Previous ಲಿಂಗಾಯತರಲ್ಲಿ ಗ್ರಹಣದ ಬಗ್ಗೆ ಜೀವಾತ್ಮ - ನಾನು ಯಾರು? Next

ಪರಮಾತ್ಮ ವಿಶ್ವವ್ಯಾಪಿ

*

ವಿಶ್ವದೊಳಗೆಲ್ಲ ನೀನೆ ದೇವಾ,
ವಿಶ್ವ ಭರಿತನು ನೀನೆ ದೇವಾ,
ವಿಶ್ವರೂಪನು ನೀನೆ ದೇವಾ,
ವಿಶ್ವಪತಿ ನೀನೆ ದೇವಾ,
ವಿಶ್ವಾತೀತನು ನೀನೆ ದೇವ, ಅಖಂಡೇಶ್ವರಾ.
(೧೪: )

ವನವೆಲ್ಲಾ ನೀನೆ ವನದೊಳಗಣ ದೇವತರುವೆಲ್ಲಾ ನೀನೆ,
ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ.
ಚೆನ್ನಮಲ್ಲಿಕಾರ್ಜುನಾ,
ಸರ್ವಭರಿತನಾಗಿ ಎನಗೇಕೆ ಮುಖದೋರೆ ? (೫: ೩೬೫)

ಪರಮಾತ್ಮನು ಎಲ್ಲ ಕಡೆ ಇದ್ದರೂ ಅವನು ಅವ್ಯಕ್ತ.

ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ.
ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ;
ಶರೀರದೊಳಗಾತ್ಮನನಾರೂ ಕಾಣದಂತಿರಿಸಿದೆ;
ನೀ ಬೆರೆಸಿದ ಭೇದಕ್ಕೆ ಬೆರಗಾದೆನೈ ರಾಮನಾಥಾ.

ಫಲದೊಳಗಣ ಮಧುರಗೋಪ್ಯದಂತಿದ್ದಿತ್ತು,
ಚಂದ್ರಕಾಂತದ ಉದಕದ ತೆರನಂತಿದ್ದಿತ್ತು,
ಮಯೂರನ ತತ್ತಿಯ ಚಿತ್ರದಂತಿದ್ದಿತ್ತು,
ಶಿಶು ಕಂಡ ಕನಸಿನ ತರಿಯಂತಿದ್ದಿತ್ತು,
ಕೂಡಲಚೆನ್ನಸಂಗಯ್ಯಾ (ನಿಮ್ಮ ನಿಲವು)
ಸದ್ಗುರು ಚಿತ್ತದ ಪದದಂತಿದ್ದಿತ್ತು. (೩: ೧)

ಭಕ್ತರನ್ನು ಸಂಸಾರದಿಂದ ಬಿಡುಗಡೆ ಮಾಡುತ್ತಾನೆ:
ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ,
ಎನ್ನುವನು ಕಾಯಯ್ಯಾ, ಕಾಯಯ್ಯಾ,
ಹುರುಳಿಲ್ಲ ! ಹುರುಳಿಲ್ಲ !
ಕೂಡಲಸಂಗಮದೇವಾ, ಶಿವಧೋ ! ಶಿವಧೋ ! (೧: ೧೩)

ಅವನು ಕರುಣಾಮಯಿ. ಪ್ರಾಯಶ್ಚಿತ್ತ ಮಾಡಿಕೊಳ್ಳುವ ಎಂಥ ಪಾಪಿಯನ್ನಾದರೂ ಅವನು ಕ್ಷಮಿಸುತ್ತಾನೆ:

ನೀನೊಲಿದಡೆ ಕೊರಡು ಕೊನರುವುದಯ್ಯಾ,
ನೀನೊಲಿದಡೆ ಬರಡು ಹಯನಹುದಯ್ಯಾ,
ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯಾ,
ನೀನೊಲಿದಡೆ ಸಕಲ ಪಡಿಪದಾರ್ಥಗಳು
ಇದಿರಲ್ಲಿರ್ಪುವು ಕೂಡಲಸಂಗಮದೇವಾ. (೧: ೬೬)

ಕೆಲವರು ಗಟ್ಟಿಯಾಗಿ ಭಜನೆ ಮಾಡುತ್ತಾ, ಮಂತ್ರ ಹೇಳುತ್ತಾ ಪೂಜೆ ಮಾಡುತ್ತಾರೆ. ಅಂತಹ ತೋರಿಕೆಯ ಪೂಜೆ ಶಿವನಿಗೆ ಇಷ್ಟವಾಗುವುದಿಲ್ಲ.

ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ,
ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ
ನಾದವ ಮಾಡಿದ ರಾವಣಂಗೆ ಅರೆ ಆಯುಷ್ಯವಾಯಿತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ. (೧: ೧೮೧)

ನೀನೆ ತಂದೆ, ನೀನೆ ತಾಯಿ ಎಂದು ಬಲವಾಗಿ ನಂಬಿ ಕರೆದರೆ ಅವನು ಖಂಡಿತ ಓಗೊಡುತ್ತಾನೆ.

ತಂದೆ ನೀನು ತಾಯಿ ನೀನು,
ಬಂಧು ನೀನು ಬಳಗ ನೀನು.
ಎನಗೆ ನೀನಲ್ಲದೆ ಮತ್ತಾರೂ ಇಲ್ಲವಯ್ಯಾ,
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು. ನಿಮ್ಮ ಧರ್ಮ
(೧: ೪೮೧)

ನೆರೆ ನಂಬೋ ನೆರೆ ನಂಬೋ ಧರಧುರವಿಲ್ಲದೆ ಸಾಮವೇದಿಗಳಂತೆ,
ನೆರೆ ನಂಬೋ ನೆರೆ ನಂಬೋ ದಾಸ-ದುಗ್ಗಳೆಯಂತೆ,
ನೆರೆ ನಂಬೋ ನೆರೆ ನಂಬೋ ಸಿರಿಯಾಳ-ಚಂಗಳೆಯಂತೆ,
ನೆರೆ ನಂಬೋ ನೆರೆ ನಂಬೋ ಸಿಂಧು-ಬಲ್ಲಾಳನಂತೆ,
ನೆರೆ ನಂಬಿದೆಯಾದಡೆ ತನ್ನ ನೀವ ಕೂಡಲಸಂಗಮದೇವ. (೧: ೧೪೯)

ನಂಬರು ನಚ್ಚರು ಬರಿದೆ ಕರೆವರು
ನಂಬಲರಿಯರೀ ಲೋಕದ ಮನುಜರು
ನಂಬಿ ಕರೆದೊಡೆ ಓ ಎನ್ನನೆ ಶಿವನು?
ನಂಬದೆ ನಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ. (೧: ೧೧೬)

ಪ್ರಾಣಿಬಲಿಕೊಡುವವರನ್ನು ಶಿಕ್ಷಿಸುತ್ತಾನೆ:

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡಾ!
ವೇದವನೋದಿದವರ ಮುಂದೆ ಅಳು, ಕಂಡಾ!
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ. (೧: ೫೭೩)

[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])

ಪರಿವಿಡಿ (index)
*
Previous ಲಿಂಗಾಯತರಲ್ಲಿ ಗ್ರಹಣದ ಬಗ್ಗೆ ಜೀವಾತ್ಮ - ನಾನು ಯಾರು? Next