ಲಿಂಗಾಯತರಲ್ಲಿ ಸ್ಥಾವರ ಲಿಂಗ (ಮೂರ್ತಿ) ಪೂಜೆ ನಿಷಿದ್ಧ
|
|
*
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾವರದೈವಕ್ಕೆರಗಲಾಗದು.
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಸ್ಥಾವರದೈವಕ್ಕೆರಗಲಾಗದು.
ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ
ಕರಸ್ಥಲದ ದೇವನಿದ್ದಂತೆ
ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ಕೂಡಲಸಂಗಮದೇವ. - 1/962
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ,
ಮರಳಿ ಅನ್ಯದೈವಂಗಳನಾರಾಧಿಸುವ ಕುನ್ನಿಗಳು ನೀವು ಕೇಳಿಭೋ
ವಿಷ್ಣುವೇ ದೈವವೆಂದು ಆರಾಧಿಸಿದ ಬಲಿಗೆ ಬಂಧನವಾಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ಕರ್ಣನ ಕವಚ ಹೋಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ನಾಗಾರ್ಜುನನ ಶಿರ ಹೋಯಿತ್ತು.
ಅದಂತಿರಲಿ,
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ಗೌತಮಂಗೆ ಗೋವಧೆಯಾಯಿತ್ತು.
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ದಕ್ಷಂಗೆ ಕುರಿದಲೆಯಾಯಿತ್ತು.
ಮೈಲಾರನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ನಾಯಾಗಿ ಬೊಗಳುತಿರ್ಪ.
ಭೈರವನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ಕರುಳ ಬೆರಳ ಕಡಿದಿಕ್ಕಿ, ಬಾಹಿರನಾದನು.
ಮಾಯಿರಾಣಿಯೇ ದೈವವೆಂದು ಆರಾಧಿಸಿದಾತನು
ಕೊರಳಿಗೆ ಕವಡಿಯ ಕಟ್ಟಿ, ತಲೆಯಲ್ಲಿ ಕೆರಹ ಹೊತ್ತು,
ಬೇವಿನ ಸೊಪ್ಪನುಟ್ಟು ಲಜ್ಜೆಯ ನೀಗಿದ.
ಈ ಬಿನುಗು ದೈವಂಗಳ ಭಕ್ತಿ ಬಣಗು ನಾಯಿ ಒಣಗಿದೆಲುವ ಕಚ್ಚಿಕೊಂಡು
ಕಂಡ ಕಂಡೆಡೆಗೆ ಹರಿದಂತಾಯಿತ್ತು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. - ಉರಿಲಿಂಗಪೆದ್ದಿ 1266
ಅಂಗದ ಮೇಲೆ ಲಿಂಗಸಾಹಿತ್ಯದ ಬಳಿಕ ಸ್ಥಾವರಲಿಂಗವ ಪೂಜಿಸಬಾರದು
ತನ್ನ ಪುರುಷನ ಬಿಟ್ಟು ಅನ್ಯಪುರುಷರ ಸಂಗ ಸಲ್ಲುವುದೆ ?
ಕರಸ್ಥಲದಲ್ಲಿ ಲಿಂಗದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ನಮ್ಮ ಕೂಡಲಚೆನ್ನಸಂಗಮದೇವಾ !
ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿಕೊಂಬ ಮಹಾಲಿಂಗವಂತರು ನೀವು ಕೇಳಿರೊ.
ಮನೆಗೊಂದು ದೈವ, ನಿಮಗೊಂದು ದೈವ.
ನಿಮ್ಮಂಗನೆ ಅನ್ಯದೈವಕ್ಕೆಂದು ನಿಯಾಮಿಸಿ ಮಾಡಿದ ಪಾಕವ,
ನಿಮ್ಮ ಇಷ್ಟಲಿಂಗಕ್ಕೆ ಕೊಟ್ಟು ಭುಂಜಿಸುತ್ತಿರ್ದು,
ಮತ್ತೆ ಮರಳಿ ಲಿಂಗವಂತರೆನಿಸಿಕೊಂಬ ಲಿಂಗದ್ರೋಹಿಗಳಿಗೆ
ಕುಂಭೀಪಾತಕ, ನಾಯಕನರಕ ತಪ್ಪದೆಂದ ಕಲಿದೇವಯ್ಯ.- ಮಡಿವಾಳ ಮಾಚಿದೇವ 439
ಉಣ್ಣದ ಮೂರ್ತಿಗಿಂತ ಉಂಬುವ ಜೀವಕ್ಕ ಆಹಾರ ನೀಡುವುದು ಲೇಸು
ಕಲ್ಲನಾಗರ ಕಂಡಡೆ ಹಾಲನೆರೆಯೆಂಬರು,
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ,
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೊನವ ಹಿಡಿಯೆಂಬರಯ್ಯಾ,
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ. - ಬಸವಣ್ಣ ಸವಸ1/194
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಕ್ಷೇತ್ರತೀರ್ಥಕ್ಕೆ ಹೋಗಲೇಕಯ್ಯ!
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಕ್ಷೇತ್ರತೀರ್ಥಕ್ಕೆ ಹೋಗಲೇಕಯ್ಯ!
ಅಂಗದ ಮೇಲಣ ಲಿಂಗ [ರಂಗದ] ಕಲ್ಲ ತಾಗಿದರೆ
ಆವುದ ಘನವೆಂಬೆನಾವುದ ಕಿರಿದೆಂಬೆ!
ತಾಳ ಸಂಪುಟಕ್ಕೆಬಾರದ ಘನವನರಿಯದೆ ಕೆಟ್ಟರು.
ಜಂಗಮದರ್ಶನ ಶಿರಮುಟ್ಟಿ ಪಾವನ, ಲಿಂಗದರ್ಶನ ಕರಮುಟ್ಟಿ ಪಾವನ.
ಹತ್ತರಿದ್ದ ಲಿಂಗವ ಹುಸಿಮಾಡಿ, ದೂರಲಿದ್ದ ಲಿಂಗಕ್ಕೆ ನಮಸ್ಕರಿಸುವ
ವ್ರತಗೇಡಿಯ ತೋರದಿರಯ್ಯಾ!
ಕೂಡಲಚೆನ್ನಸಂಗಯ್ಯಾ. - ಚೆನ್ನಬಸವಣ್ಣ 77
[1] ಈ ತರಹದ ಸಂಖ್ಯೆಯ ವಿವರ: ಸವಸ-1/628 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-628 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*