Previous ದೇಹಗುಣಗಳಳಿದು... ನುಡಿಯಲಾಗದಿನ್ನು.... Next

ಕರ್ಮ ಕಾಯನು ಅಲ್ಲ

ರಚನೆ: -ಪ್ರಥಮ ಶೂನ್ಯ ಪೀಠಾಧೀಶ ಅಲ್ಲಮ ಪ್ರಭು


ಕರ್ಮ ಕಾಯನು ಅಲ್ಲ ಬ್ರಹ್ಮ ಮೂರುತಿಯಲ್ಲ
ಪರಬ್ರಹ್ಮವ ನುಡಿಯಲ್ಲಿ ತಾವಿಲ್ಲದ ನಿರ್ಮೋಹಿ || ಪ ||

ಮಾತೆಪಿತರುಳುದರ ಜಾತ ಜನಿತನು ಅಲ್ಲ
ಶ್ವೇತ ಪಿತ ಕಪೋತ ಷಡುವರ್ಣರಹಿತ
ನವಮಾಸ ತುಂಬಿರ್ದ ಮೂರುತಿಯು ತಾನಲ್ಲ
ಅವಿರಳ ಲಿಂಗದ ಕಳೆಯ ಬೆಳಗು ತಾ ಶರಣ || ೧ ||

ನಡೆಯ ಕಲಿವಲ್ಲಿ ನೋಡಿಳೆಯ ಹಂಗಿಗನಲ್ಲ
ನುಡಿಯ ಸಡಗರಲಾದ ಬಿಂದು ತಾನಲ್ಲ
ಪದುಮಪರಿಮಳಕೆರಗುವ ಭ್ರಮರ ತಾನಲ್ಲ
ಭವದ ಕುಳವನು ಗೆಲಿದ ನಿಭ್ರಾಂತ ಶರಣ || ೨ ||

ಜಾಗರ ಸ್ವಪ್ನ ಸುಷುಪ್ತಿಯಾಗು ಆನಿಮಿಷನಲ್ಲಿ
ಆಗದ ಕುಳದಲಾದ ಭೋಗಿ ತಾನಲ್ಲ
ತೇಜಸ್ಸು ರಂಜನೆಯ ಗಣಿತ ಗುಣಿತನು ಅಲ್ಲ
ಸಾಜ ನಿತ್ಯನು ತಾನಭೇದ್ಯ ಶರಣ || ೩ ||

ಬಿಂದು ಕಳೆಯ ಸುಖದ ಶಯನ ಸಂಪರ್ಕನಲ್ಲ
ಒಂದು ಛಂದದಲ್ಲಿ ಕಂದಮೂಲವ ಗೆಲಿದ
ಸಂದಳಿದು ಸ್ವಯಸುಖವನೊಂದು ಮಾಡಿ ತ್ರಿ
ಬಂದಭೇದವ ಗೆಲಿದ ನಿಷ್ಕಾಮಿ ಶರಣ || ೪ ||

ಚಂದ್ರಧರನೂ ಅಲ್ಲ ಚಂದ್ರಪೂರಿತನಲ್ಲ
ಇಂದ್ರಚಾಪದ ಪರಿಯ ಪ್ರಭಾವ ತಾನಲ್ಲ
ಶೃಂಗ ನುಂಗಿದ ರುಚಿಯನೊಂದು ಮಾಡಿ
ಗುಹೇಶ್ವರನೆಂಬ ಲಿಂಗದ ಸಂಗನಳಿದ ಶರಣ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ದೇಹಗುಣಗಳಳಿದು... ನುಡಿಯಲಾಗದಿನ್ನು.... Next