ದೇವರಿಗೆ ತಂದೆ ತಾಯಿಯಿಲ್ಲ,ಹುಟ್ಟು, ಸಾವು, ನೋವು ಇಲ್ಲ
ದೇವರಿಗೆ ತಂದೆ ತಾಯಿಯಿಲ್ಲ, ಅಂದರೆ ಯಾರು ಜನ್ಮಿಸಿದ್ದಾರೋ ಅವರು ದೇವರಲ್ಲ, ಅವರನ್ನು, ಮಹಾತ್ಮರು, ಗುರುಗಳು, ವಿಭೂತಿ ಪುರುಷರು, ಅಥವಾ ಇನ್ನಾವುದೋ ಹೆಸರಿನಿಂದ ಕರೆಯಬಹುದು ಆದರೆ ದೇವರೆಂದು ಮಾತ್ರ ಕರೆಯಲಾಗದು. ಯಾಕೆಂದರೆ ದೇವರು ಯೋನಿಜನಲ್ಲ!..
ತಾಯಿ ತಂದೆಯಿಲ್ಲದ ಕಂದಾ,
ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲಾ !
ನಿನ್ನ ಪರಿಣಾಮವೆ ನಿನಗೆ ಪ್ರಾಣತೃಪ್ತಿಯಾಗಿರ್ದೆಯಲ್ಲಾ !
ಭೇದಕರಿಗೆ ಅಭೇದ್ಯನಾಗಿ ನಿನ್ನ ನೀನೆ ಬೆಳಗುತ್ತಿರ್ದೆಯಲ್ಲಾ !
ನಿನ್ನ ಚರಿತ್ರ ನಿನಗೆ ಸಹಜ ಗುಹೇಶ್ವರಾ. /೧೨೪೯
[1]
ತಂದೆಯಿಲ್ಲದ, ತಾಯಿಯಿಲ್ಲದ,
ಹೆಸರಿಲ್ಲದ, ಕುಲವಿಲ್ಲದ,
ಹುಟ್ಟಿಲ್ಲದ, ಹೊಂದಿಲ್ಲದ,
ಅಯೋನಿಸಂಭವ ನೀನಾದಕಾರಣ
ನಿನ್ನ ನಾನು ನಿಃಕಲಲಿಂಗವೆಂದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. /೨೨
[1] - ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದೇವನು ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು
ಮರನೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿ ಸ್ವಭಾವಂಗಳು, ಹರಭಾವದಿಚ್ಛೆಗೆ ತೋರುವವು.
ಲೀಲೆಯಾದಡೆ ಉಮಾಪತಿ, ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರಾ./೧೪೫
[1]
ತನ್ನ ವಿನೋದಕ್ಕೆ ತಾನೆ ಸೃಜಿಸಿದ ಸಕಲ ಜಗತ್ತ.
ತನ್ನ ವಿನೋದಕ್ಕೆ ತಾನೆ ಸುತ್ತಿದನದಕ್ಕೆ ಸಕಲ ಪ್ರಪಂಚವನು.
ತನ್ನ ವಿನೋದಕ್ಕೆ ತಾನೆ ತಿರುಗಿಸಿದನನಂತ ಭವದುಃಖಂಗಳಲ್ಲಿ.
ಇಂತೆನ್ನ ಚೆನ್ನಮಲ್ಲಿಕಾರ್ಜುನನೆಂಬ ಪರಶಿವನು
ತನ್ನ ಜಗದ್ವಿಲಾಸ ಸಾಕಾದ ಮತ್ತೆ ತಾನೆ ಪರಿವನದರ ಮಾಯಾಪಾಶವನು./೨೩೨
[1]
ಕೀಟಕ ಸೂತ್ರದ ನೂಲಗೂಡಮಾಡಿ ಸುತ್ತಿರ್ಪಂತೆ
ಸೂತ್ರಕ್ಕೆ ನೂಲನೆಲ್ಲಿಂದ ತಂದಿತ್ತಯ್ಯಾ
ರಾಟಿಯಿಲ್ಲ, ಅದಕ್ಕೆ ಹಂಜಿ ಮುನ್ನವೆ ಇಲ್ಲ, ನೂತವರಾರೋ
ತನ್ನೊಡಲ ನೂಲ ತೆಗೆದು ಪಸರಿಸಿ, ಅದರೊಳು ಪ್ರೀತಿಯಿಂದೊಲಿದಾಡಿ,
ತುದಿಯಲ್ಲಿ ತನ್ನೊಳಗದ ಮಡಗಿಕೊಂಡಿಪ್ಪಂತೆ,
ತನ್ನಿಂದಾದ ಜಗವ ತನ್ನೊಳಗೈದಿಸಿಕೊಳಬಲ್ಲ
ನಮ್ಮ ಕೂಡಲಸಂಗಮದೇವರು.-ಸವಸ-೧/೧೧೫೦
[1]
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು./೨೬೮
[1]
ದೇವರಿಗೆ ಹುಟ್ಟು,ಸಾವು,ಕೇಡು,ರೂಹು (ರೂಪ), ವೇಷ ಭೂಷಣ, ಸೀಮೆ ಇಲ್ಲ
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ.
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ ?
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು.
ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು.
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ./೩೯೮
[1]
ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
ಬ್ರಹ್ಮಕಪಾಲವಿಲ್ಲ, ಭಸ್ಮಭೂಷಣನಲ್ಲ,
ವೃಷಭವಾಹನನಲ್ಲ, ಋಷಿಯರುಗಳೊಡನಿದ್ದಾತನಲ್ಲ.
ಎಸಗುವ ಸಂಸಾರದ ಕುರುಹಿಲ್ಲದಾಂತಗೆ
ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ./೪೭
[1]
ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.
ಮಡುವಿನೊಳಗರಸುವಡೆ ಮತ್ಸ್ಯಮಂಡೂಕನಲ್ಲ.
ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.
ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.
ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವ
ನಿಲುಕಿ ನೋಡಿಯೆ ಕಂಡನಂಬಿಗ ಚೌಡಯ್ಯ./೨೬
[1]
ತಂದೆ-ತಾಯಿ ಸಂಯೋಗಸಂಭೂತನಲ್ಲದವನು,
ಶ್ವೇತ, ಪೀತ, ಕಪೋತ, ಹರೀತ, ಕೃಷ್ಣ
ಮಾಂಜಿಷ್ಟವೆಂಬ ಷಡುವರ್ಣರಹಿತನು,
ಆದಿಮಧ್ಯಾವಸಾನಂಗಳಿಲ್ಲದ ಸ್ವತಂತ್ರಮಹಿಮನು,
ವೇದವಿಂತುಂಟೆಂದು ರೂಹಿಸಬಾರದವನು,
ನಾ ಬಲ್ಲೆನೆಂಬ ಹಿರಿಯರ ಒಗ್ಗೆಗೂ ಮಿಕ್ಕಿಪ್ಪ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
ಮಹಂತಿನ ಕೂಡಲದೇವರೆಂಬ ಪಾಷಂಡಿ, ವೇಷಧಾರಿ!
ಇವರ, ಘಾತಕ ಮೂಳ ಮೂಳ ಹೊಲೆಯರನೇನೆಂಬೆನಯ್ಯಾ,
ಮಹಂತಿನ ಪರಿವ್ರತವೆಂತೆಂದರಿಯರು,
ಆ ಮಹಂತಿನ ಘನವನೆಂತೆಂದಡೆ:
ಅಂತ:ಪರಂಜ್ಯೋತಿಸ್ವರೂಪನು,
ನಿತ್ಯ ನಿರಂಜನನು,
ನಿ:ಕಳಂಕನು, ನಿರ್ದೇಹನು, ನಿರಾಮಯನು, ನಿಶ್ಯೂನ್ಯನು,
ಅನಂತಬ್ರಹ್ಮಾಂಡಗಳ ನೆನಹು ಮಾತ್ರದಲ್ಲಿ ನಿರ್ಮಿಸಿದ, ಕರ್ತೃ,
ಪಾದದಲ್ಲಿ ಪಾತಾಳಲೋಕ, ನೆತ್ತಿಯಲ್ಲಿ ಸತ್ಯಲೋಕ,
ಕುಕ್ಷಿಯಲ್ಲಿ ಹದಿನಾಲ್ಕು ಲೋಕವ ತಾಳಿಹ, ವಿಶ್ವಪರಿಪೂರ್ಣನು.
ಇಂತಪ್ಪ ಪರಂಜ್ಯೋತಿಮಹನು
ಇಂತಿವರೆಲ್ಲ ತನ್ನ ಸರ್ವಾಂಗದಲ್ಲಿ ಮಡುಗಿಸಿಕೊಂಡು,
ನಿಬ್ಬೆರಗಿಯಾಗಿ, ಶಬ್ದ ಶೂನ್ಯನಾಗಿರಬಲ್ಲಡೆ
ಮಹಂತಿನ ಕೂಡಲದೇವರೆಂಬೆನಯ್ಯಾ.
ಇದನರಿಯದ ವೇಷಧಾರಿ ಲಾಂಛನಿ ಗರ್ವಿಗಳನೇನೆಂಬೆನಯ್ಯಾ?
ಕೂಡಲಸಂಗಮದೇವರಲ್ಲಿ ಸಲ್ಲದ ನರಕಿಗಳು. -1/೧೩೧೯-
[1]
[1] ಈ ತರಹದ ಸಂಖ್ಯೆಯು ಸಮಗ್ರ ವಚನ ಸಂಪುಟದ, ವಚನ ಸಂಖ್ಯೆಯನ್ನು ಸೂಚಿಸುತ್ತದೆ (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)