ಕೂಡಲಸಂಗನ ಶರಣರ ಅನುಭಾವದ ಬಲದಿಂದ ಭವದ ಕೇಡು ನೋಡಯ್ಯಾ
ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಆ ಕಾಗೆ ಕೋಳಿಗಿಂತ ಕರಕಷ್ಟ
ಕೂಡಲಸಂಗಮದೇವಾ.-ಸವಸ-೧/೪೩೮
[1]
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ
ಎನ್ನ ಭವದ ಕೇಡು ನೋಡಯ್ಯಾ.-ಸವಸ-೧/೮೪೨
[1]
ಬಚ್ಚಲ ನೀರು ತಿಳಿದಡೇನು
ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು
ಆಕಾಶದ ಮಾವಿನ ಫಲವೆಂದಡೇನು
ಕೊಯ್ಯಲಿಲ್ಲ, ಮೆಲ್ಲಲಿಲ್ಲ.
ಕೂಡಲಸಂಗನ ಶರಣರ ಅನುಭಾವವಿಲ್ಲದವ
ಎಲ್ಲಿದ್ದಡೇನು, ಎಂತಾದಡೇನು-ಸವಸ-೧/೧೨೨
[1]
ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕು.
ಕರ್ತನಾಗಿ ಕಾಲ ತೊಳೆಸಿಕೊಂಡಡೆ
ಹಿಂದೆ ಮಾಡಿದ ಭಕ್ತಿಗೆ ಹಾನಿ.
ಲಕ್ಷಗಾವುದ ದಾರಿಯ ಹೋಗಿ
ಭಕ್ತನು ಭಕ್ತನ ಕಾಂಬುದು ಸದಾಚಾರ.
ಅಲ್ಲಿ ಕೂಡಿ ದಾಸೋಹವ ಮಾಡಿದಡೆ
ಕೂಡಿಕೊಂಬನು ನಮ್ಮ ಕೂಡಲಸಂಗಯ್ಯ.-ಸವಸ-೧/೨೪೬
[1]
ಮಡಕೆಯ ಮಾಡುವಡೆ ಮಣ್ಣೆ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು.-ಸವಸ-೧/೭೦
[1]
ಸಾರ: ಸಜ್ಜನರ ಸಂಗವ ಮಾಡುವುದು,
ದೂರ ದುರ್ಜನರ ಸಂಗ ಬೇಡವಯ್ಯಾ.
ಆವ ಹಾವಾದಡೇನು? ವಿಷವೊಂದೆ,
ಅಂತವರ ಸಂಗ ಬೇಡವಯ್ಯಾ.
ಅಂತರಂಗ ಶುದ್ಧವಿಲ್ಲದವರ ಸಂಗವು
ಸಿಂಗಿ, ಕಾಳಕೂಟ ವಿಷವೊ, ಕೂಡಲಸಂಗಯ್ಯಾ.-ಸವಸ-೧/೧೧೯
[1]
ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ,
ದೂರ ದುರ್ಜನರ ಸಂಗವದು ಭಂಗವಯ್ಯಾ.
ಸಂಗವೆರಡುಂಟು:ಒಂದ ಹಿಡಿ, ಒಂದ ಬಿಡು,
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ. -ಸವಸ-೧/೧೩೪
[1]
ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು;
ವಸ್ತ್ರ ಮಾಸಿದಡೆ ಮಡಿವಾಳಂಗಿಕ್ಕುವುದು;
ಮನದ ಮೈಲಿಗೆಯ ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ ಶರಣರ ಅನುಭಾವವ ಮಾಡುವುದು/೧೪೪೨
[1]
ಸಂಗದಿಂದಲ್ಲದೆ ಅಗ್ನಿ ಹುಟ್ಟದು,
ಸಂಗದಿಂದಲ್ಲದೆ ಬೀಜ ಮೊಳೆದೋರದು,
ಸಂಗದಿಂದಲ್ಲದೆ ಹೂವಾಗದು.
ಸಂಗದಿಂದಲ್ಲದೆ ಸರ್ವಸುಖದೋರದು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು ಪರಮಸುಖಿಯಾದೆನಯ್ಯಾ./೩೮೧
[1]
ಷಣ್ಮುಖಸ್ವಾಮಿ
ಶರಣರ ಸಂಗದಿಂದೆ ತನು ಶುದ್ಧವಪ್ಪುದು ನೋಡಿರೆ.
ಶರಣರ ಸಂಗದಿಂದೆ ಮನ ನಿರ್ಮಲವಪ್ಪುದು ನೋಡಿರೆ.
ಶರಣರ ಸಂಗದಿಂದೆ ಸಕಲೇಂದ್ರಿಯಂಗಳು
ಲಿಂಗಮುಖವಪ್ಪುವು ನೋಡಿರೆ.
ನಮ್ಮ ಅಖಂಡೇಶ್ವರನ ಶರಣರ ಸಂಗದಿಂದೆ
ಮುಂದೆ ಸತ್ಪಥವು ದೊರೆಕೊಂಬುದು ತಪ್ಪದು ನೋಡಿರೆ. /೮೪೬
[1]
[1] ಈ ತರಹದ ಸಂಖ್ಯೆಯ ವಿವರ: ಸವಸ-1/438 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-438 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)