Previous ನಮಗೆ ಸರಿಯದಾರು ವಿಕಸವಾಗಲಿ Next

ಹೆದರಿ ನುಡಿಯಲಮ್ಮನು

ಭೋಗಷಟ್ಪದಿ

ಮುದದಿ ಶರಣರುಗಳ ನುಡಿಗೆ
ಇದಿರನುಡಿಯ ನುಡಿಯದವರು
ಪದುಳದಿಂದ ನುಡಿದ ಮಾಳ್ಮೆಯಿಂದ ನುಡಿವೆನು || ಪ ||

ಕಡಿದ ಕೊನರು ಚಿಗುರಿತೆನಲು
ಕಡಿದ ಕೊನರು ಚಿಗುರಿ ತೆಂಬೆ
ಮಡಿದ ಮನುಜನದ್ದನೆನಲು ಎದ್ದನೆಂಬೆನು
ಕಡಿದ ಶಿರವು ಹತ್ತಿತೆನಲು
ಕಡಿದ ಶಿರವು ಹತ್ತಿತೆಂಬೆ
ಬಿಡದೆ ಬರಡು ಕರೆಯಿತೆನಲು ಕರೆಯಿತೆಂಬೆನು || ೧ |

ಉರಗನೇವುಳಾಯಿತೆನಲು
ಉರಗ ನೇವುಳಾಯಿತೆಂಬೆ
ಗರಳ ಮಧುರವಪದನಲು ಅಪ್ಪುದಂಬೆನು
ಬರೆದ ಚಿತ್ರ ನುಡಿಯಿತೆನಲು
ಬರೆದ ಚಿತ್ರ ನುಡಿಯಿತೆಂಬೆ
ಉರಿದ ವೃಕ್ಷ ಚಿಗುರಿತೆನಲು ಚಿಗುರಿತೆಂಬೆನು || ೨ ||

ಇಟ್ಟಿಹಣ್ಣ ಮಧುರವೆನಲು
ಇಟ್ಟಿಹಣ್ಣು ಮಧುರವೆಂಬೆ
ಸುಟ್ಟಬೀಜ ಬೆಳೆಯಿತೆನಲು ಬೆಳೆಯಿತೆಂಬೆನು
ನೆಟ್ಟ ಪ್ರತಿಮೆ ನಡೆಯಿತೆನಲು
ನೆಟ್ಟ ಪ್ರತಿಮೆ ನಡೆಯಿತೆಂಬೆ
ಹೊಟ್ಟೆ, ಶಿಶುವು ನುಡಿಯಿತೆನಲು ನುಡಿಯಿತೆಂಬೆನು || ೩ ||

ಜಡಜಸಖನ ತಡೆದರೆನಲು
ಜಡಜಸಖನ ತಡೆದರೆಂಬೆ
ಕಡಿದ ಹಸ್ತ ಚಿಗುರಿತೆನಲು ಚಿಗುರಿತೆಂಬೆನು
ಮಡಿಯದವನು ಮಡಿದನೆನಲು
ಮಡಿಯದವನು ಮಡಿದನೆಂಬೆ
ಕಡೆದ ಪ್ರತುಮೆ ನಡೆಯಿತೆನಲು ನಡೆಯಿತೆಂಬೆನು || ೪ ||

ಒಡನೆ ದಿಟವ ನುಡಿಯುತಿರಲಿ
ಬಿಡದೆ ಸಟೆಯ ನುಡಿಯುತಿರಲಿ
ಕಡಿಯಲವರು ಅಲ್ಲ ಅಹುದು ಎನ್ನಲಮ್ಮೆನು
ಮೃಡಷಡಕ್ಷರಾಂಕ ಬಂದು
ಕೆಡಹಿ ನಾಲಿಗೆಯನು ಹಿಡಿದು
ಬಿಡದೆ ಕೀಳ್ವನೆಂದು ಹೆದರಿ ನುಡಿಯಲಮ್ಮನು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ನಮಗೆ ಸರಿಯದಾರು ವಿಕಸವಾಗಲಿ Next