Previous ಲಿಂಗಾಯತರಲ್ಲಿ ದೇಹವೇ ದೇವಾಲಯ ಮದುವೆ, ಕುಟುಂಬ ಕಲ್ಯಾಣ Next

ನಿಮ್ಮನ್ನು ನೀವು ತಿದ್ದಿಕೊಳ್ಳಿ

*

ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ಕೆಲವರು, ತಮ್ಮ ತಟ್ಟೆಯಲ್ಲಿ ಕಪ್ಪೆಗಳು ಇದ್ದಾಗ, ಬೇರೆಯವರ ತಟ್ಟೆಯಲ್ಲಿರುವ ನೋಣವನ್ನು ಕುರಿತು ಮಾತನಾಡುತ್ತಾರೆ ಅಂತಹವರಿಗೆ ಗುರು ಬಸವಣ್ಣನವರು ಮೊದಲು ನಿಮ್ಮ ನಿಮ್ಮ ಮನವನ್ನು ಸರಿಪಡಿಸಿಕೊಳ್ಳಿ ಎಂದು ಈ ಸುಂದರವಾದ ವಚನಗಳ ಮೂಲಕ ತಿಳಿಸಿಕೊಡುತ್ತಾರೆ.

ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದಃಖಕ್ಕೆ ಅಳುವವರ ಮೆಚ್ಚ
ಕೂಡಲಸಂಗಮದೇವ. -ಸವಸ-೧/೧೨೪[1]

ಪರ ಚಿಂತೆ ಎಮಗೇಕಯ್ಯಾ ನಮ್ಮ ಚಿಂತೆ ನಮಗೆ ಸಾಲದೆ
ಕೂಡಲಸಂಗಯ್ಯ ಒಲಿದಾನೊ ಒಲ್ಲನೊ ಎಂಬ ಚಿಂತೆ
ಹಾಸಲುಂಟು, ಹೊದೆಯಲುಂಟು.-ಸವಸ-೧/೫೧೯[1]

ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಚೇಗೆಯೇನು
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ.-ಸವಸ-೧/೨೪೮[1]

ರೋಷ, ದ್ವೇಷ ದೊಡ್ಡ ದೋಷಗಳು, ಇವು ಮನಸ್ಸನ್ನು ಮತ್ತು ಹೃದಯವನ್ನು ನಾಶ ಮಾಡುತ್ತವೆಂದು ವೈಜ್ಞಾನಿಕ ವಿದ್ಯಾಮಾನಗಳು ತಿಳಿಸಿವೆ. ದ್ವೇಷಕ್ಕೆ ಮೂಲ ಕಾರಣವೇ ಕೋಪ. ಕೋಪದಿಂದ ಆಗುವ ವಿನಾಶ ತಪ್ಪಿಸಲು ಪಾಶ್ಚಾತ್ಯರು transcendental meditation ಮತ್ತು ನಮ್ಮ ಭಾರತೀಯ ಪದ್ಧತಿಯ ಯೋಗಕ್ಕೆ ಮೊರೆ ಹೋಗುತ್ತಿದ್ದಾರೆ. ಆದರೆ ಶರಣೋತ್ತಮ ಅಲ್ಲಮ ಪ್ರಭುಗಳು ಹೇಳುತ್ತಾರೆ.

ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು
ಜಲಪ್ರಳಯವಾದಲ್ಲಿ ವಾಯುವಂತಿರಬೇಕು
ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು

ಅಂದರೆ ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ, ಸ್ಥಿತ ಪ್ರಜ್ಞರಾಗಿರಬೇಕು. ಅನ್ಯಥಾ ತಲೆ ಕೆಡಿಸಿಕೊಂಡು ಯಾವ್ಯಾವುದೋ ತಪ್ಪು ದಾರಿ ಹಿಡಿಯಬಾರದು.

[1] ಈ ತರಹದ ಸಂಖ್ಯೆಯ ವಿವರ: ಸವಸ-1/124 :- ಸಮಗ್ರ ವಚನ ಸಂಪುಟ-1, ವಚನ ಸಂಖ್ಯೆ-124 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಲಿಂಗಾಯತರಲ್ಲಿ ದೇಹವೇ ದೇವಾಲಯ ಮದುವೆ, ಕುಟುಂಬ ಕಲ್ಯಾಣ Next