Previous ನೇಮಗಳು; ಅರ್ಥವಿಲ್ಲದ ನೇಮಗಳು ಷಟಸ್ಥಲಕ್ಕೆ ಹೊರಗು ವ್ರತಗಳು; ವ್ರತಗಳು ಹೇಗಿರಬೇಕು Next

ಶೀಲ ಎಂದರೇನು? ಶೀಲಗಳು ಹೇಗಿರಬೇಕು

*

ಲಿಂಗಾಯತರಲ್ಲಿ ಶೀಲ ಎಂದರೇನು? ಶೀಲಗಳು ಹೇಗಿರಬೇಕು?

ಮನುಷ್ಯನು ಪರಮಾತ್ಮನನ್ನು ಒಬ್ಬ ಮಹಾನ್ ಶಕ್ತಿಯುಳ್ಳ ವ್ಯಕ್ತಿಯಂತೆ ಕಲ್ಪಿಸಿಕೊಂಡು, ಅವನಿಗೆ ಎಲ್ಲ ರೀತಿಯ ಮಾನವಗುಣಗಳನ್ನು ಅರೋಪಿಸುವುದುಂಟು. ಆದರೆ ಕೆಲವು ವೇಳೆ ಈ ಮಾನವತ್ವಾರೋಪ ಅತಿರೇಕಕ್ಕೆ ಹೋಗುವುದು ಜನರ ವ್ರತ ಶೀಲಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಉದಾಹರಣೆಗೆ ಶಿವನಿಗೆ ಹಾಲು ಇಷ್ಟವೆಂದು ಹಾಲು ನೈವೇದ್ಯ ಮಾಡುವುದು; ಪೂಜೆಗೆ ಬೇಕಾಗುವ ಹೂವನ್ನು ಯಾರೂ ನೋಡದಂತೆ ತರುವುದು, ಯಾರನ್ನು ಮುಟ್ಟಿಸಿಕೊಳ್ಳದೆ ಇರುವುದು, ಶರಣರು ಇವನ್ನೆಲ್ಲ ಖಂಡಿಸಿದ್ದಾರೆ; ಅಲ್ಲದೆ ನಿಜವಾದ ಶೀಲವೆಂದರೇನು? ನಿಜವಾದ ಶೀಲವಂತ ಹೇಗಿರಬೇಕೆಂದು ತಿಳಿಸಿ ಹೇಳಿದ್ದಾರೆ.

ತಪವೆಂಬುದು ಬಂಧನ, ನೇಮವೆಂಬುದು ತಗಹು,
ಶೀಲವೆಂಬುದು ಸೂತಕ, ಭಾಷೆಯೆಂಬುದು ಪ್ರಾಣಘಾತಕ.
ಈ ಚತುರ್ವಿಧದೊಳಗೆ ಇಲ್ಲ,
ಕೂಡಲಚೆನ್ನಸಂಗಯ್ಯ ಏಕೋಗ್ರಾಹಿ. - ಚೆನ್ನಬಸವಣ್ಣ -೩/೫೮೦ [1]

ವಂಚನೇ, ಕೇಡು ಮಾಡದಿರುವುದೇ ಶೀಲ

ಶೀಲ ಶೀಲವೆಂದು ಗರ್ವಿಸಿ ನುಡಿವುತಿಪ್ಪರು, ಶಿಲವಾವುದೆಂದರಿಯರು.
ಇದ್ದುದ ವಂಚನೆಯ ಮಾಡದಿಪ್ಪುದೆ ಶೀಲ,
ಇಲ್ಲದಿದ್ದುದಕ್ಕೆ ಕಡನ ಬೇಡದಿಪ್ಪುದೆ ಶೀಲ,
ಪರಧನ ಪರಸತಿಗೆಳಸದಿಪ್ಪುದೆ ಶೀಲ,
ಪರದೈವ ಪರಸಮಯಕ್ಕೆಳಸದಿಪ್ಪುದೆ ಶೀಲ,
ಗುರುನಿಂದೆ ಜಂಗಮನಿಂದೆಯ ಕೇಳದಿಪ್ಪುದೆ ಶೀಲ,
ಕೂಡಲಚೆನ್ನಸಂಗನ ಶರಣರ ಬರವಿಂಗೆ
ಮುಯ್ಯಾಂತು ಪರಿಣಾಮಿಸ ಬಲ್ಲರೆ ಅಚ್ಚ ಶೀಲ - ಸಕಳೇಶ ಮಾದರಸ - /೧೭೬ [1]

ಕೂಪಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ?
ತನು ಕರಗದೆ, ಮನ ಮುಟ್ಟದೆ, ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ,
ಸುಖ ದು:ಖವೆಂಬ ಉಭಯವರಿಗಾಣದೆ,
ಅಂದಂದಿಗೆ ಆಯು ಸಂದಿತ್ತೆಂದಿರಬೇಕು.
ಆ ಗುಣ ಶಿವಲಿಂಗ ಖಂಡಿತನೇಮ, ಈ ಸಂಗವೆ ಎನಗೆ ಸುಖ;
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಕೂಟ - ೫/೪೭೧ [1]

ಭವಿ ಮಣ್ಣಲಿ ಮಾಡಿದ ಮಡಕೆಯ ಕಳೆವುದು ಶೀಲವೆ ?
ಅಲ್ಲಲ್ಲಿ ಮೆಟ್ಟಿದ ಭೂಮಿಯ ಕಳೆವುದು ಶೀಲವೆ?
ಕೆರೆ ಬಾವಿ ತೊರೆಯ ತೊರೆವುದು ಶೀಲವೆ ?
ಅಲ್ಲಲ್ಲಿಗೆ ಒಸರುವ ಉದಕವ ತೊರೆವುದು ಶೀಲವೆ ?
ಲಿಂಗಾರ್ಪಿತ ಮಾಡಿದ ಪ್ರಸಾದವ ಭವಿ ನೋಡಲಿಕ್ಕೆ ಕೊಂಡರೆ ಭಾಷೆಗೆ ವ್ರತಗೇಡಿ,
ಕೊಳ್ಳದಿದ್ದರೆ ಪ್ರಸಾದದ್ರೋಹಿ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಸಂಕಲ್ಪ ವಿಕಲ್ಪದಿಂದ ಕೆಟ್ಟಿತ್ತು ಶೀಲ. -೩/೫೮೧ [1]

ಭಕ್ತರ ಮಠಕ್ಕೆ ಬಂದು ಒಳಹೊರಗೆಂಬುದು ಶೀಲವೆ ?
ಎನ್ನ ಲಿಂಗಕ್ಕೆ ಒಳ್ಳಿಹ ಅಗ್ಘಣಿಯ ತನ್ನಿ ಎಂಬುದು ಶೀಲವೆ ?
ಎನ್ನ ಲಿಂಗಕ್ಕೆ ಒಳ್ಳಿಹ ಪುಷ್ಪವ ತನ್ನಿ ಎಂಬುದು ಶೀಲವೆ ?
ಎನ್ನ ಲಿಂಗಕ್ಕೆ ಒಳ್ಳಿಹ ಓಗರ ಮಾಡಿ ಎಂಬುದು ಶೀಲವೆ ?
ಪಂಚೇಂದ್ರಿಯ ಸಪ್ತಧಾತು ಅರಿಷಡ್ವರ್ಗವ ಕೊಂದಾತನು
ಕೊಡಲಚೆನ್ನಸಂಗನಲ್ಲಿ ಆತನೆ ಶೀಲವಂತನು. -೩/೫೮೨ [1]

ಶೀಲವಾದಡೆ ಪ್ರಪಂಚು ನಾಸ್ತಿಯಾಗಿರಬೇಕು,
ಸೀಮೆಯಾದಡೆ ಪಂಚೇಂದ್ರಿಯ ನಾಸ್ತಿಯಾಗಿರಬೇಕು,
ಸೀಮೆಯಾದಲ್ಲದೆ ಭಕ್ತನೆನಿಸಬಾರದು,
ಶೀಲವಾದಲ್ಲದೆ ಶರಣನೆನಿಸಬಾರದು,
ಶೀಲಕ್ಕೆ ಭವಿನಾಸ್ತಿ, ಸೀಮೆಗೆ ಭವಂ ನಾಸ್ತಿ,
ಈ ದ್ವಿವಿಧನಾಸ್ತಿಯಾದಲ್ಲದೆ ಕೂಡಲಚೆನ್ನಸಂಗನಲ್ಲಿ
ಶೀಲವಂತನೆಂದೆನಿಸಬಾರದು. -೩/೫೮೩

ಶೀಲ ಸಂಬಂಧವನೆಂತು ಮಾಡುವರಯ್ಯ,
ಮನದಂತುವನರಿಯಬಾರದೆ ?
ಕಾಯದ ಕಳವಳವು ತಮತಮಗೆ ತಟತಟ ತಾಗುತ್ತಿರಲು
ಶೀಲ ಶೀಲದಂತೆ, ತಾವು ತಮ್ಮಂತೆ, ಲಿಂಗ ಲಿಂಗದಂತೆ,
ಮನದೊಳಗೆ ಎನಗೆ ತನಗೆಂಬ ಭಾವ ಬಿಡದನ್ನಕ್ಕ ಶೀಲ ಮತ್ತೆಲ್ಲಿಯದೊ ?
ಅಷ್ಟಮದವಳಿದು ಷಡ್ವರ್ಗವರತಡೆ,
ಕೂಡಲಚೆನ್ನಸಂಗನಲ್ಲಿ ಸುಶೀಲನೆಂಬೆನು. -೩/೫೮೪ [1]

ಶೀಲವಂತರು ಶೀಲವಂತರೆಂದೆಂಬರು,
ಶೀಲ ಸಂಬಂಧದ ಹೊಲಬನರಿಯದ ಭ್ರಮಿತ ಪ್ರಾಣಿಗಳು ನೀವು ಕೇಳಿ ಭೋ
ಕಾಮವೆಂಬುದೊಂದು ಪಾಪಿ, ಮದವೆಂಬುದೊಂದು ದ್ರೋಹಿ,
ಮತ್ಸರವೆಂಬುದೊಂದು ಹೊಲೆಯ,
ಕ್ರೋಧವೆಂಬುದೊಂದು ಕೈಸೂನೆಗಾರ,
ಮನವ್ಯಾಪಕಂಗಳು ಭವಿ.
ಇಂತಿವನರಿದು ಮರೆದು ಹರವಸಂಬೋಗಿ ಹೊಯಿ ಹಡೆದಂತಿದ್ದರೆ
ಕೂಡಲಚೆನ್ನಸಂಗನಲ್ಲಿ ಅವರ ಲಿಂಗವಂತರೆಂಬೆ. -೩/೫೮೫ [1]

ಅಗ್ಘಣಿ ಮೀಸಲಾಗಬೇಕೆಂಬುದು ಶೀಲವೆ ?
ಪುಷ್ಪ ಮೀಸಲಾಗಬೇಕೆಂಬುದು ಶೀಲವೆ ?
ಇವು ಶೀಲವಲ್ಲ ಕಾಣಿರಯ್ಯಾ !
ಪಂಚೇಂದ್ರಿಯ ಷಡ್ವರ್ಗ ಸಪ್ತಧಾತು ಅಷ್ಟಮದಂಗಳ ಕಳೆಯಬಲ್ಲಡೆ
ಕೂಡಲಚೆನ್ನಸಂಗನಲ್ಲಿ ಅಚ್ಚಶೀಲ. -೩/೫೮೬

ನದಿ ಕೂಪ ತಟಾಕ ಜಲದಲ್ಲಿ ಕನ್ನವನ್ನಿಕ್ಕಿ ಉದಕವ ತಂದು,
ಮಜ್ಜನಕ್ಕೆರೆವವರು ಸುಯಿಧಾನಿಗಳಪ್ಪರೆ ?
ಪಾಕದಲ್ಲಿ ಭವಿಪಾಕ ಪರಪಾಕವೆಂದು ಭುಂಜಿಸುವ
ಉದರಪೋಷಕರೆಲ್ಲಾ ಶೀಲವಂತರಪ್ಪರೆ ? ಅಲ್ಲ.
ಆಸೆಯರತು, ವ್ಯಸನ ಬೆಂದು, ವ್ಯಾಪ್ತಿಗಳೆಲ್ಲವು ತಲ್ಲೀಯವಾಗಿ,
ತನುಗುಣಾದಿಗಳೆಲ್ಲಾ ಸಮಾಪ್ತಿಯಾದಡೆ
ಕೂಡಲಚೆನ್ನಸಂಗನಲ್ಲಿ ಶೀಲವಂತರೆಂಬೆ. -೫/೫೮೭ [1]

ಶೀಲವಂತರು ಶೀಲವಂತರೆಂದೆಂಬರು ನಾವಿದನರಿಯೆವಯ್ಯ.
ಅಂಗನೆಯರ ಅಧರಪಾನವು
ತನ್ನ ಉದರವ ಹೊಗುವನ್ನಕ್ಕ ಶೀಲವೆಲ್ಲಿಯದೊ ?
ಈಷಣತ್ರಯವೆಂಬ ಸೊಣಗ ಬೆಂಬತ್ತಿ ಬರುತ್ತಿರಲು ಶೀಲವೆಲ್ಲಿಯದೊ ?
ಹೆರಸಾರಿ ಮನವು ಮಹದಲ್ಲಿ ನಿಂದರೆ ಶೀಲ,
ಪರಿಣಾಮ ನೆಲೆಗೊಂಡರೆ ಶೀಲ.
ಇದು ಕಾರಣ ಕೂಡಲಚೆನ್ನಸಂಗನಲ್ಲಿ ಶೀಲವಂತರಪೂರ್ವ -೩/೫೮೮ [1]

ಶೀಲವಂತರೆಲ್ಲಾ ಶೀಲವಂತರಯ್ಯಾ
ಭಾಷೆವಂತರೆಲ್ಲಾ ಭಾಷೆವಂತರಯ್ಯಾ
ವ್ರತವಂತರೆಲ್ಲಾ ವ್ರತವಂತರಯ್ಯಾ
ಸತ್ಯವಂತರೆಲ್ಲಾ ಸತ್ಯವಂತರಯ್ಯಾ
ನೇಮವಂತರೆಲ್ಲಾ ನೇಮವಂತರಯ್ಯಾ
ಕೂಡಲಚೆನ್ನಸಂಗಮದೇವಯ್ಯಾ
ಸಂಗನಬಸವಣ್ಣನೊಬ್ಬನೆ ಲಿಂಗವಂತ. -೩/೫೮೯ [1]

ಬಹುಜಲವಂ ಬಿಟ್ಟಲ್ಲಿ ಅದು ಶೀಲವಲ್ಲ.
ಪರಪಾಕ ಮುಂತಾದ ದ್ರವ್ಯವ ಬಿಟ್ಟಲ್ಲಿ ಶೀಲವಂತನಲ್ಲ.
ಅದೆಂತೆಂದಡೆ ;
ಅದು ಮನದ ಅರೋಚಕ, ಆ ಗುಣ ಜಗದ ಮಚ್ಚು,
ಸರ್ವರ ಭೀತಿ, ದ್ರವ್ಯದ ಒದಗು ; ಈ ಗುಣ ವ್ರತಕ್ಕೆ ಸಲ್ಲ.
ವ್ರತವಾವುದೆಂದಡೆ ;
ಪರಾಪೇಕ್ಷೆಯ ಮರೆದು, ಪರಸತಿಯ ತೊರೆದು,
ಗುರುಲಿಂಗಜಂಗಮದಲ್ಲಿ ತಾಗು ನಿರೋಧಮಂ ತಾಳದೆ,
ಹೆಣ್ಣು ಹೊನ್ನು ಮಣ್ಣಿಗಾಗಿ ತಪ್ಪಿ ನುಡಿಯದೆ,
ಒಡೆಯರು ಭಕ್ತರಲ್ಲಿ ತನ್ನ ಕುರಿತ ಗೆಲ್ಲ ಸೋಲಕ್ಕೆ ಹೋರದೆ,
ತನಗೊಂದು ಬೇಕೆಂದು ಅನ್ಯರ ಕೈಯಲ್ಲಿ ಹೇಳಿಸದೆ,
ಬಹು ಢಾಳಕತನವಂ ಬಿಟ್ಟು ಸರ್ವರ ಆತ್ಮ ಚೇತನವನರಿತು,
ತಾ ಮರೆದುದ ಅರಿದು ಎಚ್ಚತ್ತು ನೋಡಿ,
ಅಹುದಾದುದ ಹಿಡಿದು ಅಲ್ಲದುದ ಬಿಟ್ಟು, ಬಹುದುಃಖಮಂ ಮರೆದು
ಇಂತೀ ಸರ್ವಗುಣಸಂಪನ್ನನಾಗಿ ಆತ್ಮಂಗೆ ಅರಿವಿನ ಶೀಲವ ಮಾಡಿ,
ಕಾಯಕ್ಕೆ ಮರವೆ ಇಲ್ಲದ ಆಚಾರವನಂಗೀಕರಿಸಿ,
ಇಂತೀ ಕಾಯ, ಮನ, ಅರಿವಿನ ಆಚಾರದಲ್ಲಿ ನಿಂದಲ್ಲಿ ನಿಂದು,
ಏತಕ್ಕೂ ಮರವೆಯಿಲ್ಲದೆ ಸರ್ವ ಅವಧಾನಂಗಳಲ್ಲಿ
ಹೊರಗಣ ಮಾಟ ಒಳಗಣ ಕೂಟ ಉಭಯ ಶುದ್ಧವಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಜಿಡ್ಡು ಹರಿಯಿತ್ತು. - ಅಕ್ಕಮ್ಮ ೫/೫೨೮ [1]

ಮಣ್ಣಮಡಕೆಯ ಮುಸುಕಿಟ್ಟು ಗನ್ನದಲ್ಲಿ ನೀರು ತುಂಬಿ,
ಇದಿರಿಗೆ ಬಿನ್ನಾಣವ ತೋರುತ ಇಂತೀ ಬಣ್ಣ ಬಚ್ಚಣೆಯ ಶೀಲವ ನಾನೊಪ್ಪೆ.
ಇದಿರು ಕಂಡಲ್ಲಿ ಹಾಕಿ, ಆರೂ ಕಾಣದಡೆ ತಾನೊಪ್ಪಿಕೊಂಡಿಪ್ಪ
ಭಂಡನ ಶೀಲ ಮೂರು ಕುಂಡೆಯೊಳಗಾಯಿತ್ತು.
ಇದರಂಗವ ಬಿಟ್ಟು, ಮನ ಲಿಂಗದಲ್ಲಿ ನಿಂದು, ಧನ ಜಂಗಮದಲ್ಲಿ ಸಂದು,
ಬಂಧನವಿಲ್ಲದೆ ನಿಂದ ನಿಜೈಕ್ಯನ ಅಂಗವೆ ಸರ್ವಾಂಗಶೀಲ.
ಆತ ಮಂಗಳಮಯಮೂರುತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. - ಅಕ್ಕಮ್ಮ -೫/೫೪೦ [1]

ಎಲೋ ಮಾನವ ಕೇಳೆಲೊ,
ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೊ: ಹಣ್ಣುಗಳು ಸಣ್ಣ ಜಾತಿಯ ಎಂಜಲು,
ಹಾಲು ಕರುವಿನ ಎಂಜಲು,
ಮೊಸರು ಗೊಲ್ಲತಿಯ ಎಂಜಲು,
ಅಕ್ಕಿ, ಗೋದಿ, ಬೇಳೆ, ಬೆಲ್ಲಗಳು ನೊಣದ ಎಂಜಲು,
ನೀರು ಮೀನು ಕಪ್ಪೆಗಳ ಎಂಜಲು,
ಉಪ್ಪು ಉಪ್ಪಾರನ ಎಂಜಲು,
ಎಣ್ಣೆ ಸರ್ವಮಾನವರ ಎಂಜಲು,
ಸಕಲಪದಾರ್ಥವು ಅನಂತ ಹುಳುಗಳ ಎಂಜಲು.
ಇಂತಹ ಎಂಜಲವು ಎಂದು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ,
ಮಾಡುವ ದುರಾಚಾರವ ಆರು ಬಣ್ಣಿಸಬಹುದುರಿ
ಅರಿವು ಇಲ್ಲದವರು ಅರಮನೆಗೆ ಮಾಡಿದರು,
ಭಕ್ತಿಯಿಲ್ಲದವರು ತಮ್ಮ ಗುರುಲಿಂಗಜಂಗಮಕ್ಕೆ ಮಾಡಿದರು.
ಇಂತಪ್ಪ ಸರ್ವರ ಎಂಜಲು ತಿಂದು
ಶಿವಲಿಂಗವ ಧರಿಸಿಕೊಂಡು, ಶಿವಭಕ್ತರೆಂದು ಹೇಳಿಸಿ,
ಕಾಲಿಗೆ ಬಂದಂತೆ ಕುಣಿದು,
ಬಾಯಿಗೆ ಬಂದಂತೆ ಅಂದು,
ಮನಬಂದಂತೆ ಸ್ತ್ರೀಸಂಗದಲ್ಲಿ ಆಚರಿಸುವ
ಭ್ರಷ್ಟ ಹೊಲೆಮಾದಿಗರಿಗೆ ಶೀಲವು ಎಲ್ಲಿಹುದು?
ಆಚರಣೆ ಎಲ್ಲಿಹುದುರಿ ಕುಲವೆಲ್ಲಿಹುದು?
ಇಂತಪ್ಪ ಮೂಳಹೊಲೆಯರ ಮೂಗ ಕೊಯ್ದು
ಪಡಿಹಾರಿ ಉತ್ತಣ್ಣಗಳ ಪಾದುಕದಿ ಹೊಡೆ ಎಂದಾತ ನಮ್ಮ ಅಂಬಿಗ ಚೌಡಯ್ಯ. - ಅಂಬಿಗರ ಚೌಡಯ್ಯ. -/೭೭ [1]

ಶೀಲ ಶೀಲವೆಂದು ಗರ್ವಿಕೃತದಲ್ಲಿ ನುಡಿವ
ಉದ್ದೇಶ ಪ್ರಾಣಿಗಳೆಲ್ಲರೂ ಅನಂತಶೀಲರೆ ?
ಹೂ ಬಾವಿ ಮಠಕ್ಕೆ ಸೀಮೆಯ ಮಾಡೂದು ಶೀಲವೇ ?
ಮನಕ್ಕೆ ಸೀಮೆಯ ಮಾಡೂದು ಶೀಲವಲ್ಲದೆ,
ಹುಸಿಯ ಕಳೆವುದು ಶೀಲವಲ್ಲದೆ, ಭಕ್ತರ ಕಳೆವುದು ಶೀಲವೆ?
ಲಿಂಗಪ್ರಾಣವ ಮಾಡೂದು ಶೀಲವಲ್ಲದೆ,
ಪ್ರಾಣಲಿಂಗವ ಮಾಡೂದು ಶೀಲವೆ?
ಇಂತೆಲ್ಲ ಶೀಲರು ದುಶ್ಶೀಲರು.
ಸಕಳೇಶ್ವರದೇವಾ, ನಾನೇನೆಂದರಿಯೆ, ನೀನಿರಿಸಿದಂತಿರ್ಪೆ. - ಸಕಳೇಶ ಮಾದರಸ /೪೮೦ [1]

ಶೀಲ ಶೀಲವೆಂದು ನುಡಿವ ಉದ್ದೇಶಪ್ರಾಣಿಗಳು ಎಲ್ಲರೂ ಅನಂತಶೀಲರು,
ಅರಿವಿನ ನಿರ್ಣಯವನರಿಯರು.
ಹೊರಗೆ ಬಳಸುವರು, ಒಳಗಣ ಶುದ್ಧಿಯನರಿಯರು.
ನೇಮಶೀಲವೆಂದು ಹಿಡಿವರು, ನಿರ್ಣಯವನರಿಯರಾಗಿ,
ಕೂಡಲಚೆನ್ನಸಂಗಯ್ಯನಲ್ಲಿ ಉದ್ದೇಶಪ್ರಾಣಿಗಳು. /೩೪೬ [1]

ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು.
ಶೀಲದ ಹೊಲಬನಾರೂ ಅರಿಯರಲ್ಲ.
ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ ನೀರ ಬಳಸದಿರ್ದಡೆ ಶೀಲವೆ ?
ಕೊಡಕ್ಕೆ ಪಾವಡವ ಹಾಕಿ
ಚಿಲುಮೆಯ ಶೀತಳವ ತಂದಡೆ ಶೀಲವೆ ?
ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ ?
ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ ?
ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು
ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ ?
ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ ? ಅಲ್ಲಲ್ಲ.
ಭವಿಕಾಣಬಾರದಂತಿರ್ದಡೆ ಶೀಲವೆ ? ಅಲ್ಲಲ್ಲ.
ಅದೇನು ಕಾರಣವೆಂದೊಡೆ : ಇಂತಿವೆಲ್ಲವು ಹೊರಗಣ ವ್ಯವಹಾರವು.
ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ ಭವಿಯ ಕಳೆಯಲಿಲ್ಲ.
ಮಾಯಾಮೋಹವೆಂಬ ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಡಲಿಲ್ಲ.
ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ ಕೆರೆ ಬಾವಿಗಳ ನೀರ ನೀಗಲಿಲ್ಲ.
ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು
ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ.
ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ.
ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ
ಚಿತ್ಕೋಣವೆಂಬ ಚಿಲುಮೆಯಲ್ಲಿ ಚಿದಾಮೃತವೆಂಬ ಶೀತಳವ ತಂದು
ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ.
ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು
ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ
ಭವಬಂಧನಂಗಳು ಹಿಂಗಲಿಲ್ಲ, ಜನನಮರಣಂಗಳು ಜಾರಲಿಲ್ಲ,
ಸಂಸಾರದ ಮಾಯಾಮೋಹವ ನೀಗಲಿಲ್ಲ.
ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ : ಹುತ್ತದೊಳಗಣ ಹಾವ ಕೊಲುವೆನೆಂದು ಮೇಲೆ ಹುತ್ತವ ಬಡಿದ
ಅರೆಮರುಳನಂತಾಯಿತ್ತು ನೋಡಾ ಅಖಂಡೇಶ್ವರಾ. - ಷಣ್ಮುಖಸ್ವಾಮಿ /೮೫೪ [1]

ಶೀಲ ಶೀಲವೆಂದೇನೊ, ತನುಮನಧನವೆಂಬ ತ್ರಿಪುರವಿರಲು ?
ಆ ತ್ರಿಪುರಸಂಹಾರವ ಮಾಡಿ ಭಸ್ಮಾಂಗಿಯಾದಲ್ಲದೆ
ಶೀಲವಿಲ್ಲ ಕಾಣಾ ಗುಹೇಶ್ವರಾ. -೨/೧೫೪೪

ಶೀಲ ಶೀಲವೆಂದೇನೋ ?
ಮಾಡಿದ ಮನೆ, ಹೂಡಿದ ಒಲೆ, ಅಟ್ಟುಂಬ ಮಡಕೆ, ಕಟ್ಟಿದ ಕೆರೆ,
ಬಿತ್ತಿದ ಕೆಯಿ ಶೀಲವಲ್ಲದೆ ತನ್ನ ಮನಕ್ಕೆ ಶೀಲವಿಲ್ಲ.
ಶೀಲವೆಂತೆಂದರೆ :
ಲಿಂಗವು ಬಂದು ಮನವನಿಂಬುಗೊಂಬುದೇ ಶೀಲ.
ಜಂಗಮ ಬಂದು ಧನವನಿಂಬುಗೊಂಬುದೇ ಶೀಲ.
ಪ್ರಸಾದ ಬಂದು ತನುವನಿಂಬುಗೊಂಬುದೇ ಶೀಲ.
ಇಂತಪ್ಪ ಶೀಲಕ್ಕೆ ನಮೋ ನಮೋ.
ಉಳಿದ ದುಃಶೀಲರ ಕಂಡರೆ ಮೆಚ್ಚುವನೆ ನಮ್ಮ
ಕೂಡಲಚೆನ್ನಸಂಗಯ್ಯ ? -೩/೪೦೪ [1]

ಶೀಲವಂತರು, ಶೀಲವಂತರು ಎಂಬರು
ಶೀಲವಂತಿಕೆಯನಾರು ಬಲ್ಲರು ಹೇಳಾ ?
ನೆಲಕೆ ಶೀಲ ಶೀಲವೆಂಬೆನೆ ?
ಹೊಲೆ ಹದಿನೆಂಟುಜಾತಿ ನಡೆ ನುಡಿವುದಕ್ಕೆ ಒಂದೆಯಾಯಿತ್ತು .
ಜಲಕೆ ಶೀಲವೆಂಬೆನೆ ?
ವಿೂನ ಮೊಸಳೆಗಳು ಖಗಮೃಗಂಗಳು ನಿಂದೆಂಜಲು.
ಬೆಳೆಗೆ ಶೀಲವೆಂಬೆನೆ ? ಎತ್ತು ಕತ್ತೆ ತಿಂದು ಮಿಕ್ಕ ಎಂಜಲು.
ಹೊನ್ನಿಗೆ ಶೀಲವೆಂಬೆನೆ ? ಉರ ಹೊರೆಯಾಗಿಪ್ಪುದು.
ಹೆಣ್ಣಿಗೆ ಶೀಲವೆಂಬೆನೆ ? ಕಣ್ಣುಗೆಡಿಸಿ ಕಾಡುತಿಪ್ಪುದು.
ಇನ್ನಾವುದು ಶೀಲ ಹೇಳಿರಣ್ಣಾ ? ಇದಕ್ಕೆ ಒಳಗಾದವರೆಲ್ಲ ದುಃಶೀಲರು.
ಇದ ಹಿಡಿದು ಹಿಡಿಯದೆ, ಬಿಟ್ಟು ಬಿಡದೆ.
ತನ್ನ ಮನಕ್ಕೆ ಶೀಲವಾಗಿಪ್ಪುದೆ ಅಚ್ಚಶೀಲ ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. - ಹಡಪದ ಅಪ್ಪಣ್ಣ /೧೦೩೪ [1]

ಶೀಲ ಶೀಲವೆಂದೇನೊ ?
ಶೀಲವಂಥಾ ಸೂಲವೆ ?
ಶುದ್ಧ ಹರಿವ ನೀರನು ನೂಲರಿವೆ ಸುತ್ತಿಯದ ಕಟ್ಟಿ
ತಂದದ್ದು ಶೀಲವೆ ? ಅದಲ್ಲ ನಿಲ್ಲು ಮಾಣು.
ಜ್ವಾಲೆಯಂದದಿ ಹರಿವ ಮನವನು
ಖತಿ ಹೋಗದ ಹಾಗೆ ಕಟ್ಟಿ ನಿಲಿಸಿದುದೆ ಶೀಲ.
ಬಾಲೆಯರ ಬಣ್ಣದ ಬಗೆಗೆ ಭ್ರಮೆಗೊಳ್ಳದುದೆ ಶೀಲ.
ಕಾಲಕರ್ಮಂಗಳ ಗೆದ್ದುದೆ ಶೀಲ.
ಇಂತಲ್ಲದೆ ಉಳಿದುವೆಲ್ಲ ದುಶ್ಶೀಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. - ಕುಷ್ಟಗಿ ಕರಿಬಸವೇಶ್ವರ /೫೫೮ [1]

ಶೀಲ ಶೀಲವೆಂತೆಂಬಿರಯ್ಯಾ, ಶೀಲದ ನೆಲೆಯ ಬಲ್ಲರೆ ಹೇಳಿರೊ,
ಅರಿಯದಿರ್ದಡೆ ಕೇಳಿರೊ.
ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ,
ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ,
ಮದ ಐದನೆಯ ಭವಿ, ಮತ್ಸರ ಆರನೆಯ ಭವಿ, ಆಮಿಷ ಏಳನೆಯ ಭವಿ.
ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು,
ಲಿಂಗವಿಲ್ಲದವರ ಭವಿ ಭವಿ ಎಂಬರು.
ತಮ್ಮಂತರಂಗದಲ್ಲಿರ್ದ ಲಿಂಗಾಂಗದ ಸುದ್ದಿಯನರಿದೆ,
ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿಗಳೆಂದು
ಜಲಕ್ಕೆ ಕನ್ನವನಿಕ್ಕಿ, ಉದಕವ ತಂದು,
ಲಿಂಗಕ್ಕೆ ಮಜ್ಜನಕ್ಕೆರೆವ ಪಗಲುಗಳ್ಳರಿಗೆ ಮೆಚ್ಚುವನೇ,
ನಿಃಕಳಂಕ ಮಲ್ಲಿಕಾರ್ಜುನ ? - ಮೋಳಿಗೆ ಮಾರಯ್ಯ /೨೧೪೨ [1]

ತನುವಿನಿಚ್ಛೆಗೆ ಶೀಲವ ಕಟ್ಟಿಕೊಂಬವರು ಲಕ್ಷೊಪಲಕ್ಷ ಉಂಟು.
ಮನದಿಚ್ಛೆಗೆ ಶೀಲವ ಕಟ್ಟಿಕೊಂಬವರು ಅಪೂರ್ವ ನೋಡಾ.
ತನುಮನವೆರಡು ಏಕವಾಗಿ, ಧನದಾಸೆಯಂ ಬಿಟ್ಟು,
ಮನ ಮಹದಲ್ಲಿ ನಿಂದುದೆ ಶೀಲಸಂಬಂಧ.
ಇನಿತಲ್ಲದ ದುಶ್ಶೀಲರ ಎನಗೊಮ್ಮೆ ತೋರದಿರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ. - ಹಡಪದ ಅಪ್ಪಣ್ಣ /೯೫೭ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-3/580 :- ಸಮಗ್ರ ವಚನ ಸಂಪುಟ-3, ವಚನ ಸಂಖ್ಯೆ-580 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)


ಪರಿವಿಡಿ (index)
*
Previous ನೇಮಗಳು; ಅರ್ಥವಿಲ್ಲದ ನೇಮಗಳು ಷಟಸ್ಥಲಕ್ಕೆ ಹೊರಗು ವ್ರತಗಳು; ವ್ರತಗಳು ಹೇಗಿರಬೇಕು Next