ಭೋಗಷಟ್ಪದಿ
ಸಿರಿಯು ಸಂಪದಗಳನಿತ್ತು
ಹರನೆ ನಿಮ್ಮ ಮರಸಬೇಡ
ತಿರಿದುವುಂಡು ನಿಮ್ಮ ನೆನೆವ ಸುಖವ ಬಯಸುವೆ || ಪಲ್ಲವಿ ||
ಹೆಣ್ಣು ಮಣ್ಣು ಹೊನ್ನು ಚೆನ್ನ
ಅಣ್ಣ ತಮ್ಮ ಅಕ್ಕ ತಂಗಿ
ಹೆಣ್ಣು ಗಂಡು ಮಕ್ಕಳಾದಿ ಭಾಗ್ಯವೀಯದೆ
ಎನ್ನ ಕ್ಷುಧೆಗೆ ಅನ್ನವಿತ್ತು
ಎನ್ನ ಶೀತಕರುವೆಯಿತ್ತು
ನಿನ್ನ ಚರಣ ಧ್ಯಾನದಲ್ಲಿ ಇರಿಸು ಎನ್ನನು || ೧ ||
ಅಂದಣಾತಪತ್ರ ಚಾಮ್ರ
ಹಿಂದೆ ಮುಂದೆ ರಥಪದಾತಿ
ಸಂದಣಿಸಿದ ಆನೆ ಕುದುರೆ ಶಾನೆಯೀಯದೆ
ಕುಂದದೊಂದು ಹಾಳುಗುಡಿಯ
ಗೊಂದಿಯೊಳಗೆಯಿರಿಸಿ ಶಿವನಾ
ನಂದ ರಸದ ಸಿಂಧು ತೆರೆಯೊಳೊಂದಿಸೆನ್ನನು || ೨ ||
ಪರಡಿ ಕಡುಬು ದೋಸೆ ತರಗು
ಹಿರಿಯ ತುಪ್ಪ ಬೇಳೆ ಬೆಲ್ಲ
ಪರಿಪರಿಯಾ ಶಾಕಪಾಕದೂಟವೀಯದೆ
ಹರನ ಭಕ್ತರುಗಳ ಮನೆಯ
ತಿರಿದು ತಂದುವುಂಡು ನಿಮ್ಮ
ಇರುಳು ಹಗಲು ನೆನೆವ ಹಾಂಗೆ ಮಾಡು ಎನ್ನನು || ೩ ||
ಛಂದ ಗಣಿತ ದಶನಿಘಂಟು
ಮುಂದ ಪಂಚಕಾವ್ಯ ಮಾಘ
ವೃಂದ ಮಾತು ಗೀತದಲ್ಲಿ ಜಾಣನೆನಿಸದೆ
ಒಂದನರಿಯ ಇವನು ಬಹಳ
ಮಂದಮತಿಯ ಮರುಳನೆನಿಸಿ
ಇಂದುಧರನೆ ನಿಮ್ಮ ಧ್ಯಾನದೊಳೊಂದಿಸೆನ್ನನು || ೪ ||
ಸಕಲಭಾಗ್ಯಗಳನ್ನು ಒಲ್ಲೆ
ಸಕಲವಿದ್ಯೆಗಳನ್ನು ಒಲ್ಲೆ
ಸಕಲಫಲಪದಗಳ ನಾನದೇನ ಒಲ್ಲೆನು
ಸಕಲಸುಖವು ನೀನೆ ಎನಗೆ
ಸಕಲಮುಕ್ತಿ ನೀನೆ ಎನಗೆ
ಸಕಲ ನೀನೆ ಎನಗೆ ಷಡಕ್ಷರಿಯ ಲಿಂಗವೆ || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ
ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು