Previous ಶೀಲ ಎಂದರೇನು? ಶೀಲಗಳು ಹೇಗಿರಬೇಕು ಲಿಂಗಾಯತರು ಶೈವರಲ್ಲ Next

ವ್ರತಗಳು; ವ್ರತಗಳು ಹೇಗಿರಬೇಕು

*

ಲಿಂಗಾಯತರಲ್ಲಿ ವ್ರತ, ನೇಮ (ನಿಯಮ)ಗಳು

ಮನುಷ್ಯನು ಪರಮಾತ್ಮನನ್ನು ಒಬ್ಬ ಮಹಾನ್ ಶಕ್ತಿಯುಳ್ಳ ವ್ಯಕ್ತಿಯಂತೆ ಕಲ್ಪಿಸಿಕೊಂಡು, ಅವನಿಗೆ ಎಲ್ಲ ರೀತಿಯ ಮಾನವಗುಣಗಳನ್ನು ಅರೋಪಿಸುವುದುಂಟು. ಆದರೆ ಕೆಲವು ವೇಳೆ ಈ ಮಾನವತ್ವಾರೋಪ ಅತಿರೇಕಕ್ಕೆ ಹೋಗುವುದು ಜನರ ವ್ರತ ಶೀಲ ನೇಮಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಉದಾಹರಣೆಗೆ ಉಪವಾಸ ಮಾಡುವುದು; ರಾತ್ರಿಯಲ್ಲಿ ಜಾಗರಣಿ ಮಾಡುವುದು; ಹಳ್ಳ ಹೊಳೆಗೆ ಹೋಗಿ, ಛಳಿಯಲ್ಲಿ ತಣ್ಣೀರೊಳಗೆ ಮುಳುಗುವುದು; ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ಆಹಾರ ಪದಾರ್ಥಗಳ ವ್ರತವು; ಶರಣರು ಇವನ್ನೆಲ್ಲ ಖಂಡಿಸಿದ್ದಾರೆ; ಅಲ್ಲದೆ ನಿಜವಾದ ವ್ರತ ಹೇಗಿರಬೇಕೆಂದೂ ಹೇಳಿದ್ದಾರೆ.

ತಪವೆಂಬುದು ಬಂಧನ, ನೇಮವೆಂಬುದು ತಗಹು,
ಶೀಲವೆಂಬುದು ಸೂತಕ, ಭಾಷೆಯೆಂಬುದು ಪ್ರಾಣಘಾತಕ.
ಈ ಚತುರ್ವಿಧದೊಳಗೆ ಇಲ್ಲ,
ಕೂಡಲಚೆನ್ನಸಂಗಯ್ಯ ಏಕೋಗ್ರಾಹಿ. - ಚೆನ್ನಬಸವಣ್ಣ -೩/೫೮೦ [1]

ಉಪವಾಸ ಮಾಡುವುದು ವ್ರತವಲ್ಲ

ಬಹುಜಲವಂ ಬಿಟ್ಟು, ಚಿಲುಮೆಯ ತೆಗೆದಡದು,
ನೆಲ ಶುದ್ಧ ಸೌಕರ್ಯವಲ್ಲದೆ ಅದು ಶೀಲವಲ್ಲ.
ಉಪ್ಪ ಬಿಟ್ಟು ಸಪ್ಪೆಯನುಂಡಡದು ಮನದ ಹೇಸಿಕೆಯಲ್ಲದೆ ಅದು ದೃಢವ್ರತವಲ್ಲ.
ವ್ರತ ನಿಶ್ಚಿಯವಾವುದೆಂದಡೆ,
ಪರಸ್ತ್ರೀ ಪರಧನ ಪರದೂಷಣವನರಿದು ಬಿಟ್ಟಡೆ,
ಅದು ಅರುವತ್ತಾರುವ್ರತವೆಂದೆ, ಕಲಿದೇವರದೇವ - ೮/೬೮೫ [1]

ದಿನಚರಿ ಮಾಸದೊಳಗೆ ಏಳು ವಾರದೊಳಗೆ
ಸೋಮವಾರ ಉಪವಾಸ ಮಾಡಬೇಕೆಂಬಿರಿ.
ದ್ವಾದಶಮಾಸದೊಳಗೆ ಶ್ರಾವಣಸೋಮವಾರ
ಉಪವಾಸಮಾಡಬೇಕೆಂಬಿರಿ.
ಮಾಘಮಾಸದ ಚತುರ್ದಶಿ ಉಪವಾಸ
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂಬಿರಿ.
ಇಂತೀ ವಾರ, ಮಾಸ, ತಿಥಿಯಲ್ಲಿ
ಅನ್ನ ಉದಕವ ತೊರೆದು, ಉಪವಾಸ ಮಾಡಿ,
ಆತ್ಮವ ಬಳಲಿಸಿ, ತನುವನೊಣಗಿಸಿ,
ನೀವು ವ್ರತವನಾಚರಿಸಿದಡೆ
ನಿಮ್ಮ ಆತ್ಮದ್ರೋಹವು ಆ ದೇವತೆಗಳಿಗೆ ತಾಕಿ
ಭವಭವದಲ್ಲಿ ಬೀಳುವರು.
ಇದು ಕಾರಣವಾಗಿ ಉಪವಾಸ ಮಾಡಲಾಗದು.
ಉಪವಾಸ ಮಾಡಿದಲ್ಲಿ ಪ್ರಯೋಜನವಿಲ್ಲ.
ಅದೆಂತೆಂದಡೆ : ಉಂಡುಟ್ಟು ಲಿಂಗವ ಪೂಜಿಸಬೇಕು.
ಉಣಿಸಿ ಉಡಿಸಿ ಜಂಗಮವನರ್ಚಿಸಬೇಕು.
ಕೊಟ್ಟು ಕೊಂಡು ಗುರುವನರ್ಚಿಸಬೇಕು.
ಇಂತೀ ತ್ರಿವಿಧದ ಭೇದ ಬಲ್ಲರೆ
ಉಪವಾಸವ ಮಾಡಬಲ್ಲರೆಂಬೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. - ಕಾಡಸಿದ್ಧೇಶ್ವರ /೨೧೧ [1]

ಇಂತಪ್ಪ ಲಿಂಗಾಂಗದ ಸಮರಸವ ತಿಳಿಯದೆ,
ಆವ ನೇಮ ವ್ರತವ ಪಿಡಿದು ಆಚರಿಸಿದಡೆ
ಮುಂದೆ ಭವಬಂಧನವೇ ಪ್ರಾಪ್ತಿಯಾಗುವದು.
ಮತ್ತಂ, ವಾರದಫಲ ಬಯಸುವವರಿಗೆ ಗುರುವಿಲ್ಲ.
ಮಾಸದ ಫಲ ಬಯಸುವವರಿಗೆ ಲಿಂಗವಿಲ್ಲ.
ಚತುರ್ದಶಿ ಫಲ ಬಯಸುವವರಿಗೆ ಜಂಗಮವಿಲ್ಲ.
ಆ ಮಾಸದ ಫಲ ಬಯಸುವವರಿಗೆ ಪಾದೋದಕವಿಲ್ಲ.
ಗ್ರಹಣ ಫಲ ಬಯಸುವವರಿಗೆ ಪ್ರಸಾದವಿಲ್ಲ.
ಇಂತಪ್ಪ ಫಲವ ಬಯಸಿ ಮಾಡಬೇಕೆಂಬವರಿಗೆ
ವಿಭೂತಿ, ರುದ್ರಾಕ್ಷಿ, ಮಂತ್ರ ಮೊದಲಾದ ಅಷ್ಟಾವರಣವು ಇಲ್ಲ.
ಇತಂಪ್ಪ ವ್ರತಭ್ರಷ್ಟ ಹೊಲೆಯರಿಗೆ ವೀರಮಹೇಶ್ವರರೆಂದಡೆ
ನಿರ್ಮಾಯಪ್ರಭುವಿನ ಶರಣರು ನರಕದಲ್ಲಿಕ್ಕದೆ ಬಿಡುವರೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ ? /೨೧೨ [1]

ಈ ಲೌಕಿಕದ ಮಧ್ಯದಲ್ಲಿ ಜೀವಾತ್ಮರು ದಿನಚರಿ,
ವಾರ, ಮಾಸ, ಚತುದರ್ಶಿಯಲ್ಲಿ
ಉಪವಾಸ ಮಾಡುವ ಕ್ರಮವ ಪೇಳ್ವೆ.
ಅದೆಂತೆಂದಡೆ : ದಿನಚರಿ ವಾರದೊಳಗೆ ಸೋಮವಾರ ವ್ರತವುಳ್ಳವರು
ಆ ದಿವಸ ಉದಯದಿಂ ಮೂರುಪ್ರಹರ ವೇಳೆ ಪರಿಯಂತರವಾಗಿ
ಉಪವಾಸವ ಮಾಡಿ ಆ ದಿವಸಕ್ಕಿಂತು ಆ ವಾರ ದಿವಸ
ಆವ ಪದಾರ್ಥವಾದಡೆಯು ನಿರ್ಮಳ ಪಾಕವ ಮಾಡಿಸಿ
ಕೆರೆ, ಬಾವಿ, ಹಳ್ಳ, ಹೊಳೆಗಳಿಗೆ ಹೋಗಿ,
ಮಜ್ಜನವ ನೀಡಿ ಪತ್ರಿಪುಷ್ಪವ ತಂದು
ತನ್ನ ಲಿಂಗಪೂಜೆಯ ಮಾಡಿ,
ಗ್ರಾಮದ ಹೊರಗೆ ಒಂದು ಸ್ಥಾವರಲಿಂಗದ
ದೇವಾಲಯಕ್ಕೆ ಹೋಗಿ ನಮಸ್ಕಾರವ ಮಾಡಿ,
ಮರಳಿ ತಮ್ಮ ಗ್ರಹಕ್ಕೆ ಬಂದು
ಆ ಸ್ಥಾವರಲಿಂಗಕ್ಕೆ ನೈವೇದ್ಯವ ಕಳಿಸಿ
ಆ ಮೇಲೆ ಜಂಗಮವ ಕರಿಸಿ ಅರ್ಚಿಸಿ,
ಪಾದೋದಕ ಸೇವಿಸಿ,
ಆ ಜಂಗಮಕ್ಕೆ ಉತ್ತಮವಾದ ಪದಾರ್ಥವ ಸ್ವಲ್ಪ ಎಡೆ ಮಾಡಿಸಿ
ತನ್ನ ಹರಿವಾಣದಲ್ಲಿ ಅರಲು ತುಂಬಿದ ಹೆಡಿಗೆಯಂತೆ ಒಟ್ಟಿಸಿಕೊಂಡು
ಮನಬಂದಪರಿಯಲ್ಲಿ ಎರಡು ವೇಳ್ಯದಾಹಾರ
ಒಂದುವೇಳೆಯಲ್ಲಿ ರಣವೀರರಂತೆ
ತಿಂದು ತಿಂದು ಒಡಲ ತುಂಬಿಕೊಂಡು
ನಾವು ಸೋಮವಾರ ಒಂದೊತ್ತು ಉಪವಾಸವ್ರತವುಳ್ಳವರೆಂದು
ಪರರಮುಂದೆ ಬೊಗಳುವರಯ್ಯ.
ಇಂತಪ್ಪ ವ್ರತಭ್ರಷ್ಟವುಳ್ಳ ಮಂಗಮನುಜರಿಗೆ
ವೀರಮಾಹೇಶ್ವರರೆಂದಡೆ ಮೆಚ್ಚರಯ್ಯಾ
ನಿಮ್ಮ ಶಿವಜ್ಞಾನಿಗಳಾದ ಶಿವಶರಣರು
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /೨೧೩ [1]

ದ್ವಾದಶಮಾಸದೊಳಗೆ ಶ್ರಾವಣಮಾಸದ ಫಲಪುಣ್ಯ ಮಹಾದೊಡ್ಡದೆಂದು,
ವೇದ, ಪುರಾಣ, ಶ್ರುತಿವಾಕ್ಯಗಳಿಂದ ಕೇಳಿ,
ಅಂತಪ್ಪ ಶ್ರಾವಣಮಾಸ ತಿಂಗಳಪರಿಯಂತರವಾಗಿ,
ನಿತ್ಯದಲ್ಲಿ ವ್ರತವನಾಚರಿಸುವರ ಆಚರಣೆಯ ಪೇಳ್ವೆ
ಅದೆಂತೆಂದಡೆ : ಶ್ರಾವಣಮಾಸ ಪಾಡ್ಯದಿವಸ ಮೊದಲು ಮಾಡಿ
ನಿತ್ಯದಲಿ ಒಬ್ಬ ಜಂಗಮದ ಪಾದವ ಪಿಡಿದು,
ಪತ್ರಿ ಪುಷ್ಪ ನಿತ್ಯದಲ್ಲಿ ತಂದು,
ಪಾದಪೂಜೆಯ ಮಾಡಿ, ಪಾದೋದಕ ಪ್ರಸಾದವ ಕೊಂಡು
ಆ ಜಂಗಮಸಹಿತನಾಗಿ ಮೃಷ್ಟಾನ್ನಭೋಜನವ
ಹಾ ಹಾ ಎಂದು ಒಟ್ಟಿಸಿಕೊಂಡು ಒಡಲತುಂಬಿಸಿಕೊಂಡು,
ಮತ್ತೆ ಮರಳಿ ಸಾಯಂಕಾಲಕ್ಕೆ ಫಲಹಾರವೆಂದು ಮಾಡಿಸಿ ತಿಂದು,
ನಾವು ಶ್ರಾವಣಮಾಸ ಒಂದೊತ್ತು ಉಪವಾಸ,
ನಿತ್ಯದಲ್ಲಿ ಜಂಗಮದ ತೀರ್ಥಪ್ರಸಾದ
ತಪ್ಪದೆ ಕೊಂಬ ವ್ರತವುಳ್ಳವರೆಂದು
ತಮ್ಮ ಬಿಂಕದ ಮಾತ ಮೂಢಾತ್ಮರ ಮುಂದೆ ಬೀರುವರಯ್ಯ.
ಇಂತಪ್ಪ ತಾಮಸಗುಣವುಳ್ಳ ಅಹಂಕಾರಿಗೆ
ವೀರಮಾಹೇಶ್ವರರೆಂದಡೆ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭು ಮೆಚ್ಚುವನೆ ?
ಮೆಚ್ಚನಯ್ಯ ನರಕದಲ್ಲಿಕ್ಕೆಂದ ನೋಡಾ. /೨೧೪ [1]

ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ
ಮಾಘಮಾಸದ ಚತುರ್ದಶಿ,
ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು
ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ,
ಅಂತಪ್ಪ ಮಾಘಮಾಸದ ಚತುರ್ದಶಿದಿವಸ
ಒಂದೊತ್ತು ಉಪವಾಸವ ಮಾಡಿ,
ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು
ಸಾಯಂಕಾಲಕ್ಕೆ ಸ್ನಾನವ ಮಾಡಿ,
ಜಂಗಮವ ಕರತಂದು ಅರ್ಚಿಸಿ,
ಲಿಂಗವ ಪತ್ರಿ, ಪುಷ್ಪ, ಅಭೀಷೇಕ, ಕಡ್ಡಿ, ಬತ್ತಿ,
ಏಕಾರತಿ ಪಂಚಾರತಿಗಳಿಂದ ಪೂಜಿಸಿ,
ಪಾದೋದಕವ ಸೇವಿಸಿ,
ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ ಉತ್ತಮವಾದ ಫಲಹಾರ ಜೀನಸುಗಳು
ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು
ಮೊದಲಾದ ಫಲಹಾರ
ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ,
ಬುಂದೆ, ಲಡ್ಡು ಮೊದಲಾದ ಫಲಹಾರ.
ಇಂತಪ್ಪ ಫಲಹಾರ ಜೀನಸು ಎಡೆಮಾಡಿ ಪ್ರಸಾದವೆಂದು ಕೈಕೊಂಡು,
ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ
ಅಂಗಕ್ಕೆ ಗಡಣಿಸಿಕೊಂಡು,
ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ ಪರಿಯಂತರವಾಗಿ,
ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು
ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ,
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು
ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು
ಸ್ಥಾವರಲಿಂಗದ ಗುಡಿಗೆ ಹೋಗಿ ಆ ಲಿಂಗದ ಪೂಜೆಯಿಂದ ಬೆಳಗ ಕಳೆದು
ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು
ಹಳ್ಳ ಹೊಳೆಗೆ ಹೋಗಿ, ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ,
ಸ್ನಾನವ ಮಾಡಿ ಬಂದು ಜಂಗಮವ ಕರಿಸಿ,
ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ,
ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು
ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ.
ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ
ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ. /೨೧೫ [1]

ಆಹಾರ ಪದಾರ್ಥಗಳಿಂದ ಮಾಡುವುದು ವ್ರತವಲ್ಲ

ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ
ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ?
ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ.
ವ್ರತವಾವುದೆಂದಡೆ
ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ,
ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ,
ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ.
ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ,
ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ
ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ.
ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ,
ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರದ
ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ,
ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ. - ಅಕ್ಕಮ್ಮ -೫/೪೩೬ [1]

ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ.
ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ?
ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ?
ತನ್ನ ಮನೆಗೆ ಕಟ್ಟಳೆ ಇರಬೇಕು.
ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ,
ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ
ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು.
ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ
ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು.
ಇಂತೀ ಇಷ್ಟರ ಕ್ರೀಯಲ್ಲಿ ಸಂತತ ವ್ರತ ಇರಬೇಕು.
ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ.
ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ. - ಅಕ್ಕಮ್ಮ -೫/೪೫೬ [1]

ಖಂಡಿತ ವ್ರತ ಅಖಂಡಿತ ವ್ರತ,
ಸಂದ ವ್ರತ, ಸಲ್ಲದ ವ್ರತವೆಂದು ನೇಮವ ಮಾಡಿಕೊಂಡು
ಊರೂರ ತಪ್ಪದೆ ಸಾರಿ ದೂರಿಕೊಂಡು ತಿರುಗಲೇತಕ್ಕೆ !
ತಾ ಮಾಡಿಕೊಂಡ ವ್ರತ ನೇಮ ಊರೆಲ್ಲಕ್ಕೊ ತನಗೊ
ಎಂಬುದ ತಾನರಿಯದೆ ನಿಕ್ಷೇಪವ ಕಂಡೆನೆಂದು ಸಾರಿದರುಂಟೆ !
ಆ ಮನಜ್ಞಾನವ್ರತ ಕಳ್ಳನ ಚೇಳೂರಿದಂತೆ ಅಲ್ಲಿಯೆ ಅಡಗಬೇಕು.
ಹೀಗಲ್ಲದೆ ಕಲಕೇತರಂತೆ
ಊರಮಗನೆಂದು ಬಾಗಿಲಲ್ಲಿ ಇರಿದುಕೊಂಬನಂತೆ
ಅವ ಮಾಡಿಕೊಂಡ ವ್ರತ ಅದಾರಿಗೆ ಯೋಗ್ಯ !
ಅದು ಸಾಗದ ನೇಮ, ಶೀಲವಾಗದ ಅಕೃತ್ಯ.
ಇಂತೀ ವ್ರತದ ಭೇದವನರಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ. - ಅಕ್ಕಮ್ಮ -೫/೪೭೭ [1]

ನಾನಾ ವ್ರತಂಗಳ ಪಿಡಿವುದೆಲ್ಲವು ಮನದ ಶಂಕೆ.
ಮನ ಹರಿದಾಡುವುದೆಲ್ಲವು ತನುವಿನ ಶಂಕೆ.
ಮನ ತನು ಕೂಡಿ ನಡೆವುದೆಲ್ಲವು ಪ್ರಕೃತಿಯ ಶಂಕೆ.
ಮನ ತನು ಪ್ರಕೃತಿ ಮೂರೊಂದಾದಲ್ಲಿ ಶೀಲವೆಂಬ ಪಾಶ
ಜೀವನ ಕೊರಳ ಸುತ್ತಿತ್ತು.
ಬಹಿರಂಗದ ವ್ರತ ಅಂತರಂಗದ ಅರಿವು ಉಭಯವು ಕಟ್ಟುವಡೆದಲ್ಲಿ ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗವೆಂಬ ಗೊತ್ತಾಯಿತ್ತು. - ಅಕ್ಕಮ್ಮ -೫/೫೧೧ [1]

ವ್ರತಾಚಾರವೆಂದು ಹೆಸರಿಟ್ಟುಕೊಂಡಿಪ್ಪರಯ್ಯಾ !
ವ್ರತವೆಂದೇನು ಆಚಾರವೆಂದೇನು !
ಅನ್ಯರು ಮಾಡಿದ ದ್ರವ್ಯವನೊಲ್ಲದಿಪ್ಪುದು ವ್ರತವೆ !
ಆರನು ಕರೆಯದಿಪ್ಪುದು ಆಚಾರವೆ !
ಪರಸ್ತ್ರೀ ಪರಧನಂಗಳಲ್ಲಿ ನಿಂದೆಗೆ ಒಡಲಾಗದಿದ್ದುದೆ ವ್ರತ.
ಸರ್ವಭೂತಹಿತನಾಗಿ ದಯವಿದ್ದುದೆ ಆಚಾರ.
ಇಂತೀ ಕ್ರೀಯನರಿತು, ಕ್ರೀಯ ಶುದ್ಧತೆಯಾಗಿ ನಿಂದುದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ. - ಅಕ್ಕಮ್ಮ -೫/೫೬೭ [1]

ವ್ರತವ ಮಾಡಿಕೊಂಡೆವೆಂದು ಗನ್ನಘಾತಕತನದಲ್ಲಿ ನಡೆವಧಿಕರ ನೋಡಾ.
ತನುವಿಂಗೆ ವ್ರತವೋ, ಮನಕ್ಕೆ ವ್ರತವೋ ?
ಮಡಕೆಗೆ ವ್ರತವೆಂದು ಸಡಗರಿಸುತ್ತಿರ್ಪ ಗತಿಹೀನರ ಕಂಡು ನಾಚಿತ್ತೆನ್ನ ಮನ.
ದಿಟದ ವ್ರತವ ಹೇಳಿಹೆ ಕೇಳಿರಣ್ಣಾ.
ಹುಸಿ ಕಳವು ಪಾರದ್ವಾರ ಕೊಲೆ ಅತಿಚಾಂಡಾಲಮಂ ಬಿಟ್ಟು,
ಪರದ್ರವ್ಯಕ್ಕೆ ಕೈಯಾನದೆ, ಪರರ ಬಾಗಿಲಲ್ಲಿ ನಿಂದು, ನೆರೆ ಹೊಲಬುಗೆಟ್ಟು,
ಅರಿವುಳ್ಳವರು ನಾವೆಂದು ಬರಿದೆ ಹಲಬುತ್ತಿರ್ಪರ ಮಾತಿಗೆ ಒಡಲಪ್ಪುದೆ ಶೀಲೊ?
ತನ್ನ ಸುಬುದ್ಧಿಯಿಂದ, ಸುಕಾಯಕದಿಂದ,
ಗುರುಲಿಂಗಜಂಗಮಕ್ಕೆ ತನುಮನಧನವಂ ಸವೆಸಿ,
ಚಿತ್ತಶುದ್ಧನಾಗಿ ಅಚ್ಚೊತ್ತಿದಂತಿದ್ದುದೆ ಶೀಲವ್ರತ.
ಹಾಂಗಲ್ಲದೆ ಜಾತಿಗಾರನ ಕೈಯ ದೀಹದಂತೆ,
ಬಾಲೆಯರ ಮನದ ಸೋಲುವೆಯಂತೆ,
ಇಂತಿವರಾಳವಾಡಿ ಸಿಕ್ಕಿಸುವ, ಸೋಲುಗಾರರಿಗೆಲ್ಲಿಯದೊ ಸತ್ಯ,
ನಿಃಕಳಂಕ ಮಲ್ಲಿಕಾರ್ಜುನಾ ? - ಮೋಳಿಗೆ ಮಾರಯ್ಯ /೨೧೩೫ [1]

ಬಾಹ್ಯವ್ರತ, ಭ್ರಮೆವ್ರತ, ಸೀಮೋಲ್ಲಂಘನವ್ರತ,
ಉಪಚರಿಯಕೂಟಸ್ಥವ್ರತ, ಸಮಕ್ರೀ ಭೋಜನವ್ರತ,
ಇಷ್ಟಸಂಬಂಧಕೂಟವ್ರತ, ದ್ರವ್ಯ ಉಪಚರಿಯ ಸಂಪದವ್ರತ,
ಅಹುದಲ್ಲವೆಂಬ ಸಂದೇಹ ಸಂಕಲ್ಪವ್ರತ,
ತಿಲ ಮಧುರ ಕ್ರಮಕ ಲವಣ ಪರಿಪಾಕ ವಿಸರ್ಜನವ್ರತ,
ಗಮನ ಸುಮನ ಸಮತೆ ನೇಮ ಸಂತೋಷವ್ರತ.
ಇಂತೀ ಸೀಮೆಯೊಳಗಾದ ಅರುವತ್ತನಾಲ್ಕು ಶೀಲವನರಿದಡೇನು?
ಪರವಧುವಿಂಗೆ ಪಲ್ಲಟಿಸದೆ, ಪರಧನಕ್ಕೆ ಕೈದುಡುಕದೆ,
ಅನರ್ಪಿತಕ್ಕೆ ಮನ ಮುಟ್ಟದೆ, ತಾ ಕೊಂಡ ಸೀಮೆಯಲ್ಲಿ ಭಾವಭ್ರಮೆಯಿಲ್ಲದೆ,
ಮನ ವಚನ ಕಾಯದಲ್ಲಿ ಕೊಂಡ ವ್ರತಕ್ಕೆ ಪೂಜಿಸುವ.
ಗುರುಲಿಂಗಜಂಗಮಕ್ಕೆ ಉಭಯದೋರದೆ ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದುದು. - ಶಿವಲೆಂಕ ಮಂಚಣ್ಣ /೨೨೪ [1]

ಸೋಮವಾರ, ಹುಣ್ಣಿಮೆ, ಅಮವಾಸ್ಯೆ ಎಂದು ಉಪವಾಸವಿರ್ದು
ಶಿವನಿಗೆ ಅರ್ಪಿತ ಎಂದು ನುಡಿವರು.
ಕಾಮ ಕ್ರೋಧ [ಲೋಭ] ಮೋಹ ಮದ ಮತ್ಸರವನಳಿಯರು.
ಶಿವನ ನೆಲೆಯನರಿಯದೆ,
ಎನಗೆ ಗತಿಕೊಡುವ ಲಿಂಗವಿದೇ ಎಂದು ತಿಳಿಯದೆ,
ಗ್ರಾಮದ ಹೊರತಾಯದಲ್ಲಿರುವ ದೇವರುಗಳು ಅಧಿಕವೆಂದು ಪೂಜಿಸಿ,
ಅವಕಿಕ್ಕಿದ ಕೂಳ ತಾ ತಿಂಬುವನು.
ಇನ್ನು ಸೋಮಧರಗರ್ಪಿತವೆಂದು ಭುಂಜಿಸುವವರ ತೆರನಂತೆ
ದೊಡ್ಡ ಗ್ರಾಮದ ಸೂಕರನು ಗಂಗೆಯಲ್ಲಿ ಮಿಂದು ಬಂದು
ಅಮೇಧ್ಯವ ಭುಂಜಿಸಿದ ತೆರನಾಯಿತೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. /೨೭೫ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-3/580 :- ಸಮಗ್ರ ವಚನ ಸಂಪುಟ-3, ವಚನ ಸಂಖ್ಯೆ-580 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಶೀಲ ಎಂದರೇನು? ಶೀಲಗಳು ಹೇಗಿರಬೇಕು ಲಿಂಗಾಯತರು ಶೈವರಲ್ಲ Next