ಆರ್ಥಿಕ ಚಿಂತನೆ | ವಚನ ಸಾಹಿತ್ಯ Vachana Sahitya |
ವಚನ ಮತ್ತು ವಚನಕಾರರು |
ಲಿಂಗಾಯತರ ದಾರ್ಶನಿಕ, ಧಾರ್ಮಿಕ, ನೈತಿಕ ಮತ್ತು ಸಾಮಾಜಿಕ ಸಿದ್ಧಾಂತಗಳು ನಮಗೆ ಸ್ಪಷ್ಟವಾಗಿ ಮತ್ತು ಅಧಿಕೃತವಾಗಿ ಲಭ್ಯವಾಗುವುದು ಹನ್ನೆರಡನೆಯ ಶತಮಾನದ ಮತ್ತು ಅನಂತರದ ಶರಣರು ರಚಿಸಿದ ವಚನಗಳಲ್ಲಿ.
ವಚನಗಳು ಯಾವುದೇ ಛಂದೋನಿಬಂಧನೆಗಳಿಗೆ ಒಳಪಟ್ಟ ಪದ್ಯಪ್ರಕಾರವಲ್ಲ. ಅವುಗಳದು ಗದ್ಯವಾದರೂ ಶುಷ್ಕ ಗದ್ಯವಲ್ಲ; ಅನೇಕ ವಚನಗಳಲ್ಲಿ ಪ್ರಾಸ ಲಯಗಳಿದ್ದರೂ ಪದ್ಯವಲ್ಲ. ಈ ಕಾರಣಕ್ಕಾಗಿಯೇ ಶಿ.ಶಿ.ಬಸವನಾಳರು ವಚನಗಳನ್ನು “ಗದ್ಯಪದ್ಯದ ನಡುವಿನ ಒಂದು ಮಾದರಿ' ಎಂದು ಕರೆದಿರುವುದು, ಅವುಗಳನ್ನು ಹನ್ನೆರಡನೆಯ ಶತಮಾನದಲ್ಲಿ ಹಾಡುತ್ತಿದ್ದರು, ಎಂಬುದಕ್ಕೆ ವಚನಗಳಲ್ಲಿ ಪುರಾವೆ ಇದೆ ಮತ್ತು ಆ ಕಾರಣದಿಂದ ಅವಕ್ಕೆ ಗೀತ, ಗೀತಮಾತು, ಎಂಬ ಹೆಸರುಗಳೂ ಇದ್ದವು. ಆದರೆ ಅವು ಗಾಯನಯೋಗ್ಯವಾಗಿದ್ದರೂ, ಅವುಗಳನ್ನು ಗೀತ, ಗೀತಮಾತು ಎಂದು ಕರೆದಿದ್ದರೂ, ಅವು ಪದ್ಯಗಳಲ್ಲ, ಗದ್ಯ ಎಂಬುದನ್ನು ನಾವು ಮರೆಯಬಾರದು.
ಚಂಪೂ ಕಾವ್ಯದಲ್ಲಿ ಮಧ್ಯ ಮಧ್ಯ ಬರುವ ಕಾವ್ಯಮಯವಾದ ಗದ್ಯಭಾಗಕ್ಕೂ ವಚನ ಎಂಬ ಹೆಸರಿದೆ. ಆದರೆ ಅದು ಹಿಂದಿನ ಮತ್ತು ಮುಂದಿನ ಪದ್ಯಗಳಿಗೆ ಕೊಂಡಿಯಾಗಿದ್ದರೆ, ಶರಣರ ಪ್ರತಿ ವಚನವೂ ಸ್ವತಂತ್ರವಾದ ಒಂದು ಸರಳಗನ್ನಡದ ಮಾತು.
ವಚನಗಳು ತಮಿಳು ಶೈವರ ಅರವತ್ತೂರು ಪುರಾತನರನ್ನು ಕೊಂಡಾಡುವುದರಿಂದಲೂ ತಮಿಳು ತೇವಾರಂ ಪದ್ಯಗಳಂತೆ ಅವುಗಳನ್ನು ಹಾಡಬಹುದಾದುದರಿಂದಲೂ, ವಚನಗಳಿಗೆ ತೇವಾರಂ ಪದಗಳೇ ಮೂಲವೆಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಆದರೆ ತೇವಾರಂ ಹಾಡಲೆಂದೇ ರಚಿತವಾದ ಪದ್ಯಗಳು. ವಚನಗಳನ್ನು ಹಾಡಬಹುದಾದರೂ ಅವು ಗದ್ಯಗಳು. ಮೇಲಾಗಿ, ವಚನಗಳಲ್ಲಿ ಉಕ್ತವಾಗಿರುವ ಜಾತಿತಾರತಮ್ಯ ನಿರಾಕರಣೆ, ಸ್ಥಾವರಲಿಂಗಾರಾಧನೆಯ ಖಂಡನೆ, ಮುಂತಾದ ಸುಧಾರಣೆಯ ಅಂಶಗಳು ತೇವಾರಂ ಪದಗಳಲ್ಲಿಲ್ಲ, ಎಂಬುದೂ ಗಮನಾರ್ಹ. ಆದುದರಿಂದ, ವಚನಗಳಿಗೆ ತೇವಾರಂ ಪದ್ಯಗಳೇ ಮೂಲವೆನ್ನುವುದು ತಪ್ಪಾಗುತ್ತದೆ.
ಸರಳವಾದ ಗದ್ಯರೂಪದಲ್ಲಿ ಬರೆಯುವುದಕ್ಕಿಂತ ಛಂದೋಬದ್ಧ ರೂಪದಲ್ಲಿ ಬರೆಯುವುದು ಉತ್ತಮ, ಕನ್ನಡದಲ್ಲಿ ಬರೆಯುವುದಕ್ಕಿಂದ ಸಂಸ್ಕೃತದಲ್ಲಿ ಬರೆಯುವುದು ಇನ್ನೂ ಉತ್ತಮ, ಎಂಬ ಹನ್ನೆರಡನೇ ಶತಮಾನದ ವರೆಗೆ ಪ್ರಚಲಿತವಿದ್ದ ಅಭಿಪ್ರಾಯವನ್ನು ಧಿಕ್ಕರಿಸಿ, ಬಸವಾದಿ ಶರಣರು ತಮ್ಮ ವಿಚಾರ ಸರಣಿಯನ್ನು ಇತರರಿಗೆ ಮುಟ್ಟಿಸಲೂ ಆ ಮೂಲಕ ಇತರರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಲೂ ವಚನ ಎಂಬ ಸುಲಭ ಮಾಧ್ಯಮವನ್ನು ಸೃಷ್ಟಿಸಿಕೊಂಡುದು ಯುಕ್ತವೇ ಆಗಿದೆ.
ಹನ್ನೆರಡನೆಯ ಶತಮಾನದ ವಚನಕಾರರಿಗೆ ಸಂಸ್ಕೃತವಿರಲಿ, ಕನ್ನಡ ಕಾವ್ಯದ ಛಂದಸ್ಸಿನ ಗಂಧವೂ ಇರಲಿಲ್ಲವಾದುದರಿಂದ, ಅವರಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ವಚನ ಪ್ರಕಾರವನ್ನೇ ಆರಿಸಿಕೊಳ್ಳುವುದು ಅನಿವಾರ್ಯವಾಗಿತ್ತು ಎಂಬುದು ಕೆಲವರ ಅಭಿಪ್ರಾಯ, ಅಗಾಧವಾದ ಕಾವ್ಯರಚನಾಶಕ್ತಿ ಇದ್ದ ಬಸವಣ್ಣ, ಚನ್ನಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಮುಂತಾದವರು ಪದ್ಯ ಮಾಧ್ಯಮ ಬಳಸಿದ್ದರೆ, ಇಂದು ಅವರು ಉತ್ತಮ ಕವಿಗಳೆನಿಸಿಕೊಳ್ಳುತ್ತಿದ್ದರು. ಆದರೆ ಅವರ ಕಾವ್ಯಗಳಾಗಲಿ, ಅವುಗಳಲ್ಲಿ ಅಡಕವಾಗಿರಬಹುದಾಗಿದ್ದ ವಿಚಾರಸರಣಿಗಳಾಗಲಿ ಎಷ್ಟು ಜನಕ್ಕೆ ತಲುಪುತ್ತಿದ್ದವು? ಅವರನ್ನು ಅನುಸರಿಸುತ್ತಿದ್ದ ಅವರ ಸಂಗಡಿಗರಲ್ಲಿ ಮತ್ತು ಅನುಯಾಯಿಗಳಲ್ಲಿ ಎಷ್ಟು ಜನಕ್ಕೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿತ್ತು? ಅಷ್ಟೇ ಅಲ್ಲ, ಬಸವಣ್ಣ, ಅಲ್ಲಮ ಪ್ರಭು, ಚನ್ನಬಸವಣ್ಣ, ಮುಂತಾದ ಮಹಾ ವ್ಯಕ್ತಿಗಳೇ ಕಾವ್ಯಶೈಲಿಯನ್ನು ತ್ಯಜಿಸಿ ವಚನಶೈಲಿಯನ್ನು ಆರಿಸಿಕೊಂಡಿದ್ದಾರೆಂದರೆ, ಸಾಧಾರಣ ಜನರಾದ ನಾವೂ ಏಕೆ ವಚನಶೈಲಿಯನ್ನು ಆರಿಸಿಕೊಳ್ಳಬಾರದು? ಎಂದುಕೊಂಡ ಇತರರು ಅವರ ಪ್ರಭಾವದಿಂದ ವಚನ ರಚನೆಗೆ ತೊಡಗಿ, ವಚನಸಾಹಿತ್ಯವನ್ನು ಹಿರಿದಾಗಿ ಹಿಗ್ಗಿಸಿದರು. ಅದೇ ರೀತಿ, ಬಸವಾದಿ ಮಹಾತ್ಮರ ಜೀವನಶೈಲಿಯೂ, ವಚನಶೈಲಿಯೂ ಅವರ ಅನುಯಾಯಿಗಳು ತಮ್ಮ ಜೀವನ ಶೈಲಿಯನ್ನೂ ವಚನಶೈಲಿಯನ್ನೂ ರೂಪಿಸಿಕೊಳ್ಳುವಂತೆ ಪ್ರೇರೇಪಿಸಿರಬಹುದು. ಹೀಗಾಗಿ, ಎಲ್ಲ ಸಾಮಾಜಿಕ ಮತ್ತು ಆರ್ಥಿಕ ಸ್ತರಗಳ ಶರಣರಂತೆ ಶರಣೆಯರೂ ವಚನ ರಚಿಸಲು ಪ್ರಾರಂಭಿಸಿದರು.
ಎರಡನೆಯದಾಗಿ, ವಚನಕಾರರಿಗೆ ಅನೇಕ ವೇಳೆ ಅನ್ಯಸಿದ್ಧಾಂತ ಖಂಡನೆ, ಸ್ವಸಿದ್ಧಾಂತ ಮಂಡನೆಯ ಉದ್ದೇಶ ಇದ್ದುದರಿಂದಲೂ, ಅದಕ್ಕೆ ಪದ್ಯಗಳು ಸಹಾಯಕವಾಗುವುದರ ಬದಲು ತೊಡಕನ್ನೇ ಉಂಟುಮಾಡುವ ಭಯವಿದ್ದುದರಿಂದಲೂ, ಅಂಥ ಉದ್ದೇಶ ಸಾಧನೆಗೆ ವಚನಗಳೇ ಹೆಚ್ಚು ಅನುಕೂಲವಿದ್ದರಿಂದಲೂ ವಚನರಚನೆ ಸುಲಭವಿದ್ದುದರಿಂದಲೂ ಬಸವಣ್ಣ, ಚನ್ನಬಸವಣ್ಣ, ಮುಂತಾದವರಷ್ಟೇ ಅಲ್ಲ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಮಾದಾರ ಚನ್ನಯ್ಯ, ಮಡಿವಾಳ ಮಾಚಯ್ಯ, ತುರುಗಾಹಿ ರಾಮಣ್ಣ ಮುಂತಾದ ಪಂಡಿತರಲ್ಲದ, ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದವರೂ ವಚನ ರಚಿಸಲು ಸಾಧ್ಯವಾಯಿತು.
ವಚನಗಳ ವಸ್ತುವಿಷಯವೂ ಬಸವಪೂರ್ವ ಕನ್ನಡ ಸಾಹಿತ್ಯದ ವಸ್ತುವಿಷಯಕ್ಕಿಂತ ಭಿನ್ನ, ಬಸವಪೂರ್ವ ಯುಗದಲ್ಲಿ ಕನ್ನಡ ಸಾಹಿತ್ಯವು ರಾಜಾಶ್ರಯದಲ್ಲಿ ಬೆಳೆಯಿತಾದುದರಿಂದ, ಪೋಷಕ ರಾಜರಾಣಿಯರನ್ನು ಉತ್ತುಂಗಕ್ಕೇರಿಸಿ ಹೊಗಳಬೇಕಾದುದು ಕವಿಗಳಿಗೆ ಅನಿವಾರ್ಯವಾಗಿತ್ತು. ಆದರೆ ವಚನಕಾರರು ಯಾವ ರಾಜರಾಣಿಯರನ್ನೂ ಹೊಗಳಬೇಕಾಗಿರಲಿಲ್ಲ, ಶಿವ, ಶಕ್ತಿ, ಸೃಷ್ಟಿ, ಬಂಧ ಮತ್ತು ಮೋಕ್ಷ, ನೀತಿ, ಅಧ್ಯಾತ್ಮಿಕ ಸಾಧನೆ ಮತ್ತು ಅವುಗಳಿಗಿರುವ ಬಾಧಕಗಳು, ಅನುಭಾವ, ಸಾಮಾಜಿಕ ನ್ಯಾಯ, ಮುಂತಾದ ವಿಷಯಗಳ ಬೋಧನೆ ಅವರ ಉದ್ದೇಶವಾಗಿತ್ತು.
ವಚನ ಪರಂಪರೆ:
ಬಸವಣ್ಣನವರ ಕಾಲದಲ್ಲಿ ಎಷ್ಟೋ ಸಾವಿರ ವಚನಗಳನ್ನು ಬರೆಯಲಾಯಿತು. ಅವರಿಂದಲೂ ಅವರ ಹತ್ತಿರದ ಒಡನಾಡಿಗಳಿಂದಲೂ ನೇರವಾಗಿ ಸ್ಫೂರ್ತಿ ಪಡೆದು ಅವರ ಧರ್ಮಕ್ಕೆ ಸೇರಿಕೊಂಡವರಿಂದಲೂ - ಜಾತಿಭೇದವಿಲ್ಲದೆ, ಲಿಂಗಭೇದವಿಲ್ಲದೆ, ವರ್ಗಭೇದವಿಲ್ಲದೆ - ವಚನಗಳು ರಚಿತವಾದವು. ಆದರೆ ಬಿಜ್ಜಳನ ಕೊಲೆಯ ನಂತರ ಬಸವಣ್ಣನ ಅನುಯಾಯಿಗಳನ್ನು ದಿಕ್ಕಾಪಾಲಾಗಿ ಓಡಿಸಿದಾಗ, ಪ್ರಾಯಶಃ ಅನೇಕ ಸಾವಿರ ವಚನಗಳು ನಾಶವಾಗಿರಬಹುದು.
ಬಸವಣ್ಣನ ಕಾಲದಲ್ಲಿಯೂ ಅವನ ತರುವಾಯದಲ್ಲಿಯೂ ಬಸವಧರ್ಮವು ಹೆಚ್ಚು ಅವೈದಿಕವಾಗಿದ್ದಿತೆಂದೂ ಅದರಲ್ಲಿ ವೈದಿಕತೆಯನ್ನು ಮೂಡಿಸಬೇಕೆಂದೂ ಆಮೇಲಿನವರು ಆಗಮಪುರಾಣಾದಿಗಳ ಶ್ಲೋಕಗಳನ್ನು ವಚನಗಳಲ್ಲಿ ಹೇರಳವಾಗಿ ತುರುಕತೊಡಗಿದರು. ಅನಂತರ ವಚನರಚನೆ ನಿಂತಂತೆ ಕಾಣುತ್ತದೆ. ಆದರೆ ಶರಣರ ಜೀವನ ಚರಿತ್ರೆಗಳನ್ನು ಕಾವ್ಯಮಯವಾಗಿ ರಚಿಸುವುದು ಈ ಯುಗದ ಪ್ರವೃತ್ತಿಯಾಗಿ, ಹರಿಹರ, ರಾಘವಾಂಕ, ಭೀಮಕವಿ ಮುಂತಾದವರು ಮಿಂಚಿದ್ದಾರೆ. ಕೈಲಾಸ, ಉಗ್ರಭಕ್ತಿ, ಗುಡಿ ಸಂಸ್ಕೃತಿ, ಮುಂತಾದ ಯಾವ ಪರಿಕಲ್ಪನೆಗಳನ್ನು ವಚನಕಾರರು ಖಂಡಿಸಿದ್ದರೋ ಅವೆಲ್ಲ ಒಂದೊಂದಾಗಿ ಇವರ ಕೃತಿಗಳಲ್ಲಿ ನುಸುಳತೊಡಗಿದವು.
ಸುಮಾರು ಹದಿನಾಲ್ಕನೆಯ ಶತಮಾನದಿಂದೀಚೆಗೆ, ಅದರಲ್ಲೂ ವಿಜಯನಗರದ ಅರಸರ ಪೋಷಣೆಯಿಂದಾಗಿ, ಅನೇಕ ಶರಣರ ಗಮನವು ವಚನಗಳ ಸಂಗ್ರಹ, ಸಂಕಲನ ಮತ್ತು ಸಂಪಾದನೆಗಳೆಂಬ ಮೂರು ದಿಕ್ಕುಗಳಲ್ಲಿ ಹರಿದಿರುವಂತೆ ಕಾಣುತ್ತದೆ. ಇವುಗಳಲ್ಲಿ ಸಕಲ ಪುರಾತನರ ವಚನ ಕಟ್ಟುಗಳ ರಚನೆ ಸಂಗ್ರಹಕ್ಕೆ, ಷಟ್‌ಸ್ಥಲ, ಏಕೋತ್ತರ ಶತಸ್ಥಲ ಕಟ್ಟುಗಳ ರಚನೆ ಸಂಕಲನಕ್ಕೆ, ಶೂನ್ಯ ಸಂಪಾದನೆಗಳು ಸಂಪಾದನೆಗೆ ಉದಾಹರಣೆಗಳೆನಿಸಿವೆ.
ಈಗ ಜರುಗಿದ ಮತ್ತೊಂದು ಕ್ರಿಯೆಯೆಂದರೆ, ಆಗಮ ವಾಕ್ಯಗಳ ಉದ್ಧರಣೆಯಿಂದ ವಚನಗಳನ್ನು ಆಗಮಮುಖಿಯಾಗಿಸುತ್ತ ನಡೆದುದು. ಮತ್ತು ಶರಣಸಿದ್ಧಾಂತವನ್ನು ಸಂಸ್ಕೃತದಲ್ಲಿ ಬರೆಯತೊಡಗಿದುದು. ಸಂಸ್ಕೃತ ಸಿದ್ಧಾಂತ ಶಿಖಾಮಣಿ ಈ ಕಾಲದಲ್ಲಿ ಹುಟ್ಟಿತು. ಈ ಸಂಸ್ಕೃತಕರಣ ಕ್ರಿಯೆ ಕೆಳದಿ ಅರಸರ ಕಾಲದಲ್ಲಿ ಹೆಚ್ಚಾಯಿತು.
ಬಸವೋತ್ತರ ಕಾಲದಲ್ಲಿ ಶರಣರು ಹರಿಸಿದ ಇನ್ನೊಂದು ಬಗೆಯ ಗಮನವೆಂದರೆ, ವಚನರಚನೆ, ಸುಮಾರು ಹದಿಮೂರನೆಯ ಶತಮಾನದ ಕೊನೆಯ ಹೊತ್ತಿಗೆ ಬತ್ತಿಹೋಗಿದ್ದ ವಚನರಚನಾ ನದಿ ತೋಂಟದ ಸಿದ್ದಲಿಂಗ ಶಿವಯೋಗಿಗಳ (೧೫೭೦) ಕಾಲದಲ್ಲಿ ಮತ್ತೆ ಪ್ರವಾಹದೋಪಾದಿಯಲ್ಲಿ ಹರಿಯತೊಡಗಿತು. ಅವರೇ ರಚಿಸಿದ 'ಷಟ್‌ಸ್ಥಲ ಜ್ಞಾನಸಾರಾಮೃತ'ವು ಶಿವ ಮತ್ತು ಶಕ್ತಿಯ ಸ್ವರೂಪ, ಸೃಷ್ಟಿ, ಮೋಕ್ಷ, ಮುಂತಾದ ದಾರ್ಶನಿಕ ಪರಿಕಲ್ಪನೆಗಳನ್ನೂ, ಅಷ್ಟಾವರಣ, ಷಟ್‌ಸ್ಥಲ, ಶಿವಯೋಗ, ಮುಂತಾದುವುಗಳನ್ನೂ ಸ್ಪಷ್ಟಪಡಿಸುತ್ತವೆ. ಅನಂತರ ಅವರ ಶಿಷ್ಯಪರಂಪರೆಗೆ ಸೇರಿದ, ಸ್ವತಂತ್ರ ಸಿದ್ಧಲಿಂಗೇಶ್ವರ, ಘನಲಿಂಗದೇವ, ಗುಮ್ಮಳಾಪುರದ ಸಿದ್ಧಲಿಂಗೇಶ್ವರರು ವಚನಗಳನ್ನು ಬರೆದಿದ್ದಾರೆ. ಅನಂತರದ ವಚನಕಾರರಲ್ಲಿ ಕಾಡಸಿದ್ದೇಶ್ವರ, ಕುಷ್ಟಗಿ ಕರಿಬಸವೇಶ್ವರ, ಗುರುಸಿದ್ಧದೇವ, ಜಕ್ಕಣಯ್ಯ, ದೇಶಿಕೇಂದ್ರ ಸಂಗನ ಬಸವಯ್ಯ, ಬಾಲಸಂಗಯ್ಯ ಮುಮ್ಮಡಿ ಕಾರ್ಯೇಂದ್ರ, ಷಣ್ಮುಖಸ್ವಾಮಿ, ಸಿದ್ಧವೀರದೇಶಿಕೇಂದ್ರ, ಸಿದ್ಧಮಲ್ಲಪ್ಪ, ಮುಂತಾದವರು ಮುಖ್ಯರು.
ಹೀಗೆ ಹನ್ನೆರಡನೆಯ ಶತಮಾನ ಮೊದಲು ಮಾಡಿ, ಸುಮಾರು ೩೫೦ ಶರಣ-ಶರಣೆಯರು ಬರೆದ ಬಹುಸಂಖ್ಯೆಯ ವಚನಗಳಲ್ಲಿ ಪ್ರಾಯಶಃ ಎಷ್ಟೋ ಕಳೆದು ಹೋಗಿ, ಸಧ್ಯಕ್ಕೆ ಸಿಕ್ಕಿರುವುದು ಸುಮಾರು ಇಪ್ಪತ್ತು ಸಾವಿರ ಮಾತ್ರ ಇವರಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳ ನಂತರದ ವಚನಕಾರರೆಲ್ಲ ಮಠಾಧೀಶರೆಂಬುದು ಗಮನಾರ್ಹ. ಹನ್ನೆರಡನೆಯ ಶತಮಾನದ ವಚನಕಾರರು ಮಾತ್ರ ಸಮಾಜದ ವಿವಿಧ ಸ್ತರಗಳಿಗೆ ಸೇರಿದವರಾಗಿದ್ದರು. ಅವರಲ್ಲಿ ಬಸವಣ್ಣ, ಚೆನ್ನಬಸವಣ್ಣ, ಮುಂತಾದ ಮೇಲಿನ ಸ್ತರದವರಿದ್ದಂತೆ ಕುಂಬಾರ ಗುಂಡಯ್ಯ, ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ಉರಿಲಿಂಗ ಪೆದ್ದಿ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಮುಂತಾದ ಕೆಳ ಸ್ತರದವರೂ ಇದ್ದರು. ಎಲ್ಲ ಸ್ತರದ ಪುರುಷರಿದ್ದಂತೆ ಎಲ್ಲ ಸ್ತರದ ಸ್ತ್ರೀಯರೂ ಇದ್ದರು. ಧಾರ್ಮಿಕ ಮತ್ತು ಸಾಮಾಜಿಕ ನ್ಯಾಯ ತರಬೇಕೆಂಬ ಕ್ರಾಂತಬುದ್ದಿಗೆ ಬಾಯಾದವು ವಚನಗಳು.
ಇವರೆಲ್ಲಾ ವಚನ ಸಾಹಿತ್ಯವನ್ನು ಸಮೃದ್ಧಗೊಳಿಸಿದವರು ಎಂಬ ಮಾತೇನೋ ನಿಜ. ಆದರೆ ಇವರಲ್ಲಿ ಕೆಲವರು ಬಸವಣ್ಣನ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅದಕ್ಕೊಂದು ರೂಪು ಮತ್ತು ನಿರ್ದೇಶನವನ್ನೂ ಬಲ ಮತ್ತು ಹರವನ್ನೂ ಕೊಟ್ಟು ಕೆಲ ದಿನಗಳ ಮಟ್ಟಿಗಾದರೂ ಯಶಸ್ವಿಯಾಗಿ ಮಾಡಿದರು. ಮತ್ತೆ ಕೆಲವರು ಬಸವೋತ್ತರ ಯುಗದಲ್ಲಿ ಬಸವ ತತ್ತ್ವಗಳನ್ನು ತಂತಮ್ಮ ವಚನಗಳ ಮೂಲಕ ಹರಡಿದರು ಅಥವಾ ಕಾರ್ಯಗತ ಮಾಡಿದರು. ಇವರೆಲ್ಲರ ವಚನಗಳನ್ನು ಓದಿದರೆ ಪ್ರತಿಯೊಬ್ಬರೂ ತಮ್ಮ ತಮ್ಮ ಕಾಣಿಕೆಯನ್ನೂ - ಅದು ಎಷ್ಟೇ ಸಣ್ಣದಿದ್ದರೂ - ಕೊಟ್ಟಿದ್ದಾರೆಂಬುದನ್ನು ಗುರುತಿಸಬಹುದು. ಮತ್ತೆ ಕೆಲವರು ಬಸವಾದಿ ಚಿಂತಕರ ತತ್ತ್ವಗಳನ್ನು ತಿದ್ದುಪಡಿಮಾಡಿ, ಅವುಗಳ ಅರ್ಥವ್ಯಾಪ್ತಿ ಮತ್ತು ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿದ್ದಾರೆನ್ನಿಸುತ್ತದೆ. ಕಾಯಕ ತಮ್ಮ ಬಸವಣ್ಣನ ವಚನಗಳಲ್ಲಿ ಅಸ್ಪಷ್ಟವಾಗಿದ್ದರೆ, ನುಲಿಯ ಚಂದಯ್ಯ, ತುರುಗಾಹಿ ರಾಮಣ್ಣ, ಆಯ್ದಕ್ಕಿ ಲಕ್ಕಮ್ಮ, ಮುಂತಾದವರ ವಚನಗಳಲ್ಲಿ ವಿವರಗಳನ್ನು ಪಡೆದುಕೊಂಡು, ಹೆಚ್ಚು ಸ್ಪುಟವಾಗಿದೆ. ದನ ಕಾಯುವ ಕಾಯಕವೂ ಒಂದು ರೀತಿಯ ಪೂಜೆ ಎಂಬುದು ತುರುಗಾಹಿ ರಾಮಣ್ಣನಲ್ಲಿ ಮಾತ್ರ ಸ್ಪಷ್ಟವಾಗಿ ಕಾಣುವ ಸಿದ್ಧಾಂತ, ಲಿಂಗ ಕೆಳಗೆ ಬಿದ್ದರೂ ಕಾಯಕ ನಿಲ್ಲಿಸದ ನುಲಿಯ ಚಂದಯ್ಯನ ಕಾಯಕ ನಿಷ್ಠೆ ಅನನ್ಯ. ಅರ್ಥವಿಲ್ಲದ ವ್ರತನೇಮಗಳು ಧರ್ಮವೂ ಅಲ್ಲ, ಧರ್ಮದ ಅವಿಭಾಜ್ಯ ಅಂಗವೂ ಅಲ್ಲ, ಅವಿಲ್ಲದೆಯೂ ಅರ್ಥಪೂರ್ಣ ಧರ್ಮ ಸಾಧ್ಯ ಎಂಬ ದಿಟ್ಟ ನಿಲವು ಅಕ್ಕಮ್ಮನದು; ಜೀವಾತ್ಮದ ಬಗೆಗೆ ಲಿಂಗಾಯತ ಸಿದ್ಧಾಂತವನ್ನು ತಿಳಿದುಕೊಳ್ಳಬೇಕೆನ್ನುವವರು ಅರಿವಿನ ಮಾರಿತಂದೆಗಳ ವಚನಗಳನ್ನು ಓದಬೇಕು. ಸೃಷ್ಟಿಯ ಬಗೆಗೆ ವಚನಕಾರರ ನಿಲವನ್ನು ಪ್ರತಿನಿಧಿಸುವವರಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿ ಅಗ್ರಗಣ್ಯರು. ಒಟ್ಟಿನಲ್ಲಿ ಇವರನ್ನು ವಚನಕಾರರಂತೆ ನೋಡುವುದರ ಜೊತೆಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಬಸವ ಚಳುವಳಿಯನ್ನು ಜೀವಂತವಾಗಿಟ್ಟವರು ಎಂಬಂತೆ ನೋಡುವುದು ಹೆಚ್ಚು ಫಲಕಾರಿ.
ಎಲ್ಲ ಧರ್ಮಗಳಿಗೂ ತಾತ್ವಿಕ ಸಿದ್ಧಾಂತಗಳ ನೆಲೆಗಟ್ಟು ಇರುತ್ತದೆ. ನಾವು ಪೂಜಿಸುವ ದೈವದ ಸ್ವರೂಪ, ಕಾರ್ಯ, ಉದ್ದೇಶ, ಮಾನವನ ಸ್ವರೂಪ, ಸಾಮರ್ಥ್ಯ ಮತ್ತು ಮಿತಿ, ಧಾರ್ಮಿಕ ಜೀವನದ ಉದ್ದೇಶ, ಪರಲೋಕ, ಪ್ರಪಂಚ (ಸೃಷ್ಟಿ) – ಇವುಗಳ ಬಗೆಗಿನ ಸಿದ್ದಾಂತಗಳೇ ತಾತ್ವಿಕ ಸಿದ್ಧಾಂತಗಳು. ಕೆಲವು ಧರ್ಮಗಳಲ್ಲಿ ಈ ಸಿದ್ಧಾಂತಗಳು ಗ್ರಂಥರೂಪದಲ್ಲಿ (ಶಾಸ್ತ್ರ ಪುರಾಣಗಳ ರೂಪದಲ್ಲಿ ವ್ಯಕ್ತವಾಗಿದ್ದರೆ, ಕಾಡು ಜನಾಂಗದ ಧರ್ಮಗಳಲ್ಲಿ ಅವು ಕೇವಲ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವ ದಂತಕತೆಗಳ ರೂಪದಲ್ಲಿರುತ್ತವೆ. ಶರಣರು ತಮ್ಮ ತಾತ್ವಿಕ ಸಿದ್ಧಾಂತಗಳನ್ನು ಪುರಾಣದ ಭಾಷೆಯಲ್ಲಿ ವ್ಯಕ್ತಪಡಿಸದೆ, ನೇರವಾದ, ಸರಳವಾದ ತಾತ್ವಿಕ ಭಾಷೆಯಲ್ಲೇ ವ್ಯಕ್ತಪಡಿಸಿದ್ದಾರೆ. ಅವರ ಆ ಭಾಷೆಗೆ ವಚನ ಎಂದು ಹೆಸರು. ಅವರ ತಾತ್ವಿಕ ವಿಚಾರಗಳಲ್ಲಿ - ಕೆಲವು ಅಮುಖ್ಯ ವಿಷಯಗಳನ್ನು ಹೊರತುಪಡಿಸಿದರೆ - ಐಕಮತ್ಯವಿದೆ ಎನ್ನಬಹುದು.
[1] ಈ ತರಹದ ಸಂಖ್ಯೆಯ ವಿವರ: ಸವಸ-1/124 :- ಸಮಗ್ರ ವಚನ ಸಂಪುಟ-1, ವಚನ ಸಂಖ್ಯೆ-124 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
ಆರ್ಥಿಕ ಚಿಂತನೆ | ವಚನ ಸಾಹಿತ್ಯ Vachana Sahitya |