ಗುರುಲಿಂಗದೊಳಗಣ ಶಿವಲಿಂಗ | ಯತೋ ವಾಚೋ ನಿವರ್ತಂತೇ ಶ್ರುತಿ ಬಸವ |
ಜಾತಿವಿಡಿದು ನೆನೆವರೆ ನಮ್ಮ ನೀತಿಯುಳ್ಳ ಶರಣರ? |
ಜಾತಿವಿಡಿದು ನೆನೆವರೆ ನಮ್ಮ ನೀತಿಯುಳ್ಳ ಶರಣರ?
ಆಚಾರವಿಲ್ಲದವರು ಕೀಳುಜಾತಿಯು |ಪ|
ಕುಲಕೆ ಛಲಕೆ ಹೋರಿಯಾಡಿ ಭವಕೆ ಗುರಿಯಾಗಬೇಡ
ಕುಲ ಬಸವಣ್ಣ ಮುನ್ನಲರಿಯದಿರ್ದನೆ
ಕುಲವ ಛಲವ ನೇತಿಗಳೆದು ಪರವನೈದಿ ಹೋಗುವಾಗ
ಕುಲವನರಸಿದವರು ಬಾಯಿಬಿಟ್ಟು ಕೇಳಿರೋ |1|
ಕೀಳು ಮೇಲಿಲ್ಲ ನಮ್ಮ ಶೀಲವಂತ ಭಕ್ತರಲ್ಲಿ
ಕೀಳಿಗಲ್ಲದೆ ಹಯನು ಕರೆದೆಂಬರೋ
ಕೀಳಾಗಿ ನಡೆದಡಲ್ಲದೆ ಮೇಲೆ ಕೈವಲ್ಯವಿಲ್ಲ
ಕೀಳು ಮಾದಾರ ಚೆನ್ನ ಮೇಲಲ್ಲವೇ? |2|
ಜಂಗಮ ಪ್ರಸಾದವನು ಭಂಡಿ ಮೇಲೆ ಹೇರಿಕೊಂಡು
ಗಂಡುಗಲಿ ಬಾಚಿರಾಜ ಮುಂದೆ ನಡೆಯಲು
ಎಂಜಲೆಂದು ಬೊಗಳಿದವರ ಮಂಡೆ ಮೇಲೆ ತಳಿಯಲು
ಕೆಂಡವಾಗಿ ಉರಿದುದನು ಕೇಳಿ ಅರಿಯರೆ? |3|
ದಕ್ಷ ನಾರಾಯಣಗಿಂದ ಮಿಕ್ಕಿನವರ ಪಾಡೇನು
ಮುಕ್ಕಣ್ಣ ಶಿವನನರಸಿ ಕಾಣಲರಿಯರು
ಭಕ್ತರೊಡನೆ ವಾದ ಮಾಡಿ ಕೆಟ್ಟ ಬಿಜ್ಜಳರಾಯ
ಎತ್ತಿ ಒತ್ತಿ ಗಜವ ಸೀಳಿ ಒಕ್ಕಲಿಕ್ಕೆ ಮೆರೆದರು |4|
ಆ ಜಾತಿ ಈ ಜಾತಿ ಎಂಬ ಮಾತದೇತಕಿನ್ನು
ಜಾತಿಗೊಬ್ಬರು ಶಿವನ ನೆನೆದು ನೆರೆದರು
ಜಾತಿವಿಜಾತಿಯೆಂದು ಬೂತವಾಡಿ ಬೊಗಳಿದವರ
ಬಾಚಿಯಲ್ಲಿ ಹರಿಯಹೊಯ್ದ ಕೂಡಲಚೆನ್ನಸಂಗಯ್ಯ |5|
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”
ಗುರುಲಿಂಗದೊಳಗಣ ಶಿವಲಿಂಗ | ಯತೋ ವಾಚೋ ನಿವರ್ತಂತೇ ಶ್ರುತಿ ಬಸವ |