ಲಿಂಗಾಯತರಲ್ಲಿ ಸ್ತ್ರೀಯರೂ ಪುರುಷರೂ ಸಮಾನರು.
ಮೊಲೆ, ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ 7/845
[1]
ಮುಡಿ = ಕೂದಲು, ಜುಟ್ಟು, ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ಕೂದಲನ್ನು ಸುತ್ತಿ ಕಟ್ಟಿರುವುದು.
ಸ್ತ್ರೀಯರೂ ಪುರುಷರೂ ಸಮಾನರು. ಅವರ ದೇಹಗಳಲ್ಲಿ ವ್ಯತ್ಯಾಸವಿದೆಯೇ ಹೊರತು, ಆತ್ಮಗಳಲ್ಲಿ ವ್ಯತ್ಯಾಸವಿಲ್ಲ. ಕೆಲವು ಭಾರತೀಯ ಧರ್ಮಗಳಲ್ಲಿ ಪುರುಷನಿಗಿರುವ ಧಾರ್ಮಿಕ ಹಕ್ಕು ಸ್ತ್ರೀಗಿಲ್ಲ. ಆಕೆ ರಜಸ್ವಲೆಯಾಗುವುದರಿಂದ, ಆಕೆ ಯಜ್ಞ, ಪೂಜೆ ಮುಂತಾದ ಧಾರ್ಮಿಕ ಕ್ರಿಯೆಗಳನ್ನು ಮಾಡಬಾರದೆಂಬ ನಿಷೇಧವಿದೆ. ಆದರೆ ಶರಣರ ಪ್ರಕಾರ ದೇವನ ದೃಷ್ಟಿಯಲ್ಲಿ ಸ್ತ್ರೀ ಪುರುಷನ ಸಮಾನ.
ಶರಣರು ಎಲ್ಲರೂ ಹುಟ್ಟಿನಿಂದ ಸಮಾನರು ಎಂದು ಹೇಳಲು ಎರಡು ಕಾರಣಗಳನ್ನು ಕೊಡುತ್ತಾರೆ. ಮೊದಲನೆಯದಾಗಿ ಆತ್ಮಕ್ಕೆ ಜಾತಿಯಿಲ್ಲ. ಎಲ್ಲರ ಆತ್ಮಗಳೂ ದೇವನ ಅಂಶಗಳೇ ಆದುದರಿಂದ ಯಾವೊಬ್ಬನೂ ಶ್ರೇಷ್ಠನಲ್ಲ, ಯಾವೊಬ್ಬನು ಕನಿಷ್ಠನಲ್ಲ.
ಮೊಲೆ ಮುಡಿ ಬಂದಡೆ ಹಣ್ಣೆಂಬರು
ಮೀಸೆ ಕಾಸೆ ಬಂದಡೆ ಗಂಡೆಂಬರು
ಉಭಯದ ಜ್ಞಾನ ಹೆಣ್ಣೋ ಗಂಡೊ ನಾಸ್ತಿನಾಥ? - ಗೊಗ್ಗವ್ವೆ.
ಗಂಡು ಮೋಹಿಸಿ ಹೆಣ್ಣು ಹಿಡಿದೆಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡು ಹಿಡಿದೆಡೆ
ಉತ್ತರವಾವುದೆಂದರಿಯಬೇಕು?
ಕಾಲಾನುಕಾಲದಿಂದ ಹೆಣ್ಣು ಪುರುಷನ ಅಡಿಯಾಳಾಗಿ, ಆಸ್ತಿಯಾಗಿ, ಹೆರುವ ಪ್ರಾಣಿ ಯಾಗಿ ರೂಪಿತಗೊಂಡಿರುವಳೇ ವಿನಃ ಸಮಾನವಾಗಿ ಪರಿಗಣಿಸಲ್ಪಡಲಿಲ್ಲ. ಈಗ ಪ್ರಜ್ಞೆ ನಿಚ್ಚಳವಾದಾಗ ಅದೇ ಗಂಡು ಹೆಣ್ಣಿನ ಒಡವೆಯಾಗಲು ಸಿದ್ಧವೆ? ಇಲ್ಲಿ ಗೊಗ್ಗವ್ವೆ ಹೇಳುತ್ತಾಳೆ ಯಾರಿಗೆ ಯಾರು ಅಡಿಯಾಳಾಗದೇ “ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿ ನಾಥನು ಪರಿಪೂರ್ಣ” ಎಂದೆನ್ನುತ್ತಾಳೆ.
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದೀತೆ ?
ಒಡೆಯನ ಪ್ರಾಣಕ್ಕೆ ಇದ್ದೀತೆ ಯಜ್ಜೋಪವೀತ ?
ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ ?
ನೀ ತೊಡಕ್ಕಿಕ್ಕಿದ ತೊಡಕ ನೀ ಲೋಕದ ಜನರೆತ್ತ ಬಲ್ಲರೈ ರಾಮನಾಥ.
ಈ ವಚನದ ಮೊದಲನೆಯ ಸಾಲು ಲಿಂಗ ಸಂಬಂಧಿ ಸಮಾನತೆ ಬಗ್ಗೆ, ಎರಡನೆಯ ಸಾಲು ವರ್ಗ ಸಂಬಂಧಿ ಸಮಾನತೆ ಬಗ್ಗೆ ಮತ್ತು ಮೂರನೆಯ ಸಾಲು ಜಾತಿ ಸಂಬಂಧಿ ಸಮಾನತೆ ಬಗ್ಗೆ ಬೆಳಕು ಚೆಲ್ಲುತ್ತವೆ. ಇವು ಹುಟ್ಟಿದ ಸಂಗತಿಗಳಲ್ಲ, ಅವು ಕಟ್ಟಿಕೊಂಡ ಸಂಗತಿಗಳು ಎಂಬುದನ್ನು ಕೊನೆಯ ಸಾಲುಗಳು ಹೇಳುತ್ತವೆ. ಅಸಮಾನತೆ ಎಂಬುದು ಜೈವಿಕ ನಿಯತಿಯಲ್ಲ. ಅದು ಸಾಮಾಜಿಕ ವಿಕೃತಿ ಎಂಬ ವಿಚಾರದ ಕಡೆ ದಾಸಿಮಯ್ಯ ನಮ್ಮ ಗಮನ ಸೆಳೆಯುತ್ತಿದ್ದಾನೆ. ಇಲ್ಲಿ ದಾಸಿಮಯ್ಯಗಳು ‘ಮಡದಿ-ಗಂಡ, ‘ಒಡೆಯ-ಅಂತ್ಯಜ’, ‘ಯಜ್ಞೋ-ಪವೀತ-ಹಿಡಿಗೋಲ’ ಇವುಗಳನ್ನು ಮುಖಾಮುಖಿಯಾಗಿಸುತ್ತಿದ್ದಾನೆ. ಪ್ರಾಣಕ್ಕೆ ಲಿಂಗಭೇದ ವಿರುವುದಿಲ್ಲ, ಹುಟ್ಟುವಾಗಲೇ ಯಾರೂ ಯಜ್ಞೋಪವೀತವನ್ನು ಧರಿಸಿಕೊಂಡೆ ಹುಟ್ಟುವುದಿಲ್ಲ, ಅಂತ್ಯಜನೆಂದು ಸಮಾಜ ಮೂಲೆಗೆ ತಳ್ಳಿರುವ ಜನರು ಅಂತ್ಯಜರಾಗೆ ಹುಟ್ಟಿರುವುದಿಲ್ಲ. ಅಂತ್ಯಜರು-ಒಡೆಯರು, ಯಜ್ಞೋಪವೀತ-ಹಿಡಿಗೋಲ-ಇವೆಲ್ಲವು ಸಮಾಜವು ತನ್ನ ಅನುಕೂಲಕ್ಕೆ ರೂಪಿಸಿಕೊಂಡ ಉಪಾದಿಗಳು. ಜಾತಿ-ವರ್ಗ-ಲಿಂಗ-ಸಂಬಂಧಿ ಸಮಾನತೆಯ ಸಂಗತಿಗಳನ್ನು ಒಂದೇ ನೆಲೆಯಲ್ಲಿ ಹಿಡಿದಿಡಲು ದಾಸಿಮಯ್ಯ ಗಳಿಗೆ ಸಾಧ್ಯವಾಗಿದೆ. ಒಂದು ಬಗೆಯಲ್ಲಿ ಈ ವಚನವು ಸಮಾನತಾ ಪ್ರಣಾಳಿಕೆಯ ವಿಶ್ವರೂಪ ದರ್ಶನವನ್ನು ಮಾಡಿಸುತ್ತದೆ.
ಸ್ತ್ರೀ ವಚನಕಾರರು ತಮ್ಮನ್ನು ತಾವು ಮೊದಲು ಗುರುತಿಸಿಕೊಂಡರು. ಇದು ಅವರು ಮಾಡಿದ ಮೊದಲ ಕ್ರಾಂತಿ. ಸಮಾನತೆಯ ವಾದವನ್ನು ಎತ್ತಿಹಿಡಿದರು. "ಮೊಲೆ ಮೂಡಿ ಇದ್ದದ್ದೆ ಹೆಣ್ಣೆಂದು ಪ್ರಮಾಣಿಸಲಿಲ್ಲ. ಮೀಸೆ ಕಠಾರವಿದ್ದಡೆ ಗಂಡೆಂದು ಪ್ರಮಾಣಿಸಲಿಲ್ಲ ಅದು ಜಗದ ಹಾಗೆ ಬಲ್ಲವರ ನೀತಿಯಲ್ಲ ಎಂದು ಸತ್ಯಕ್ಕ ’ಕೂಟಕ್ಕೆ ಸತಿ-ಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಡಲುಂಟೇ’ ಎಂದು ಆಯ್ದಕ್ಕಿ ಲಕ್ಕಮ್ಮ, "ನಿಮ್ಮ ಭಕ್ತಿ ಸೂತ್ರದಿಂದ ಎನ್ನ ಸ್ತ್ರೀತ್ವ ನಿಮ್ಮ ಪಾಠದಲ್ಲಿ ಅಡಗಿತ್ತು ಎನಗೆ ಬೇಧ ಮಾತಿಲ್ಲ ಎಂದು ಮೋಳಿಗೆಯ ಮಹಾದೇವಿ, ಭಕ್ತಿಜ್ಞಾನ ಆಧ್ಯಾತ್ಮ ವಿಷಯಗಳ ಬಗ್ಗೆ ಸ್ತ್ರೀಪುರುಷರೆಂಬ ಭೇದ ಅರ್ಥಹೀನ ಎಂದರು. ಗಣೇಶ ಮಸಣಯ್ಯನ ನಿಜಪತ್ನಿ ಹೆಣ್ಣನ್ನು ಹೀನಾಯವಾಗಿ ಕಾಣುವವರಿಗೆ
"ಹೊನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?
ಮಣ್ಣಬಿಟ್ಟು ಲಿಂಗವನೊಲಿಸಬೇಕೆಂಬರು
ಮಣ್ಣಿಂಗೂ ಲಿಂಗಕ್ಕೂ ವಿರುದ್ಧವೇ?
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೇ?
ಪುರುಷನ ಮುಂದೆ ಮಾಯೆ ಸ್ತ್ರೀ ಯೆಂಬ ಅಭಿಮಾನವಾಗಿ ಕಾಡಿತ್ತು.
ಸ್ತ್ರೀ ಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು.
ಲೋಕವೆಂಬ ಮಾಯೆಗೆ ಶರಣರ ಚಾರಿತ್ರವು ಮರುಳಾಗಿ ತೋರುವುದು
ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ಮಾಯೆಯಿಲ್ಲ
ಮರಹಿಲ್ಲ ಅಭಿಮಾನವೂ ಇಲ್ಲ. - ಅಕ್ಕಮಹಾದೇವಿ.
ಅದುವರೆಗೆ ಸಾಹಿತ್ಯ, ಆಧ್ಯಾತ್ಮ ಕ್ಷೇತ್ರದಲ್ಲಿ ಕೃಷಿ ಮಾಡಿದವರೆಲ್ಲಾ ಗಂಡಸರೇ ಆಗಿದ್ದರು. ಜಗತ್ತನ್ನು ಮಾಯೆ ಎಂದರು. ಹೊನ್ನು, ಮಣ್ಣು ಜೊತೆಗೆ ಹೆಣ್ಣನ್ನೂ ಸೇರಿಸಿ ಮಾಯೆ ಎಂದರು. ಹೆಣ್ಣನ್ನು ಹೊನ್ನು ಮಣ್ಣಂತೆ ಪುರುಷನ ಸ್ವತ್ತು ಆಸ್ತಿ ಎಂಬಂತೆ ಮಾತಾಡಿದರು. ಹೆಣ್ಣಿಗೊಂದು ಅಸ್ಥಿತ್ವ, ಮನಸ್ಸು, ವಿಚಾರ ಸ್ವಾತಂತ್ರ ಇದೆ ಎಂಬುದನ್ನು ಯಾರೂ ಆಲೋಚಿಸಲೇ ಇಲ್ಲ.ಹೊನ್ನು ಕಣ್ಣಳತೆಯಲ್ಲಿ ಹೆಣ್ಣು ತನ್ನ ಉಪಭೋಗದ ವಸ್ತು ಎಂಬಂತೆ ನಡೆದುಕೊಂಡರು.ಹೆಣ್ಣನ್ನು ಆಸ್ತಿಯಂತೆ ಇತರರಿಗೆ ವರ್ಗಾಯಿಸಬಹುದು ಎಂದು ಹೆಣ್ಣನ್ನೂ ವಿಲೇವಾರಿ ಮಾಡಿ ದರು. ಗಂಡಸು ಎಷ್ಟು ಹೆಣ್ಣನ್ನು ಬೇಕಾದರೂ ಉಪಭೋಗ ಮಾಡಬಹುದು ಎಂದು ತಿಳಿದರು. ಇಂಥಹ ಎಲ್ಲಾ ಆಲೋಚನೆಗಳನ್ನು ಪ್ರಶ್ನಿಸಿ, ಧಿಕ್ಕರಿಸಿ ಪುರುಷನಂತೆ ತನಗೂ ಒಂದು ಅಸ್ತಿತ್ವ, ಸ್ವಾತಂತ್ರ, ಚಿಂತನೆ ಇದೆ ಎಂಬುದನ್ನು ತೋರಿಸಿಕೊಟ್ಟು ಪುರುಷನ ಕಪಿಮುಷ್ಟಿಯಿಂದ ಹೊರಬಂದು ಸ್ತ್ರೀ ಸ್ವಾತಂತ್ರ್ಯ ಕಹಳೆಯೂದಿ ಜಗತ್ತಿನ ಮೊತ್ತಮೊದಲು ಸ್ತ್ರೀ ಸ್ವಾತಂತ್ರ ತಂದುಕೊಟ್ಟ ಮಹಿಳೆ ಅಕ್ಕಮಹಾದೇವಿ.
ಗಂಡು ಹೆಣ್ಣನ್ನು ಮಾಯೆ ಎಂದು ಕರೆದರೆ, ಹೆಣ್ಣಿಗೆ ಗಂಡು ಕೂಡಾ ಮಾಯೆ ಎಂದು ಮೊದಲ ಸಲಕ್ಕೆ ಅಕ್ಕಮಹಾದೇವಿ ನಿರೂಪಿಸಿದರು.
'ಸ್ತ್ರೀ ಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು' ನೋಡಾ!
'ಸತಿಗೆ ಪುರುಷನೇ ದೇವರು, ರಾಜ ಪ್ರತ್ಯಕ್ಷ್ಯ ದೇವತಾಃ' ಎಂಬ ಅನೇಕ ಮೌಲ್ಯಗಳನ್ನು ಮಹಿಳೆಯ ಮೇಲೆ ಧರ್ಮದ ನಿರ್ಬಂಧದಲ್ಲಿ ಹೇರಲಾಗಿತ್ತು. ಚೆನ್ನಮಲ್ಲಿಕಾರ್ಜುನನೊಲಿದ ಅರಸರಿಗೆ ಮಾಯೆಯಿಲ್ಲ ಮರಗಳಲ್ಲಿ ಅನುಮಾನವು ಇಲ್ಲ. ಇಂಥಹ ಅಮೋಘ ಸತ್ಯವನ್ನು ಅಕ್ಕಮಹಾದೇವಿ ಯವರು ಹೇಳಿದರು.
ಹೆಣ್ಣನ್ನು ಸಂಸಾರವನ್ನು ಬಿಟ್ಟರೆ ಮುಕ್ತಿ ಸಾಧ್ಯ ಅನ್ನುವುದು ಮೂರ್ಖತನ. ಧಾರ್ಮಿಕ ವಿಧಿವಿಧಾನಗಳಲ್ಲಿ ಹೆಣ್ಣಿಗೂ ಸಮಪಾಲು ಇದೆ. ದೇವರಿಗೆ ವಿರುದ್ಧವಲ್ಲದ ಅವಳು ಮನುಷ್ಯರಿಗೆ ಹೇಗೆ ವಿರುದ್ಧಳಾಗುವಳು? ಈ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸುತ್ತಾಳೆ.
[1] ಈ ತರಹದ ಸಂಖ್ಯೆಯ ವಿವರ: ಸವಸ-7/845 :- ಸಮಗ್ರ ವಚನ ಸಂಪುಟ -7, ವಚನ ಸಂಖ್ಯೆ-845 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)