Previous ವಚನಸಾಹಿತ್ಯದಲ್ಲಿ ಮೂಢನಂಬಿಕೆಗಳ ನಿವಾರಣೆ ಕೋಪದ ಬಗ್ಗೆ, ಶರಣರ ಸಲಹೆ ಸೂಚನೆಗಳು Next

ಅಗ್ನಿ (ಕಿಚ್ಚು), ಜಲ, ನೆಲ, ಕಲ್ಲು ,ಆಕಾಶ ವಾಯು ದೇವರಲ್ಲ

*

ಶರಣರು ದೈವ ಒಂದೇ ಎಂದು ಸಾರಿ, ಅಗ್ನಿ (ಕಿಚ್ಚು), ಜಲ, ನೆಲ, ಕಲ್ಲು ,ಆಕಾಶ ವಾಯು ಕ್ಷುದ್ರ ದೈವಾರಾಧನೆಯನ್ನು ಖಂಡಿಸಿದರು.

ಕಿಚ್ಚು ದೈವವೆಂದು ಹವಿಯನಿಕ್ಕುವ,
ಹಾರುವರ ಮನೆಯಲಿ ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ, ಬೀದಿಯ ದೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ.
ಕೂಡಲಸಂಗಮದೇವಾ,
ವಂದನೆಯ ಮರೆದು ನಿಂದಿಸುತ್ತಿದ್ದರು.- ಗುರು ಬಸವಣ್ಣ ೧/೫೮೫ [1]

ಕಿಚ್ಚು ದೈವವೆಂದು ಹವಿಯ ಬೇಳುವರು.
ಕಿಚ್ಚು ಹಾರುವರ ಮನೆಯ ಸುಡುವಾಗ
ಬಚ್ಚಲ ಕೆಸರ ಬೀದಿಯ ಧೂಳ ಚೆಲ್ಲಿ
ಬೊಬ್ಬಿರಿದೆಲ್ಲರ ಕರೆವರು.
ಸಿಮ್ಮಲಿಗೆಯ ಚೆನ್ನರಾಮನ ಮಂತ್ರ ತಪ್ಪಿದ ಬಳಿಕ
ವಂದಿಸುವುದ ಬಿಟ್ಟು ನಂದಿಸುತ್ತಿದ್ದರು. /೫೮೫

ದೇವರು ದೇವರು ಎಂಬಿರಿ ದೇವರಿಗೆ ಪ್ರಳಯವುಂಟೆ ?
ದೇವರು ಪ್ರಳಯವಾದಡೆ ಜಗವು ಉಳಿಯಬಲ್ಲುದೆ ?
ಎಲಾ ಮರುಳಗಳಿರಾ,
ಕಲ್ಲು ದೇವರೆಂಬಿರಿ, ಕಲ್ಲು ದೇವರಾದಡೆ ವಜ್ರಾಯುಧದಿಂದ ಪ್ರಳಯವಾಗದೆ ?
ಕಟ್ಟಿಗೆ ದೇವರೆಂಬಿರಿ, ಕಟ್ಟಿಗೆ ದೇವರೆಂದರೆ ಅಗ್ನಿಯಿಂದ ಪ್ರಳಯವಾಗದೆ ?
ಮಣ್ಣು ದೇವರೆಂಬಿರಿ, ಮಣ್ಣು ದೇವರಾದಡೆ ಜಲದಿಂದ ಪ್ರಳಯವಾಗದೆ ?
ನೀರು ದೇವರೆಂಬಿರಿ, ನೀರು ದೇವರಾದಡೆ ಅಗ್ನಿಯಿಂದ ಅರತುಹೋಗದೆ ?
ಅಗ್ನಿ ದೇವರೆಂಬಿರಿ, ಅಗ್ನಿ ದೇವರಾದಡೆ ಜಲದಿಂದ ಪ್ರಳಯವಾಗದೆ ?
ಇಂತೀ ದೇವರೆಂದು ನಂಬಿ ಪೂಜಿಸಿದ ಜೀವಾತ್ಮರು
ಇರುವೆ ಮೊದಲು ಆನೆ ಕಡೆ
ಎಂಬತ್ನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಾಳ ತಿರುಗಿದಂತೆ
ಜನನಮರಣಗಳಿಂದ ಎಡೆಯಾಡುತಿಪ್ಪರು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. /೧೪೧

ಕಲ್ಲು ದೇವರೆಂದು ಪೂಜಿಸುವರೆಲ್ಲ, ಕಲ್ಲಾಗಿ ಪುಟ್ಟುವರು.
ಕಟ್ಟಿಗೆ ದೇವರೆಂದು ಪೂಜಿಸುವರೆಲ್ಲ ಕಟ್ಟಿಗೆಯಾಗಿ ಪುಟ್ಟುವರು.
ಮಣ್ಣುದೇವರೆಂದು ಪೂಜಿಸುವರೆಲ್ಲ ಮಣ್ಣಾಗಿ ಪುಟ್ಟುವರು.
ನೀರು ದೇವರೆಂದು ಪೂಜಿಸುವರೆಲ್ಲ ನೀರಾಗಿ ಪುಟ್ಟುವರು.
ಅಗ್ನಿದೇವರೆಂದು ಪೂಜಿಸುವರೆಲ್ಲರು ಅಗ್ನಿಯಾಗಿ ಪುಟ್ಟುವರು.
ಇಂತಿವರೆಲ್ಲರು ದೇವರೆಂದು ಪೂಜಿಸುವರು
ಹುಟ್ಟುಕುರುಡನು ಬೆಣ್ಣೆಯೆಂದು ನರಕವ ಭುಂಜಿಸಿದಂತಾಯಿತ್ತಯ್ಯಾ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. /೧೩೯

ಜಲದೈವವೆಂದಡೆ ಶೌಚವ ಮಾಡಲಿಲ್ಲ.
ನೆಲದೈವವೆಂದಡೆ ಕಾಲೂರಿ ನಡೆಯಲಿಲ್ಲ.
ಅಗ್ನಿದೈವವೆಂದಡೆ ತರಿದು ಮೆಲಲಿಲ್ಲ.
ಅಗ್ನಿದೈವವೆಂದಡೆ ಮನೆಗಳು, ತೃಣಾದಿಗಳು ಬೆಂದು ಕೆಟ್ಟೆವೆನಲಿಲ್ಲ.
ವಾಯುದೈವವೆಂದಡೆ ಕೆಟ್ಟಗಾಳಿ ಮನೆಗೆ ಬಂದಿತ್ತು, ಬಾಗಿಲಿಕ್ಕಿ ಎನಲಿಲ್ಲ.
ಆಕಾಶದೈವವೆಂದಡೆ ಆಕಾಶವ ಹೊರಗುಮಾಡಿ, ಒಳಗೆ ಮನೆಯ ಕಟ್ಟಲಿಲ್ಲ.
ಚಂದ್ರದೈವವೆಂದಡೆ ಶೀತಗೊಂಡು ಕೆಟ್ಟೆವೆನಲಿಲ್ಲ.
ಸೂರ್ಯದೈವವೆಂದಡೆ ಉಷ್ಣಗೊಂಡು ಕೆಟ್ಟೆವೆನಲಿಲ್ಲ.
ಆತ್ಮದೈವವೆಂದಡೆ ಸಾವು ಕೇಡು ಇಲ್ಲದಿರಬೇಕು.
ಇದು ಕಾರಣ, ನೆಲದೈವವಲ್ಲ, ಜಲದೈವವಲ್ಲ,
ಅಗ್ನಿದೈವವಲ್ಲ, ವಾಯುದೈವವಲ್ಲ,
ಆಕಾಶದೈವವಲ್ಲ, ಚಂದ್ರಸೂರ್ಯ ಆತ್ಮರು ದೈವವಲ್ಲ.
ಕಲಿದೇವಾ, ನಿಮ್ಮ ಶರಣ ಬಸವಣ್ಣನೊಬ್ಬನೆ ದೈವವೆಂದ,
ಮಡಿವಾಳನು. /೬೦೬

ಅಷ್ಟಮೂರ್ತಿಗಳು ದೇವರೆಂಬ
ಭ್ರಷ್ಟಭವಿಗಳ ಮಾತ ಕೇಳಲಾಗದು.
ಅದೇನು ಕಾರಣವೆಂದೊಡೆ :
ಪೃಥ್ವಿದೇವರಾದಡೆ, ಅಪ್ಪುವಿನ ಪ್ರಳಯದಲ್ಲಿ ಕರಗುವುದೆ ?
ಅಪ್ಪು ದೇವರಾದಡೆ, ಅಗ್ನಿಯ ಪ್ರಳಯದಲ್ಲಿ ಅರತು ಹೋಗುವುದೆ ?
ಅಗ್ನಿ ದೇವರಾದಡೆ, ವಾಯುವಿನ ಪ್ರಳಯದಲ್ಲಿ ಆರಿ ಹೋಗುವುದೆ ?
ವಾಯು ದೇವರಾದಡೆ, ಆಕಾಶದ ಪ್ರಳಯದಲ್ಲಿ ಲಯವಪ್ಪುದೆ ?
ಆಕಾಶ ದೇವರಾದಡೆ ಆತ್ಮನಲ್ಲಿ ಅಡಗಿಹೋಗುವುದೆ ?
ಆತ್ಮದೇವರಾದಡೆ, ದ್ವಂದ್ವಕರ್ಮಂಗಳನುಂಡು
ಜನನ ಮರಣಂಗಳಲ್ಲಿ ಬಂಧನವಡೆವನೆ ?
ಚಂದ್ರಸೂರ್ಯರು ದೇವರಾದಡೆ
ಭವಬಂಧನದಲ್ಲಿ ಸಿಲ್ಕಿ ತೊಳಲಿ ಬಳಲುವರೆ ?
ಇದು ಕಾರಣ ಇಂತೀ ಅಷ್ಟತನುಗಳು
ಎಂತು ದೇವರೆಂಬೆನು ?
ದೇವರದೇವ ಮಹಾದೇವ ಮಹಾಮಹಿಮ
ಎನ್ನೊಡೆಯ ಅಖಂಡೇಶ್ವರ ಒಬ್ಬನೆ ದೇವನಲ್ಲದೆ
ಉಳಿದವರೆಲ್ಲ ಹುಸಿ ಹುಸಿ ಎಂಬೆನು ನೋಡಾ ! /೫೦೯

ಪೃಥ್ವಿ ದೇವರೆಂಬೆನೆ ಪೃಥ್ವಿ ದೇವರಲ್ಲ.
ಅಪ್ಪು ದೇವರೆಂಬೆನೆ ಅಪ್ಪು ದೇವರಲ್ಲ.
ಅಗ್ನಿ ದೇವರೆಂಬೆನೆ ಅಗ್ನಿ ದೇವರಲ್ಲ.
ವಾಯು ದೇವರೆಂಬೆನೆ ವಾಯು ದೇವರಲ್ಲ.
ಆಕಾಶ ದೇವರೆಂಬೆನೆ ಆಕಾಶ ದೇವರಲ್ಲ.
ಆತ್ಮ ದೇವರೆಂಬೆನೆ ಆತ್ಮ ದೇವರಲ್ಲ.
ಸೂರ್ಯ ದೇವರೆಂಬೆನೆ ಸೂರ್ಯ ದೇವರಲ್ಲ.
ಚಂದ್ರ ದೇವರೆಂಬೆನೆ ಚಂದ್ರ ದೇವರಲ್ಲ.
ಅದೇನು ಕಾರಣವೆಂದೊಡೆ :
ಪೃಥ್ವಿ ಶಿವನ ಸದ್ಯೋಜಾತಮುಖದಲ್ಲಿ ಪುಟ್ಟಿತ್ತು.
ಅಪ್ಪು ಶಿವನ ವಾಮದೇವಮುಖದಲ್ಲಿ ಪುಟ್ಟಿತ್ತು.
ತೇಜ ಶಿವನ ಅಘೋರಮುಖದಲ್ಲಿ ಪುಟ್ಟಿತ್ತು.
ವಾಯು ಶಿವನ ತತ್ಪುರುಷಮುಖದಲ್ಲಿ ಪುಟ್ಟಿತ್ತು.
ಆಕಾಶ ಶಿವನ ಈಶಾನ್ಯಮುಖದಲ್ಲಿ ಪುಟ್ಟಿತ್ತು.
ಆತ್ಮ ಶಿವನ ಗೋಪ್ಯಮುಖದಲ್ಲಿ ಪುಟ್ಟಿತ್ತು.
ಸೂರ್ಯ ಶಿವನ ನಯನದಲ್ಲಿ ಪುಟ್ಟಿತ್ತು.
ಚಂದ್ರ ಶಿವನ ಮನಸ್ಸಿನಲ್ಲಿ ಪುಟ್ಟಿತ್ತು.
``ಯತ್ ದೃಷ್ಟಮ್ ತತ್ ನಷ್ಟಮ್'' ಎಂದು,
ಇಂತೀ ಅಷ್ಟತನುಗಳಿಗೆ ಹುಟ್ಟು ಹೊಂದು ಉಂಟಾದ ಕಾರಣ
ಇವು ಕಲ್ಪಿತವೆಂದು ಕಳೆದು
ನೀನೊಬ್ಬನೆ ನಿತ್ಯ ಪರಿಪೂರ್ಣನೆಂದು
ತಿಳಿದು ಉಳಿದೆನಯ್ಯ ಅಖಂಡೇಶ್ವರಾ. /೫೧೦

ನಿಮ್ಮ ಶ್ರೀಪಾದವ ಹರಿದು ಹತ್ತುವ
ನೆನೆವ ಮನವ ಕೆಡಿಸಲೆಂದು
ಮೋಹದ ಗಾಳಿ ಕೈವೀಸಲೊಡನೆ
ಕೋಪದ ಕಿಚ್ಚು ಹತ್ತಿ ಬೆಂದೆನಯ್ಯಾ.
ನಿಮ್ಮ ನೆನೆವ ಮನವ ಕಾಡುವ ವಿಧಿಯ
ಕೊಂದು ನೆಲೆಸೆನ್ನ ಕಪಿಲಸಿದ್ಧಮಲ್ಲಿನಾಥ ದೇವರದೇವ! /೭೧೬

[1] ಈ ತರಹದ ಸಂಖ್ಯೆಯ ವಿವರ: ಸವಸ-1/554 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-554 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ವಚನಸಾಹಿತ್ಯದಲ್ಲಿ ಮೂಢನಂಬಿಕೆಗಳ ನಿವಾರಣೆ ಕೋಪದ ಬಗ್ಗೆ, ಶರಣರ ಸಲಹೆ ಸೂಚನೆಗಳು Next