Previous ಬಸವಲಿಂಗವೆಂಬೈದಕ್ಷರಗಳು ಪಂಚಾರತಿಗಳು Next

ಗುರುಕರೋದ್ಭವ ತಾನಾದ...

ರಚನೆ: ಶ್ರೀ ಮೈಲಾರ ಬಸವಲಿಂಗ ಶರಣರು


ಗುರುಕರೋದ್ಭವ ತಾನಾದ
ಶರಣಗುಂಟೆ ಪರಿಭವ || ಪ ||

ಪರಮ ಗುರುವು ಕರುಣದಿಂದ |
ಶಿರದ ಮೇಲೆ ಕರವನಿಡಲು
ಪರುಷ ಮುಟ್ಟಿದ ಲೋಹದಂತೆ
ಶರೀರ ಲಿಂಗವಾದ ಶರಣಗಿನ್ನು ಉಂಟೆ ಪರಿಭವ || ಅ. ಪ. ||

ಮಂಗಳಾತ್ಮಕ ಮಹಾನುಭವ ಪ್ರ | ಸಂಗ ಭೋದಕ ಗುರು
ಲಿಂಗ ಚರದ ಚರಣಾರಾಧಕ
ಅಂಗಲಿಂಗವೆಂಬ ಉಭಯ | ಪಿಂಗಿ ಸ್ವಾತಜ್ಞಾನದಲ್ಲಿ
ಸಂಗನಬಸವನಾಗಿ ಜಗದ | ಹಂಗನಳಿದ
ಶರಣಗಿನ್ನು ಉಂಟೆ ಪರಿಭವ || ೧ ||

ಅಷ್ಟಾವರಣವು ತನಗಂಗವಾದ | ಶ್ರೇಷ್ಠ ಶರಣನು
ಇಷ್ಟಲಿಂಗದಲ್ಲಿ ದೃಷ್ಟಿ ಇಟ್ಟನು
ಕಷ್ಟ ಕರ್ಮ ದುರಿತ ಸುಖವು | ನಷ್ಟವಾಗಿ ಲಿಂಗದಲ್ಲಿ
ನಿಷ್ಠನಾಗಿ ಲೋಕದವರ | ಗೋಷ್ಠಿ ಬಿಟ್ಟ
ಶರಣಗಿನ್ನು ಉಂಟೆ ಪರಿಭವ || ೨ ||

ಮೂಲ ಪ್ರಣವದನುವಿನೊಳು ಸುಳಿದ | ಲೋಲವಿನೋದ
ಸಾಲು ಚಕ್ರದ ಕೀಲುಗಳ ತಿಳಿದು
ಕಾಲಕಟ್ಟಳೆ ದೂರನಾಗಿ | ಬಾಲೆಯರಿಗೆ ಸೋಲದಾತ
ಹಾಲವರ್ತಿ ಚೆನ್ನವೀರನ | ಶೀಲದಡಿಯ ಪಿಡಿದ
ಶರಣಗಿನ್ನು ಉಂಟೆ ಪರಿಭವ || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಬಸವಲಿಂಗವೆಂಬೈದಕ್ಷರಗಳು ಪಂಚಾರತಿಗಳು Next