ಪಾಲ್ಕುರಿಕೆ ಸೋಮನಾಥನ ಬಸವ ಸ್ತುತಿ
|
|
ರಚನೆ: ಪಾಲ್ಕುರಿಕೆ ಸೋಮನಾಥ
ಬಸವ ಸ್ತುತಿ
ಶರಣಸ್ತವ ಕಲ್ಪಕುಜಾಂ
ಕುರಪದಶಾಖಾಭಿಜಾತ ನವಕುಸುಮಾಷ್ಟೋ
ತ್ತರ ಶತನಾಮಂಗಳ ಬಸ
ವರಸರಿಗರ್ಪಿಸಿದ ಪಾಲ್ಕುರಿಕೆಯ ಸೋಮಾಂಕಂ || ೧ ||
ಬಸುರೊಳ್ ಬರಲೀಯದು, ಬ,
ಶಶಿಧರನಂ ಸಾರಿಸುವುದು, ಸ, ಸಾವಿರ ಪದಮಂ
ವಶವರ್ತಿಯ ಮಾಡುವುದು, ವ,
ಬಸವಾ ಶರಣೆಂಬುದಕ್ಕೆ ಫಲವಿದು ಬಸವಾ || ೨ ||
ಬಾಗುರು ಬಹುಳಬ್ರಹ್ಮಂ
ಸಾಗುರು ಸಾಕಾರತತ್ತ್ವ ಸಂಪದ ಫಲವೈ
ವಾಗುರು ವಚನಮಹತ್ವ
ಕ್ಕಾಗರ ಬಸವಾಕ್ಷರತ್ರಯಂ ಬಸವೇಶಾ || ೩ ||
ಬಾ ಎನೆ ಬಂಧನವಳಿವುದು
ಸಾ ಎನೆ ಸಕಲ ಸಾಯುಜ್ಯಸಂಪದಮಕ್ಕುಂ
ವಾ ಎನೆ ನಿರವಯಪದಮುಂ
ಮಾಯೆಯ ರಹಿತಂ ಬಸವನೆ ನಿಮ್ಮಯ ನಾಮಂ || ೪||
ಪ್ರಣವದ ಬಳ್ಳಿ ಬ ಕಾರಂ
ಪ್ರಣವದ ನಾದಾನುಸಾರಿ ಸಾರ ಸ ಕಾರಂ
ಪ್ರಣವದ ಬಿಂದು ವ ಕಾರಂ
ಪ್ರಣವಂ ಬಸವಾಕ್ಷರತ್ರಯಂ ಬಸವೇಶಾ || ೫ ||
ಮಧುರಂ ಶೃತಿಗಳು ಮಿಗೆ ಮಿಗೆ
ಮಧುರಂ ಮಂತ್ರಂಗಳವಕೆ ಪಂಚಾಕ್ಷರಿ ತಾಂ
ಮಧುರಂ ಪಂಚಾಕ್ಷರಿಗಂ
ಮಧುರಂ ಬಸವಾಕ್ಷರತ್ರಯಂ ಬಸವೇಶಾ || ೬ ||
ಮರೆದೊಮ್ಮೆ ಬಸವ ಎಂದೊಡೆ
ಮರುಜನ್ಮಗಳಿಲ್ಲ ದುರಿತ ವಿಘ್ನಗಳಿಲ್ಲೈ
ಕರಿಗೊರಲನೊಲಿದು ಸಲಹುವ
ಬರಿಜಿಹೈಯೊಳ್ಳುದೆ ಬಸವನಾಮವ ಜಪಿಸಿಂ || ೭ ||
ಬಸವಾ ಎಂಬತ್ರೈಕ್ಷರ
ಪೊಸತೆನಿಸುವ ರಜತಗಿರಿಯ ಮಹಿಮೆಯ ತೋರ್ಕುಂ
ಶಶಿಧರನ ಶರಣಸಂಕುಳ
ದೊಸಗೆಯ ನಡುವಿರಿಸಿ ತೋರ್ಕು ಬಸವನನಾಮಂ || ೮ ||
ಒಮ್ಮೆ ಕಳವಳಿಸಿಯರಿಯದೆ
ಸುಮ್ಮನೆಯೆ ಪ್ರಿಯದಿ ನೊಂದು ಬಸವನ ನೆನೆಯಲ್
ಹೊಮ್ಮವು ದುರಿತವದಿರ್ದೊಡೆ
ಕರ್ಮವು ಶನಿಹರಿದುಹೋಹುದೆ ನಿಶ್ಚಯದಿಂ || ೯ ||
ಅಘವನದಾಹಂ ಬಸವಾ
ಅಘಕುಲನಿಸ್ಸಿಮಭೀಮನಾಮಂ ಬಸವಾ
ಅಘಜಲವಡಬಂ ಬಸವಾ
ಅಘತಿಮಿರದ್ಯುಮಣಿ ಬಸವ ಅಮಮಾ ಬಸವಾ || ೧೦ ||
ಭಕ್ತಿಗೆ ವದನ ಕಲಾಜ್ಞತೆ
ಶಕ್ತಿಗೆ ಮಂತ್ರಂಗಳವಕೆ ಪಂಚಾಕ್ಷರಿ ತಾಂ
ಶಕ್ತಿಗೆ ಭಕ್ತಿಗೆ ಯುಕ್ತಿಗೆ
ಮುಕ್ತಿಗೆ ಬಸವಾಕ್ಷರತ್ರಯಂ ಬಸವೇಶಾ || ೧೧ ||
ಬಸವಾಯೆಂದೊಡೆ ಪಾಪಂ
ದೆಸೆಗೆಟ್ಟೋಡುವುದು ಕರ್ಮ ನಿರ್ಮಲವಹುದೈ
ಶಶಿಧರನೇರುವ ವಾಹನ
ದಶದಿಕ್ಕಿನ ಪ್ರಮಥರೊಡೆಯ ಸಂಗನಬಸವಾ || ೧೨ ||
ಬಸವನ ನಾಮಾಮೃತವಂ
ರಸಪರವಶನಾಗಿ ಸವಿದು ತುದಿ ಮೊದಲಿನಿದಂ
ಬಸವಾ ಬಸವಾ ಬಸವಾ
ಬಸವಾ ಎನುತಿರ್ದೆನಯ್ಯಾ ಶಿವಬಸವೇಶಾ || ೧೩ ||
ಗುರುಬಸವ ಲಿಂಗಬಸವಂ
ಚರಬಸವ ತೀರ್ಥ ಬಸವನಗಣಿತ ಮಹಿಮೋ
ತ್ಕರ ಸುಪ್ರಸಾದ ಬಸವಂ
ಶರಣಯ್ಯಾ ಶರಣು ಶರಣು ಸಂಗನಬಸವಾ || ೧೪ ||
ಸದ್ಯೋಜಾತನೆ ಬಸವಂ
ಸಿದ್ಧಂ ತತ್ಪುರುಷ ವಾಮದೇವನೆ ಬಸವಂ
ಹೊದ್ದೀಶಾನ್ಯಾಘೋರಂ
ರುಧ್ರಮಯಭುವನ ಸುವಿನುತ ಭರ್ಗಂ ಬಸವಂ || ೧೫ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”