ಬಸವೇಶನೆ ಬಸವರಾಜನೆ |
ಬಸವಣ್ಣನೆ, ಬಸವ ತಂದೆ, ಬಸವ ಕೃಪಾನಿಧಿ ||
ಬಸವ ಪರಮೇಶ್ವರೀಶ್ವರ |
ಬಸವ ಪ್ರಮಥಾದಿ ದೇವ ರಕ್ಷಿಸು ಬಸವ ||
ಸಿದ್ಧರಾಮೇಶ್ವರರು ರಚಿಸಿರುವ ಸಂಕೀರ್ಣ ತ್ರಿವಿಧಿ
1.ಲೋಕ ಹದಿನಾಲ್ಕರೊಳು ಕುಟ್ಟಿ ಕೆಡಹುತ್ತಲಿದೆ
ಅನೇಕ ಪರಿಯಿಂದಲೈ ಮಾಯೆ ಜಗವ
ಭಾವಯೋಗಿಗಳ ನೀಡಿ ನಿಳಯಕೆ ನುಂಗಿತು
ಈ ಮಾಯೆಯ ನೋಡಯ್ಯ' ಯೋಗಿನಾಥ.
2. ಜನಿಸುತಿಹ ಜನಕರನು ಹೊಂದುತಿಹ ನಿತ್ಯರನು
ಚಂದಗಳ ನೋಡುತಿಹ ಯೋಗಿಗಳನು
ಏಡಿಸಿಯೇ ಕಾಡುತಿಹ ಕಾನನದ ಸತಿಯಾನು
ಕಾಣಲೀಯದೆ ಕೋಲುವೆ ಯೋಗಿನಾಥ.
3. ಬ್ರಹ್ಮಯೋಗಿಗಳ ನಿರ್ಮೂಲವನೆ ಮಾಡಿತ್ತು
ಹಮ್ಮನೇ ಮುರಿಯಿತ್ತು ಹಿರಿಯರನ್ನು
ಚೆನ್ನ ಪ್ರಭುರಾಯನಿಗೆ ಅಂಜಿ ಬಂದೀ ಮಾಯೆ
ಎನ್ನ ಕಾಡಿತು ಗುರುವೆ, ಯೋಗಿನಾಥಾ
4. ಅಂಡಜಸ್ವದಜೋದ್ಭಿಜವೆಂಬ ಭವದಲ್ಲಿ
ಬೆಂಡಾಗಿ ಬಳಲಿ ನಾ ಬರುತಿರ್ದೆನು.
ಗಂಡುಗೂಳಿಯ ತೆರದಿ ಕಂಡಲ್ಲಿ ಜಿನುಗುವೀ
ಭಂಡ ಮನಕಿನ್ನೇವೆ ಯೋಗಿನಾಥ.
5. ನೊಂದೆ ಸಂಸಾರದೊಳು, ನೊಂದೆನೋ ಸತಿಯರೊಳು,
ಕಂದಿ ಕುಂದಿದೆ ನಿನ್ನನರಿಯದಯ್ಯಾ
ಬೆಂದ ಸಂಸಾರವನು ಪರಿಹರಿಸಿ ಶಿವಭಕ್ತಿ-
ಯಂದವನು ತೋರಯ್ಯ ಯೋಗಿನಾಥ.
6. ಮುಂದುವರಿದಂಗನೆಯ ಸಂಗಕೆಳಸುವುದು ಮನ
ಇಂದು ಶಿವಶೇಷವನು ಒಲ್ಲದಯ್ಯಾ.
ಬೆಂದೆನು ಪ್ರಪಂಚಿನಲಿ ಕಂದಿ ಕುಂದಿದೆ [ಶೂ]ಲವ
ಎಂದಿಂಗೆ ನೀಗುವೆನೋ ಯೋಗಿನಾಥನ
7. ಸಂಗಸುಖದಿಂ ಕೆಲರು ಭಂಗಬಟ್ಟರು ಕೇಳು,
ಲಿಂಗ ನಿನ್ನಯ ನೆಲೆಯನರಿಯರೀಗ
ಅನಂಗ ಬಾಣದಲಿ ಭಂಗಿತರಾದವರು
ಲಿಂಗ ನಿನ ಬಲ್ಲರೆ ಯೋಗಿನಾಥ.
8. ಶಿವಪಥವನೊಲ್ಲದು, ಶಿವಜ್ಞಾನವೊಲ್ಲದು.
ಶಿವಭಕ್ತಿಯಲ್ಲಿ ಮನವೀಡಾಡದು.
ಗುರುವೆ ಶಿವಚಿಂತೆಯಲಿ ಮನವಿಡದ ಸಂಸಾರವನು
ಪರಿಹರಿಸು ಶ್ರೀ ಗುರುವೆ ಯೋಗಿನಾಥ.
9. ಸಂಚಲ ವಸ್ತುವಿನ ಸಂಚವನರಿವಡೆ ವಿ-
ರಿಂಚಿಗೆ ಅರಿದಯ್ಯ ಶಿವನೆ ಭವನೆ.
ಸಂಚಿತವನರಿದಾ ಮಹಾಂತ ನಿನಗಲ್ಲದೆ ನಿ-
ಶ್ಚಿಂತಪದವಿಲ್ಲವೈ ಯೋಗಿನಾಥ.
10. ಅಂಗಾರ್ಪಿತವಾದವಂಗೆ ಲಿಂಗಾರ್ಪಿತವೆಲ್ಲಿಯದೊ?
ಶೃಂಗಾರ ನುಡಿಗಳನು ನುಡಿಯಲದನು,
ಲಿಂಗಪ್ರಸಾದಿಗಳು ಅಂಗವಿಸಲೊಲ್ಲರೈ;
ಭಂಗ ಹಿಂಗದು ಮುಂದೆ ಯೋಗಿನಾಥ.
11. ಕರ್ಮ[ಕೌಟಿಲ್ಯ]ದಿಂ ನಿಮ್ಮನರಿದೆಹೆನೆಂದು
ಬೊಮ್ಮವನು ನುಡಿದು ನಾ ಭ್ರಮಿತನಾದೆ.
ನಿರ್ಮಲ ಶಿವಯೋಗಧರ್ಮವನರಿಯದೆ
ಹಮ್ಮಿನೊಳಗಿರ್ದೆನೈ ಯೋಗಿನಾಥ.
12. ಆಸೆಯೆಂಬುವ ಪಾಶ ಮೋಸವನೆ ಮಾಡಿತ್ತು,
ಈಶನ ವೇಷವನು ಧರಿಸಿ ಏವೆ?
[ಭಾಸ್ಕರ] ಕೋಟಿಪ್ರಕಾಶನೇ ಕರುಣಿಸೈ
ವೇಷದ ಹೊಲಬನು ಯೋಗಿನಾಥ.
13. ಆಸೆಯಿಂದವೆ ಹುಟ್ಟಿ, ಆಸೆಯಿಂದವೆ ಬೆಳೆದು,
ವೇಷದಿಂದಲಿ ನಾನು ಮೈಮರೆದೆನು.
ಈಷಣತ್ರಯವೆಂಬ ಪಾಶವಂ ಹರಿದು ನಿ
ಮ್ಮಾಸೆಯೊಳಗಿರಿಸೆನ್ನ ಯೋಗಿನಾಥ.
14. ಬಣ್ಣ ಹಲವಪ್ಪಲ್ಲಿ ಬಣ್ಣತಾ ನೊಂದಾಗಿ
ಬಣ್ಣ ಮೂಜಗಕೆ ಮುಕ್ಕಣ್ಣ ತಾನು.
ಬಣ್ಣಕರು ಬಣ್ಣದೊಳಗಾಳುವುದನೇ ಕಂಡು
ಅಣ್ಣ ನಗುತಿರ್ದನೈ ಯೋಗಿನಾಥ.
15. ಬೆಟ್ಟವೊಂದರಲಿ ಹುಟ್ಟಿತ್ತು ಕಳ್ಳರ ಭಯವು;
ಕೆಟ್ಟೆನೈ ಶಿವ ಶಿವನೆ ಅರಸು ಇಲ್ಲ.
ನಿಷ್ಠೆ ಶಿವಭಕ್ತಿಯೆಂಬರಸನನು ಕರುಣಿಸಿ
ದೃಷ್ಟಾತ್ಮನ ಸಲಹಯ್ಯ ಯೋಗಿನಾಥ.
16. ಕಾಯದ ಕಳವಳಕೆ ಜೀವನೋಪಾಧಿಯಿಂ
ತಾವುಂಡು ನಿನ್ನುವನು ದೂರುತಿಹರು
ದೇವರಾರೋಗಣೆಯ ಮಾಡಿ ಬಂದೆವು ಎಂಬ
ಗಾವಿಲರನೊಲ್ಲೆನೈ ಯೋಗಿನಾಥ.
17. ಏಳು ವಳಯವ ಕಳೆದು ಜೀವರತ್ನದ ಜನನ
ಆಳುತ್ತ ಮುಳುಗುತ್ತ ಅಖಿಳದೊಳಗೆ
ಕಾಳು ಬೇಳೆಂಬವರ ಆಳವಾಡಿಯೆ ಕಾಡಿ
ಕೋಳುಹೋಯಿತು ನಿಮಗೆ ಯೋಗಿನಾಥ.
18. ಆಲಸ್ಯವೇಕಯ್ಯ? ಆರ ಕೆಡಿಸದೈ?
ಧ್ಯಾನರೂಢನು ಆಗು ಗುರುಕರುಣದಿಂ[ದ]
ನಿಂತ ಆಲಸ್ಯ ಕಿಂಚಿತ್ತು ಅಳವಟ್ಟಿತಾದಡೆ
ಮಾಯೆ ಮಠವಪ್ಪಳೈ, ಯೋಗಿನಾಥ.
19. ಕರುಣಾಕರನೆ ಎನ್ನ ದೆಸೆಗೆಟ್ಟ ಪಶುವನ್ನು
ಹಸಗೆಡಿಪುದುಚಿತವೆ ನಿನಗೆ ಹೇಳಾ?
ಸಕಲ ಸಾನಂದನೆ ಆನಂದರೂಪನೆ,
ವಿಕಳವನು ಮಾಣಿಸೈ ಯೋಗಿನಾಥ.
20. ಅಯ್ಯಾ ಮಹಾದೇವ, ಸುಮ್ಮನೇಕಿದ್ದಪೆ
ಕರುಣ ಮುಂಬಾಗಿಲೊಳ್ ಬಿದ್ದ ಪಶುವೈ
ಓರಂತೆ ಎನ್ನುವನು ಆರೈಯದಿದ್ದಡೆ
ಹಾನಿ ನಿನಗಪ್ಪುದೈ ಯೋಗಿನಾಥ.
21. ದೇವ ನಿಮ್ಮಯ ನಾಮ ಕಾಹಲ್ಲದೆನಗೀಗ
ದೇಹಿಕನು ನಾನೆನ್ನಲೇನುಂಟು?
ಆರೈದು ಎನ್ನುವನು ಓರಂತೆ ಮಾಡದಡೆ
ಹಾನಿ ನಿಮಗಪ್ಪುದೈ ಯೋಗಿನಾಥ.
22. ಕರುಣ ಕಾನನದೊಳಗೆ ಇರಿಸಯ್ಯ ಎನ್ನುವನು
ಕರುಣ ಸುಧೆ ಸಮುದ್ರದೊಳಗೆನ್ನ ಓಲಾಡುವಂತೆ
ಚಿತ್ತಲೀಲಾನಂದದಲಿ ಏಕ ಏಕಂ ಎನಿಸು
ಮನಮಧ್ಯದ ಗ್ರಾಮ ಹೊಲಬುಗೆಟ್ಟೆನ್ನುವನು
ಹೊಲಬುಗೆ[ಡದಂ] ತಿರಿಸು ಯೋಗಿನಾಥ.
23. ಚಂದವಾಯಿತು ಮಠವು ಮಂದಮತಿ ಅದರೊಳಗೆ
ಮುಂದರಿಯದಾನೀಗ ವರ್ಗಂಗಳ
ಆನಂದಪದವನು ಬಯಸಿ ಮಂದಮತಿಯಾದೆನೈ
ತಂದೆ ಎನ್ನುವ ಸಲಹು ಯೋಗಿನಾಥ.
24. ಅನ್ಯಾಯದಿಂದಲಿ ಐದು ನಾಯನು ಕಟ್ಟಿ
ಬಿನ್ನಾಣಿಯಾಡಿದನು ಬೇಂಟೆಯನ್ನು.
ಕುನ್ನಿಗಳು ತಾವೈದು ಎನ್ನ ಮುಟ್ಟದ ಮುನ್ನ
ನಿನ್ನತ್ತ ವೇದಿಸುಗೆ ಯೋಗಿನಾಥ.
25. ಅನುಪಮನೆ ಅಪ್ರತಿಮ ಕುರುಹಿಲ್ಲದಭವನೆ,
ತೆರಹುಗೆಟ್ಟೆನು ನಾನು ನಿನ್ನ ಪದಕೆ.
ಅನುಪಮನೆ ನಾ ನಿಮ್ಮ ನಾಮಡಿಂಗರಿಗನು
ಘನತಾಪವನು ಕೆಡಿಸು ಯೋಗಿನಾಥ
26. ಸಂದು ಸವೆದೊಂದಾದ ಚಂದವನು ನೋಡಿರೆ
ಹಿಂದು ಮುಂದೆ ಸೆಟ್ಟಿ ಒಲಿದು ಬಂದ
ಬಾರನು ಎಂಬ ಸಂದೇಹವನು ಕಳೆದು
ಹಿಂದುಮುಂದರಿಯಿಸೈ ಯೋಗಿನಾಥ.
27. ಕರಸ್ಥಲಕೆ ಕರುಣದ ಸುಧಾಪ್ರಸಾದ ಬರೆ
ಅದು ಲಿಂಗವಾಯಿತೈ ಎನ್ನ ಒಳಗು ಹೊರಗೂ
ಎಲೆ ಮಾಯೆ ನೀನೆನ್ನ ಒರೆದು ನೋಡಿಹೆನೆನಲು ಹುರುಳುಗೆಡುವೆ.
ನಿನ್ನೊಡೆಯ ಪ್ರಭುವಿನಿಂದಲು ಕಾಡದೆ ನೀ ಹೋಗು,
ನಾ ಕಾಡುವೆನು ಎನುತೆ. ಆರೂಢದಿಂ ಶ್ರೀಯೋಗಿನಾಥ ಪದವ.
28. ಹೊನ್ನು ಹೆಣ್ಣು ಮಣ್ಣು ಮುನ್ನವೆ ತಾ ಹುಟ್ಟಿ
ಮನ್ನಣೆಯ ಕೆಡಿಸಿತ್ತು ಯೋಗಿಗಳನು.
ಇನ್ನು ಗುರುಕರುಣವುಳ್ಳವರು ಜರಿಯಲ್ಕಾಗಿ
ಕುನ್ನಿಯಾದಳು ಮಾಯೆ ಯೋಗಿನಾಥ.
29. ಮೂರು ಬೆಳಗಿನ ನಡುವೆ ಥಳಥಳಿಪ ಹೊಂಬಣ್ಣ
ಸಾರಾಯ ಸಕಲ ನಿಷ್ಕಲದ ಸೀಮೆ
ನೀರ ನಡುವಣ ಜ್ಯೋತಿ ನಿರಾಲಂಬ ನಿಶೂನ್ಯ
ಸಾರೆ ಗುರುಕರುಣವೈ ಯೋಗಿನಾಥ.
30. ಕರಣಂಗಳೆಲ್ಲವನು ಹದುಳದಿಂದಲಿ ಬೆಳಗಿ
ಕರುಣದಿಂದಿರಿಸಿದನು ತೂಗಿ ತೂಗಿ
ಕರಣಹರ ಪರಹರಣನಾಗಿಪ್ಪ ನಿರ್ವಾಣ
ಪದವನಿತ್ತಾತ ಗುರು ಯೋಗಿನಾಥ.
31. ತನುಮನದ ಮಂಟಪದ ನಡುವಿಪ್ಪ ಗಂಡನೇ
ಮಲತ್ರಯದ ಅನುವನು ಕೆಡಿಸು ಎನ್ನ.
ಘನಪದ ಶಿಲೆ ಬಿಗಿದು ನೀನಿಪ್ಪ ಅಂಗಳವ
ತೆರಹು ಮಾಡೈ ಗುರುವೆ ಯೋಗಿನಾಥ.
32. ಕಿರಣಗಳು ಹಲವರಿಂದೊಪ್ಪಿಪ್ಪ ಲಿಂಗವನು
ನೇಮಾಕ್ಷರದ ಮರೆಯೊಳಗೆ ಮುಸುಕಿ
ತೆರೆಯನಾ ಶಿಷ್ಯಂಗೆ ತೆರೆದು ತೋರದ ಮುನ್ನ
ಅರಿಯಬಾರದು ಗುರುವೆ ಯೋಗಿನಾಥ.
33. ಹಣೆಯಕ್ಷರವ ತೊಡೆದು ಭಸಿತಮಂ ಬಾಸಣಿಸಿ
ವಶವರ್ತಿ ಮಾಡಿದನು ಶಿವಲಿಂಗವ,
ದೆಸೆಗೇಡಿಯೆನಿಸುವ ಹೊಸ ಬಂಟ ಕಾಮನನು
ಭಸ್ಮವನು ಮಾಡುವೆನು ಯೋಗಿನಾಥ.
34. ತಿಲಕಕ್ಕೆ ಶೃಂಗಾರ ಕೊಲುವ ಭೂತದ ವೈರಿ
ಸಲೆ ಶಿವನ ಪದದೋರ್ಪ ಪಥಿಕರವಿದು.
ಒಲಿದು ದಧೀಚ್ಯಾದಿ ಮುನಿಜನಕಾಯುವನಿತ್ತ
ಛಲದಂಕ ಭಸಿತವೈ ಯೋಗಿನಾಥ.
35. ಹಣೆಯಲ್ಲಿ ಭಸಿತವು ಮಣಿಮಾಲೆ ಗಳದಲ್ಲಿ,
ತ್ರಿಣಯನ ಸ್ಮರಣೆಯು ಮುಖಮಂತ್ರದಿ,
ಗಣನೆಯಿಲ್ಲದೆ ಹಾಡಿ ಹೊಗಳುವ ಭಕ್ತರ
ಅಣುಗ ನಾನಪ್ಪೆನೈ ಯೋಗಿನಾಥ.
36. ಶ್ರೀಭಸಿತ ರುದ್ರಾಕ್ಷಿ ಧಾರಣದೊಳಿಪ್ಪವರ
ಶ್ರೀಚರಣ ತೆಗೆದೆನ್ನ ಭಾಳದಲ್ಲಿ
ಒತ್ತಿ ಮುಂಡಾಡುವ ನಿತ್ಯ ನಿಜಾನಂದ
ವ್ಯರ್ಥ ಕಾಯರಿಗುಂಟೆ ಯೋಗಿನಾಥ ?
37. ಆರೈದು ಎನ್ನುವನು ಇತ್ತ ಬಾರೆಂದಿನ್ನು
ಓರಂತೆ ಮಾಡಯ್ಯ ಎನ್ನವರೊಳು.
ದ್ವಾರಕಿಂಕರನಾಗಿ ಇರಿಸಯ್ಯಾ ಭಕ್ತರ
ದ್ವಾರದೊಳಗೆನ್ನುವನು ಯೋಗಿನಾಥ.
38. ಮುಕ್ತಿ, ನಿನ್ನಯ ವೈರಿಯೆನಿಸಿಪ್ಪ ಶಕ್ತಿಯ
ಇಚ್ಛೆಯೊಳಗಿಪ್ಪನೈ ಐದು ಸರನು.
ಭಕ್ತೈಂಗನೆಯ ತಾಯಿ ಎನ್ನತ್ತ ಬೀಸಲ್ಕೆ
ವಿಚಿತ್ರತರ ಮಾಡುವೆನು ಯೋಗಿನಾಥ.
39. ನಿತ್ಯ ಲಿಂಗಾರ್ಚನೆಯು ನಿತ್ಯ ಭಕ್ತರ ಸೇವೆ,
ನಿತ್ಯ ಗುರುಭಜನೆಯಲ್ಲಿ ಸನ್ನಹಿತನಾಗಿ
ನಿತ್ಯ ಚರಲಿಂಗ ಪ್ರಸಾದವನು ಕೊಂಬ ಸುಖ
ವ್ಯರ್ಥಕಾಯರಿಗುಂಟೆ ಯೋಗಿನಾಥ.?
40. ನಿತ್ಯ ಲಿಂಗಾರ್ಚನೆಯ ಭಕ್ತಿಯಿಂದವೆ ಮಾಡಿ
ನಿತ್ಯಪ್ರಸಾದವನು ಸ್ವೀಕರಿಸಿ
ಮತ್ತೆ ಫಲಪದಗಳ ಭವವನೊಲ್ಲೆನು ಎಂದೆ.
ಮುಕ್ತಿಸಮತೆ ನೀವೆಂದೆನಿಪ
ಭಕ್ತರ ಸಂಗವದು ಮತ್ತೆ ತುದಿಯಾರ್ಥಪದ
ತತ್ವಮಸಿಯಿಂದತ್ತ ಯೋಗಿನಾಥ.
41. ಸಮರಸವು ಸಮಸುಖವು ಸಮಭಕ್ತಿಯಾದಲ್ಲಿ
ಸಮನಿಸುವ ಸುಖಕಿನ್ನು ಸರಿಯಾವುದೈ?
ಕರುಣಾಕರನೆ ನಿಮ್ಮ ನೆಲೆಯರಿದ ಭಕ್ತರಿಗೆ
ಸಮನಾರು ಲೋಕದೊಳು ಯೋಗಿನಾಥ.?
42. ಅಡಿಗಡಿಗೆ ಶರಣರ ನುಡಿಯ ಕೇಳ್ವುದೆ ಜಪವು.
ಮೃಡ ನಿಮ್ಮ ಅರ್ಚನೆಯ ಕ್ರಮವ ಪೇಳ್ವೆ,
ಸಡಗರದಿ ಸದ್ಭಕ್ತರಡಿಗೆರಗಿ ನಮೋ? ಎನಲು
ಮೃಡ ನೀನು ತೃಪ್ತನೈ ಯೋಗಿನಾಥ.
43. ಶರಣರಾಳಾಗಿ ನಾ ಶರಣಸೇವೆಯ ಮಾಡಿ
ಶರಣರಿಗೆ ಪಡುಗ-ಕೆರ್ಪಾಗಿ ನಾನು
ಇರುತಿರ್ದು ಭವದ ತಪ್ಪಿಸಿಕೊಂಬ ಸುಕೃತದ
ಫಲಕಿನ್ನು ಸರಿಯುಂಟೆ ಯೋಗಿನಾಥ.
44. ಐವರಿಂದೀ ಗ್ರಾಮ ಅತ್ತ ನಿನ್ನಯ ಸೀಮೆ
ತತ್ವ ಆರಾರರಿಂದತ್ತ ಮಠವೈ.
ಮುಕ್ತೈಂಗನೆಯ ಕೂಟ ಭಕ್ತೈಂಗನೆಯ ನೋಟ
ಮತ್ತೆ ಸಮತಾಂಗನೆಯ ದೀಕ್ಷಾತ್ರಯ
ರೂಪ ನೀಕರಿಸದೆ, ಅರೂಪ ಕೊಂಡಾಡದೆ
ಏಕಭಾವವು ಎಂದು ಅರ್ಚಿಸುವ ಶರಣರ
ಶ್ರೀಪಾದದೊಳಗಿರಿಸು ಯೋಗಿನಾಥ.
45. ಭಕ್ತೈಂಗನೆಯ ಅಂಗ ಸಪ್ತಧಾತುವಿನ ಮನೆ
ಅಷ್ಟಾಂಗವು ನಿಮ್ಮ ಪರಿವಾರವು,
ಅಷ್ಟಮದ ನಷ್ಟವನು ಪುಷ್ಟಿಯಪ್ಪಾ ಬ್ರಹ್ಮ
ಕೆಟ್ಟುದೈ ಭಕ್ತಿಯು ಯೋಗಿನಾಥ.
46. ಚಿತ್ತದಲ್ಲಿ ಶಿವನಿರಲು ಮತ್ತೆ ಶಿವನಂ ನುಡಿಯೆ
ಭಕ್ತರಲ್ಲದರ ನುಡಿಗೇಳದವರು
ಭಕ್ತರಾದವರಿಗೆ ಕಾಯದಲಿ ಕಳೆಯುಳ್ಳವರು
ನಿತ್ಯರೆಂಬುದು ತಥ್ಯ ಯೋಗಿನಾಥ.
47. ಅನ್ಯವನು ಹಾಡರವರವನು ನೋಡರವ-
ರನ್ಯಕ್ಕೆ ತೆರಹಿಲ್ಲದಂತೆಯಿಪ್ಪಾ
ಸನ್ನುತ ಶಿವಜ್ಞಾನ ಸಂಬಂಧಿಗಳ ಕೂಟ-
ಕಿನ್ನೇನು ಸರಿಯಯ್ಯಾ ಯೋಗಿನಾಥ.?
48. ಕಾಯದಲ್ಲಿಯ ಕಳೆಯು ಲೀಯವಾಗದ ಮುನ್ನ
ವೀರ ಮಾಹೇಶ್ವರರ ಪರಿಯೆಂತುಂಟೈ?
ಧಾರುಣಿಯ ಶುದ್ಧಿಯನು ಓರಂತೆ ಅರಿದಡೆ
ತಾನು ಸದ್ಭಕ್ತನೈ ಯೋಗಿನಾಥ.
49, ಹರಿಯದಿರಹಂಕರಿಸಿ ಉರುಲಿಂಗವಾದವನ
ಅರಿದಡೆ ಎನ್ನ ಸಂಹರಿಸಿದವನ
ಮೆರೆದು ಕಾರಕರೆಲ್ಲ ಕುರುಹು ಮಾಡಿದರೆಂಬ
ಕುರಿಗಳನೇನೆಂಬೆ ಯೋಗಿನಾಥ!
50. ವಸುಧೆಗೆ ಹುಟ್ಟಿದುದ ವಶಕೆ ತಂದಿದಿರಿಟ್ಟು
ಪಶುಪತಿಯ ಭಕ್ತಿಯಿಂದಾರಾಧಿಸಿ
ಪಸಿದು ಬಿದ್ದಡೆಯದರ ದೆಸೆಯೊಳಳಿದೇನೆಂಬ
ಪಶುಗಳನೇನೆಂಬೆ ಯೋಗಿನಾಥ!
51. ಕೆರೆಯೊಳಗೆ ಬಾವಿಯನು ಅಗಳುವವ ಮುನ್ನೆಗೆ
ಅಖಿಲ ಬ್ರಹ್ಮಾಂಡದೊಂದಗ್ರದಲ್ಲಿ
ಬೆರಸಿಪ್ಪ ಧಾತುವನು ಅರಿದೆಹೆನು ಎಂಬಾತ
ಕುರಿಯಲ್ಲದೆ ಮಾಣ ಯೋಗಿನಾಥ.
52. ಕುಲವಿಲ್ಲದ ಶಿಶುವು ಹಲವು ಮಣಿಗಳಲ್ಲಿ
ನವಲಿಂಗಕಲೆಯ ಜಪಿಸುವುದಕ್ಕೆ ಬರ್ಪುದೇನಯ್ಯಾ?
ಮಲ ಮುಟ್ಟಿದ ಹುಡುಗ ಕಡುಮೃಢನಾಡಂಬರಕ್ಕೆ
ಬರ್ಪುದೇನಯ್ಯಾ ಯೋಗಿನಾಥ?
53. ನೀರು ನೀರೇ ಆಗಿ, ನೀರು ಮತ್ತಾನಾಗಿ,
ಲೀಯಕ್ಕೆ ಮತ್ತೆ ತಾ ನೀರೆಯಾಗಿ,
ಆರೂಢದಕ್ಷರದ ಮರುಜೇವಣಿಯ ಹಿಂಡೆ
ನೀರು ವಜ್ರವೆಯನ್ನು ಯೋಗಿನಾಥ.
54. ಪಾಪಿಕೋಪಿಯ ಪೂಜೆ ಅನೇಕ ಪರಿ ನಿರ್ಬಂಧ,
ತಾಪತ್ರಯ ಹಿಂಗಿದ ಸಮತೆವಿಡಿದ
ಸಾತ್ವಿಕ ಶರಣರ ಸರ್ವಾಂಗದೊಳಗಿಪ್ಪೆ
ನಿಹಿತಮನೆ ನಿನಗಪ್ಪುದದು ಗುರುವೆ, ಯೋಗಿನಾಥ.
55. ಸ್ಪಟಿಕ ಫಟದೊಳಗೀಗ ಕುಟಿಲ ಸಂಗನಬೀಡು
ದಿಟಪಟವನತಿಗಳೆಯಲುಂಟೆ ಹೇಳಾ,
ವಟವೃಕ್ಷ ವಟಕೋಟಿ ಫಲವ ನುಂಗಿದ ತೆರನು
ಶರಣದೇಹಿಕದೇವ ಯೋಗಿನಾಥ.
56. ವಟವೃಕ್ಷದಾ ತೆರದ ಘಟಿಸಿಪ್ಪ ಲಿಂಗಯ್ಯ
ವಟವೃಕ್ಷ ತನ್ನೊಳಗೆ ಬೆಳಗಿದಂತೆ,
ವಟವೃಕ್ಷ ವಟಕೋಟಿ ಫಲವ ನುಂಗಿದ ತೆರದಿ
ಶರಣದೇಹಿಕ ದೇಹಿ ಯೋಗಿನಾಥ.
57. ಮುಕ್ತಿ ಮೂರಾರರಲಿ ಭಕ್ತಿಯೆರಡೊಂದರಲಿ
ತತ್ವ ಮೂವತ್ತಾರರಿಂ ಮೇಲಣ
ತತ್ವ ಮಸಿ ಸಂಗಮದ ಮುಕ್ತಾಫಲದ ಹಾರ
ಭಕ್ತದೇಹಿಕ ಶಿವನು ಯೋಗಿನಾಥ.
58. ಕೇಶಪಾಶಂಗೆಡಲಿ ಸಾಸಿರ ಮುಖದಲ್ಲಿ
ದೇಶವಿದ್ದೇಶವಾಗಿಪ್ಪ ಹದನಾ,
ಸಾಸಿರ ಮುಖದಲ್ಲಿ ಬ್ರಹ್ಮಲೋಕದ ಮಂತ್ರ
ನಾನು ನೀನಾದೆನೈ ಯೋಗಿನಾಥ.
59. ಆರಾರನೇ ಮೀರೆ ಮೂರು ಮತ್ತಾರಾಗಿ
ಆರನತಿಗಳೆದನೈ ನಿಶ್ಚಿಂತದಾ
ತೋರಿಪ್ಪ ಏಳೆಂಟ ಗಾರುಮಾಡಿಯೆ ಕಳೆದು
ಮೇಲೆ ನಿಂದಾತ ಗುರು ಯೋಗಿನಾಥ.
60. ಕ್ರಿಮಿಕೀಟಕನುವಾಗಿ ನರನ ಶರೀರದಿ ಪುದಿದು
ಭವಭವದಿ ಬರುತಿರ್ಪ ನರಕಿಯಾಗಿ
ಪುದಿದ ಮನುಜನ ತಂದು ಶುದ್ಧಾತ್ಮನನು ಮಾಡಿ
ವಿಮಲನೆನಿಸಿದೆ ಗುರುವೆ ಯೋಗಿನಾಥ.
61. ನರಮನುಜ ನಾನೆತ್ತ ಕರುಣಕಾರಣನೆತ್ತ
ಬಗೆಗೊಳ್ಳದಾನಂದ ಬ್ರಹ್ಮವೆತ್ತ?
ಕರುಣಾಕರನೆ ಭಕ್ತಿವಿಧದೊಳಗೆ ತಂದಿರಿಸಿ
ಪರಿಭವವ ತಪ್ಪಿಸಿದೆ ಯೋಗಿನಾಥ.
62. ತನುತ್ರಯ ಮಲತ್ರಯಂಗಳನು ಸುಟ್ಟಿಗ, ಭಕ್ತಿಯ
ಘನನಿಧಾನಕ್ಕೆನ್ನ ಪಟ್ಟಗಟ್ಟಿ
ಇಹಪರ ಲೋಕಕ್ಕೆ ಅರಸನ್ನ ಮಾಡಿದ
ಘನ ಗುರುವೆ ನೀನಯ್ಯ ಯೋಗಿನಾಥ.
63. ಮಲಮದವನತಿಗಳೆದು ತನುತ್ರಯವನೇ ಜರೆದು
ಮನೆಯ ಶುದ್ಧವ ಮಾಡಿ ವಿಮಲಜ್ಯೋತಿ
ಕರಣೇಂದ್ರಿಯ ಶುದ್ಧ ಹವಣರಿದು ಹೇಳಿದಡೆ
ತನುಪ್ರಸಾದವು ಇಷ್ಟ ಯೋಗಿನಾಥ.
64. ಹಸ್ತಮಸ್ತಕದೊಳಗೆ ನ್ಯಸ್ತವಾಗಲು ನಾನು
ತತ್ವತುರಿಯಾರ್ಥದಿಂದತ್ತಲಾದೆ.
ಮತ್ತೆ ಭಕ್ತಿಜ್ಞಾನವೈರಾಗ್ಯದಿಂದತ್ತ
ಮುತ್ತೆರನು ಒಂದಾದ ಯೋಗಿನಾಥ
.
65. ಪಂಚಬ್ರಹ್ಮವನು [ನೀ] ವಂಚಿಸದೆ ತೋರಿದೈ
ಪಂಚಾಕ್ಷರದ ಭೇದವನ್ನರುಹಿದೆ
ಪಂಚಭೂತಾತ್ಮವನು ಕಳೆದು ಶಿವಲಿಂಗವನು
ಪಂಚಮದೊಳಿರಿಸಿದ್ದ ಯೋಗಿನಾಥ.
66. ಆದಿಯಾಧಾರದಲಿ ನಿತ್ಯ ನಿರುಪಮನೆ
ಶಿವಭಕ್ತಿಕಾರಣ ನೀನು;
ಹುಟ್ಟಿಲ್ಲದವ ಮರಳಿ ಹುಟ್ಟಿದೆಯೆಲೈ
ಬಟ್ಟೆಗೆಟ್ಟಾತ ನಿಬ್ಬಟ್ಟೆಯನು ಕಟ್ಟಲ್ಕೆ
ಕರವೆಂಬೀ ಹೊಟ್ಟೆಯಲಿ ಹುಟ್ಟಿದೆ ಯೋಗಿನಾಥ.
67. ದಶವಿಧದ ಭಕ್ತಿಯಲಿ ಒಸರಿತ್ತು ಭಕ್ತಮೃತ
ಪಸರಿ ಪರ್ಬಿತು ಸಕಲ ಲೋಕಕಾಗಿ,
ಕುಡಿವರಿದು ಕುಡಿಮುರಿದು ಮೃಡನಲ್ಲಿಗೈಯ್ದಲ್ಕೆ
ನುಡಿಯ ಬ್ರಹ್ಮವು ನೀನೆ ಯೋಗಿನಾಥ.
68, ಒಪ್ಪಕ್ಕೆ ಅನುಮತಕೆ ಇಪ್ಪಾತ ತಾನೈಸೆ
ತಪ್ಪುನೆಪ್ಪಿಗೆ ಕರ್ತನಲ್ಲವಯ್ಯಾ.
ಪುಷ್ಪಬಾಣನ ಸುಟ್ಟು ಮುಪ್ಪುರವನುರುಹಿದ
ಅಪ್ಪ ತಾನೀತನೈ ಯೋಗಿನಾಥ.
69. ಸತ್ಯವೆಂಬುದು ಶೀಲ ತಥ್ಯವೆಂಬುದು ಸೀಮೆ
ಭಕ್ತಿಯೆಂಬುದು ಶಿವನ ಅನುವು ತಾನೆ.
ಮುಕ್ತಿಯೆಂಬಾಯತವು ವ್ಯಕ್ತವಾಗಲು ತಾನೆ
ನಿತ್ಯ ಪದವಾಯಿತೈ ಯೋಗಿನಾಥ.
70. ಜನಿತವಿಲ್ಲದ ನಿಜಶ್ಚಯವೆಂಬ ಹರನೇ,
ಜನಿಸಿದೆಯೆಲೈ ಗುರುವಿನಾನಂದ ಕರದಿ
ಜನಿಸಿದಾ ಜನನವನು ಅರಿದ ಮಹಂತರಿಗೆ
ಜನನ-ಮರಣಗಳಿಲ್ಲ ಯೋಗಿನಾಥ.
71. ತನುಗುಣವನತಿಗಳೆದು ಮನವ ಮಧ್ಯದಲಿರಿಸಿ
ನೆನೆವುತಿಪ್ಪಡೆ ಶುದ್ಧ ಜ್ಯೋತಿ ತಾನೆ.
ಜ್ಯೋತಿಮಸುಳದ ಮುನ್ನ ರೀತಿ ಹಲವಾದಡೆ,
ನೀತಿವಂತನು ತಾನೆ ಯೋಗಿನಾಥ.
72. ತನುವಕ್ಷರವು ಮೂರು ಅನುಪಮಾಕ್ಷರವೈದು
ಇನಿತಕ್ಷರಂಗಳೊಳು ಎಂಟು ತಾನು
ತನುಮಧ್ಯಮಂಟಪದ ಒಳಗಿದ್ದು ಅಕ್ಷರವ-
ನರಿಯೆ ಘನಭಕ್ತಿ ತನಗನ್ನು ಯೋಗಿನಾಥ.
73. ಅಕ್ಷರವು ಅಪ್ರಮಾಣವು ಸದಾಕಾಲದಲ್ಲಿ
ಏಕೋ ದೇವನ ಹಿಡಿದು ನಿತ್ಯವಾಗಿ
ಆ ಹಸ್ತ ಆ ಒತ್ತ ಆ ಹಸ್ತ ಶಿವವಾಸ,
ಆ ಹಸ್ತ ಸಕಲದೈವಾದಿ ಶ್ರೇಷ್ಠಾ
ಅನೇಕ ರೂಪನ ಏಕೋ ರೂಪಾಗಿ ಹಿಡಿದುದೈ
ಯೋಗಿನಾಥಾ, ನಿಮ್ಮ ಶರಣರ ಸಮತೆ ಹಸ್ತ.
74. ಅಕ್ಕಟಾ! ನೀನೆನ್ನ ತತ್ವಪದದೊಳಗಿರಿಸೆ
ತತ್ವಾರ್ಥವನು ಮೀರಿದೆನು ನಿನ್ನವರ
ಚಿತ್ತವಿಡಿದೋಲೈಸಿ ಭಕ್ತಿ ಎನಗಾಯಿತೈ
ತತ್ವಮಸಿಯಾದೆನೈ ಯೋಗಿನಾಥ.
75. ಯೋಗಭೂಷಣ, ನಿನ್ನ ಬೇಗ ನೆರೆಯಲಿ ಬೇಕು,
ಬೇಕು ಬೇಕೆಂದೆಂಬ ಸದ್ಭಕ್ತರ
ಮನದ ಕೊನೆಯಲಿ ನಾನು ತಿಳುಹುವೆನು ಅಕ್ಷರವ;
ಬಸವ ಬಸವಾ ಎಂಬ ಬಸವಾಕ್ಷರತ್ರಯದೊಳಗೆ
ತಾನೀಗ ತೈಲಿಂಗವೊಪ್ಪಿಕ್ಕು
ಘನಗುರು ಬಸವಣ್ಣ, ಯೋಗಿನಾಥ.
76. ಶ್ರೀಗುರುವೆ ಬಸವಣ್ಣ, ಪ್ರಸಾದ ಬಸವಣ್ಣ,
ಆನಂದದಾದಿ ಚೆನ್ನಬಸವ ತಂದೆ,
ನೀನೆನಗೆ ಗುರುವಾಗೆ, ಅನೇಕ ದುಷ್ಕರ್ಮವನು
ನಿಮ್ಮ ನಾಮಾಕ್ಷರತ್ರಯದ
ನೇಮದಿಂ ಗೆದ್ದೆನೈ ಯೋಗಿನಾಥ.
77. ನಿತ್ಯಾಕ್ಷರವು ಮೂರು ತತ್ವಾಕ್ಷರವು ಐದು
ಭಕ್ತಕ್ಷರವು ತಾವು ವರ್ಗವಾರು;
ತತ್ವಮಸಿಯಿಂ ಮೇಲೆ ನೇಮಾಕ್ಷರದ್ವಯವು,
ನಿತ್ಯಪ್ರಸಾದವೈ ಯೋಗಿನಾಥ.
78. ಭಕ್ತಿಯೆಂಬಾ ಗಜವು ಮತ್ತವಾಗಿಯೆ ಬರೆ ವಿ
ಚಿತ್ರತರವೆಂದೆನಿಪ ಮಾವತಿಗನು
ಅಷ್ಟಾಂಗಯೋಗದಲ್ಲಿ ಮೆಟ್ಟಿನಡೆಸುವ ಭೇದ
ಮತ್ತಾರು ಬಲ್ಲರೈ ಯೋಗಿನಾಥ.
79. ಭಕ್ತ ಮಾಹೇಶ್ವರನು ಚಿತ್ತವಿಪ್ಪಾ ಭೇದ,
ಮತ್ತೆ ಸದ್ಭಕ್ತಿಗಜ ಮಸ್ತಕದಲ್ಲಿ
ಒಪ್ಪಿ ನಡೆಸುವ ಭೇದ, ಆರಾರರಿಂ ಮೇಲೆ
ಮೀರಿ ನಿಂದಿತು ಗುರುವೆ ಯೋಗಿನಾಥ
80. ಗುರು ಲಿಂಗ ಜಂಗಮದ ಹವಣುಗೆಟ್ಟಿತು ಸೀಮೆ
ಹವಣನರಿವವರಾರು ಶಿವಯೋಗಮತದಾ
ತನುತ್ರಯವ ಮಲತ್ರಯವನತಿಗಳೆದು ಸಹದೀಕ್ಷೆ
ಪರಿಯಾತನರಿವನೈ ಯೋಗಿನಾಥ.
81. ಬಿಂದು ತಾನೇಯಾಗಿ ಸಂದಳಿದ ಭೇದವನು
ಹಿಂದು ಮುಂದಳಿದು ನಿಜಯೋಗದ
ತಾತ್ಪರಿಯದ ಯೋಗವನು ತಂದೆ ಬಲ್ಲಾ.
ಚನ್ನಬಸವಣ್ಣನ ಮನ್ನಣೆಯಿಂ ನೆನೆದಡೆ
ನಿನ್ನ ರೂಪಪ್ಪರೈ ಯೋಗಿನಾಥ.
82. ಇದಿರಿಟ್ಟು ನಾ ಬಂದು ಸದಮಲ ಜ್ಞಾನವ ಕಂಡೆ,
ಉದಯಾದ್ರಿಯಲಿ ಜ್ಯೋತಿ ಬೆಳಗಿತೆಂದು.
ಆ ಬೆಳಗಿನ ಕೃಪೆಯಿಂದ ಈ ಬೆಳಗ ನಾ ಕಂಡು,
ಆನು ನೀನಾದೆನೈ ಯೋಗಿನಾಥ.
83. ಮಂಡಲತ್ರಯದಲ್ಲಿ ಮಂಡಪಗಳೆರಡರಲಿ
ಕೆಂಡದಂತಿಪ್ಪ ಲಿಂಗದ ಪರಿಯನು.
ಕಂಡು ಕೈಮುಗಿದು ಕಣ್ಮುಚ್ಚಿ ಸಂತೋಷದಿಂ
ದಿಂಡುಗೆಡೆದೆನು ಗುರುವೆ ಯೋಗಿನಾಥ.
84. ಮತ್ತೊಡೆದು ಹತ್ತಿತ್ತು ಮತ್ತೆ ಬೆಸಲಾಯಿತ್ತು
ಕತ್ತುರಿಯ ಮೃಗ ಬಂದು ಸುಳಿಯಿತಲ್ಲ.
ನೆತ್ತಿಯೊಳಗಣ ಸುಧೆ ಪ್ರವಾಹವಾದುದ ಕಂಡು
ಮತ್ತೆ ನಂಬಿದೆ ಗುರುವೆ ಯೋಗಿನಾಥ.
85. ಆದಿಯಾಧಾರದಲಿ, ವೇದ ಹದಿನಾರರಲಿ,
ನಾನಾಪರಿಯ ಶುದ್ಧಧವಳದಲ್ಲಿ,
ಧವಳವೊಸರುವ ಬಿಂದು ಪಸರಿಸುವ ಅಕ್ಷರದ
ಎರಡರೊಳಗಣ ಸಸಿಯು ಯೋಗಿನಾಥ.
86. ವರ್ಣಾಕ್ಷರವು ಎಂಟು ತನ್ನ ಗುಣ ಹದಿನಾರು,
ಉನ್ನತೋನ್ನತ ಬಿಂದು ಮೂರು ಮೂರು.
ಸನ್ನುತಾರರ ಒಳಗೆ ಲೀಯವಾದಂಗವನು
ಇನ್ನು ಶಿವಯೋಗಿ ಬಲ್ಲ ಯೋಗಿನಾಥ.
87. ಕೂಟಸಂಯೋಗಿಯಾ ಯೋಗಕ್ಕೆ ನಾ ಹೋಗೆ
ಕೂಟ ಸಿಲುಕಿತು ಮನದ ಮಧ್ಯದಲ್ಲಿ.
ನೋಟವಾಲೋಕದ ಬೇಟೆಯಾಡುವ ಹೊಲನ
ಲೀಯಕ್ಕೆ ಭಕ್ತಿಯಿದು ಯೋಗಿನಾಥ.
88. ದೇಹ ದೇವಾಲಯವು ಮೇಲೆ ರತ್ನದ ಕಳಸ
ಆಳು-ಪರಿವಾರಕ್ಕೆ ಇಂಬುಗೊಡದೆ,
ಅರಮನೆಯ ಒಳಗೊಂದು ಎಸಳ ಮಂಟಪವಿಕ್ಕಿ
ಶಶಿಮುಖಿಯ ಸಂಗದೊಳಗಯ್ಯನಿರಲು,
ಸಂಗ ಕಂಗಳ ತೆರೆದು ಸಂಗ ಮತ್ತೊಂದಾಗೆ
ಲಿಂಗ ನಿನ್ನಯ ರೂಪು ಯೋಗಿನಾಥ.
89. ಮೂರು ಬೆಟ್ಟದ ಶಾಖೆ ನೂರು ಪರಿಯಾಯಿತ್ತು
ವೇದಸಿದ್ಧರಿಗೆಲ್ಲಿ ಕಾಣಲರಿದು;
ನಾದಬಿಂದುವಿನಲ್ಲಿ ಆದಿಬ್ರಹ್ಮನು ಇಪ್ಪ,
ಆದಿಯಾಧಾರದಾ ಪರಿ ಪೊಸ ಪರಿ;
ಸಾದಾಖ್ಯ ದೇಹಿಗಳಿಗಿಲ್ಲಿಲ್ಲವೆಂದಾನು ?
ಸಾರೆ ನಿಂದೆನು ಲಿಂಗ ಯೋಗಿನಾಥ.
90, ಆರೇನನೆಂದಡೆಯು ಮೌನಗೊಂಬುದೆ ಸಮತೆ;
ಧ್ಯಾನರೂಢರು ಆಗಿ ಶಿವಜ್ಞಾನದ
ನಾನಾ ಪ್ರಕಾರದಲ್ಲಿ ದೀಪ್ತಿ ಸಂಚಲಿಸಲ್ಕೆ
ಯೋಗವಪ್ಪುದು ಸಮತೆ ಯೋಗಿನಾಥ.
91. ಎಲವೆಲವೊ ಮೂಜಗದ 'ಪರಿಯಲ್ಲ ಶಿವಯೋಗ,
ಒದವಿದ ಬ್ರಹ್ಮಾಂಡದಂತ್ಯವಲ್ಲ.
ಒದವಿದ ಸಾಯುಜ್ಯಪದವ ಮೀರಿದ ಭಕ್ತಿ
ಮದಕರಿಗೆ ಅಪ್ಪುದೆ ಯೋಗಿನಾಥ.
92. ಶ್ರುತಿತತಿಯ ಮಸ್ತಕದ ಅತಿಶಯದ ಬೆಳಗಿನೊಳು
ಸಕಲ ಲೋಕಂಗಳು ಬೆಟ್ಟವಾಗಿ
ಒಸರುವಾ ಸಾನಂದ ಬೆಳಗು ಬಿಂದುಗಳಾಗೆ
ಬೆಳಗುತಿದ್ದಿತು ಬ್ರಹ್ಮ ಯೋಗಿನಾಥ.
93. ಅಂಗವಿಲ್ಲನನ್ಯಕ್ಕೆ ಲಿಂಗವಲ್ಲದೆ ಪೆರತು
ಮಂಗಳಾಂಗನೆ ರೂಪು ಚಿತ್ರತರವೈ
ಸಂಗಮಸ್ಥಾನದಲ್ಲಿ ಆನಂದವಾದಡೆ
ಲಿಂಗ ನಿನ್ನಯ ಶೀಲ ಯೋಗಿನಾಥ.
94. ಬಂದುದಾ ಮಧ್ಯದಲ್ಲಿ ಸಂದಳಿದ ಸಾನಂದ,
ಮುಂದುದೋರದು ಭಕ್ತಿ ಮೂರರಲ್ಲಿ,
ಒಂದೊಂದು ಪರಿಯಲೂ ಬಂದು ಬಂದಾಡಲ್ಕೆ
ಕಂಡು ಹರ್ಪಿತನಾದೆ ಯೋಗಿನಾಥ.
95. ತನಮನದ ಮಧ್ಯದಲ್ಲಿ ಬೆಳಗುತಿಪ್ಪುದು ಒಂದು
ಘನತರದ ದೀಪ ಶಾಖಾಧಿಪತಿಯ
ತೊಳಗಿ ಬೆಳಗುವ ನಿತ್ಯ ಘನತರಾಕ್ಷರದಲ್ಲಿ
ಶಿವಲಿಂಗ ಜನನವೈ ಯೋಗಿನಾಥ.
96, ಅಂದು ಆದಿಯಲಾದ ಆನಂದಬೀಜವನು
ತಂದೆನ್ನ ಕರಭೂಮಿಯಲ್ಲಿ ಬಿತ್ತಿ,
ಅಂಕುರವು ಮೂರಾಗಿ ಫಲವು ಆರಾಗಲ್ಕೆ
ಚಿಂತೆಗೆಟ್ಟವು ಆರ ಆರ ಮೀರಿ;
ನಿಶ್ಚಿಂತಪದದಲ್ಲಿ ಲಿಂಗೋದಯವಾಗೆ
ಸಚ್ಚಿದಾನಂದ ತಾ ಯೋಗಿನಾಥ.
97. ಲಿಂಗ ಕರದೊಳಗಿರಲು ಅಂಗವಿಸಲೇಕನ್ಯ
ಸಂಗಕ್ಕೆ ಒಳಗಾಗಿ ಲಿಂಗವುಂಟೆ?
ಅಂಗವೆಲ್ಲವು ಲಿಂಗಸಂಗವಾಗಿಪ್ಪವರ
ಲೆಂಗಿ ನೀನೆಂಬೆನೈ ಯೋಗಿನಾಥ.
98. ಕಂಗೆ ಮಂಗಳವಪ್ಪ ಅಂದುಗೆಯನೆ ತೊಡಿಸಿ
ಮುಂಗೈಯ ಕಂಕಣವ ಶಿರದೊಳಿಕ್ಕಿ
ಕಂಗಳಿಗೆ ಮುದ್ರಿಕೆಯ ಉಂಗುರವ ತೊಡಿಸಿ ನಿಮ್ಮ
ಹಿಂಗಡೆಯ ನೆರೆದೆನೈ ಯೋಗಿನಾಥ.
99. ಮಂಗಳದ ಸದ್ಭಕ್ತಿ ಲಿಂಗ ನೀನಾಗಿರಲು,
ಕಂಗಳೆರಡೂ ಅದಕೆ ಉಭಯಾರ್ಥವೈ.
ಲಿಂಗ ನಿನ್ನಯ ದೀಕ್ಷೆ ಸ್ವಾನುಭಾವದಲಾಗೆ
ಲಿಂಗ ನಿನ್ನಯ ಮನವು ಯೋಗಿನಾಥ.
100. ಅಂಗಗುಣಗಳು ಅಳಿದು ಲಿಂಗಗುಣವುಳಿದಲ್ಲಿ,
ಜಂಗಮ ಪ್ರಸಾದದನು ಸಾಧ್ಯವಾಯಿತ್ತು.
ಅಂಗೇಂದ್ರಿಯಂಗಳವು ಲಿಂಗೇಂದ್ರಿಯಗಳಾಗೆ
ಲಿಂಗ, ನಾ ನೀನಾದೆ ಯೋಗಿನಾಥ.
101. ಭಕ್ತಿಮುಕ್ತಂಗನೆಯ ಚಿತ್ತಗಳ ಸಮತೆಯನು
ಬಿತ್ತರಿಸದೆಯೆ ನಾನು ಕಂಡು ಕಂಡು,
ಮತ್ತೆ ಮನಸಿನ ಜಲವು ಹತ್ತೆ ಸಾರದ ಮುನ್ನ
ತತ್ತ್ವಮಸಿಯಾದೆನೈ ಯೋಗಿನಾಥ.
102. ಕಡೆಯ ಸಾದಾಖ್ಯವದು ಮಡಿಲ ಲಿಂಗವೆ ನೋಡ
ಒಡಲೊಳಡಗಿಪ್ಪವವು ನಾಲ್ಕು ಲಿಂಗ.
ಒಡಲು ಬೀಳದ ಮುನ್ನ ತಿಳಿಯಬಲ್ಲಡೆ ಭವವ
ಕೆಡೆಮೆಟ್ಟಬಹುದಯ್ಯ ಯೋಗಿನಾಥ.
103. ಮೂರು ಸೀಮೆಯ ಮೀರಿ ಮೂರು ಗ್ರಾಮವ ಮೀರಿ
ಮೂರು ಲಿಂಗದ ಬೀಡನೈದಿ ಹೊಕ್ಕು
ಸಾರಿ ಸಾರಿಯ, ತತ್ವದಾನತವನೈದಿದಡೆ
ಮೂರು ತಾನೊಂದಕ್ಕು ಯೋಗಿನಾಥ.
104. ಕಾನನದ ಕಾನನದ ಕಂಗೆಡದ ಭೇದವನು
ಸ್ವಾನುಭೂತೈಕ್ಯದಲಿ ದೀಕ್ಷೆಯಾಗಿ;
ಮೇಲಾದ ದೀಕ್ಷೆಯೂ ತಾನೆರಡು ಒಂದಾದ
ಆನಂದವನು ಕಂಡೆ ಯೋಗಿನಾಥ.
105. ಸಾಲೋಕ್ಯ ಸಾಮಿಪ್ಯ ಸಾರೂಪ್ಯ ಸಾಯುಜ್ಯ
ಪದಂಗಳನೆ ಬಯಸಿ ಅರ್ಚಿಸಿದಡೆ
ಲಿಂಗಸಂಗವಿಲ್ಲ ಅಂಗಾಭ್ಯಂತರದ ಸಂಗವಿಲ್ಲ.
ತನು ಹಂಗು ಹರಿದು ಅರ್ಚಿಸುವ ಸಂಗಿಗಳಿಗೆ ಲಿಂಗಸಂಗವಕ್ಕು
ಮಂಗಳಾಂಗನೆ ನಿನ್ನ ಹಂಗಿಲ್ಲದಿರ್ದವರ
ಸಂಗ ನಿನ್ನಯ ರೂಪು ಯೋಗಿನಾಥ.
106. ಕುಂಡಲಿಯ ಸ್ಥಾನದಲಿ ದಂಡನಾಳದ ನಡುವೆ
ಉಂಡುಂಡು ಹೋಹರಿಗೆ ಇಂಬು ಇಲ್ಲಾ.
ಉಣ್ಣದೇ ಹುಟ್ಟದೇ ಹೊಂದದೇ ಹೋಹರಿಗೆ
ಮನ್ನಣೆಯಲಾಶ್ರಯವು ಯೋಗಿನಾಥ.
107. ಮುನ್ನಾದ ಫಲವದು ಮುನ್ನಾದ ಸಂಯೋಗ-
ವಿನ್ನು ವಿವರಿಸಲುಂಟೆ ಹೇಳು ಮರುಳೆ
ಕಣ್ಣುಂಡ ಬೊಮ್ಮವನು ಭಿನ್ನವಿಟ್ಟರಸುವಿರಿ
ಇನ್ನು ಗತಿಯಾವುದೋ ಯೋಗಿನಾಥ.
108. ಏನೆಂದು ನೋಡಲಾ ಜ್ಞಾನಮೂಲದ ಬೆಳಗು
ತಾನು ತಾನಾಗಿ ಪ್ರಜ್ವಲಿಸಿತಲ್ಲಿ;
ಸ್ವಾನುಭಾವದ ಧ್ಯಾನ ತನ್ನಲ್ಲಿ ತೋರಿದಡೆ
ನಾನು ನೀನಾದೆನೈ ಯೋಗಿನಾಥ.
109, ತುಂಬಿ ಇಂಬಿನ ಕೊಳನ ಸಂಭ್ರಮದಿ ಬಂದುಂಡು
ಅಂಬರವ ತೋರಿ ತೋರಾನಂದದ
ಸಂಭ್ರಮದೊಳೊಪ್ಪಿಪ್ಪ ಆನಂದ ಮಧುಕರನು
ಶಂಭು, ನೀವಾದನೈ ಯೋಗಿನಾಥ.
110. ತರಳ ನಿನ್ನಯ ಶಿರದ ಹಲವು ಪರಿಯಾಳಾಪ
ವಧುಕರಗಳೂ ಮಸ್ತ ಹಲವು ಆಗಿ,
ಒದವಿದ್ದ ಪರಿಮಳವ ಪರಿಯಾಯದಿಂದುಂಡು
ಫಲಪದವ ಸುಟ್ಟೆನೈ ಯೋಗಿನಾಥ.
111. ಅಪರಾಂಡದೊಳಗೊಂದು ವಿಪರೀತವನೆ ಕಂಡೆ,
ತಪನ ಶತಕೋಟಿಪ್ರಭೆ ವಿಪರೀತದ
ಸ್ಪಟಿಕ ಪ್ರಜ್ವಲ ಘಟದ ತಟವು ಹತ್ತಿರವಾಗ
ಘಟ ಭಿನ್ನವಾಯಿತೈ ಯೋಗಿನಾಥ.
112. ಎರಡೆಂಟು ಗ್ರಾಮದಲಿ ನುಡಿಯ ಬ್ರಹ್ಮದ ಶಬ್ದ,
ನುಡಿಗೆ ಎಡೆಗೊಡದಾತ ಪರಮಯೋಗಿ,
ಕಡಲ ದಾಂಟಿದ ಸೀಮೆ ನುಡಿಯಿಂದಲತ್ತತ್ತ
ಒಡಲುಗೊಂಡವರಿಂಗೆ ಕಾಣಲರಿದು;
ತಡಿಯ ತಡಿಯೊಳಗಿರ್ದು ನುಡಿಯ ಬ್ರಹ್ಮಕೆ ನಾಚಿ
ಮೃಡ, ನಿಮ್ಮನೊಡಗೂಡಿದರು ಗುರುವೆ, ಯೋಗಿನಾಥ.
113. ಕೋಳು ಹೋಯಿತು ದುರ್ಗ ಆಳು ಸಿಕ್ಕಿದ ಧೀರ;
ಏಳೆಂಟು ದುರ್ಗವದರೊಡನೆ ಹೋಗೆ,
ಕಾನನದ ಕಾರುಣ್ಯ ಕಂಗೆಡಲು ಆನೆಂಬು-
ದೇನೊಂದು ರೂಪ ಹೇಳಾ.
ಸ್ವಾನುಭಾವದ ದೀಕ್ಷೆ ತಾನು ತನ್ನೊಳಗಾಗೆ,
ಏನುವರಿದಿಲ್ಲವೆ ಯೋಗಿನಾಥ.
114. ಏಳೆಂಟು ಕೋಣಗಳು ತಾವೊಂದು ರಥವಾಗಿ
ಹೋಗಿ ಹೋದವು ಸ್ಟಾಣು ಮೂಲಕಾಗಿ
ಆ ಊರಲಾನಂದ ಭಾನುಪ್ರಕಾಶದಲಿ
ಆನು ನೀನಾದೆನೈ ಯೋಗಿನಾಥ.
115. ಎರಡೂರ ಶುದ್ಧಿಯನು ಅರಿದಾತ ಹರಿಹರ
ಎರಡುವಲ್ಲದೆ ಮತ್ತೆ ಒಂದುವಾಗಿ
ಆ ಊರಲಾನಂದ ಭಾನು ಪ್ರಕಾಶದಲಿ
ಆನು ನೀನಾದೆನೈ ಯೋಗಿನಾಥ.
116. ಪಾಲುಂಡ ಬಳಿಕ ಮತ್ತೇನಾನ ಉಂಬರೆ?
ಪಾಲಿಂದ ಇನಿದುಂಟೆ ಎಲೆ ಪರಶಿವಾ?
ಆ ನಿನ್ನ ಕೂಡಿದಾ ಆನಂದಸುಖಕೆ ಮ-
ತ್ತೇನು ಪ್ರತಿ ಹೇಳುವೆನು ಯೋಗಿನಾಥ.?
117. ಒಂದೊಂದು ಪರಿಯಲ್ಲಿ ಬಂದು ಬಾರದ ಭೇದ
ಕಂದನೊಳಗಡಗಿಪ್ಪ ಕನಸಿನಂತೆ.
ಮುಂದುದೋರದ ಬ್ರಹ್ಮ ಆನಂದವಪ್ಪದ್ವೈತ
ಕಂಜದೊಳಗಿಕ್ಕು ಶಿವ ಯೋಗಿನಾಥ.
118. ತನುತ್ರಯವ ಮೀರಿದಳು ಮಲತ್ರಯವನತಿಗಳೆದು
ತೈಲಿಂಗಕ್ಕೆ ತಾನಾದಿಯಾಗಿ
ಕರ್ಮ ಭಕ್ತಿ ಜ್ಞಾನ ಸೊಮ್ಮು ತಾನಾಗಿ ಪರ
ಬೊಮ್ಮವನ್ನೈದಿದಳು ಯೋಗಿನಾಥ.
119. ಅರುಹಿನ ಜ್ಞಾನದ ಕುರುಹಳಿದ ಶಿವಭಕ್ತಿ
ನೆರೆಗೆ ತಾನೊಂದಾಗಿ ಕೂಡಿತೆಂದು,
ಅರಿವರತು ಕುರುಹಳಿದು ಶಿವಭಕ್ತಿ ನೆರೆ ತಿಳಿದು
ಗುರುವೆ ನಾ ನೀನಾದೆ ಯೋಗಿನಾಥ.