ರಚನೆ: ಶ್ರೀಗುರು ಕೂಟ್ಟೂರು ಬಸವಲಿಂಗ
ಗುರುವಿನ ಭಜನೆ ಮಾಡಮ್ಮ | ನಿನ್ನ |
ಪಾರು ಮಾಡುವ ಈ ಭವದಿಂದಮ್ಮ
ಸಾರಿ ಹೇಳುವೆ ಇದು ನಿಜವಮ್ಮ
ಪರ ಜ್ಯೋತಿಯೊಳು ನೀ ಬೆರೆಯಮ್ಮ || ಪ ||
ಅಷ್ಟ ಮದಂಗಳ ನಳಿಯಮ್ಮ
ದುಷ್ಟ ಗುಣಂಗಳ ತುಳಿಯಮ್ಮ
ದೃಷ್ಟಿಯ ನಗಲದೆ ನೀನು ಇರಮ್ಮ
ಶ್ರೇಷ್ಠ ಗುರುವಿನ ಬೆರೆಯಮ್ಮ || ೧ ||
ಭವದ ರೋಗಂಗಳ ನಳಿಯಮ್ಮ
ಶಿವ-ಜೀವರು ಒಂದೆಂದು ತಿಳಿಯಮ್ಮ
ಭಾವ ಗುರುವಿನ ಪದಕಿಳಿಯಮ್ಮ
ಕೈವಲ್ಯ ಪದವಿಯು ದೊರೆವುದಮ್ಮ || ೨ ||
ಪಂಚ ಕ್ಲೇಶಂಗಳ ನಳಿಯಮ್ಮ
ವಂಚನೆ ಗುಣಗಳ ಕಳೆಯಮ್ಮ
ಸಂಚಿತ ಕರ್ಮವಳಿವುದು ನೋಡಮ್ಮ
ನಿಂಚಿಂತ ಕೂಡಲೂರೇಶನ ಕೂಡಮ್ಮ || ೩ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”