ಶರಣ ಶರಣನ ಕಂಡು, 'ಶರಣು' ಎಂದು ಕರವ ಮುಗಿವುದೆ ಭಕ್ತಿ ಲಕ್ಷಣ. (ಅತಿಥಿ ಸತ್ಕಾರ)
|
|
*
ಶರಣ ಶರಣನ ಕಂಡು, "ಶರಣು" ಎಂದು ಕರವ ಮುಗಿವುದೆ ಭಕ್ತಿ ಲಕ್ಷಣ.
ಏನಿ ಬಂದಿರಿ, ಹದುಳಿವಿದ್ದಿರೆ ಎಂದಡೆ
ನಿಮ್ಮೈಸಿರಿ ಹಾರಿ ಹೋಹುದೆ
ಕುಳ್ಳಿರೆಂದಡೆ ನೆಲ ಕುಳಿಹೋಹುದೆ
ಒಡನೆ ನುಡಿದಡೆ ಸಿರ, ಹೊಟ್ಟೆಯೊಡೆವುದೆ
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ
ಮೂಗ ಕೊಯ್ವುದೆ ಮಾಬನೆ ಕೂಡಲಸಂಗಮದೇವಯ್ಯ-ಸವಸ-೧/೨೪೧
[1]
ಶರಣ ಶರಣನ ಕಂಡು,
"ಶರಣು" ಎಂದು ಕರವ ಮುಗಿವುದೆ ಭಕ್ತಿ ಲಕ್ಷಣ.
ಶರಣ ಶರಣನ ಕಂಡು,
ಪಾದವಿಡಿದು ವಂದಿಸುವುದೆ ಭಕ್ತಿ ಲಕ್ಷಣ.
ಶರಣ ಚರಣವ ಪಿಡಿಯದೆ
ಕಂಡೂ ಕಾಣದೆ ಪೋದನಾದಡೆ
ಕೂಡಲಚೆನ್ನಸಂಗನ ಶರಣರು ಮನ್ನಿಸರಯ್ಯಾ./೧೫೮೨
[1]
ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು.
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ-ಸವಸ-೧/೮೦೩
[1]
ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ;
ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ.
ಗುಹೇಶ್ವರನ ಶರಣರು
ನುಡಿದು ಸೂತಕಿಗಳಲ್ಲ ಕೇಳಾ ಮರುಳೆ. /೧೪೬೩
[1]
[1] ಈ ತರಹದ ಸಂಖ್ಯೆಯ ವಿವರ: ಸವಸ-1/241 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-241 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
*