Previous ತೊಡರಿ ಬಿಡದಂಡೆಲೆವ ಮಾಯೆಯ ಪಾಲ್ಕುರಿಕೆ ಸೋಮನಾಥನ ಬಸವ ಸ್ತುತಿ Next

ಕೈಯ ತೋರೆಯಮ್ಮ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಕೈಯ ತೋರೆಯಮ್ಮ, ಕೈಯ ನೋಡುವೆನು
ಬಯ್ಯಾಪುರದಿಂದಲಿಳಿದು ಬಂದೆ ನಾನು
ಮೈಯೊಳಗಿರ್ದ ವಸ್ತುವ ಹೇಳುವೆನು |ಪಲ್ಲವಿ|

ವಚನ:
ಚೆಲುವೆತ್ತ ಭಾವದ ಲಕ್ಷಣವ ಹೇಳುವೆ ತೋರೆಯಮ್ಮ
ಅರಿವಿನ ಬಗೆ ಯಾವುದೆ ಕೊರವಿ?
ನಿನ್ನ ನಾಮ ಸೀಮೆ ಯಾವುದು! ಎಲ್ಲಿಂದ ಬಂದೆಯಮ್ಮ?
ಉತ್ತರೋತ್ತರ ಬಯ್ಯಾಪುರದ ಮಾಹಾದೇವಿಯ ವರವೆ;
ಮಹಾದೇವನ ಒಲವೆ; ಅಲ್ಲಿಂದ ಇಳಿದು ಬಂದೆನಮ್ಮ!
ನಿನ್ನ ತನುವಿನೊಳಗಿರ್ದ ನಿತ್ಯಾನಿತ್ಯವ ವಿವರಿಸಿ
ಹೇಳುವೆ ನಂಬು ನಂಬೆಯಮ್ಮ

ಪದ:
ಎಂಟು ಮಂದಿ ನಂಟರು ನಿಮಗಮ್ಮ
ಉಂಟಾದ ಹತ್ತು ದಿಕ್ಕಿನಲ್ಲಿ ಬಳಗವಮ್ಮ
ಗಂಟಲ ಮೆಟ್ಟಿಕೊಂಡೈದರೆ ನಿಮ್ಮ,
ಸುಂಟರಗಾಳಿಯಂತೆ ತಿರುಗುವೆಯಮ್ಮ
ಕಂಟಕ ಬಿಡಿಸುವೆ ಕರುಣದಿ ನಿಮ್ಮ, ನೀಲ
ಕಂಠನಂಘ್ರಿಯ ಬಿಡದೆ ಪಿಡಿಯಮ್ಮ |೧|

ವಚನ:
ನಂಬುವುದಕೊಂದು ಕುರುಹುಂಟೆ ತಾಯಿ?
ಭೂದೇವಿ ಮೊದಲಾದ ಅಷ್ಟತತ್ವಾಧಿಕರು ನಿನ್ನ ಸಾಕ್ಷಿಬಂಧುಗಳಮ್ಮ, ದಶಮುಖ
ಪವನಸಂಕುಳವೆ ನಿನ್ನ ಇಷ್ಟರುಗಳಮ್ಮ! ಅನ್ಯರು ಸೇರರು; ನಿನ್ನವರು ನಿನಗೆ ವೈರಿಗಳಮ್ಮ
ಕಂಟಕವಾಗಿ ಕಾಡುವುದಮ್ಮ

ಅಹುದಹುದು ಅದೆಂಥ ಕಂಟಕವೆ ತಾಯಿ!

ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಲ್ಲಿ ಸತ್ತು ಸತ್ತು ಹುಟ್ಟಿದೆಯಮ್ಮ. ಬಾರದ
ಭವದಲ್ಲಿ ಬಂದೆಯಮ್ಮ. ತೊಡದ ಚೋಹವ ತೊಟ್ಟೆಯಮ್ಮ. ಕಾಣದ ಕರ್ಮವ
ಕಂಡೆಯಮ್ಮ. ಉಣ್ಣದಾಹಾರವನುಂಡೆಯಮ್ಮ. ಇಲ್ಲಿಗೆ ಈ ಮನೆಗೆ ಬಂದೆಯಮ್ಮ.
ಇದು ನಿನ್ನ ಪುಣ್ಯದ ಫಲವಮ್ಮ. ಈ ಕಂಟಕಕ್ಕಂಜಿ ಕಳವಳಿಸದಿರಮ್ಮ. ನಿರಂಜನನ
ಪಾದವ ಭಕ್ತಿಯಿಂ ಧೃಡವಿಡಿಯಮ್ಮ

ಪದ:
ಒಡನೆ ಹುಟ್ಟಿದೈವರು ನಿನಗಮ್ಮ;
ಕೆಡಹಿಯಾರು ಮಂದಿ ಕೊಲುತಿಹರಮ್ಮ;
ಪಿಡಿದರೆ ತಾಯಿ-ಮಕ್ಕಳು ಬಯ್ವರಮ್ಮ;
ತೊಡರಿಕೆ ನಾಲ್ವರು ಹೆದರಿದಿರಮ್ಮ
ಪೊಡವೀಶನಡಿಯ ಬಿಡದೆ ಪಿಡಿಯಮ್ಮ;
ಒಡಲ ಕಿಚ್ಚಿನ ಕೊರವಿಯು ನಾನಲ್ಲಮ್ಮ |೨|

ವಚನ:
ಚಿಂತೆಯ ಬಿಡಿಸುವ ನಿಶ್ಚಿಂತ ಪದವಾವುದೆ ತಾಯಿ?
ನಿನ್ನೊಡನೆ ಜನಿಸಿದ ಪಂಚಭೂತಂಗಳು ನಿನಗೆ ಸಂಗವಾಗಿ ಹಿತಶತ್ರುತನದಿ ಭವ
ದತ್ತ ಕೆಡಹುವರಮ್ಮ, ಅವರೊಡೆಯರು ನಿನ್ನನಾಳಿಗೊಂಡು ಕಾಡುವರಮ್ಮ
ಇದ ವಿವರಿಸಿ ಪೇಳೆ ತಾಯಿ!

ಚತುರ್ಮುಖಬ್ರಹ್ಮ ಹೊಡೆದಾಳುತೈದಾನೆಯಮ್ಮ ವಿಷ್ಣು ವಿಧಿಪಾಶದಿಂ ಬಿಗಿಯೆ
ರುದ್ರನ ಹೊಡೆ ನಿಚ್ಚ ಹೊಯ್ಯುತಿದೆಯಮ್ಮ. ಈಶ್ವರನಂತುರದಲ್ಲಿ ಸದಾಶಿವ ಸೈಗೆಡೆದನಮ್ಮ.
ಒಳಹೊರಗೆ ನಿನಗೈವರ ಕಟ್ಟು-ಕಾವಲು ಘನವಮ್ಮ. ಮತ್ತೊಮ್ಮೆ ಕಾಮ
ಕಾತರಿಸಿ, ಕ್ರೋಧವಿರೋಧಿಸಿ, ಮದವಹಂಕರಿಸಿ ಮಚ್ಚರ ಕೆಚ್ಚು ಬಲಿದು, ಹೊಯ್ದು-
ಬಯ್ದು-ಕೊಯ್ದು-ಕೊರೆದು, ಚಿತ್ರಿಸಿ, ಚಿರಣಿಸುವರಮ್ಮ. ಮತ್ತೊಮ್ಮೆ ಏಳು ಮಕ್ಕಳ
ತಾಯಿ ಹಿಡಿದು ಹೀರಿಹಿಪ್ಪೆಯ ಮಾಡುವಳಮ್ಮ. ಆ ಮಕ್ಕಳ ಜನನ ಏಳಕೇಳು ದಿನವಮ್ಮ.
ಅಳುಕಿಸಿ-ನಡುಕಿಸಿ ಕಳವಳಿಸಿ-ಹೆದರಿಸಿ, ಎತ್ತರತತ್ತರ ಮರುಳು ಮಾಡಿ ಕನಸು-
ಕಳವಳ-ಒತ್ತರಮಂ ಒತ್ತರಿಸಿ ನಡೆದು ಬುದ್ಧಿಯರಿದಂತೆ ಕಂಪಿಸಿ ಕಳವಳಿಸಿ ನುಡಿವ
ರಮ್ಮ. ಮತ್ತೊಮ್ಮೆ ಮನಬಂದಂತೆ ನಡೆದು ಬುದ್ಧಿಯರಿಯದಂತೆ ಸ್ಥಿರಕರಿಸಿ ಚಿತ್ತಬಂದಂತೆ
ಅವಧರಿಸಿ, ಅಹಂಕಾರ ತೋರಿದಂತೆ ಬಿರಿಪಿಡಿದಲೆವುತ್ತಿಪುದಮ್ಮ. ಒಮ್ಮೆ ಮರನಾಗುವೆಯಮ್ಮ,
ಒಮ್ಮೆ ಮನುಷ್ಯಳಾಗುವೆಯಮ್ಮ. ಇದರೊಳು ಸಿಲ್ಕಿದೆನೆಂದು ಚಿಂತಿಸದಿರಮ್ಮ.
ಈ ಚಿಂತನೆಯ ಮಂತ್ರದಿಂ ಕಳೆದು ನಿಶ್ಚಿಂತದೋರಿಸುವೆ. ಎನ್ನೊಡೆಯ
ಜಗದೀಶ ಆದಿಲಿಂಗನ ಪಾದವನನುದಿನ ಅಗಲದೆ ನಂಬಿ ನಚ್ಚಿ ಭಜಿಸಮ್ಮ.

ಅದು ಎಂಥ ಉಪದೇಶದ ನೋಂಪಿಯಮ್ಮ?

ಮಂಗಳವಾರದ ದಿನ ಮನೆಯ ಸಾರಿಸೆಯಮ್ಮ, ಕಟ್ಟುಮುಟ್ಟು ಹೊರಯಿಕೆ ಬಿಸಾಡೆಯಮ್ಮ.
ರಂಗಮಂಟಪವ ರಚಿಸಿ ಚೌಕವಲಂಕರಿಸೆಯಮ್ಮ. ರಂಗದಕ್ಕಿಯಮೇಲೆ ಕಳಶವನ್ನಿಟ್ಟು
ಐವರು ಅಚ್ಚ ಮುತ್ತೈದೆಯರ ಕುಳ್ಳಿರಿಸೆಯಮ್ಮ. ತೂ[=ತಾ]ಳಮೇಳದವರ ಕರೆ
ತಂದು ಶುಭವಾದ್ಯವ ಮೊಳಗಿಸೆಯಮ್ಮ. ಮನೆಯ ದೇವರ ಜ್ಯೋತಿಯ ತುಂಬಿ, ಕಪ್ಪುರದ
ಮಂಗಳಾರತಿಯ ತಂದಿಸಿಸೆಯಮ್ಮ, ಸುಚಿತ್ತೆಯಾಗಿ ಸಮ್ಮುಖದಲ್ಲಿ ಕುಳ್ಳಿರೆಯಮ್ಮ.
ತಲೆಗೈಯನಿಕ್ಕಿ, ವಿಭೂತಿಯ ಹಣೆಗಿಟ್ಟು, ಕಿವಿಯೊಳು ಮಂತ್ರವನುಸುರಿದನಮ್ಮ;
ನೆತ್ತಿಯ ಲಿಂಗವ ಹಸ್ತಕೆ ಕೊಟ್ಟು, ಕರ್ತೃ ಅಲ್ಲಯ್ಯ ಸಾಕ್ಷಿಯಾಗಿ! ಉಪಾಯದಿಂ
ಉದರವ ಹೊರೆವ ಉಪಾಧಿ ಕೊರವಿಯಲ್ಲ. ಪರವ ತೋರುವ ಪರಮದೀಕ್ಷಾ ಕೊರವಿ ನಾನಮ್ಮ.

ಪದ:
ಈಶಮಹೇಶನೆ ಮನೆದೈವವಮ್ಮ
ಬೇಸರು ಮಾಡಿ, ರಾಶಿದೈವವ ಹಿಡಿಯೆ
ಕಾಸಿಂಗೆ ಬಾರದ ಕಸನಪ್ಪೆಯಮ್ಮ,
ಹೇಸಿ ದೈವವ ಬಿಡು, ಪಿಡಿಯೀಶನಡಿಯ,
ಮೀಸಲ ಹಿಡಿಯಮ್ಮ ಸೂಸದ ಮನವ
ನಾಸಿಕಾಗ್ರದೊಳು ಗಮಿಸಿ ನಿಲ್ಲಮ್ಮ! |೩|

ವಚನ:
ಇಂತೀ ದೇವರಿಗೆ ನಿಷ್ಠೆಯಿಂದ ನೇಮವ ಮಾಡಬೇಕಮ್ಮ!
ಅದೆಂಥಾ ನೇಮವೇ ತಾಯಿ?

ಪೊಡವಿಗೊಡೆಯ ಮೃಡನೊಬ್ಬನೆ ನಿಮ್ಮ ಮನದ ದೈವವಮ್ಮ. ಈ ದೇವರ ನೋತು
ಫಲವೇನೂ ಕಾಣೆಂದಲಸದಿರಮ್ಮ. ನಾಡ ಹಿಡಿದಾಡುವ ಕೇಡಿಗ ದೈವವ ಬಗೆಯದಿರಮ್ಮ.
ಅವು ನಿಮ್ಮ ಕಾಡುವವಮ್ಮ. ಕರಕಷ್ಟಬದ್ಧಭವಿಯಾಗುವೆಯಮ್ಮ. ಲಜ್ಜೆಗೆಟ್ಟು
ಕಿರುಕುಳ ನೀಚದೈವಂಗಳ ಸಂಗ ಬೇಡಮ್ಮ. ಎಲ್ಲ ದೇವರೊಡೆಯ ಲಿಂಗದೇವನೆ
ನಿನ್ನ ಮನದೈವ ಕುಲದೈವವಮ್ಮ. ಮನದಲ್ಲಿ ನಂಬಿ ನಚ್ಚಿ ಗುಡಿಗಟ್ಟೆಯಮ್ಮ. ಏಳು ಮಂದಿ
ಅಚ್ಚಮುತ್ತೈದೆಯರನೊಂದು ಹೊತ್ತನಿರಿಸೆಯಮ್ಮ. ಶುದ್ಧಪದ್ಮಾಸನವನಿಕ್ಕೆಯಮ್ಮ.
ನಾಭಿ ಪವನವನೆತ್ತೆಯಮ್ಮ. ನಾಸಿಕಾಗ್ರದಿ ನಿಲ್ಲೆಯಮ್ಮ. ರವಿಶಶಿಗಳಾಟವ
ನೋಡೆಯಮ್ಮ. ತಾಳಮದ್ದಲೆಯ ಬಾರಿಸೆಯಮ್ಮ. ಓಂ ನಮಶ್ಶಿವಾಯವೆಂದು ಓಲಗವ ಮಾಡೆಯಮ್ಮ

ಪದ:
ಕುಂಭಿನಿದೈವವ ಹಿಡಿಯೆ ನೀ ಕೆಟ್ಟೆ!
ಶಂಭುಲಿಂಗನ ಕೈಯ ಬಿಡಲು ನೀ ಭ್ರಷ್ಟೆ!
ಇಂಬುಗೊಡಲು ಬೇಡ, ಇದಿರಿಟ್ಟವೆಲ್ಲ!
ಹಂಬಲು ಬಿಡು ಭ್ರಷ್ಟದೈವವನೆಲ್ಲ
ನಂಬಿ ಶುದ್ಧವಾಗೆ ನಿಜಲಿಂಗದಲಿ
ಮುಂಬಾಗಿಲೊಳು ಪೊಕ್ಕು ಲಾಲಿಸು ಸೊಲ್ಲ! |೪|

ವಚನ:
ಇಂತೀ ನಿಷ್ಠೆ ನಿರ್ಧರವಾಗಬೇಕೆಯಮ್ಮ!
ಅದೆಂಥಾ ಧೃಢಭಾವವೆ ತಾಯಿ?

ನಾಡಾಡಿ ದೈವವ ನೋತಡೆ ಕೇಡಲ್ಲದೆ ಸುಖವಿಲ್ಲವಮ್ಮ. ಏಕಲಿಂಗನಿಷ್ಠೆ ಇಲ್ಲದಡೆ
ಕಾಕಪ್ಪೆಯಮ್ಮ. ಕಂಡಕಂಡ ದೈವಂಗಳ ಕೊಂಡೆಸಗಲು ಮುಡುಹಂ ಸುಟ್ಟು ನೀರು
ಮುಳುಗಿ, ಸುತ್ತಿ, ತಲೆಯಂ ತರಿದು, ಬತ್ತಲೆ ಬಳಸಿ, ಕುರುಳು ಬೆರಳು ಮುಂಬಲ್ಲು
ಹೋಗಿ, ಕೆಟ್ಟು, ಡೊಣೆಯಲಿ ತಿಂದು, ನಾಯಾಗಿ ಬೊಗುಳಿ, ಲಜ್ಜೆಗೆಟ್ಟು ಚೀಮಾರಿಯಪ್ಪೆಯಮ್ಮ.
ನೆನೆದು-ಬಿರಿದು-ಉಲಿದು, ಕರಗಿ ಕರಿಮುರುಯಪ್ಪೆ. ಬಿನುಗುಭಿಕಾರ
ದೈವಂಗಳ ನೆನೆಯದಿರಮ್ಮ. ಪ್ತತಿಪೂಜೆ ಮಾಡದೆ ಆಚಾರದಲ್ಲಿ ನಿಂದುದೆ ನಿಷ್ಠೆಯಮ್ಮ.
ನಿಷ್ಠೆಯಿಲ್ಲದ ಪೂಜೆ ಎಷ್ಟು ಕಾಲ ಮಾಡಿದರೂ ನಷ್ಟವಲ್ಲದೆ ದೃಷ್ಟವುಂಟೆ? ಆದಿಲಿಂಗನ
ಭಜಿಸೆಯಮ್ಮ. ಆತ್ಮಲಿಂಗವ ಧ್ಯಾನಿಸಮ್ಮ. ಚಿತ್ತ ಶುದ್ಧವಾಗಿರಲಮ್ಮ.

ಅದೆಂಥಾ ಸುಯಿಧಾನವೆ ತಾಯಿ?

ಒಂಬತ್ತು ಬಾಗಿಲ ಕದವನಿಕ್ಕಿ ಒಳಯಿಕೆ ಒಬ್ಬ್ರನು ಬಿಡದಿರೆ, ಸುಮ್ಮನೆ ಕಳುಹೆ.
ಒಮ್ಮನವ ಮಾಡೆ, ಗಮ್ಮನೆ ನಡೆಯೆ, ಘಳಿಲೆಂದು ಪೋಗೆ, ದಿಗಿಲೆಂದು ಹತ್ತೆ, ಎಡ
ಬಲನಂ ಮುರಿಯೆ, ಬೀಗವಂ ಕೊಳ್ಳೆ, ಕುಂಭಿನಿಯ ಬಾಗಿಲ ಕದವ ತಳ್ಳೆ, ಒಳಪೊಕ್ಕು
ಒಂದಾಗಿ ನೋಡೆ, ಸೋಹವೆಂಬ ಬ್ರಹ್ಮನಾದವನಾಲಿಸಮ್ಮ. ಪರತತ್ವದೊಳು ಉರಿ
ಕರ್ಪೂರದಂತಾಗಮ್ಮ. ಇಂತೀ ನಿಷ್ಠೆಗೆ ನಮೋ ನಮೋ ಎಂಬೆನಮ್ಮ ಬೋಸರಿಗತನದ
ಲೇಸಿನವಳು ನಾನಲ್ಲಮ್ಮ.

ಪದ:
ಆದಿಯನರಿಯೆನಮ್ಮ ಭೇದಿಸಿ ಮುನ್ನ!
ಮೇದಿನಿಯೊಳು ಬಂದು ಮರೆದೆಯಲ್ಲಮ್ಮ!
ತಂದೆ ಹಬ್ಬೆಯನೆತ್ತಿ ಹೇಳುವೆ ನಿಮ್ಮ
ಬಂದ ಮಾರ್ಗದಲ್ಲಿ ಗಮಿಸಿ ನಿಲ್ಲಮ್ಮ
ಭ್ರೂಮಧ್ಯದ ಮನೆಯೊಳಗಿರ್ದು ಕಾಣಮ್ಮ
ಮುಂದಣ ಕೋಣೆಯೊಳೆ ಜೀವಿಸು ನೀನಮ್ಮ |೫|

ವಚನ:
ಮುನ್ನೊಮ್ಮೆ ಆದಿಯ ಲೀಲೆಯಿಂದ ಮೇದಿನಿಗಿಳಿದು ಆಗುಚೇಗೆಗೊಳಗಾಗಿ ನಿನ್ನ
ನಿಜವನರಿಯದ ಪರಿಯ ತಿಳಿದು ನೋಡಮ್ಮ.

ಅದೆಂಥ ದೇವರ ಲೀಲೆಯೆ ತಾಯಿ?

ನಾದ-ಬಿಂದು-ಕಳೆ-ಆದಿಯನಾಗಿ ತತ್ವಂಗಳಾವುವುವಿಲ್ಲದಂದು, ತಂದೆ ತಾನೆ
ತಾನಾಗಿರ್ದನಮ್ಮ. ಆತನ ಸತಿಯಾನೆಯಮ್ಮ. ತನಗೆ ಮಖ್ಖಳು ಬೇಕಾಗಿ ನೆನೆದಡೆ
ನಾದ-ಬಿಂದು-ಕಳಾಯುಕ್ತವಾದ ಓಂಕಾರವಾಯಿತಮ್ಮ. ಆ ಓಂಕಾರವೆ ಆದಿಯ ಶರಣನಮ್ಮ.
ಆ ಶರಣನ ಶಕ್ತಿಯ ಹೆಸರು ನೀನೆಯಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಪರಸತಿಯೆಂದು ಸದಾಶಿವಂಗೆ ಕೈಗೂಡಿಸಿದನಮ್ಮಾ. ನಿನ್ನೊಡನೊಬ್ಬಳು ಹುಟ್ಟಿದಳು.
ಆದಿಶಕ್ತಿಯೆಂದು ಈಶ್ವರಂಗೆ ಸಂಬಂಧಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಇಚ್ಛಾಶಕ್ತಿಯೆಂದು ರುದ್ರಂಗೆ ಪಟ್ಟವ ಕಟ್ಟಿದೆನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಜ್ಞಾನಶಕ್ತಿಯೆಂದು ವಿಷ್ಣುವಿಂಗೆ ಕೈಗೂಡಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಕ್ರಿಯಾಶಕ್ತಿಯೆಂದು ಬ್ರಹ್ಮಂಗೆ ಧಾರೆಯನೆರೆದನಮ್ಮ. ಇವರು ನಿನ್ನಿಂದ ಹುಟ್ಟಿದ ಪಂಚ
ಕೃತ್ಯಂಗಳಿಗೊಳಗಾದರು. ಇದರೊಳು ಪೊಕ್ಕು ಬಳಸಿದೆಯಾಗಿ ನನ್ನ ನೀ ಮರೆದೆಯಮ್ಮ;
ಇನ್ನಾದರೂ ಎಚ್ಚೆತ್ತು ನಡೆಯೆ.

ನಡೆವ ಗತಿ ಪಥವಾವುದೆ ತಾಯಿ?

ಇವರು ನಿನ್ನೊಳಗಿರ್ಪರಮ್ಮ. ಪಂಚಭೂತಂಗಳಿಗೊಡೆಯರಮ್ಮ. ಪಂಚ ಚಕ್ರಗಳಧಿಕಾರಿಗಳಮ್ಮ.
ಮೊದಲಿವರ ನಿನ್ನ ವಶವ ಮಾಡಿಕೊಳ್ಳಮ್ಮ. ಇವರ ಸಂಗವನಗಲಿ,
ಹುಟ್ಟಿದ ಮಾರ್ಗವೆರಸಿ ಹುಬ್ಬಳ್ಳಿಗೆ ನಡೆಯಮ್ಮ. ಅಲ್ಲಿ ನಿರ್ಮಲ ಲಿಂಗ ಉಂಟಮ್ಮ.
ಪತಿಭಕ್ತಿಯ ಮಾಡಮ್ಮ ನಿನ್ನ ಗಂಡನೊಲಿವನಮ್ಮ. ಮೂಮ್ದಣ ಬಾಗಿಲ ತೆಗೆಯಮ್ಮ.
ಮೇಲಣ ಕೋಣೆಯ ಪೌಳಿಯ ಬಳಸಿ ನೋಡೆಯಮ್ಮ. ಥಳಥಳಿಸುವ ಪರುಷದ ಪೀಠದಲ್ಲಿ
ಪರಂಜ್ಯೋತಿ ಲಿಂಗವಿಪ್ಪುದಮ್ಮ. ನಿನ್ನ ಹೆಯ್ಯತ್ತನೆಂದು, ಹತ್ತಿರ ಬಂದು ನಮಿಸಮ್ಮ.
ಅಮೃತಕೂಪವ ಮೊಗೆಯಮ್ಮ. ತುಂಬಿದ ಕೊಡನ ಘೃತವಂ ಶಂಭುಲಿಂಗನ
ಮಂಡೆಗೆರೆಯಮ್ಮ. ಕೂಪದೊಳಗಣ ಕಮಲವ ಪಿಡಿಯಮ್ಮ. ಮಸ್ತಕದೊಳು ಮಡಗಮ್ಮ.
ಧೂಪಾರತಿಯ ಬೆಳಗಮ್ಮ. ಅಮೃತಾರೋಗಣೆಯ ಮಾಡಿಸಮ್ಮ. ಕರ್ಪೂರ
ವೀಳ್ಯವ ಸಲಿಸಮ್ಮ. ಗೀತವಾದ್ಯ ನೃತ್ಯಂಗಳಿಂ ಮೆಚ್ಚಿಸಮ್ಮ. ಸಂಭ್ರಮದ ಪೂಜೆಯೊಳು
ಸೈವೆರಗಾಗಮ್ಮ. ಇಂತೀ ಅವಿರಳ ಭಾವಪೂಜೆ ನಮೋ ನಮೋ ಎಂಬೆಯಮ್ಮ.

ಪದ:
ನಾಗರ ಕಾಟಕ್ಕೆ ನವೆದೆಯಲ್ಲಮ್ಮ
ನಾಗಲೋಕದಿಂ ಹಿಡಿಯಿತು ನಿಮ್ಮ.
ಜಗವನೆಲ್ಲವ ನುಂಗಿ ಜಾಳಿಸುತೈತೆ.
ಗಂಗಾಧರನ ಕಾಟದ ಸರ್ಪವಮ್ಮ.
ಬೇಗದಿಂದ ತ್ರಿಗಗನಕೊಗೆಯಮ್ಮ
ಈಗಲೆ ಪರಶಿವನೊಲವಿದೆಯಮ್ಮ |೬|

ವಚನ:
ಆಧಾರಕುಂಡಲಿಯ ಸರ್ಪನ ವೇದನೆಯಿಂ ಭವರುಜೆಯಕ್ಕೀಡಾಗಿ ಬಳಲುತಿರ್ದೆಯಮ್ಮ.

ಅದು ಎಂಥ ಶೇಷನೆ ತಾಯಿ?

ಒಂಬತ್ತು ಹೋರಿನ ಹುತ್ತದಲ್ಲಿ ಸ್ಥಾನವಾಗಿರ್ಪುದಮ್ಮ, ಐದು ಮುಖದ ಅಜ್ಞಾನ ಸರ್ಪ!
ಪೂರ್ವಕ್ಕೊಂದು ಮುಖ, ಪಶ್ಚಿಮಕ್ಕೊಂದು ಮುಖ; ಉತ್ತರಕ್ಕೊಂದು ಮುಖ;
ದಕ್ಷಿಣಕ್ಕೊಂದು ಮುಖ; ಅಧೋದ್ವಾರಕ್ಕೊಂದು ಮುಖ; ಪಂಚವರ್ಣದ ಪ್ರಳಯ
ಕಾಳೋರಗನೆಯಮ್ಮ. ಅಲ್ಲಿಂದ ಬಂದು ನಿನ್ನನಲೆವುತ್ತಿದೆಯಮ್ಮ. ಅದರ ವಿಷದ ಹೊಗೆ
ತಾಗಿ ಅಜನ ಸೃಷ್ಟಿಯಲಿ ಅಲಿಪರಿದೆಯಮ್ಮ ನಿನ್ನ ಮಾತೇನು, ಈರೇಳು ಲೋಕವನೆಲ್ಲವ
ಕಚ್ಚಿ ಕೆಡವುತ್ತಿದೆಯಮ್ಮ. ಅದು ಪರಮೇಶ್ವರನ ಆಜ್ಞಾಶಕ್ತಿ ತಾನೆಯಮ್ಮ.

ಇಂಥಾ ಶೇಷನ ಹಿಡಿದುಕೊಂಡು ಪ್ರಸಾದವ ಕೊಂಬ ಪರಿಯಾವುದೆ ತಾಯಿ?

ಅಡಿಯ ಮಡದಿಂದೊತ್ತೆಯಮ್ಮ. ಹುತ್ತದ ಒಂಭತ್ತು ಹೋರನೆ ಮುಚ್ಚೆಯಮ್ಮ.
ಅಧೋಪವನವನೂರ್ಧ್ವಕೆತ್ತೆಯಮ್ಮ. ಮೂಲಾಗ್ನಿಯ ಪಟುವ ಮಾಡೆಯಮ್ಮ. ಆಧಾರ
ಕುಂಡಲಿಯನಂಡಲೆದಭಿಮುಖವ ಮಾಡೆಯಮ್ಮ. ನಾಗಸ್ವರದ ಶೃತಿಯ ನಖದ ಕೊನೆಯಲ್ಲಿ
ಹೆಚ್ಚಿಸೆಯಮ್ಮ. ಕಂಠಝೇಂಕಾರ ಸಪ್ತಸ್ವರದಂತಿರುಹೆಯಮ್ಮ. ಅದು ನಾದದ
ನಾದವ ಕೇಳುತ್ತ ನಾಭಿಮಂಡಲದಿಂದೆದ್ದು ಉಸುರ ಉನ್ಮನಿಯಲ್ಲಿ ಬಿಡುತ್ತ ಒಂದೆ ನಾಳದಲ್ಲಿ
ಗಮನಿಸುವುದಮ್ಮ ಮೇಲಣ ಕೋಣೆಯೊಳಗಿರ್ಪ ಕಪ್ಪೆ ಒತ್ತೆಯ ನುಂಗುವುದಮ್ಮ.
ಅಲ್ಲಿ ಸತ್ತ ಸರ್ಪನ ನೆತ್ತಿಯಲ್ಲಿ ಮಾಣಿಕವಿಪ್ಪುದಮ್ಮ, ಅದ ಸೆಳೆದುಕೊಳ್ಳಮ್ಮ.
ಅಪ್ರಶಿಖಾಮಂಡಲದ ಅಮೃತಾಹಾರವ ಸವಿಯಮ್ಮ. ಗಗನಾಂಬರ ಆತ್ಮನಿರತೆಯಾಗಿರಮ್ಮ,
ಪರಮೇಶ್ವರನಲ್ಲಿ ಪ್ರಸನ್ನಮುಖ ತಪ್ಪದಮ್ಮ. ಇಂಥ ಶೇಷನ ಪ್ರಸಾದಕ್ಕೆ ನಮೋ
ನಮೋ ಎಂಬೆನಮ್ಮ.

ಪದ:
ಎಲ್ಲವ ಹೇಳುವೆ ಎಲ್ಲಿಪ್ಪೆ ಕೊರವಿ?
ಕಲ್ಯಾಣದ ಚೆಲುವೈಕುಂಠವಮ್ಮ.
ಅಲ್ಲಿಂದನೆಲ್ಲವ ಪೇಳಿದೆ ನಿಮ್ಮ
ವೇಳೆಯನರಿತು ಹೋಗೆ ಎಡೆಮಾಡಿ ತಾರೆ
ಮೊದಲಾದ ಪಂಚಭಿಕ್ಷವ ಕೊಂಡುಬಾರೆ
ಚೆನ್ನಮಲ್ಲಿಕಾರ್ಜುನನ ವರವೆನಗುಂಟೆ |೭|

ವಚನ:
ಮನಸಿನ ಕನಸಿನ ಕೋರಿಕೆಯೆಲ್ಲವ ಕಂಡಂತೆ ಪೇಳಿದೆ ನಿನ್ನ ಸ್ಥಲ-ನೆಲೆ ಯಾವುದೆ ತಾಯಿ?

ಕಲ್ಯಾಣವೆನ್ನ ತವರೂರಮ್ಮ. ವೈಕುಂಠವೆನ್ನ ಗಂಡನೂರೆಯಮ್ಮ. ಅಲ್ಲಿಂದ
ಬಂದು ನಿನ್ನ ಮನಕ್ಕೆ ಮಂಗಳವಪ್ಪಂತೆ ಪೇಳಿದೆನಮ್ಮ. ಅರಿವಿನ ಅಚ್ಚಕೊರವಿತಿ
ನಾನಮ್ಮ. ಎನಗೆ ದೇವರ ಒಲವರವುಂಟಮ್ಮ.

ಅದೆಂಥ ದೇವರುಗಳ ವರದಿಂದ ಪೇಳಿದೆಯಮ್ಮ?

ನೆಲದುರ್ಗದ ಭ್ರಾಂತದೇವಿ, ಸೊನ್ನಲಪುರದ ಲಕ್ಷ್ಮಿದೇವಿ, ಅನಲಾಪುರದ ಕ್ರಿಯ
ಮಹಂಕಾಳಿ, ಅಮೃತಾಪುರದ ಈಶಮಹೇಶ್ವರಿ, ಗಗನಾಪುರದ ನಾನಾ ಮಹಂತಿ, ಅಂಬಾಪುರದ
ಕ್ರಿಯಾಮಹೇಶ್ವರಿಯ ವರವೆಯಮ್ಮ ಮತ್ತು ಭೂಮಿಯೊಳಗಿರ್ಪ ಬ್ರಹ್ಮ
ದೇವರು, ಸಲಿಲದೊಳಗಿರ್ಪ ವಿಷ್ಣುದೇವರು, ಅಗ್ನಿಯೊಳಗಿರ್ಪ ರುದ್ರದೇವರು, ಪವನದೊಳಗಿರ್ಪ
ಈಶ್ವರದೇವರು, ಗಗನದೊಳಗಿರ್ಪ ಸದಾಶಿವರು, ಅಂಬರದೊಳಗಿರ್ಪ ಪರಶಿವದೇವರ
ವರವೆಯಮ್ಮ. ಮತ್ತಂ ಸದ್ಯೋಜಾತಮುಖದ ಆಚಾರಲಿಂಗ ದೇವರು ವಾಮದೇವಮುಖದ ಶಿವಲಿಂಗದೇವರು,
ತತ್ಪುರುಷಮುಖದ ಚರಲಿಂಗದೇವರು, ಈಶಾನಮುಖದ ಪ್ರಸಾದಲಿಂಗದೇವರು,
ಗಂಭೀರಮುಖದ ಘನಲಿಂಗದೇವರ ವರವೆಯಮ್ಮ. ಇಂತಿ ಒಂದೆ, ಎರಡೆ, ಮೂರೆ, ನಾಲ್ಕೆ,
ಐದೆ, ಆರೆ! ಮೀರೆ ಏಕನಾದವೆಂಬ ಎಕ್ಕೆಯ ಬೆನವನ ವರದಿಂ ಎಡೆದೆರಹಿಲ್ಲದೆ ಪರಿಪೂರ್ಣವಾದ
ಸಂದ ಶಂಕೆಯಳಿದು ಪೇಳಿದೆಯಮ್ಮ. ಇನ್ನೀತತ್ವ-ಸ್ಥಳ-ಕುಳಭೇದವನರಿದು ಅರ್ಪಿತಾವಧಾನ
ಮುಖಂಗಳ ವಿವರಿಸಿ ಸಕಲಪದಾರ್ಥಂಗಳ ನನಗೆಯು ದೇವರಿಗೆಯುಣಬಡಿಸಬೇಕಮ್ಮ.

ಅರ್ಪಿಸುವ ಸಾವಧಾನವಾವುದಮ್ಮ?

ಸದ್ಭಕ್ತಿಯಿಂದ ಭಕ್ತನನರಿದು, ಸುಚಿತ್ತಹಸ್ತದಿಂ ಸುಗಂಧವ ಆಚಾರಲಿಂಗದೇವರಿ
ಗರ್ಪಿಸಬೇಕಮ್ಮ. ನೈಷ್ಠಿಕ ಭಕ್ತಿಯಿಂ ಮಾಹೇಶ್ವರನನರಿದು ಸುಬುದ್ಧಿ ಹಸ್ತದಿಂ ಸುರಸವ
ಗುರುಲಿಂಗದೇವರಿಗರ್ಪಿಸಬೇಕಮ್ಮ. ಅವಧಾನ ಭಕ್ತಿಯಿಂ ಪ್ರಸಾದವನರಿದು ನಿರಹಂಕಾರ
ಹಸ್ತದಿಂ ಸ್ವರೂಪವ ಶಿವಲಿಂಗದೇವರಿಗರ್ಪಿಸಬೇಕಮ್ಮ. ಅನುಭಾವ ಭಕ್ತಿಯಿಂ
ಪ್ರಾಣಲಿಂಗಿಯನರಿದು ಸುಮನ ಹಸ್ತದಿಂ ಸುಸ್ಪರ್ಶನವ ಚರಲಿಂಗದೇವರಿಗರ್ಪಿಸಬೇಕಮ್ಮ.
ಆನಂದಭಕ್ತಿಯಿಂ ಶರಣರನರಿದು ಸುಜ್ಞಾನದಿಂದ ಸುಶಬ್ದವ ಪ್ರಸಾದ
ಲಿಂಗದೇವರಿಗರ್ಪಿಸಬೇಕಮ್ಮ. ಸಮರಸ ಭಕ್ತಿಯಿಂ ಐಕ್ಯನನರಿದು ಸದ್ಭಾವ ಹಸ್ತದಿಂ
ಸಂತೃಪ್ತಿಯ ಮಹಾಲಿಂಗದೇವರಿಗರ್ಪಿಸಬೇಕಮ್ಮ. ಮೀರಿದ ಸುಖವ ಪರತತ್ವದೊಳೊಡಗೂಡಿ
ಪ್ರಸಾದವ ಪಡೆದು ಪರಿಣಾಮಿಯಾಗಿರಮ್ಮ. ಇದು ನಿನಗೆ ಪರಾಪರಮುಕ್ತಿ
ಪರಶಿವಲಿಂಗದೊಲವಮ್ಮ.

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ತೊಡರಿ ಬಿಡದಂಡೆಲೆವ ಮಾಯೆಯ ಪಾಲ್ಕುರಿಕೆ ಸೋಮನಾಥನ ಬಸವ ಸ್ತುತಿ Next