Previous ಎನ್ನ ತನುಗುಣಗಳ ಭ್ರಾಂತುಗೆಡಿಸು ನಿಮ್ಮ ಮರೆಸಬೇಡ Next

ಎನ್ನ ಏಕೆ ಕಾಯಲೊಲ್ಲೆ ?

ಭೋಗಷಟ್ಪದಿ

ಎನ್ನ ಏಕೆ ಕಾಯಲೊಲ್ಲೆ
ಅನ್ಯರುಗಳ ಕಾವಿರಯ್ಯ
ನಿನ್ನ ಚರಣ ಚರಣರಕ್ಷೆ ನನ್ನದಲ್ಲವೆ || ಪಲ್ಲವಿ ||

ದುಷ್ಟ ಹರಿಯು ಸೊಕ್ಕಿ ತಾನು
ಶ್ರೇಷ್ಠ ದೇವರೆಂದು ನುಡಿಯೆ
ಸುಟ್ಟು ಕಳೆದಿರವನ ಹಣೆಯ ಕಣ್ಣಿನಿಂದಲಿ
ನಿಷ್ಠೆಯಿಂದ ನುತಿಸೆ ಕಾಮ
ಕೊಟ್ಟಿರವಗೆ ಪದವಿಗಳನು
ಸೃಷ್ಟಿಗೀಶ ಎನ್ನ ಏಕೆ ಕಾಯಲೊಲ್ಲಿರಿ || ೧ |

ಹಮ್ಮಿನಲ್ಲಿ ಸೊಕ್ಕಿ ಮೆರೆದು
ಬೊಮ್ಮ ತಾನೆ ದೇವರೆನಲು
ನಿಮ್ಮ ಜರಿಯಲವನ ಶಿರವ ಛೇದಿಸಿದಿರಾಕ್ಷಣ
ನಿಮ್ಮನವನು ನುತಿಸೆ ಒಲಿದು
ನೆಮ್ಮಿಸಿದಿರಿ ಸೃಷ್ಟಿಗವನ
ನಿಮ್ಮ ಭಂಟ ನನ್ನ ಏಕೆ ಕಾಯಲೊಲ್ಲಿರಿ || ೨ ||

ಗರಳದುರಿಯ ಬೇಗೆಯಲ್ಲಿ
ಸುರರು ದಾನವರುಗಳು ಎಲ್ಲ
ಉರಿದು ಬೆಂದು ಓಡಿ ಬಂದು ನಿಮ್ಮ ನೆನೆಯಲು
ಗರಳವನ್ನು ಗರಳದಲ್ಲಿ
ಧರಿಸಿ ಕಾದಿರವರ ನೀವು
ಹರನ ನಿಮ್ಮ ಭಂಟನನೇಕೆ ಕಾಯಲೊಲ್ಲೆ || ೩ ||

ದಕ್ಷ ಕಾಲ ಮದನ ಗಿರಿಜ
ರಾಕ್ಷಸರುಗಳೆಲ್ಲರನ್ನು
ಶಿಕ್ಷಿಸಿದಿರಿ ಅವರು ನಿಮ್ಮನೊಲಿದು ನುತಿಸಲು
ಆ ಕ್ಷಣದಲಿ ಮರಳಿ ನೀವು
ರಕ್ಷಿಸುವಿರಿ ಅವರ ಎನ್ನ
ರಕ್ಷಿಸುವೊಡೇತಕೊಲ್ಲೆ ರೂಕ್ಷವಾಹನ || ೪ ||

ಸೊಕ್ಕಿದವರ ಶಿಕ್ಷಿಸಿದಿರಿ
ಸೊಕ್ಕದವರ ರಕ್ಷಿಸುವಿರಿ
ಸೊಕ್ಕಲಿಲ್ಲ ನಾನು ನಡೆಸಿದಂತೆ ನಡೆವೆನು
ದಿಕ್ಕುದೆಸೆಯು ಗತಿಯು ನೀವು
ಮಿಕ್ಕುದೆನಗದಾರುವುಂಟು
ಅಕ್ಕರಿಂದ ಸಲಹು ಷಡಾಕ್ಷರಿಯ ಲಿಂಗವೇ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು

ಪರಿವಿಡಿ (index)
Previous ಎನ್ನ ತನುಗುಣಗಳ ಭ್ರಾಂತುಗೆಡಿಸು ನಿಮ್ಮ ಮರೆಸಬೇಡ Next