Previous ತನ್ನ ನಾವು ಏನು ಬೇಡಿದೆವು ಬಂದನು ಮರ್ತ್ಯಕೆ Next

ಮೋಹವಿಲ್ಲದ ಪೂಜೆ

ಮೋಹವಿಲ್ಲದ ಪೂಜೆ ಎನಿಸು ಕಾಲಗಳಿಂದ ಕೇಳು ಮನವೆ
ದೇಹಿಗೆ ತಾ ಮಾಡಿ ಫಲವೇನು ಅದರಿಂದ ಕೇಳು ಮನವೆ || ಪ ||

ಹಸಿಯ ಗೋಡೆಗೆ ಹರಳಿಂದಲಿಡಲು ಕೇಳು ಮನವೆ
ಮಸೆದ ಕೂರಲಗಿಂದ ಬಾಳೆಯನು ಎಚ್ಚಂತೆ ಕೇಳು ಮನವೆ
ಒಸೆದು ಲಿಂಗವ ನೋಡಿದಾಕ್ಷಣ ಚಿತ್ತವು ಕೇಳು ಮನವೆ
ಬೆಸುಗೆಗಳಿಲ್ಲದ ಮೋಹವದೇತಕೆ ಕೇಳು ಮನವೆ || ೧ |

ಪುರುಷನಂಗವಬಯಸುವ ಲಲನೆಯವೊಲು ಕೇಳು ಮನವೆ
ಪರಿಮಳದರಳಿಗೆ ಭ್ರಮರನೆಳಸುವಂತೆ ಕೇಳು ಮನವೆ
ಪರಮಚಿದ್ರನಲಿಂಗ ಕರದೊಳಗಿರುತಿರ ಕೇಳು ಮನವೆ
ಉರವಣಿಸದ ಚಿತ್ರ ವೇತರ ಮೋಹವು ಕೇಳು ಮನವೆ || ೨ ||

ಬಿಸಿಯಾದ ಹಾಲೊಳು ಮುಸುಡಿಕ್ಕಿದ ಬೆಕ್ಕು ಕೇಳು ಮನವೆ
ಸಸಿನೆ ಕಾಣುತ ಕೊಸರೋಡುವ ತೆರನಂತೆ ಕೇಳು ಮನವೆ
ನುಸುಳುವ ಚಿತ್ತವ ಬಲುಹಿಂದ ಪಿಡಿತಂದು ಕೇಳು ಮನವೆ
ಶಶಿಧರನೊಳ ಗಿಡದೇತರ ಮೋಹವು ಕೇಳು ಮನವೆ || ೩ ||

ಸವತಿಯ ಶಿಶು ಹಸಿದಳುತಿರೆ ಸವತಿಯು ಕೇಳು ಮನವೆ
ತವೆ ಜನನುಡಿಗೆ ಮೊಲೆಯೂಡುವಂದದಿ ಕೇಳು ಮನವೆ
ಶಿವಲಿಂಗವನ್ನು ನೋಡಿ ಕರದಲ್ಲಿ ಚಿತ್ತಕ್ಕೆ ಕೇಳು ಮನವೆ
ಭವಕಂಜಿ ನೆನೆದರದೇತರ ಮೋಹವು ಕೇಳು ಮನವೆ || ೪ ||

ಬಿಡದೆ ಜಾರನು ಜಾರೆ ಕಣ್ಮರೆಯಾದರೆ ಕೇಳು ಮನವೆ
ತಡೆಯದೋಡುವಾನಂದದೊಳು ಚಿತ್ತವು ಕೇಳು ಮನವೆ
ಮೃಡಷಡಕ್ಷರಲಿಂಗವನು ಕಾಣುತಾಕ್ಷಣ ಕೇಳು ಮನವೆ
ಬಿಡಿಸದಂದದಿ ತೊಡರದ ಮೋಹವೇತಕ್ಕೆ ಕೇಳು ಮನವೆ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ತನ್ನ ನಾವು ಏನು ಬೇಡಿದೆವು ಬಂದನು ಮರ್ತ್ಯಕೆ Next