ಎನ್ನ ತನುಗುಣಗಳ ಭ್ರಾಂತುಗೆಡಿಸು
|
|
ಭೋಗಷಟ್ಪದಿ
ಹೇವಗೈಯಾ ಎನ್ನ ಮನೋ
ಭಾವದೊಳಗೆ ಲಿಂಗವಿರದು
ತೀವಿ ತನುಗುಣಗಳು ಮುಸುಕಿ ಕೆಟ್ಟೆನಕ್ಕಟಾ || ಪಲ್ಲವಿ ||
ಎನ್ನ ಒಳಗೆ ಕಾಮ ಕ್ರೋಧ
ಎನ್ನ ಒಳಗೆ ಲೋಭ ಮೋಹ
ಎನ್ನ ಒಳಗೆ ಮದವು ಮತ್ಸರಂಗಳಿರ್ಪವು |
ಎನ್ನ ಒಳಗೆ ತಾಪತ್ರಯದ
ವಹ್ನಿ ಹೊತ್ತಿ ಉರಿವುತಿವುದು
ಎನ್ನೊಳೊಲಿದು ಶಿವನ ನೆನವು ಇಲ್ಲವಕ್ಕಟಾ || ೧ |
ಎನ್ನ ಒಳಗೆ ಜಾರರಿಹರು
ಎನ್ನ ಒಳಗೆ ಚೋರರಿಹರು
ಎನ್ನ ಒಳಗೆ ಘೋರಪಾಪ ಪೋರರಿಹರು
ಎನ್ನ ಒಳಗೆ ಕ್ರೂರದೃಷ್ಟಿ
ಎನ್ನ ಒಳಗೆ ಸೇರಿಕೊಂಡು
ಎನ್ನನೊಲಿದು ಶಿವನ ನೆನೆಯಲೀಯವಕ್ಕಟಾ || ೨ ||
ಎನ್ನ ಒಳಗೆ ಸೆಟೆಯು ಡಂಬ
ಎನ್ನ ಒಳಗೆ ಹಟವು ಶಟವು
ಎನ್ನ ಒಳಗೆ ಆಟಮಾಟ ಇಂಬುಗೊಂಡವು
ಎನ್ನ ಒಳಗೆ ಪಟುಲ ಕ್ಷುದ್ರ
ಎನ್ನ ಒಳಗೆ ಮಠವ ಮಾಡಿ
ಎನ್ನನೊಲಿದು ಶಿವನ ನೆನೆಯಲೀಯವಕ್ಕಟಾ || ೩ ||
ಎನ್ನ ಒಳಗೆ ಗರ್ವಪರ್ವ
ಎನ್ನ ಒಳಗೆ ವಿದ್ಯೆ ಡೊಂಕು
ಎನ್ನ ಒಳಗೆ ವಿಷಯಕೂಪ ವಿಷಯದಾಗರ
ಎನ್ನ ಒಳಗೆ ಕೋಪಸಿಡಿಲು
ಎನ್ನ ಒಳಗೆ ಆಸಮೇಘ
ಎನ್ನ ಮುಸುಕಿ ಶಿವನ ನೆನೆಯಲೀಯವಕ್ಕಟಾ || ೪ ||
ಇಂತು ತನುಗುಣಂಗಳೆಲ್ಲ
ಸಂತ ತಾನೆ ಮುಸುಕಿಕೊಂಡು
ಕಂತುಹರನೆ ನಿಮ್ಮ ನೆನೆಯಲೀಯವಕ್ಕಟಾ
ಮುಂತೆ ಎನ್ನ ತನುಗುಣಗಳ
ಭ್ರಾಂತುಗೆಡಿಸು ನಿಮ್ಮ ಧರ್ಮ
ಚಿಂತೆರಹಿತ ಗುರುವೆ ಷಡಕ್ಷರಿಯ ಲಿಂಗವೆ || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ
ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು