜಗದೊಳು
ಪರಮಷಡಕ್ಷರಿಯ ಲಿಂಗ
ವರಿದು ಚರಿಸುತಿರ್ಪನಾಗಿ
ನಿರುತ ಲೋಕಭರಿತಚರಿತ ವಿರತನಾತನು || ೩ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ