ಬಸವಸ್ತೋತ್ರದ ತ್ರಿವಿಧಿ :👈 👉:ಅಷ್ಟಾವರಣ ತ್ರಿವಿಧಿ

ಮಿಶ್ರಸ್ತೋತದ ತ್ರಿವಿಧಿ

ಬಸವೇಶನೆ ಬಸವರಾಜನೆ |
ಬಸವಣ್ಣನೆ, ಬಸವ ತಂದೆ, ಬಸವ ಕೃಪಾನಿಧಿ ||
ಬಸವ ಪರಮೇಶ್ವರೀಶ್ವರ |
ಬಸವ ಪ್ರಮಥಾದಿ ದೇವ ರಕ್ಷಿಸು ಬಸವ ||

ಸಿದ್ಧರಾಮೇಶ್ವರರು ರಚಿಸಿರುವ ಮಿಶ್ರಸ್ತೋತದ ತ್ರಿವಿಧಿ

1. ಶರಣು ಸತ್ಪಥ ಬಸವ ಶರಣು ನಿಜಗುರು ಬಸವ
ಶರಣು ಬಸವಜ್ಞಾನ ಶರಣು ಬಸವ
ಶರಣು ನಿರ್ಮಲ ನಿಜ ಗುರು ಲಿಂಗ ಬಸವೇಶ
ಶರಣೆಂಬೆ ನಿಮ್ಮಡಿಗೆ ಯೋಗಿನಾಥ.

2. ಬಸವನ ಯೋಗದಿಂ ಹಸನಾಯಿತೈ ಲೋಕ
ಚಂದದಿಂ ಬಸವಗತಿ ಎನಲು ಭವವು ಹಿಂಗುವುದು
ಬಸವಯ್ಯ ಬಸವಣ್ಣ ಶರಣಾರ್ಥಿ
ಎಂದು ಬದುಕಿದೆನಯ್ಯ ಯೋಗಿನಾಥ.

3. ಬಸವನಿಂದೀ ಯಾತ್ಮ ವಸುವಸುಧೆ ಹುಟ್ಟಿತ್ತು
ಬಸವನೇ ಶಿವಭಕ್ತಿ ಬೀಜವಾಗಿ
ಬಸವನ ಕರುಣದಿಂದಾನು ಬದುಕಿದೆನಯ್ಯಾ
ಬಸವ ನೀ ನಾನಾದೆ ಯೋಗಿನಾಥ.

4. ಬಸವ ಭಕ್ತರ ತನುವ ನಸುವ ಸಂತೈಸಲು
ಮುಸುಕಿತ್ತು ಮಹಘನವು ತನು ಪ್ರಾಣವ
ಬಸವನೇ ಗುರು ಲಿಂಗ ಚರಶೇಷವೆಂದರಿದು
ಬಸವ ಬಸವಾ ಎಂಬೆ ಯೋಗಿನಾಥ.

5. ಅಂದು ಆದಿಯಲಾದ ಆನಂದಭಸಿತವನು
ತಂದೆನ್ನ ನೊಸಲಲ್ಲಿ ಪಟ್ಟಗಟ್ಟಿ
ತಂದೆ ಗುರು ಬಸವಣ್ಣ ಎನ್ನ ರಕ್ಷಿಸಲಾಗಿ
ಇಂದು ನಿಮ್ಮೊಳು ಬೆರೆದೆ ಯೋಗಿನಾಥ.

6. ಒಚ್ಚೊತ್ತಿ ಭಸಿತವನು ನಿಚ್ಚನಿಚ್ಚಲು ನಾನು
ಹೆಚ್ಚಿ ಮನ ಹಿರಿದಾಗಿ ಧರಿಸಿ ನಿಮ್ಮ
ಸಚ್ಚಿದಾನಂದ ಗುರು ಬಸವಣ್ಣ ಪಾದಕ್ಕೆ
ಅಚ್ಚುಗ ನಾನಪ್ಪೆನೈ ಯೋಗಿನಾಥ.

7. ಕರೆಕಂಠ ಬಸವನ ಸ್ಮರಣೆಯಿಂದಲಿ ನಾನು
ವರ ಭಸಿತವನು ಧರಿಸಿ ಭವದ ಬೇರ
ಭರದಿಂದ ಕಿತ್ತು ಈಡಾಡಿ ಈ ಶರಣರ
ಚರಣದೊಳಿಹೆನಯ್ಯಾ ಯೋಗಿನಾಥ.

8. ಆಧಾರದ ಭಸಿತವನು ಓದಿ ಕರದಲಿ ಪಿಡಿದು ಅ-
ನಾದಿ ಶ್ರೀ ಬಸವನೇ ಗತಿಯೆಂಬುವಾತ
ಆದಿಯನಾದಿಯಿಂದತ್ತತ್ತಲಿಂ ಮುನ್ನ ಅ-
ನಾದಿಜಂಗಮ ತಾನೆ ಯೋಗಿನಾಥ.

9. ಭಸಿತದ ಮಹತ್ವವನ್ನು ಒಸೆದು ಕೇಳುವರೆಲ್ಲ
ಬಸವಯ್ಯನೊಳಗೈಕ್ಯ ಇದುವೆ ಸತ್ಯ
ಹುಸಿ ದಿಟದಿಂದಾರು ಧರಿಸಿದ ಮನುಜರ
ಮುಖವಸ್ಯ ಶ್ರೀ ಭಸಿತ ಯೋಗಿನಾಥ

10. ಬಸವ ಎಂದಡೆ ಭಕ್ತಿಯೋಗ ನಿರ್ಮಲ ನಿಜ
ಬಸವ ಎಂದವಗೆ ಭವ ಹಿಂಗುವುದಯ್ಯ
ಬಸವ ಬಸವಾ ಎಂದು ನೆನೆಯಲವನ ಭಕ್ತಿ
ಹಸನಪ್ಪುದೈ ಗುರುವೆ ಯೋಗಿನಾಥ.

11. ಬಸವಾಕ್ಷರತ್ರಯದಲ್ಲಿ ಒಸೆದು ಜ್ಞಾನವ ತಿಳಿಯೆ
ಮುಸುಕಿತ್ತು ಶಿವಜ್ಞಾನ ಶಿವಭಕ್ತಿಯು
ಅಸಮಲೋಚನನಾದ ಬಸವನ ನೆನಹಿಂದ
ಎಸೆಯಿತ್ತು ನಿಜಮುಕ್ತಿ ಯೋಗಿನಾಥ.

12. ಅರಿದು ಬಸವನ ಸ್ಮರಿಸಿ ಮರೆಯದಿರಲು ಜ್ಞಾನ
ದೊರಕುವುದು ಬಸವನಲ್ಲದ ಪೂಜೆಯು
ಹುಸಿದೈವಪೂಜೆಗಳು ಹಸನಲ್ಲವೆ ಗುರುವೆ
ಬಸವನ ನೆನೆಯಿರೈ ಯೋಗಿನಾಥ.

13. ಇಂದ್ರಂಗೆ ಬಸವನೇ ಕರ್ತ ಚಂದ್ರಗೆ ಕರ್ತ
ಇಂದ್ರಿಯ ಗುಣನಿಷ್ಠೆ ಬಸವನಲ್ಲಿ
ಹೊಂದಿರ್ದ ಬೆಳಗಿನ ಬಸವನೆಂದೆನದಿರಲು
ಹೊಂದುವುದು ಭವಮಾಲೆ 'ಯೋಗಿನಾಥ.

14. ಅಂಗದಾಪ್ಯಾಯನವು ಲಿಂಗಬಸವಣ್ಣನೈ
ಅಂಗವೆಂಬುದು ಎಲ್ಲ ಲಿಂಗವಾಗಿ
ಅಂಗ-ಮನ-ಭಾವೇಂದ್ರಿಯ ಸಂಗನ ಬಸವನಾಗಿ
ಮಂಗಳಪ್ರಸಾದಿಯೆ ಯೋಗಿನಾಥ

15. ಮೂರು ಮೂರ್ತಿಯ ಬೆಳಗು ತೋರುತಿರೆ ಆ ಬೆಳಗು
ಆರೂಢಪದಸಿದ್ಧಿಯರಿಯರಯ್ಯ
ಮೂರಾರು ಲಿಂಗ ಸದ್ವಿನಯಪ್ರಸಾದದಲ್ಲಿ
ತೋರಿದ ಬಸವಣ್ಣನೈ ಯೋಗಿನಾಥ.

16. ಆದಿಯೊಳು ಬಸವನ ಭೇದ ಮೂವತ್ತಾರು..
ನಾದ ಬ್ರಹ್ಮಾಂಡಗಳನೊಂದುಗೂಡಿ
ವೇದಮೂರರ ಮೂರ್ತಿ ಆದಿಬಸವನೆಂದು
ನಾದ ನಿಶ್ಚಲವಾಯಿತೈ ಯೋಗಿನಾಥ.

17. ಕೋಣೆಯ ಸತಿಯರಿಗೆ ಪ್ರಾಣವನೊತ್ತೆಯ ಕೊಟ್ಟು
ಮಾಣದವರ ಮನವು ದಣಿವನ್ನಕ
ಕೂಡಿ ಸುಖಸಮರಸದಿ ಪ್ರಾಣವ ಕೊಡದವಗೆ
ನೀನಳವೆ ಗುರುಬಸವ ಯೋಗಿನಾಥ.

18. ಅರಿವು-ಹೆಣ್ಣಿನ ಕೂಟ ನರಗುರಿಗೆ ಯೋಗ್ಯವೆ
ಗುರುಬಸವನೊಲಿದೊಂದು ಕೂಡಲಾಗಿ
ಇರವುತಾ ಸ್ಥಲವಾಗಿ ನೆರೆಕೂಡಿತು ಬಸವನಲಿ
ಪರಮಸುಜ್ಞಾನದಿಂ ಯೋಗಿನಾಥ.

19. ಬಸವನ ನೋಟವ ಬಸವನ ಬೇಟವ
ಬಸವನ ಕೂಟವ ಬೆರಸಿ ಒಸೆದು
ಬಸವನ ಮೂರ್ತಿಯ ಅಸುವಿನೊಳು ಕೂಡೀಗ
ಶಶಿಧರ ನಾನಾದೆನೈ ಯೋಗಿನಾಥ.

20. ಬಸವಮುಖ್ಯಾನಂದ ಕೂಟಸಮರಸದಲ್ಲಿ
ಬಸವನೇ ಮಾಟ ಘನಸಮರಸದಲಿ
ಬಸವನೇ ಲಿಂಗ ನಿಜಸಮರಸದ ಅರಿವೆಂದು
ಬಸವನೊಳಡಗಿದೆ ನಾ ಯೋಗಿನಾಥ.

21. ಗುರು ಚನ್ನಬಸವಣ್ಣ ಚರ ಚನ್ನಬಸವಣ್ಣ
ಪರಮಲಿಂಗವು ಚನ್ನಬಸವಣ್ಣನು
ಇಹ-ಪರವು ಪರಬ್ರಹ್ಮ ಚನ್ನಬಸವಣ್ಣಂಗೆ
ಶರಣು ಶರಣೆಂಬೆನೈ ಯೋಗಿನಾಥ.

22. ಗುರುವೆ ಗುರುವೇ ಗುರುವೆ ಗುರುವೆ ಸುಜ್ಞಾನವೆ
ಗುರುವೆ ನಿಮ್ಮಡಿಗಳಿಗೆ ಶರಣುಶರಣು
ಗುರುವೆ ಸತ್ಪಥವಿತ್ತ ಗುರು ಚನ್ನಬಸವಣ್ಣ
ಶರಣು ಶರಣೆ ಗುರುವೆ ಯೋಗಿನಾಥ.

23. ಅನ್ಯವೆಂಬುದು ತನ್ನ ಬಿನ್ನಾಣವಾಗಿಕ್ಕು
ಅನ್ಯಕ್ಕೆ ಹೊದ್ದನೈ ಅತಿಭಕ್ತಿಯಿಂದ
ಮನ್ನಣೆಯ ಪ್ರಸಾದ ತನ್ನ ರೂಪಾಗಿಪ್ಪ
ಚನ್ನಬಸವಗೆ ಶರಣು ಯೋಗಿನಾಥ.

24. ಅನ್ಯಾಯಗುಣದಲ್ಲಿ ಮುನ್ನ ಬಿದ್ದರು ಕೆಲರು
ಇನ್ನವರ ಗುಣಗಳನ್ನು ಹೊದ್ದಲೀಯ
ಚನ್ನಬಸವೇಶಗೆ ಶರಣು ಶರಣೆಂದೀಗ
ಎನ್ನ ತನು ಉಳಿಯತೆ ಯೋಗಿನಾಥ.

25. ನಡೆವ ನುಡಿವ ಗುಣವ ನಿಮ್ಮವಸ ಮಾಡಯ್ಯ
ಬಿಡಬೇಡ ಎನ್ನಯ ಕರವ ತಂದೆ
ಮೃಡನೆ ಸದ್ಗುರುರೂಪ ಚನ್ನಬಸವಣ್ಣ ಎ-
ನ್ನೊಡೆಯನೆ ಶರಣಾರ್ಥಿ ಯೋಗಿನಾಥ.

26. ಗುರುವೆ ಪರಮಾನಂದ ಗುರುವೆ ಪರಮಜ್ಞಾನ
ಗುರುವೆ ನಿರ್ಮಳತತ್ವಬೀಜ ನೀನೆ
ಪರಮ ಸತ್ಪಥವಿತ್ತ ಗುರು ಚನ್ನಬಸವಣ್ಣ
ಗುರುವೆ ನೀ ಸಲಹಯ್ಯ ಯೋಗಿನಾಥ.

27. ಆವಾವ ಕಾಲದಲಿ ದೇವ ನಿಮ್ಮಯ ಪೂಜೆ
ಭಾವ ಬಲಿದಿಪ್ಪಂತೆ ಪಾಲಿಸಯ್ಯ
ತೀವಿ ಸುಜ್ಞಾನವ ಕರುಣಿಸು ಎಲೆ ಗುರುವೆ
ದೇವ ಚನ್ನಬಸವಣ್ಣ ಯೋಗಿನಾಥ.

28. ಎನ್ನದೆಂದೆನಬೇಡ ನಿನ್ನ ಶಿವಸೊಮ್ಮು ತಾ
ನಿನ್ನದಾಗಿರ್ದ ಮೇಲೇತಕಯ್ಯ
ಇನ್ನು ನೀನೆನ್ನಂತರಂಗವರಿದ ಮೇಲೆ
ಚನ್ನಬಸವಣ್ಣ ಸಲಹೊ ಯೋಗಿನಾಥ.

29. ಆವ ಕಾಲದ ಭಕ್ತಿ ತೀವಿತೆನ್ನಂಗದಲಿ
ಓವಿ ಸಲಹೋ ಗುರುವೆ ಚನ್ನಬಸವ
ದೇವ ನಿಮ್ಮಯ ಕರುಣ ಪ್ರಸಾದವನಿತ್ತೆನ್ನ
ಜೀವವನುಳುಹಯ್ಯ ಯೋಗಿನಾಥ.

30. ಅಂಗಕರಜಾತ ನಿಜದಂಗಭೇದಗಳಲ್ಲಿ
ಅಂಗ ಪರಮಜ್ಞಾನವನೊಂದುಮಾಡಿ
ಲಿಂಗಸಂಬಂಧವ ಪಾಲಿಸಿ ರಕ್ಷಿಸೈ
ಲಿಂಗ ಚನ್ನ ದಂಡೇಶ ಯೋಗಿನಾಥ.

11. ಲಿಂಗನಿಜಭಾವದ ಹಂಗುಯೆನಗುಂಟಯ್ಯ
ಮಂಗಳ ಮಯ ದರ್ಪಿತದ ಸುಖವು ಬೇಕು
ಅಂಗದೊಳು ಶಿವಲಿಂಗಬೀಜವ ಬಿತ್ತಯ್ಯ
ಲಿಂಗ ಚನ್ನಬಸವಣ್ಣ ಯೋಗಿನಾಥ.

32. ಕಳೆ ಕಂಗಳನೆ ಮುತ್ತಿ ಬೆಳಗು ಹುವ್ವನೆ ಸುತ್ತಿ
ಚಳಿ ಗಾಳಿ ಮಳೆ ಬಿಸಿಲಿನೊಳಗೆ ಬಿತ್ತಿ
ಅಳಿವ ಮಾಯಾತನುವ ಕಳಿದು ಕಂಗೊಳಿಸಿದ-
ನಿಳೆಯ ಗುರು ಚನ್ನಬಸವ ಯೋಗಿನಾಥ.

33. ಬಲ್ಲಲ್ಲಿ ಲಿಂಗವನು ಸೊಲ್ಲು ಗೊಳಿಸಿದನವ್ವ
ಎಲ್ಲಾ ಕಳಾಜ್ಞನು ತಾನೆಯಾಗಿ
ಸೊಲ್ಲಿನ ಬ್ರಹ್ಮಾಂಡ ಅಲ್ಲಿ ಆವರ್ಚಿಸಲು
ಸಲ್ಲಲಿತ ಜ್ಞಾನಗುರು ಯೋಗಿನಾಥ.

34. ನಿತ್ಯಸತ್ಯದಲ್ಲಿ ಶಿವಭಕ್ತಿಯಂ ನೆಲೆಗೊಳಿಸಿ
ಚಿತ್ತಶುದ್ಧವ ಮಾಡಿ ಚನ್ನಬಸವ
ಮತ್ತೆ ಶಿವಲಿಂಗವನು ಅತ್ಯಂತ ವೇದೆಯಲಿ
ಇತ್ತಂದು ಚನ್ನಬಸವ ಯೋಗಿನಾಥ.

35. ರೂಪಿಂಗೆ ರೂಪವನು ಜ್ಞಾನಕ್ಕೆ ಜ್ಞಾನವನು
ಪ್ರಾಣಕ್ಕೆ ಪ್ರಸಾದಲಿಂಗತ್ರಯವ
ವೇದೆಯಿಂ ತಂದವರ ಕರದಲ್ಲಿ ಸಾಹಿತ್ಯ
ಮಾಡಿದ ಗುರುಚನಬಸವ ಯೋಗಿನಾಥ.

36. ನಿರ್ಮಳನ ಸಲಹಲ್ಕೆ ನಿರ್ಮಾಯ ಬಂದನು
ಎನ್ನನುದ್ಧರಿಸಿದನು ಚನ್ನಬಸವ,
ಎನ್ನ ಗೆಲಿದೆನೆಂಬ ಭಿನ್ನ ಮಾಯೆಯ ನಾನು
ಮುನ್ನ ಗೆಲುವೆನು ಗುರುವೆ ಯೋಗಿನಾಥ.

37. ನಿನ್ನೊಲುಮೆ ಎಂಬುದನು ನಿನ್ನವರು ಬಲ್ಲರೈ
ಎನ್ನ ಕರದೊಳಗೆ ನೀವಿಲ್ಲವಾಗಿ
ಚನ್ನಬಸವಣ್ಣ ಗುರು ಎನ್ನ ಪಾಲಿಸಲಾಗಿ
ನಿನ್ನವರಿಗಾಳಾದೆ ಯೋಗಿನಾಥ.

38. ಎನ್ನ ತನ್ನವನೆನಿಸಿ ಮನ್ನಿಸಿದ ಭಕ್ತಿಯೊಳು
ಸನ್ನುತನು ಆದೆನೈ ಸಕಲದೊಳಗೆ
ಬಿನ್ನಣದ ದೇಹವನು ತನ್ನಂತೆ ಮಾಡಿದನು
ಚನ್ನಬಸವಣ್ಣನೈ ಯೋಗಿನಾಥ.

39. ಬಿನ್ನಣದ ದೇಹವನು ತನ್ನಂತೆ ಮಾಡಿದನು
ಉನ್ನತೋನ್ನತ ಲಿಂಗವನು ತೋರಿಸಿದನು
ಎನ್ನ ಫಲಪದಕೀಗ ಹೊದ್ದಲೀಯದ ಹಾಗೆ
ಮಾಡಿದ ಗುರುಚನಬಸವ ಯೋಗಿನಾಥ.

40. ಇನ್ನು ಜನನವು ಇಲ್ಲ ಮುನ್ನವೇ ಸಂದಳಿದೆ
ಮನ್ನಣೆಯಿಂದಲ್ಲಿ ನೀವು ಕಳುಹಿದಂತೆ
ಉನ್ನತೋನ್ನತವಾದ ಚನ್ನಬಸವನ ಕರುಣ
ನಿನ್ನ ರೂಪಾದೆನೈ ಯೋಗಿನಾಥ.

41. ಎನ್ನಯ್ಯ ಗುರುಲಿಂಗ ಎನ್ನಪ್ಪ ಗುರುಲಿಂಗ
ಎನ್ನೊಡೆಯ ಪರತತ್ವದಾನಂದವು
ಎನ್ನ ಹರುಷದ ಹರವರಿಯ ಬೀಜಾಕ್ಷರವು
ಚನ್ನ ಬಸವಣ್ಣನೈ ಯೋಗಿನಾಥ.

42. ಆದಿಯಾಧಾರದಲಿ ಆದುದೈ ಅನಿಮಿಷಗೆ
ತೋರಿಸಿದಿರಯ್ಯ ಗುರು-ಚರ-ಲಿಂಗವ
ಮೂರು ದೀಕ್ಷೆಗೆ ಮೂಲಸ್ಥಾಣು ನೀನೆ ತಂದೆ
ಆರು ಭಕ್ತಿಯು ನಿನ್ನ ಶಾಖೆಯಾಗಿ
ಕಾರುಣ್ಯಕರ ಚನ್ನಬಸವಣ್ಣ ಭಕ್ತಿಯನು
ತೋರಿಸಿದನೈ ಎನಗೆ ಯೋಗಿನಾಥ

43. ಇಂದು ಯೋಗಿನಾಥನನನಂತರ್ತಿಯಿಂ ಪಾಡಿ
ಮುಂತೆ ಮನನದಲ್ಲಿ ಮಗ್ನವಾಗಿ
ಸಂತತಂ ಚನ್ನಬಸವಪ್ಪಯ್ಯ ನಿಮ್ಮಡಿಗ
ನಂಶರ್ತಿಯಿಂದೆರಗುವೆನು ಯೋಗಿನಾಥ.

44. ಶ್ರೀಗುರುವೆ ಚನಬಸವ ಪ್ರಸಾದ ಚನಬಸವ
ಆನಂದದಾದಿ ಚನಬಸವ ತಂದೆ
ನೀನೆನಗೆ ಗುರುವಾಗಿ ನಾನಾ ಕರ್ಮವ ನಿಮ್ಮ
ನಾಮಾಕ್ಷರದೆ ಗೆಲಿದೆ ಯೋಗಿನಾಥ.

45, ಪರತತ್ವ ಪ್ರಸಾದವಿರದೆನ್ನ ಕರದಲ್ಲಿ
ವರ ಲಿಂಗರೂಪಾಗಿ ಚನ್ನಬಸವ
ಶರೀರ ಮನ ಭಾವದೊಳು ಬೆರೆದುಂಡು ಪ್ರಸಾದವ
ಕರುಣಿಸಿದ ಚನ್ನಬಸವ ಯೋಗಿನಾಥ.

46. ನಿಯತ ಮಾರ್ಗ ಜ್ಞಾನಪ್ರಸಾದವುದಿಸೀಗ
ನಿಯತದೊಳು ತಲ್ಲೀಯವಾದುದಯ್ಯ
ಸ್ವಾಯತ ಸಮರಸ ಗುರುಪ್ರಸಾದವನೈದಿ
ಚನ್ನಬಸವನಾದೆನೈ ಯೋಗಿನಾಥ

47, ಬಿಂದು ತಾನೆಯಾಗಿ ಸಂದಳಿದ ನಿಜಯೋಗ
ತಂದೆ ತೋರಿದನೆನಗೆ ಚನ್ನಬಸವ
ಮನ್ನಣೆಯಿಂದಾನು ಚನ್ನಬಸವನ ನೆನೆದು
ನಿನ್ನ ರೂಪಾದೆನೈ ಯೋಗಿನಾಥ.

48. ಇನ್ನು ಕೋಣೆಯ ಕಂಡು ಮುನ್ನ ಮನೆಯೆಂದೆನಿಸಿ
ಬಿನ್ನಣದ ಪದವೆಂದು ಬಗೆಯ ಬೀರೆ
ಕುನ್ನಿಗಳು ಸುಡಸತ್ತು ಚನ್ನೈಯರ ಕೂಡಲು
ಚನ್ನಬಸವಣ್ಣನಾದೆ ಯೋಗಿನಾಥ.

49. ಇನ್ನೇಕೆ ಭಕ್ತಿಯ ಗೊಡವೆ ನಮಗೇಕಯ್ಯ
ಇಹಪರದ ಶುದ್ಧಿ ನಮಗೇತಕಯ್ಯಾ
ಇನ್ನೇಕೆ ಚರಗುರುವಿನ ಮಾಟಕೂಟದ ಗೊಡವೆ
ಚನ್ನಬಸವಣ್ಣನಾದೆ ಯೋಗಿನಾಥ.

50. ಇನ್ನೇಕೆ ಸಾಲೋಕ್ಯ ಇನ್ನೇಕೆ ಸಾಯುಜ್ಯ
ಇನ್ನೇಕೆ ಉಳಿದ ಫಲಪದದ ಗೊಡವೆ
ಇನ್ನೇಕೆ ನಿಮ್ಮ ಪಾದಧ್ಯಾನ ಮೂರ್ತಿಯು
ಚನ್ನಬಸವಣ್ಣನಾದೆ ಯೋಗಿನಾಥ.

51. ಮಂಗಳವಾಡದಲಿಪ್ಪ ಲಿಂಗವಂತರಿಗೆಲ್ಲ
ಹಿಂಗದೆ ಮೆಲ್ಲಡಿಯ ಪ್ರಭುಲಿಂಗ ತೋರಿ
ಲಿಂಗಾಂಗ ಷಟ್‌ಸ್ಥಲದ ಸಂಗವ ಬೋಧಿಸಿ ಮೆರೆದ
ಮಂಗಳಮಯಪ್ರಭು ಶರಣು ಯೋಗಿನಾಥ.

52. ಲಿಂಗರೂಪನು ಗುರುವೆ ಲಿಂಗರೂಪನು ಚರವೆ
ಲಿಂಗರೂಪನು ಪ್ರಭುವೆ ಶರಣು ಶರಣು
ಲಿಂಗಮೂರ್ತ್ಯಾತ್ಮಕನೆ ನೀನೆನ್ನ ಸಲಹಯ್ಯ
ಲಿಂಗಗುರು ಪ್ರಭುರಾಯ ಯೋಗಿನಾಥ.

53. ಇಹಪರದ ಪರಿಯನು ಅಯ್ಯ ನೀನೇ ಬಲ್ಲೆ
ನಿಮ್ಮ ಶರಣನು ಬಲ್ಲ ಪ್ರಭುರಾಯನು
ಆತನನುಮತದಿಂದ ಮಾಯೆಯನು ಗೆಲುವುದನು
ನೀವೆನಗೆ ಕಲಿಸುವುದು ಯೋಗಿನಾಥ.

54. ಚನ್ನೆಯರ ಬಲೆಯಲ್ಲಿ ಎನ್ನನಿರಿಸಿದೆ ಪ್ರಭುವೆ
ಇನ್ನಿದಕೆ ಭಾವಜನು ಬೇಂಟೆಕಾರ
ಕುನ್ನಿಗಳು ತಾವೈದು ಎನ್ನ ಗ್ರಹಿಸದ
ಮುನ್ನ ಚಿನ್ಮಯಪ್ರಭು ಸಲಹೊ ಯೋಗಿನಾಥ.

55. ಕರ್ಮಯೋಗದವರ ನಿರ್ಮೂಲ ಮಾಡಿತ್ತು
ಹಮ್ಮನೆ ಮುರಿಯಿತ್ತು ಯೋಗಿಗಳನು
ಚನ್ನಪ್ರಭುರಾಯಂಗೆ ಅಂಜಿ ಬಂದೀ ಮಾಯೆ
ಎನ್ನ ಕಾಡಿತು ಗುರುವೆ ಯೋಗಿನಾಥ.

56. ಎನ್ನ ಕಾಡದ ಮುನ್ನ ನಿನ್ನ ಮತವೀಯಯ್ಯ
ನಿನ್ನ ಪ್ರಭುರಾಯಂಗೆ ಹೇಳಿ ಕಳುಹೈ
ಎನ್ನ ಗುರು ಪ್ರಭುರಾಯ ಇನ್ನು ಸಲಹಲ್ಕಾಗಿ
ನಿನ್ನ ನಿಜಪದಗಂಡೆ ಯೋಗಿನಾಥ.

57. ಕಾಯಗುಣದಲಿ ಬಿದ್ದು ಕಾಯಜ್ಞ [ರೆಂಬವರು]
ಕಾಯಗುಣಕತೀತ ಶಿವನೆ ನೀನು
ಕಾಯ ಮನ ಕರಣಗಳ ದಾಯ ಪರಿಹರಿಸಿದ
ರಾಯ ಪ್ರಭು ನೀ ಸಲಹೊ ಯೋಗಿನಾಥ

58. ಕ್ರಮವಿಡಿದು ವಿಮಲತ್ವ ಕ್ರಮಜ್ಞಾನಸಂಬಂಧ
ಕ್ರಮ ಸಮಯೋಪಚಾರತ್ವವೆಂದು,
ಕ್ರಮ ಲಿಂಗ ಭೇದಾಂಗವೆಂಬುದ ಪಾಲಿಸೈ
ವಿಮಲ ಸದ್ಗುರು ಪ್ರಭುವೆ ಯೋಗಿನಾಥ.

59. ನಿಮ್ಮ ಮರೆಹೊಕ್ಕಲ್ಲಿ ಎನಗೇನು ಫಲವುಂಟು
ನಿಮ್ಮ ಪ್ರಭು ರಾಯನ ಕರುಣದಿಂದ
ನಿಮ್ಮ ಕಂಡೆನು ನಿಮ್ಮ ಭಕ್ತಿಯನು ನಾ ಕಂಡೆ
ನಿಮ್ಮವನು ನಾನಾದೆ ಯೋಗಿನಾಥ.

60. ಹರಿವ ಮೊಸಳೆಯನೊಂದು ಮತ್ಸ ನುಂಗಲ್ಕಾಗಿ
ಕರಿ ಸಿಂಹ ಶಾರ್ದೂಲವಳಿದವಯ್ಯ
ಉರಿವ ಜ್ಯೋತಿಯ ಬೆಳಗು ಹೊರಗೊಳಗೆ ತುಂಬಲ್ಕೆ
ಗುರು ಪ್ರಭುವ ನಾ ಕಂಡೆ ಯೋಗಿನಾಥ.

61. ಸಿದ್ಧಿಯೋಗದ ಪದದಿ ಸಿದ್ಧರು ತಾವೆಂಬರು
ಸಿದ್ಧ ಗೋರಖ ಸಿದ್ಧ ಪ್ರಭುವಿನಿಂದ
ಸಿದ್ಧವಟನು ನಿಜದ ಸಿದ್ಧಿಯದರಿಂದಲಿ
ಸಿದ್ಧ ನಿಜ ನಾನಾದೆ ಯೋಗಿನಾಥ

62. ತಲೆ ಗರ್ಭ ಕಾಲುಗಳ ಹುಲಿ ತೋಳ ನಾಯ್ಗಿತ್ತು
ನೆಲಿಸಿಕೊಂಡಳಿವರ್ಗೆ ಅರಿವನಿತ್ತು
ಸುಲಲಿತ ತ್ರೈಲಿಂಗದೊಲವಿತ್ತು ಸಲಹಿದ
ಮಲರಹಿತ ಪ್ರಭು ಶರಣು ಯೋಗಿನಾಥ.

63. ಆಡು ತೋಳನ ಮುರಿದು ಕೂಡೆ ಮೊಲ ನಾಯ್ಕಚ್ಚೆ
ನೋಡೆ ಹದ್ದೆದ್ದಿತ್ತು ಗಗನಕಯ್ಯಾ
ನೋಡಬಾರದ ಯೋಗಿ ಗಾಡ ಹದ್ದ ನುಂಗಲ್ಕೆ ಆ-
ರೂಢ ಪ್ರಭುವಾನಾದೆ ಯೋಗಿನಾಥ.

64. ಸೂನೆಗಾರನ ಮನೆಯ ಜಾರನೊಬ್ಬನು ಹೊಕ್ಕು
ಸಾರಿ ತಾ ಕೊಂದನು ಮನೆಯೆಲ್ಲರ
ಆರಾರು ಮೂರಾರು ಮೀರಿ ಪ್ರಭುರಾಯನ
ಸೇರಿ ಉಳಿದು ಸತ್ತೆನೈ ಯೋಗಿನಾಥ.

65. ಆರು ಕೋಣೆಗಳೊಳಗೆ ಅರಿವ ತುಂಬಿದನೆನ್ನ
ನೀರ ನಿಷ್ಪತಿಯಾದ ಲಿಂಗದೊಳಗೆ
ಆರೂಢದೀರೈದು ಬೇರೆ ಹನ್ನೊಂದರೊಳು
ತೋರಿದ ಪ್ರಭುಗುರುವು ಯೋಗಿನಾಥ.

66. ಆರು ಕೋಣೆಗಳೊಳಗೆ ತೋರ್ವ ಬೆಳಗನೆ ಕಂಡು
ನೀರ ನಿಷ್ಪತಿಯಾದ ಲಿಂಗದೊಳಗೆ
ಆರೂಢ ದಶವಾರು ಮೇಲೆ ಹನ್ನೊಂದರಲಿ
ತೋರ್ವಾತ ಪ್ರಭುಗುರುವು ಯೋಗಿನಾಥ.

67. ಆನೆ ನೀರೊಡಗೂಡಿ ತಾನಾಡುತಿರಲೊಂದು
ಮಾನದ ಚಿಕ್ಕಾಡು ನುಂಗೆ ಕಂಡು
ಮಾನಿನಿ ನಲಿದಾಡುತನೂನ ಮತಿಯಾಗೆ
ತಾನಲ್ಲಮಪ್ರಭುರಾಯ ಯೋಗಿನಾಥ.

68. ಲಿಂಗಶರಣರ ನಿಜಸುಸಂಗ ಪ್ರಭುರಾಯನು
ಕಂಗಳು ಕರಸ್ಥಲವು ಪ್ರಭುರಾಯನು
ಭಂಗಬಡಿಸುವ ಮಾಯೆ ಹಿಂಗಿ ನಿರವಯಲಪರ
ಸಂಗಿ ಪ್ರಭುರಾಯನು ಯೋಗಿನಾಥ.

69. ಒಟ್ಟೆಯ ಮರಿಯನು ಕಟ್ಟಿರುಹ ನುಂಗಲ್ಕೆ
ಪಟ್ಟಣ ಬೆದರಿ ಮೂರರಸುಗಳು
ಕೆಟ್ಟು ಮುರಿದೋಡಿ ಪ್ರಭುಸೆಟ್ಟಿಯ ಮರಿಹೊಗಲು
ಪಟ್ಟಣ ಹಾಳಾಯ್ತು ಯೋಗಿನಾಥ.

70. ಆಕಾಶ ಮಂಡಲವ ಭೇಕ ನುಂಗಲ್ಕಾಗಿ
ಲೋಕ ಮೂರಾರನು ವಿಷವೇರಿತೈ
ಏಕೈಕ ಪ್ರಭುವನು ಆಲೋಕಿಸಿ ಬೆರಲ್ಕೆ
ಲೋಕಮಯಪ್ರಭುವಾನಾದೆ ಯೋಗಿನಾಥ.

71. ಪರಮ ದಾಸೋಹವನು ನೆರೆಮಾಡಿ ಜಂಗಮದ
ಪರಮ ಪ್ರಸಾದವನು ಸವಿದು ಸುಖದಿ
ಕರದಿಷ್ಟಲಿಂಗದೊಳು ಶರೀರವನಿಂಬಿಟ್ಟ
ಕರುಣಿ ನೀಲಮ್ಮ ಶರಣು ಯೋಗಿನಾಥ

72. ನಿತ್ಯಲಿಂಗದ ಮೇಲೆ ಅತ್ಯಂತ ಸೊಡ್ಡುಗಳ
ಭಕ್ತಿಯಿಂ ತೆಗೆವನೈ ಪರಮಪದದಿ
ಕಂತುಮರ್ದನನು ಸೊಡ್ಡಳಬಾಚ ಶರಣಾರ್ಥಿ
ನಿತ್ಯ ಪದವೀಯಯ್ಯ ಯೋಗಿನಾಥ.

73. ಜಗವ ಸುತ್ತುವ ಮಾಯೆ ಮುಗಿಲ ಸುತ್ತುವುದೆಂದು
ಬಗೆಬಗೆಯ ಬಲೆಯ ಬೀಸುವನು ತಾನೆ
ಅಗಲದಾ ನಂತರ ಬಗೆಯ ಭಕ್ತಿಯ ಮಾಳ್ವ
ನಿರ್ಲಜ್ಜ ಶಾಂತಗುರು ಯೋಗಿನಾಥ.

74. ಬಗೆಬಗೆಯ ಪಂಚೆಯನು ಮಿಗುವ ಸಂಸಾರವನು
ಅಗಣಿತ ಜಲದಲ್ಲಿ ಅದ್ದಿ ತೆಗೆದು ಒಣು-
ಮಿಗುವ ಒಡಲೆಂಬ ಹೊಲೆಯ ಕಳದನು ಎನ್ನ
ಸಗರದ ಬ್ರಹ್ಮಯ್ಯನೈ ಯೋಗಿನಾಥ

75. ನಗರಿ ನಗರಿಯ ಸುತ್ತಿ ನಗರಿಯ ನೆಲೆಮಾಡಿ
ಬಗೆಬಗೆಯ ಬ್ರಹ್ಮವ ವಿವರಿಸುತ್ತ
ತೆಗೆತೆಗೆದು ತತ್ವದ ಬಗೆಬಗೆಯ ವಿವರಿಸಿದ
ನಿಗಮದ ಬ್ರಹ್ಮಯ್ಯನೈ ಯೋಗಿನಾಥ.

76. ಗುಹೆಯ ಗೇಹವ ಮಾಡಿ ಪರಿಪರಿಯ ಗುಡಿಗಟ್ಟಿ
ಅಹುದಾಗದುಂಟೆಂಬ ಭೇದವರಿದು
ನಿಹಿತ ಚಾರದ ಬೆಳಗನೊಳಕೊಂಡ ಶರಣನು
ಬಹುರೂಪ ಚವುಡಯ್ಯ ಯೋಗಿನಾಥ.

77. ಧಗಿಬುಗಿಲುವೊಗುವ ಧನಿ ಧಗಿಲುಭುಗಿಲೆಂ [ಬುವಾ]
ಮಿಗೆ ಶಬ್ದವಡದಾಡಿದ ಬ್ರಹ್ಮ ತಾನೆ
ಅಗಲದಾನಂತರ ಮಿಗೆ ಪರಬ್ರಹ್ಮತಾ
ಕಲಕೇತ ಬ್ರಹ್ಮಗುರು ಯೋಗಿನಾಥ.

78, ಆದಿಬ್ರಹ್ಮಾಂಡವನು ಭೇದಿಸಿದ ಗುರುಮೂರ್ತಿ
ನಾದಕ್ಕತೀತ [ನ]ನಾದಿ ಮೂರ್ತಿ
ಜೋದರ ಜೋದನು ಜೋದಗುರು ಪರಬ್ರಹ್ಮ
ಜೋದರ ಮಾಯಣ್ಣನೈ ಯೋಗಿನಾಥ.

79. ಕಣಿಯ ಕೇಳುವ ಭಾವ ಕರದೊಳಗೆ ಇರಲಿಕೆ
ತ್ರಿಣಯನ ರೂಪ ಪ್ರಜ್ವಲಿಸುವಲ್ಲಿ
ಅಣಿಯಂಕಧರನೊಳಗೆ ಅಣಿಯನೆತ್ತುತ್ತಿಹನು
ತ್ರಿಣಯನ ರೂಪ ದಾಸಯ್ಯ ಯೋಗಿನಾಥ.

80. ಆರಾರು ದಶದೊಳಗೆ ಅರಿವ ತುಂಬಿದನೆನ್ನ
ನೀರ ನಿಜ ಪರಬ್ರಹ್ಮದೈಕ್ಯಪದವ
ಆರೂಢ ದಶವಾಯು ವಾರಿಭೇದವನರಿದ
ನೀರ ಮೊರನ ವೇಮಯ್ಯ ಯೋಗಿನಾಥ.

81. ಆರೈದು ನೋಡಿ ನಿಜದಾರೈಕೆ ನೆಲೆಗೊಂಡು
ತೋರುವ ನಿಜಬ್ರಹ್ಮತತ್ವದಲ್ಲಿ
ಆರೂಢ ಮುಕ್ತಿ ಮನೆಯಾಗಿಪ್ಪ ಮಹದೇವ
ವಾರುಧೀಬ್ರಹ್ಮಯ್ಯ ಯೋಗಿನಾಥ.

82. ಕಕ್ಕಯ್ಯನವರಲ್ಲಿ ಒಕ್ಕಪ್ರಸಾದವನು
ಸಾಕ್ಷಾತು ಬಸವೇಶ ಕಾಯ್ದು ತಂದಾ
ನಿಕ್ಷೇಪವಾಗಿ ಪಡೆದಕ್ಷಯ ಶೇಷವನು
ಭಿಕ್ಷಕ್ಕೆ ಕರುಣಿಸೈ ಯೋಗಿನಾಥ.

83. ಬಸವನೆಂಬಾರಣ್ಯದೊಳಗಾನು ತಪವಿರ್ದೆ
ಪರುಷವೇ ದೊರಕಿತ್ತು ಪ್ರಸಾದದ
ಬಸವ ಚನಬಸವೆಂಬ ಅನಿಮಿಷಾಕ್ಷರದಲ್ಲಿ
ಹಸನಾದೆನೈ ಗುರುವೆ ಯೋಗಿನಾಥ.

84. ಬಸವನೆಂಬಾರಣ್ಯದೊಳಗಾನು ತಪವಿರ್ದೆ
ಪರುಷವೇ ದೊರಕಿತ್ತು ಪ್ರಸಾದದ
ಬಸವ ಚನಬಸವ ಶಿವಪ್ರಭುವೆಂಬ ಮಾತೆಯೊಳು
ಶಿಶುವಾಗಿ ಜನಿಸಿದೆನು ಯೋಗಿನಾಥ.

85. ಬಸವನಿಂದವೆ ಹುಟ್ಟಿ ಬಸವನಿಂದವೆ ಬೆಳೆದು
ಬಸವನಿಂದವೆ ನಾಮ ರೂಪವಿಡಿದೆ
ಬಸವ ಚನಬಸವನ ಪಾದೋದಕವ ಕೊಂಡು
ಶಿಶುವಾದನೈ ಗುರುವೆ ಯೋಗಿನಾಥ.

86. ಹೆತ್ತವ್ವೆ ನೀಲಮ್ಮ ಮುತ್ತವ್ವೆ ಮಹದೇವಿ
ಎತ್ತಿ ಸಲಹಿದಳಕ್ಕನಾಗಿಲೆಯು ತಾಯಿ
ಇತ್ತ ಬಾರೆಂದು ತಾಂಬೂಲ ಪ್ರಸಾದವನಿತ್ತ
ಮುಕ್ತಾಯಕ್ಕಗೆ ಶರಣು ಯೋಗಿನಾಥ.

87. ಮಾತಾ ಪಿತನು ರಹಿತ ಆತುಮ ಶಿವಯೋಗಿ
ತಾತಂಗೆ ತಾತನು ಬಸವಲಿಂಗ
ಮಾತು ಮಥನವ ನುಂಗಿದತಿಶಯದ ಪರಬ್ರಹ್ಮ
ಆತ ಚನಬಸವನೈ ಯೋಗಿನಾಥ.

88. ಗುರುರೂಪ ಬಸವಣ್ಣ ಚರರೂಪ ಬಸವಣ್ಣ
ಪರಕೆ ಪರತತ್ವನು ಬಸವಲಿಂಗ
ಗುರು ಲಿಂಗ ಜಂಗಮದ ಪಾದೋದಕ ಪ್ರಸಾದ
ಭರಿತ ಚನಬಸವನೈ ಯೋಗಿನಾಥ.

89. ಶ್ರೀಗುರುವೆ ಬಸವ ಮಹಾಗುರು ಬಸವಯ್ಯ
ಶ್ರೀಚನ್ನಬಸವಪ್ಪ ಶರಣು ಶರಣು
ಶ್ರೀಗುರುವೆ ಪ್ರಭುವೆ ಮಡಿವಾಳಯ್ಯ ಶರಣೆನುತ
ರಾಗದಿಂ ನೆನೆವೆನೈ ಯೋಗಿನಾಥ.

90. ಬಸವಣ್ಣ ಬಸವಯ್ಯ ಬಸವ ಚನಬಸವಯ್ಯ
ಬಸವಲಿಂಗವೆ ಬಸವ ಬಸವ ಗುರುವೆ
ಬಸವ ಚನಬಸವ ಪ್ರಭು ತ್ರೈಮೂರ್ತಿಲಿಂಗಕ್ಕೆ
ಶರಣು ಶರಣೆಂಬೆನೈ ಯೋಗಿನಾಥ.

91. ಶರಣಾಗು ಬಸವೇಶ ಶರಣಾಗು ಬಸವಯ್ಯ
ಶರಣಾಗು ಬಸವ ದಂಡೇಶ ನಮಗೆ
ಕರುಣಾಕರನು ಚನ್ನಬಸವಪ್ಪ ನಿಮ್ಮಡಿಗೆ
ಶರಣು ಶರಣೆಂಬೆನೈ ಯೋಗಿನಾಥ.

92. ಶರಣಯ್ಯ ಬಸವಯ್ಯ ಶರಣಯ್ಯ ಬಸವರಸ
ಶರಣಾರ್ಥಿ ಬಸವದಂಡೇಶ ನಿಮಗೆ
ಬಸವ ಚನಬಸವ ಪ್ರಭು ತ್ರೈಮೂರ್ತಿ ಲಿಂಗಕ್ಕೆ
ಹಸನಾಗಿ ವಂದಿಸುವೆ ಯೋಗಿನಾಥ.

93. ಕಕ್ಕಯ್ಯ ನಿಜಲಿಂಗ ಚಿಕ್ಕಯ್ಯ ಬೊಕ್ಕಸದ
ಚಿಕ್ಕಯ್ಯ ನುಲಿಯ ಚಂದಯ್ಯ ಶರಣು
ಒಕ್ಕಲಿಗ ಮುದ್ದಯ್ಯ ರಕ್ಕಸ ಬ್ರಹ್ಮಯ್ಯ ಘನ
ಅಕ್ಕಮಾದಣ್ಣ ಶರಣು ಯೋಗಿನಾಥ.

94. ಎಮ್ಮಪ್ಪ ಬಸವಣ್ಣ ಎಮ್ಮವ್ವ ನೀಲಮ್ಮ
ಎಮ್ಮಯ್ಯ ಪ್ರಭುರಾಯ ಚನ್ನಬಸವ
ಇನ್ನುಳಿದ ಶರಣರ ಚರಣಕ್ಕೆ ಶರಣೆಂದು
ಧನ್ಯನಾದೆನು ಗುರುವೆ ಯೋಗಿನಾಥ.

95. ಎಮ್ಮಮ್ಮ ಮಹದೇವಿ ಎಮ್ಮಯ್ಯ ಅಜಗಣ್ಣ
ಎನ್ನೊಡೆಯ ಮಡಿವಾಳ ಮೋಳಿಗಯ್ಯ
ಇನ್ನುಳಿದ ಶರಣರ ಚರಣಕ್ಕೆ ಶರಣೆಂದು
ಧನ್ಯನಾದೆನು ಗುರುವೆ ಯೋಗಿನಾಥ.

96. ಅಕ್ಷರವು ಐದಕ್ಕೆ ಅಕ್ಷರವು ಆರಕ್ಕೆ
ಅಕ್ಷರವು ಮೂರು ಶಿವಭಕ್ತಿಪದವು
ಬಸವ ಚನಬಸವ ಶ್ರೀಗುರುವೆ ಶರಣೆಂದಡೆ
ಮನಶುದ್ಧವಪ್ಪುದೈ ಯೋಗಿನಾಥ

97. ಶುದ್ಧಗುರು ಬಸವಣ್ಣ ಸಿದ್ಧ ಲಿಂಗ ಚನಬಸವ ಪ್ರ-
ಸಿದ್ಧಚರ ಪ್ರಭುರಾಯ ಇದುವೆ ಸತ್ಯ
ಇದ್ದೆಸೆದ ಶರಣರ ಚರಣಕ್ಕೆ ಶರಣೆಂದು
ಶುದ್ಧನಾದೆನು ಗುರುವೆ ಯೋಗಿನಾಥ.

98. ಗತಿಯು ನೀನೇ ಬಸವ ಮತಿಯು ನೀನೇ ಬಸವ
ಗತಿಮತಿಗೆ ಕರ್ತುವೆ ನೀನೆ ಬಸವ
ಅತಿಶಯದ ಬಸವ ಚನಬಸವ ಪ್ರಭುವೇ ಎನುತ
ಹಸನಾಗಿರ್ದೆನು ಗುರುವೆ ಯೋಗಿನಾಥ.

99. ಮಡಿವಳಯ್ಯನ ಮನೆಯ ಕಡೆಯ ಬಾಗಿಲ ಕಾಯ್ವ
ಹುಡುಗನಿವನೆಂದೆನ್ನ ಕರೆಯೊ ಗುರುವೆ
ಮೃಡಮೂರ್ತಿ ಎನ್ನ ಗುರು ಬಸವಪ್ಪ ನಿಮ್ಮಡಿಗೆ
ಶರಣು ಶರಣೆ ಗುರುವೆ ಯೋಗಿನಾಥ.

100. ಬಸವಣ್ಣನನೆ ಹಾಡಿ ಬಸವಣ್ಣನನೆ ಹೊಗಳಿ
ಬಸವಣ್ಣನೊಳಗೈಕ್ಯವಡೆದಾತನ
ಅಸಮಾಕ್ಷನವತಾರ ಮಡಿವಳಯ್ಯನ ಮನೆಯ
ಹೊಸ ಬಂಟ ನಾನಯ್ಯ ಯೋಗಿನಾಥ.

101. ಮಡಿವಳಯ್ಯನ ಮನೆಯ ಕಡುಬಂಟ ನಿಜಲಿಂಗ
ದೊಡವೆರದ ಶರಣರ ತೊತ್ತು ಭೃತ್ಯ
ನಿಜಯೋಗಿ ಸಿದ್ಧರಾಮ ವಂದಿಸುತ್ತಿಹನೆಂದು
ನಿಜದಲ್ಲಿ ಕೈಕೊಳ್ಳಿ ಯೋಗಿನಾಥ.

102. ವೀರಸಂಗವೈಯುದಾರ ಚಂಗಳೆ ಸತ್ಯ
ಧೀರ ಗುಡ್ಡವೆ ಸೋಮವ್ವಯಮ್ಮ
ಚಾರು ಲಿಂಗಪ್ರಾಣಿ ಸಾರಕಮಳವೆಯ-
ಪಾರ ರತಿಯಿಂ ಸ್ತುತಿಪೆ ಯೋಗಿನಾಥ.

103. ಅಕ್ಕಮಹದೇವಿ ಚೋಳಕ್ಕನಾಗಲೆ ನಿಂಬಿ-
ಯಕ್ಕ ದುಗ್ಗಳೆ ಸುಗ್ಗಲವ್ವ ತಾಯ
ಅಕ್ಕರಿನ ಶಿಶುವೆಂದು ಚಕ್ಕನೇ ತನ್ನತ್ತ
ಎತ್ತಿಕೊಂಡನು ಕರೆದು ಯೋಗಿನಾಥ.

104. ಬಸವ ಮಡಿವಳ ಚನ್ನಬಸವ ಚಂದಯ್ಯನು-
ಲ್ಲಸ ಘಟ್ಟಿವಾಳ ಅಜಗಣ್ಣಯ್ಯನ
ಎಸೆವ ಷಟ್‌ಸ್ಥಲದಲ್ಲಿ ಪೆಸರ‍್ವೊಡೆದ ಶರಣರ
ಶಿಶುವೆಂದು ಕರುಣಿಸಿದ ಯೋಗಿನಾಥ.

105. ತ್ರಾಹಿ ಸಂಗನಬಸವ ತ್ರಾಹಿ ಚನಬಸವೇಶ
ತ್ರಾಹಿ ಪ್ರಭುದೇವ ನಿಜ ನಿರ್ಮಾಯನೆ
ತ್ರಾಹಿ ಮಡಿವಳದೇವ ತ್ರಾಹಿ ಅಪ್ಪಣ್ಣನೆ
ತ್ರಾಹಿ ಮಾಂ ಅಜಗಣ್ಣ ಯೋಗಿನಾಥ.

106. ತ್ರಾಹಿ ಮತ್ರ‍್ಪಾಣೇಶ ತ್ರಾಹಿ ಮಾಂ ಪ್ರಭು ಗುರುವೆ
ತ್ರಾಹಿ ಶಿವಲಿಂಗಾಂಗ ಪ್ರಭುವೆ ಬಸವ
ತ್ರಾಹಿ ನಿಮ್ಮಯ ಘನಕೆ ತ್ರಾಹಿ ನಿಮ್ಮಡಿಗಳಿಗೆ
ತ್ರಾಹಿ ಮಾಂ ಬಸವೇಶ ಯೋಗಿನಾಥ.

107. ಜಯತು ಬಸವರಾಜ ಜಯತು ಬಸವಲಿಂಗ
ಜಯಜಯತು ಬಸವೇಶ ಬಸವಪ್ರಭುವೇ
ಜಯ ಚನ್ನಬಸವೇಶ ಬಸವಪ್ರಭುವೇ ಎನುತ
ಸ್ವಯ ಪರವಳಿದಿರ್ದೆ ಗುರು ಯೋಗಿನಾಥ.

108. ಜಯತು ಸಂಗನಬಸವ ಜಯತಾದಿಮಯ್ಯನೆ
ಜಯ ಮರುಳಶಂಕರನೆ ಸತ್ಯಣ್ಣನೆ
ಜಯ ಮುಗ್ಧಸಂಗಯ್ಯ ಜಯತು ಅಜಗಣ ಎಂದು
ಸ್ವಯ ಶಿಖಿ ಹಿಮದಂತಾದೆ ಯೋಗಿನಾಥ.

109. ಬಸವ ಮಡಿವಳ ಚನ್ನಬಸವ ಪ್ರಭು ಮುಖವಾದ
ಸಮ ಶಿವಗಣ ಮಿಶ್ರಸ್ತೋತ್ರದ
ಎಸೆವ ತ್ರಿವಿಧಿಯ ಮನಮೊಸೆದೋದಿ ಕೇಳಿದಡೆ
ಶಶಿಧರನೊಳಗೈಕ್ಯ ದಿಟ ಯೋಗಿನಾಥ.

ಪರಿವಿಡಿ (index)
ಬಸವಸ್ತೋತ್ರದ ತ್ರಿವಿಧಿ :👈 👉:ಅಷ್ಟಾವರಣ ತ್ರಿವಿಧಿ