"ಲಿಂಗದೇವ" ಲಿಂಗಾಯತರ ದೇವರ ಹೆಸರು.
|
|
*
ಗುರು ಬಸವಣ್ಣನವರ ವಚನಗಳು.
87
ಅಡ್ಡ ವಿಭೂತಿಯಿಲ್ಲದವರ ಮುಖಹೊಲ್ಲ, ನೋಡಲಾಗದು.
ಲಿಂಗದೇವನಿಲ್ಲದಠಾವು ನರವಿಂಧ್ಯ, ಹೊಗಲಾಗದು.
ದೇವಭಕ್ತರಿಲ್ಲದೂರು ಸಿನೆ ಹಾಳು,
ಕೂಡಲಸಂಗಮದೇವಾ.
138
ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ
ಲಿಂಗದೇವನ ಪೂಜಿಸಿ ಕುಲವನರಸುವರೆ, ಅಯ್ಯಾ
ಕೂಡಲಸಂಗಮವೇವ
ಭಕ್ತಕಾಯ ಮಮಕಾಯವೆಂದನಾಗಿ.
593
`ನಾನು ಭಕ್ತ, ನಾನು ಪ್ರಸಾದಿ ಎಂದು
ವಿಪ್ರಕರ್ಮವ ಮಾಡುವೆ ಕರ್ಮೀ
ಲಿಂಗದೇವನ ಮುಟ್ಟಿ ಮಜ್ಜನಕ್ಕೆರೆವ ಕೈಯಲು
ವಿಪ್ರನ ಕಾಲ ತೊಳೆವಡೆ
ಲಿಂಗೋದಕ ಹೃದಯದಲ್ಲಿ,
ವಿಪ್ರನ ಕಾಲ ತೊಳೆದ ನೀರು ಮಂಡೆಯ ಮೇಲೆ !
ಶ್ರುತ್ಯತ್ಕಟದುರಾಚಾರೀ ಯಜ್ಞಕೂಪಸಘಾತಕಃ
ಉದ್ರೇಕೇಣ ಕೃತೇ ಶಾಂತೇ ವಿಪ್ರರೂಪೇಣ ರಾಕ್ಷಸಃ
ಇದು ಕಾರಣ ಕೂಡಲಸಂಗಮದೇವಾ,
ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು.
646
ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ.
ನುಡಿಯಲೂ ಬಾರದು, ನಡೆಯಲೂ ಬಾರದು,
ಲಿಂಗದೇವನೆ ದಿಬ್ಯವೊ ಅಯ್ಯಾ.
ಬಡವನ ಕೋಪವು ಅವುಡಿಗೆ ಮೃತ್ಯುವಾದಂತೆ
ಕಡೆಗೆ ದಾಂಟದು ಕಾಣಾ, ಕೂಡಲಸಂಗಮದೇವಾ.
1320
ಮುದ್ದ ನೋಡಿ, ಮುಖವ ನೋಡಿ,
ಮೊಲೆಯ ನೋಡಿ, ಮುಡಿಯ ನೋಡಿ,
ಕರಗಿ ಕೊರಗುವುದೆನ್ನ ಮನ,
ಲಿಂಗದೇವನ ಧ್ಯಾನವೆಂದಡೆ ಕರಗಿ ಕೊರಗದೆನ್ನ ಮನ.
ಆನು ಭಕ್ತನೆಂಬಡೆ ಲಜ್ಜೆಯಿಲ್ಲ ನೋಡಯ್ಯಾ.
ಎನ್ನ ತಂದೆ ಕೂಡಲಸಂಗಮದೇವಯ್ಯ ಒಲಿದು ಒಪ್ಪಗೊಂಡನಾದಡೆ,
ಆನು ಚೆಂಗಳೆಯ ಬಸುರಲ್ಲಿ ಬಾರದಿಹೆನೆ
157
ಹೊತ್ತಾರೆ ಎದ್ದು ಶಿವ-ಲಿಂಗದೇವನ
ದೃಷ್ಟವಾರಿ ನೋಡದವನ ಸಂಸಾರವೇನವನ
ಬಾಳುವೆಣನ ಬೀಳುವೆಣನ ಸಂಸಾರವೇನವನ
ನಡೆವೆಣನ ನುಡಿವೆಣನ ಸಂಸಾರವೇನವನ
ಕರ್ತು ಕೂಡಲಸಂಗಾ
ನಿಮ್ಮ ತೊತ್ತುಗೆಲಸ ಮಾಡದವನ ಸಂಸಾರವೇನವನ
104
ಗಂಡ ಶಿವ-ಲಿಂಗದೇವರ ಭಕ್ತ,
ಹೆಂಡತಿ ಮಾರಿ ಮಸಣಿಯ ಭಕ್ತೆ.
ಗಂಡ ಕೊಂಬುದು ಪಾದೋದಕ-ಪ್ರಸಾದ,
ಹೆಂಡತಿ ಕೊಂಬುದು ಸುರೆ-ಮಾಂಸ.
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಿಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವಾ.
ಬೇರೆ ಇತರೆ ಶರಣರ ವಚನ
ಅಲ್ಲಮಪ್ರಭುದೇವರು
ಮೂಲ ಮಂತ್ರವ ಕರ್ಣದಲ್ಲಿ ಹೇಳಿ
ಶ್ರೀ ಗುರು ಶಿಷ್ಯನಂಗದ ಮೇಲೆ ಲಿಂಗ ಪ್ರತಿಷ್ಠೆಯ ಮಾಡಿದ ಬಳಿಕ
ತನುವಿನೊಳಗೆ ಲಿಂಗ ಬೇರಿಪ್ಪುದೆಂಬ
ವ್ರತಗೇಡಿಯ ಮಾತ ಕೇಳಲಾಗದು.
ಒಳಗಿಪ್ಪನೆ ಲಿಂಗದೇವನು ?
ಮಲಮೂತ್ರದ ಹೇಸಿಕೆಯೊಳಗೆ,
ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ ?
ಆ ಪ್ರಾಣನ ತಂದು, ತನ್ನ ಇಷ್ಟಲಿಂಗದಲ್ಲಿರಿಸಿ
ನೆರೆಯಬಲ್ಲರೆ ಆತನೆ ಪ್ರಾಣಲಿಂಗಸಂಬಂದಿ.
ಇಷ್ಟಿಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ? /1477
ಪ್ರಣವಮಂತ್ರವ ಕರ್ಣದಲ್ಲಿ ಹೇಳಿ,
ಶ್ರೀಗುರು ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿದ ಬಳಿಕ,
ಪ್ರಾಣದಲ್ಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೆ ಲಿಂಗದೇವ ನು ಮಲ ಮೂತ್ರ ಮಾಂಸದ ಹೇಸಿಗೆಯೊಳಗೆ ?
ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ ?
ಆ ಪ್ರಾಣವ ತಂದು ತನ್ನ ಇಷ್ಟಲಿಂಗದಲ್ಲಿ ಇರಿಸಿ ನೆರೆಯ ಬಲ್ಲಡೆ,
ಆತನೆ ಪ್ರಾಣಲಿಂಗಸಂಬಂದಿ.
ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು /೧೩೯
ಉರಿ ಲಿಂಗದೇವ
1217
ಅಂಗದ ಮೇಲೆ ಲಿಂಗದೇವನಿದ್ದಂತೆ, ಇತರ ಸ್ಥಾವರಲಿಂಗಕ್ಕೆ ಹೋಗಿ ಹೋಗಿ,
ದೇವರ ಕಂಡೆನೆಂದು ನಲಿದು ಉಲಿವುತಿಪ್ಪ ಸಲೆ ಮನುಜರುಗಳಿಗೆ,
ಉಪದೇಶವ ಮಾಡುವ ಗುರುವಿಂಗೆ,
ಪುಣ್ಯದ ಬಟ್ಟೆಯ ಕೊಡ ಉರಿಲಿಂಗ ತಂದೆ.
ಉರಿಲಿಂಗಪೆದ್ದಿ
1500
ಲಿಂಗದೇವನ ನಂಬಿದವಂಗೆ ಜ್ಞಾನವಿದೆ,
ಅಷ್ಟಮಹದೈಶ್ವರ್ಯ ಲಿಂಗಭೋಗ ಆವುದೂ ಕೊರತೆ ಇಲ್ಲ.
ಸುಖಪರಿಣಾಮಿ, ಆ ಮಹಿಮಂಗೆ ಮಾನವರಾರೂ ಪಡಿಯಲ್ಲ.
ಲಿಂಗದೇವನ ನಂಬದವಂಗೆ ಜ್ಞಾನವಿಲ್ಲ,
ಐಶ್ವರ್ಯ ಭೋಗ ಆವುದೂ ಇಲ್ಲ, ಇಹಪರವಿಲ್ಲ.
ಇದನರಿದು ತನ್ನ ತಾನು ವಿಚಾರಿಸಿಕೊಂಬುದಯ್ಯಾ.
ಲಿಂಗವ ನಂಬಿದಡೆ ಸರ್ವಸಿದ್ಧಿ, ಲಿಂಗವ ನಂಬದಿರ್ದಡೆ ನಾಯಕನರಕ.
ಇನ್ನಾದಡೂ ನಂಬಿ ಬದುಕಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಸೊಡ್ಡಳ ಬಾಚರಸ
803
ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ.
ಕೊಲ್ಲದಿರ್ಪುದೆ ಧರ್ಮ.
ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.
ಅಳುಪಿಲ್ಲದಿರ್ಪುದೆ ವ್ರತ.
ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ,
ದೇವರಾಯ ಸೊಡ್ಡಳಾ.
ಸಂಗಮೇಶ್ವರದ ಅಪ್ಪಣ್ಣ
351
ಶಿವ-ಲಿಂಗದೇವರ ಪೂಜಿಸದೆ ಉಂಬವರೆಲ್ಲರೂ
ಹೆಣನ ಮಲವನು ಒಂದಾಗಿಯೆ ತಿಂಬರಯ್ಯಾ,
ಅಲ್ಲಿ ಏನೂ ಸಂದೇಹವಿಲ್ಲಾಗಿ. ಶಿವಧರ್ಮ:
ಯಸ್ತು ಲಿಂಗಾರ್ಚನಂ ತ್ವಕ್ತ್ವಾಭುಙ್ತೇ ಕ್ರಿಮಿಕೀಟಮಾಂಸಾನ್ |
ನರೋ ನರಕಗಾಮೀ ಸ್ಯಾತ್ಸರ್ವಲೋಕಬಹಿಷ್ಕೃತಃ ||
ಅಕೃತ್ವಾ ಪೂಜನಂ ಶಂಭೋ ಯೋ ಭುಙ್ತೀ ಪಾಪಕೃದ್ವಿಜಃ |
ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ ||
ಎಂದುದಾಗಿ, ಇದು ಕಾರಣ, ನಿಮ್ಮ ನಂಬಲರಿಯದ ಪಾಪಿಗಳಿಗೆ
ಎಂದೆಂದಿಗೂ ನರಕ ತಪ್ಪದು,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
ಗುರುಸಿದ್ಧದೇವರು
ಅಯ್ಯ, ವರವೀರಶೈವ ಷಟ್ಸ್ಥಲಾಚಾರ್ಯ,
ಘನಲಿಂಗಚಕ್ರವರ್ತಿಯಪ್ಪ ಶ್ರೀ ಗುರುಲಿಂಗದೇವನು
ತನ್ನ ತೊಡೆಯಮೇಲೆ ಮೂರ್ತಿಗೊಂಡಿರುವ
ಕುಮಾರ ಇಷ್ಟಲಿಂಗದೇವಂಗೆ ಪ್ರಾಣಲಿಂಗ-ಭಾವಲಿಂಗಸ್ವರೂಪವಾದ
ಶರಣನ ಚಿದಂಗವೆ ನಿನಗೆ ನಿಜಮೋಕ್ಷಮಂದಿರವೆಂದು
ಅರುಹಿದ ಮೇಲೆ ನಿಮಿಷಾರ್ಧವಗಲಿರದೆ
ನಮ್ಮ ಪ್ರಮಥಗಣಾಚಾರಕ್ಕೆ ಹೊರಗುಮಾಡಿ,
ಭವಕ್ಕೆ ನೂಂಕೇವೆಂದು ಪ್ರತಿಜ್ಞೆಯನಿಟ್ಟು,
ಆ ಶರಣನ ಕರಸ್ಥಲಕ್ಕೆ ಪ್ರಾಣಕಳಾಚೈತನ್ಯಮೂರ್ತಿಲಿಂಗದೇವನ
ಮುಹೂರ್ತವ ಮಾಡಿಸಿ,
ಆ ಲಿಂಗದೇವಂಗೆ ಪ್ರಮಥಗಣಾರಾಧ್ಯ
ಭಕ್ತಮಹೇಶ್ವರರರೆಲ್ಲ ಅಭಯಹಸ್ತವಿತ್ತು,
ಆಮೇಲೆ ಚಿದಂಗಸ್ವರೂಪವಾದ ಶರಣಂಗೆ
ಈ ಲಿಂಗದೇವನ ನಿಮಿಷಾರ್ಧವಗಲಿರದೆ
ನಿನಗೂ ಅದೇ ಪ್ರತಿಜ್ಞೆ ಬಂದೀತೆಂದು ಆಜ್ಞಾಪನವ ಮಾಡಿ,
ಹೃದಯಕಮಲಮಧ್ಯದಲ್ಲಾಡುವ
ಸಹಸ್ರಹೆಡೆಯ ಕುಂಡಲೀಸರ್ಪಂಗೆ ಮುಸುಕಿರುವ
ಅಜ್ಞಾನ ಮಾಯಾಮರವೆಯನ್ನು
ಅನಾಹತದ್ವಾರದಿಂದ ಅನಾದಿಮೂಲಮಂತ್ರವನ್ನು ಉಸುರಿ
ಕುಂಡಲೀಸರ್ಪನ ಹೆಡೆಯ ಎತ್ತಿಸಿ,
ಚಿದಗ್ನಿಯ ಪುಟವ ಮಾಡುವಂಥಾದೆ ಲಿಂಗಾಯತದೀಕ್ಷೆ.
ಇಂತುಟೆಂದು ಶ್ರೀ ಗುರುನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ.
ಟಿಪ್ಪಣಿ: ವಚನಗಳ ಆರಂಭದಲ್ಲಿ ತೋರಿಸಿದ ಸಂಖ್ಯೆಯು ಸಮಗ್ರ ವಚನ ಸಾಹಿತ್ಯ ಸಂಪುಟದಲ್ಲಿಯ ವಚನ ಸಂಖ್ಯೆಯನ್ನು ಸೂಚಿಸುತ್ತದೆ. (ಸಮಗ್ರ ವಚನ ಸಾಹಿತ್ಯ ಸಂಪುಟ - ೧ ರಿಂದ ೧೫, ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.)
*