ಬಸವಣ್ಣನವರ ವಚನಗಳು, Basava Vachana | ಎಲ್ಲ ದಿನವೂ ಶುಭ ದಿನವೇ! ಎಲ್ಲಾ ಕಾಲವೂ ಶುಭವೇ! |
ವಚನ ಸಾಹಿತ್ಯದಲ್ಲಿ ಮಾನವ ಸಮಾನತೆ |
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ,
ಜಲ-ಬಿಂದುವಿನ ವ್ಯವಹಾರವೊಂದೆ
ಆಶೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲ ಒಂದೇ,
ಏನನೋದಿ, ಏನಕೇಳಿ, ಏನುಫಲ ?
ಕುಲಜನೆಂಬುದಕ್ಕಾವುದು ದೃಷ್ಟ ?
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುಧ್ಬವಂ
ಆತ್ಮ ಜೀವ ಸಮಾಯಕ್ತಂ ವರ್ಣಾನಾಂ ಕಿಂ ಪ್ರಯೋಜನಂ ?
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೋಳಗೆ ?
ಇದು ಕಾರಣ ಕೂಡಲ ಸಂಗಮದೇವಾ ಲಿಂಗಸ್ಥಲವನರಿದವನೆ ಕುಲಜನು ! --ಬಸವಣ್ಣ ಸವಸ-1/590[1]
ವ್ಯಾಸ ಬೋವಿತಿಯ ಮಗ, ಮಾರ್ಖಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿಂ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ, ಕಶ್ಯಪ ಕಮ್ಮಾರ,
ಕೌಂಡಿನ್ಯನೆಂಬ ಋಷಿ ಮೂರು ಭುವನರಿಯದ ನಾವಿದ ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ! -ಬಸವಣ್ಣ ಸವಸ-1/589[1]
ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲುವೊಂದೆ ಕೂಡಲ ಸಂಗಮದೇವಾ ನಿಮ್ಮನರಿದವಂಗೆ. -ಬಸವಣ್ಣ ಸವಸ-1/879[1]
ಅಣ್ಣ, ತಮ್ಮ, ಹೆತ್ತಯ್ಯ ಗೋತ್ರದವರಾದಡೆನು?
ಲಿಂಗಸಾಹಿತ್ಯರಲ್ಲದವರ ಎನ್ನವರೆನ್ನೆನಯ್ಯಾ,
ನಂಟುಭಕ್ತಿ ನಾಯಕ ನರಕ,
ಕೂಡಲಸಂಗಮದೇವ - ಬಸವಣ್ಣ ಸವಸ-1/714[1]
ಆವ ಕುಲವಾದಡೇನು? ಶಿವಲಿಂಗವಿದ್ದವನೆ ಕುಲಜನು,
ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ?
ಶಿವಧರ್ಮಕುಲೇಜಾತಃ ಪುನರ್ಜನ್ಮ ವಿವರ್ಜಜಿತಃ !
ಉಮಾ ಮಾತಾ ಪಿತಾ ರುದ್ರ ಐಶ್ವರಂ ಕುಮೇವಚ !! ಎಂದುದಾಗಿ,
ಒಕ್ಕುದಕೊಂಬೆನವರಲ್ಲಿ. ಕೂಸ ಕೊಡುವೆ,
ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು - ಬಸವಣ್ಣ ಸವಸ-1/718[1]
ಅಪ್ಪನು ನಮ್ಮ ಮಾದಾರ ಚೆನ್ನಯ್ಯ,
ಬೊಪ್ಪನು ನಮ್ಮ ಡೊಹರ ಕಕ್ಕಯ್ಯ,
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ,
ಎನ್ನನೇತಕ್ಕರಿಯಿರಿ,ಕೂಡಲಸಂಗಯ್ಯ? - ಬಸವಣ್ಣ ಸವಸ-1/349[1]
ಸೆಟ್ಟಿಯೆಂಬೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ. - ಬಸವಣ್ಣ ಸವಸ-1/888[1]
ಜಾತಿವಿಡಿದು ಸೂತಕವನರಸುವೆ
ಜ್ಯೋತಿವಿಡಿದು ಕತ್ತಲೆಯನರಸುವೆ!
ಇದೇಕೊ ಮರುಳುಮಾನವಾ? ಜಾತಿಯಲ್ಲಿ ಅಧಿಕನೆಂಬೆ!
ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ?
'ಭಕ್ತನೆ ಶಿಖಾಮಣಿ' ಎಂದುದು ವಚನ,
ನಮ್ಮ ಕೂಡಲಸಂಗನ ಶರಣರ ಪಾದಪರುಷವ ನಂಬು,
ಕೆಡಬೇಡ ಮಾನವಾ. - ಬಸವಣ್ಣ ಸವಸ-1/595[1]
ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವೆಂದೆನಿಸಯ್ಯಾ
ಕೂಡಲಸಂಗಮದೇವ
ನಿಮ್ಮ ಮನೆಯ ಮಗನೆಂದೊನಸಯ್ಯಾ - ಬಸವಣ್ಣ ಸವಸ-1/62
ಹೊಲೆಯುಂಟೆ ಲಿಂಗವಿದ್ದಡೆಯಲ್ಲಿ?
ಕುಲವುಂಟೆ ಜಂಗಮವಿದ್ದಡೆಯಲ್ಲಿ?
ಎಂಜಲುಂಟೆ ಪ್ರಸಾದವಿದ್ದಡೆಯಲ್ಲಿ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ,
ಕೂಡಲಸಂಗಮದೇವಾ, ನಿಮ್ಮ ಶರಣರಿಗಿಲ್ಲದಿಲ್ಲ. - ಬಸವಣ್ಣ ಸವಸ-1/770 [1]
ಹೊಲೆಯೊಳಗೆ ಹುಟ್ಟಿ ಕುಲವನರಸುವೆ
ಎಲವೋ ಮಾತಂಗಿಯ ಮಗ ನೀನು.
ಸತ್ತುದನೆಳೆವ ಎತ್ತಣ ಹೊಲೆಯ?
ಹೊತ್ತು ತಂದು ನೀವು ಕೊಲುವಿರಿ!
ಶಾಸ್ತ್ರವೆಂಬುದು ಹೋತಿಂಗೆ ಮಾರಿ;
ವೇದವೆಂಬುದು ನಿಮಗೆ ತಿಳಿಯದು;
ನಮ್ಮ ಕೂಡಲಸಂಗನ ಶರಣರು
ಕರ್ಮ ವಿರಹಿತರು ಶರಣ ಸನ್ನಿಹಿತರು ಅನುಮಪ ಚರಿತ್ರರು
ಅವರಿಗೆ ತೋರಲು ಪ್ರತಿ ಇಲ್ಲವೊ! --ಬಸವಣ್ಣನವರು
ದೇವ, ದೇವಾ ಬಿನ್ನಹ ಅವಧಾರು:
ವಿಪ್ರ ಮೊದಲು, ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲನೊಂದೆ ಎಂಬೆ.
ಹಾರುವ ಮೊದಲು, ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನೊಂದೆ ಎಂಬೆ.
ಹೀಗೆಂದು ನಂಬೂದೆನ್ನ ಮನ.
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ
ಹಲುದೊರೆ ಮೂಗ ಕೊಯಿ, ಕೂಡಲಸಂಗಮದೇವಾ. - ಬಸವಣ್ಣ ಸವಸ-1/711 [1]
ವಾಲ್ಮೀಕನ ಶೇಷ ಪ್ರಸಾದವೆಲ್ಲ ಸಂಸ್ಕೃತಮಯವಾಯಿತು ಮರ್ತ್ಯಕ್ಕೆ;
ದೂರ್ವಾಸನ ಉಪದೇಶವೆಲ್ಲ ಚಂಡಾಲರ ಮುನಿಗಳ ಮಾಡಿತ್ತು ಸ್ವರ್ಗಕ್ಕೆ;
ಕುಲವೆಂದಡೆ ಮಲತ್ರಯಗಳು ಬಿಡವು ನೋಡಾ,
ಕಪಿಲಸಿದ್ಧ ಮಲ್ಲಿಕಾರ್ಜುನಾ. -ಸಿದ್ಧರಾಮೇಶ್ವರ
ಕುಲದಿಂದಧಿಕವೆಂದು ಹೋರಾಡುವ ಅಣ್ಣಗಳಿರಾ, ಕೇಳಿರಯ್ಯಾ
ಬ್ರಾಹ್ಮಣನವ ಮಧುವಯ್ಯ, ಚಂಡಾಲನವ ಹರಳಯ್ಯ’
ದೂರ್ವಾಸನವ ಮಚ್ಚಿಗ, ಊರ್ವಸಿಯಾಕೆ ದೇವಾಂಗನೆ,
ಚಂಡಾಲನ ಪರಾಶರ, ಕುಸುಮಗಂಧಿಯಾಕೆ ಕಬ್ಬಿಲಗಿತ್ತಿ.
ಜಪತಸ್ತಪತೋ ಗಣತಃ ಕಪಿಲಸಿದ್ಧಮಲ್ಲಿಕಾರ್ಜುನಾ
ಕೇಳಾ ಕೇದಾರಯ್ಯಾ.-ಸಿದ್ಧರಾಮೇಶ್ವರ
ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೋ
ಕುಲವೇ ಡೋಹರನ? ಕುಲವೇ ಮಾದಾರನ?
ಕುಲವೇ ದೂರ್ವಾಸನ? ಕುಲವೇ ವ್ಯಾಸನ?
ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ?
ಕುಲವ ನೋಳ್ಪಡೆ ನಡೆಯುವರು ತ್ರಿಲೋಕದಲ್ಲಿಲ್ಲ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನ - ಸಿದ್ಧರಾಮೇಶ್ವರ ವಚನ ಸಂಪುಟ- ೪ ವಚನ ಸಂಖ್ಯೆ: ೧೫೨೬ [1]
ಕುರಿಕೋಳಿ ಕಿರುಮೀನ ತಿಂಬವರ
ಊರೊಳಗೆ ಇರು ಎಂಬರು.
ಅಮೃತಾನ್ನವ ಕರೆವ ಗೋವ ತೆಗೆವರ
ಊರಿಂದ ಹೊರಗಿರು ಎಂಬರು.
ಆ ತನು ಹರಿಗೋಲಾಯಿತ್ತು,
ಬೊಕ್ಕಣ, ಸಿದಿಕೆ, ಬಾರುಕೋಲು, ಪಾದರಕ್ಷೆ
ದೇವರ ಮುಂದೆ ಬಾರಿಸುವುದಕ್ಕೆ ಮದ್ದಳೆಯಾಯಿತ್ತು.
ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧಮಾಡಿ
ತಿಂಬ ಗುಜ್ಜ ಹೊಲೆಯರ ಕಂಡಡೆ
ಉದ್ದನ ಚಮ್ಮಾಳಿಗೆಯ ತೆಕ್ಕೊಂಡು ಬಾಯ ಕೊ[ಯ್ಯು]ವೆನು
ಎಂದಾತ ನಮ್ಮ ಅಂಬಿಗರ ಚೌಡಯ್ಯ. -೬/೧೧೬ [1]
ಹೊಲೆಯ ಹೊಲೆಯ ಎಂದಡೆ
ಹೊಲೆಯರೆಂತಪ್ಪರಯ್ಯಾ?
ಹೊಲೆಯ ಹೊರಕೇರಿಯಲ್ಲಿರುವನು,
ಊರೋಳಗಿಲ್ಲವೆ ಅಯ್ಯಾ, ಹೊಲೆಯರು?
ತಾಯಿಗೆ ಬೈದವನೇ ಹೊಲೆಯ,
ತಂದೆಗೆ ಉತ್ತರ ಕೊಟ್ಟವನೆ ಹೊಲೆಯ,
ಕೊಡುವ ದಾನಕ್ಕೆ ಅಡ್ಡ ಬಂದವನೆ ಹೊಲೆಯ,
ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ,
ಬ್ರಾಹ್ಮಣನ ಕುತ್ತಿಗೆಯ ಕೊಯ್ದವನೇ ಹೊಲೆಯ,
ಹತ್ತು ಆಡಿದರೆ ಒಂದು ನಿಜವಿಲ್ಲದವನೇ ಹೊಲೆಯ,
ಚಿತ್ತದಲ್ಲಿ ಪರಸತಿಯ ಬಯಸಿದವನೇ ಹೊಲೆಯ,
ಲಿಂಗಮುದ್ರೆಯ ಕಿತ್ತಿದವನೇ ಹೊಲೆಯ,
ಲಿಂಗವ ಬಿಟ್ಟು ತಿರುಗುವವನೇ ಹೊಲೆಯ,
ಧರ್ಮವ ಮಾಡದವನೇ ಹೊಲೆಯ,
ಬಸವನ ಕೊಂದವನೇ ಹೊಲೆಯ,
ಲಿಂಗಪೂಜೆಯ ಮಾಡದವನೇ ಹೊಲೆಯ,
ಇಂತಪ್ಪ ಹೊಲೆಯರು ಊರ ತುಂಬ ಇರಲಾಗಿ
ಹೊರಕೇರಿಯವರಿಗೆ ಹೊಲೆಯರೆನಬಹುದೇ?
ಹೊಲೆ ಹುಟ್ಟಿದ ಮೂರು ದಿನಕ್ಕೆ
ಪಿಂಡಕ್ಕೆ ನೆಲೆಯಾಯಿತ್ತು.
ಹಿಪ್ಪೆಯನುಂಡ ತೊಗಲು ಹರಿಗೋಲವಾಯಿತ್ತು.
ಗುರುಗಳಿಗೆ ಚಮ್ಮಾವುಗೆಯಾಯಿತ್ತು
ಹೂಡಲಿಕ್ಕೆ ಮಿಣಿಯಾಯಿತ್ತು.
ಹೊಡೆಯಲಿಕ್ಕೆ ಬಾರುಕೋಲವಾಯಿತ್ತು.
ಬಂಡಿಗೆ ಮಿಣಿಯಾಯಿತ್ತು.
ಅರಸರಿಗೆ ಮೃದಂಗವಾಯಿತ್ತು.
ತೋಲು ನಗಾರಿಯಾಯಿತ್ತು.
ತುಪ್ಪ ತುಂಬಲಿಕ್ಕೆ ಸಿದ್ದಲಿಕೆ.
ಎಣ್ಣೆ ತುಂಬಲಿಕೆ ಬುದ್ದಲಿಕೆನವಾಯಿತ್ತು.
ಸಿದ್ದಲಿಕೇನ ತುಪ್ಪ, ಬುದ್ದಲಿಕೇನ ಎಣ್ಣೆ
ಕಲ್ಲಿಶೆಟ್ಟಿ ಮಲ್ಲಿಶೆಟ್ಟಿಗಳು ಕೂಡಿ
ನಾ ಶೀಲವಂತ ತಾ ಶೀಲವಂತ
ಎಂದು ಶುದ್ಧೈಸಿಕೊಂಡು ತಿಂದು ಬಂದು,
ಜಗಳ ಬಂದಾಗ ನನ್ನ ಕುಲ ಹೆಚ್ಚು.
ನಿನ್ನ ಕುಲ ಹೆಚ್ಚು ಕಡಿಮೆ
ಎಂದು ಬಡಿದಾಡುವ ಕುನ್ನಿ ನಾಯಗಳ
ಮೋರೆ ಮೋರೆಯ ಮೇಲೆ
ನಮ್ಮ ಪಡಿಹಾರಿ ಉತ್ತಣ್ಣಗಳ
ವಾಮ ಪಾದುಕೆಯ ಕೊಂಡು
ಅವರ ಅಂಗುಳ ಮೆಟ್ಟಿ ಫಡಫಡನೆ ಹೊಡಿ ಎಂದಾತ
ನಮ್ಮ ದಿಟ್ಟ ಅಂಬಿಗರ ಚೌಡಯ್ಯ ನಿಜಶರಣನು. - ಅಂಬಿಗರ ಚೌಡಯ್ಯ
ಭೂತೇಶಗೆರಗುವನು ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ
ದಾತ ಮಾದಿಗನು ಸರ್ವಜ್ಞ
ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
ಕುಲಗೋತ್ರವುಂಟೆ? ಸರ್ವಜ್ಞ
ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ?
ಜಾತಂಗೆ ಜಾತನೆನಲೇಕೆ? ಅರುವಿಡಿ
ದಾತನೇ ಜಾತ ಸರ್ವಜ್ಞ
ಯಾತರ ಹೂವೇನು ? ನಾತವಿದ್ದರೆ ಸಾಕು
ಜಾತಿಯಲಿ ಜಾತಿಯೆನಬೇಡ ಶಿವನೊಲಿ
ದಾತನೆ ಜಾತ ಸರ್ವಜ್ಞ
ಕುಲಗೋತ್ರಜಾತಿಸೂತಕದಿಂದ
ಕೆಟ್ಟವರೊಂದು ಕೋಟ್ಯಾನುಕೋಟಿ.
ಜನನಸೂತಕದಿಂದ ಕೆಟ್ಟವರು ಅನಂತಕೋಟಿ.
ಮಾತಿನಸೂತಕದಿಂದ ಮೋಸವಾದವರು
ಮನು ಮುನಿಸ್ತೋಮ ಅಗಣಿತಕೋಟಿ.
ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು
ಹರಿಹರ ಬ್ರಹ್ಮಾದಿಗಳೆಲ್ಲರು.
'ಯದ್ದೃಷ್ಟಂ ತನ್ನಷ್ಟಂ' ಎಂಬುದನರಿಯದೆ
ಹದಿನಾಲ್ಕುಲೋಕವೂ ಸಂಚಿತಾಗಾಮಿಯಾಗಿ
ಮರಳಿ ಮರಳಿ ಹುಟ್ಟುತ್ತಿಪ್ಪರಯ್ಯ.
ಇಂತೀ ಸೂತಕದ ಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ
ಪರಬ್ರಹ್ಮ ದೊರಕುವದೆ ಅಯ್ಯಾ ?
ಇದು ಕಾರಣ, ನಾಮರೂಪುಕ್ರೀಗಳಿಗೆ ಸಿಲ್ಕುವನಲ್ಲವಯ್ಯ.
ಅಗಮ್ಯ ಅಪ್ರಮಾಣ ಅಗೋಚರವಯ್ಯ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವಲ್ಲದೆ ಉಳಿದವರಿಗಿಲ್ಲವೆಂಬೆನು. - ಬಾಚಿಕಾಯಕದ ಬಸವಣ್ಣ/೨೧೦ [1]
ಕುಲಛಲವ ಬಿಟ್ಟು ನಿಮ್ಮನೊಲಿಸಿದ ಶರಣರಿಗೆ
ತಲೆವಾಗುವೆ ನಾನು ಕುಲಜರೆಂದು. -ಜೇಡರ ದಾಸಿಮಯ್ಯ
ಚಾಂಡಾಲನಾದಡೇನು! ಶಿವಭಕ್ತನೆ ಕುಲಜನು.
….
ನಮ್ಮ ಭಕ್ತರನು ಅವರಿವರೆಂದು ಕುಲವನೆತ್ತಿ ನುಡಿದಂಗೆ
ಇಪ್ಪತ್ತೇಳು ಕೋಟಿ ನರಕ ತಪ್ಪದು.
ಬಸವಪ್ರಿಯ ಕೂಡಲಚನ್ನಸಂಗಮದೇವಾ. -ಹಡಪದ ಅಪ್ಪಣ್ಣ
ಕುರಿ ಕೋಳಿ ಕಿರಿಮೀನು ತಿಂಬುವರಿಗೆ ಕುಲಜ ಕುಲಜರೆಂದೆಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ; ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ಧಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ;
ಉರಿಲಿಂಗಪೆದ್ದಿಗಳ ಅರಸು ಒಲ್ಲನವ್ವಾ. -ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ದಲಿತ ವಚನಕಾರ್ತಿ ಕಾಳವ್ವೆ ಎಷ್ಟೊಂದು ನೋವಿನಿಂದ ಈ ವಚನವನ್ನು ಬರೆದಿರಬಹುದು! ತರ್ಕಹೀನ ಜಾತೀಯತೆಯ ಜನಕರಾದ ವಿಪ್ರರು ಚರ್ಮದ ಸಿದ್ದಲಿಕೆಯಲ್ಲಿನ ತುಪ್ಪವನ್ನು ಮತ್ತು ಚರ್ಮದ ಚೀಲವಾದ ಸಗ್ಗಳೆಯ ನೀರನ್ನು ಶುದ್ಧ ಎಂದು ಕುಡಿಯುವ ಬುದ್ಧಿಗೇಡಿಗಳೆಂದು ಕಾಳವ್ವೆ ಮೂದಲಿಸುತ್ತಾಳೆ. ಜಾತೀಯತೆಯ ನೋವು ಮತ್ತು ಅಪಮಾನಗಳು ಅನುಭವಿಸುವವರಿಗೇ ಗೊತ್ತು. ಆ ನೋವನ್ನು ತಮ್ಮದಾಗಿಸಿಕೊಂಡ ಬಸವಣ್ಣನವರಿಗೇ ಗೊತ್ತು.
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣವನು.
‘ಸಂಬೋಳಿ’, ‘ಸಂಬೋಳಿ’ ಎನ್ನುತ್ತ ಇಂಬಿನಲ್ಲಿ ಇದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು. -ಬಸವಣ್ಣ
ಬಸವಣ್ಣನವರು ಅಸ್ಪೃಶ್ಯರ ಜೊತೆ ಒಂದಾಗುವ ಕ್ರಮವಿದು. ಅವರು ಈ ವಚನದಲ್ಲಿ ಬಳಸಿದ ‘ಹೊರಗಣವನು’, ‘ಸಂಬೋಳಿ’, ‘ಇಂಬು’ (ದೂರ), ‘ಅನಾಮಿಕ’ಪದಗಳು ಅಸ್ಪೃಶ್ಯನನ್ನು ಸೂಚಿಸುತ್ತವೆ. ‘ತಾನೂ ಅಸ್ಪೃಶ್ಯ’ ಎಂದು ಬಸವಣ್ಣನವರು ಒತ್ತಿ ಹೇಳಿದ್ದಾರೆ. ಅಲ್ಲದೆ ಬೂಟಾಟಿಕೆಯ ಭಕ್ತರು ಸ್ಥಾವರ ಲಿಂಗದೇವರ ಮಂದಿರದಲ್ಲಿ ಸಲಿಗೆ ವಂತರಾಗಿ ಇದ್ದುದಕ್ಕೆ ‘ಮಹಿಮರು’ ಎಂದು ವ್ಯಂಗ್ಯವಾಡಿದ್ದಾರೆ. ಗುಡಿಯ ಒಳಗಡೆ ಪ್ರವೇಶ ಸಿಗದ ಅಸ್ಪೃಶ್ಯರ ಜೊತೆಗೆ ಹೊರಗಡೆ ನಿಂತು ಒಳಗಿದ್ದವರಿಗೆ ಎಚ್ಚರಿಸುತ್ತಿದ್ದಾರೆ.(‘ಸಂಬೋಳಿ’ಪದಕ್ಕೆ’ಎಚ್ಚರ’ ಎಂಬ ಅರ್ಥವೂ ಇದೆ.)
ಬೊಂತಾದೇವಿ ತನ್ನ ಒಂದು ವಚನದಲ್ಲಿ ಅತ್ಯಂತ ಸಂಕೀರ್ಣವಾದ ರೀತಿಯಲ್ಲಿ ಸಮಾನತೆ ಕುರಿತಂತೆ ಚರ್ಚೆ ಮಾಡಿದ್ದಾಳೆ. ‘ಬಯಲು’ ಎಂಬ ನುಡಿಯನ್ನು ಆಧಾರವಾಗಿಟ್ಟುಕೊಂಡು ಆಕೆಯ ತನ್ನ ಸಮಾನತಾ ಪ್ರಣಾಳಿಕೆಯನ್ನು ಕಟ್ಟಿದ್ದಾಳೆ. ‘ಬಯಲು’ ಎಂಬುದು ಒಂದು ಬಗೆಯಲ್ಲಿ ರೋಮಾಂಚನ ಉಂಟುಮಾಡಬಲ್ಲ ನುಡಿಯಾಗಿದೆ. ಅದಕ್ಕೆ ಅನೇಕ ಅರ್ಥಗಳು ಸಾಧ್ಯ. ಮುಕ್ತ ಎಂಬ ಅರ್ಥ ಸಾಧ್ಯ. ‘ಗತಿಶೀಲ’ ಎಂಬ ಅರ್ಥವೂ ಅದಕ್ಕೆ ಇದೆ. ಗಡಿರೇಖೆಗಳಿಲ್ಲದ ಒಂದು ಸ್ಥಿತಿ ಎಂಬ ಅರ್ಥವೂ ಅದಕ್ಕಿದೆ. ತಾರತಮ್ಯರಹಿತ ಸಂಗತಿ ಎಂಬ ಅರ್ಥವನ್ನೂ ಅದು ವ್ಯಂಜಿಸುತ್ತದೆ.
ಈ ವಚನದಲ್ಲಿ ಬೊಂತಾದೇವಿಯು ಅಸಮಾನತೆಯ ಎರಡು ನೆಲೆಗಳನ್ನು ಕುರಿತಂತೆ ಅನುಸಂಧಾನ ನಡೆಸಿದ್ದಾಳೆ.
ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೆಂದುಂಟೆ ?
ಎಲ್ಲಿ ನೋಡಿದರೂ ಬಯಲೊಂದೆ.
ಭಿತ್ತಿಯಿಂದ ಒಳ ಹೊರಗೆಂಬ ನಾಮ ವೈಸೆ
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
ಇದೊಂದು ಅದ್ಭುತ ವಚನ. ಸಮಾನತೆಯನ್ನು ಆಕೆ ಪರಿಭಾವಿಸಿಕೊಂಡಿರುವ ಬಗೆ ಕುತೂಹಲಕಾರಿಯಾಗಿದೆ. ಇಲ್ಲಿ ಆಕೆ ಮೂಲಭೂತವಾಗಿ ಬ್ರಾಹ್ಮಣ-ಹೊಲೆಯರಗಳ ನಡುವಿನ ಅಸಮಾನತೆ ಬಗ್ಗೆ ಮಾತನಾಡುತ್ತಿದ್ದಾಳೆ. ‘ಒಳಗಣ ಬಯಲು’ ಮತ್ತು ‘ಹೊರಗಣ ಬಯಲು’ಗಳನ್ನು ಆಕೆ ಇಲ್ಲಿ ಮುಖಾಮುಖಿಯಾಗಿಸಿದ್ದಾಳೆ. ಆಕೆಯ ಪ್ರಕಾರ ‘ಬಯಲು’ ಎಂಬುದು ಒಂದೆ. ಅದು ಎರಡಾಗಿರಲು ಸಾಧ್ಯವಿಲ್ಲ. ಸಾಮಾಜಿಕವಾಗಿ ‘ಒಳಗೆ-ಹೊರಗೆ’ ಎಂಬ ವರ್ಗೀಕರಣವಿರಬಹುದು. ಆದರೆ ಮೂಲದಲ್ಲಿ ಬಯಲೆಂಬುದು ಒಂದೆ. ಈ ವಚನವೂ ಸ್ಪಷ್ಟವಾಗಿ ಅಸಮಾನತೆ ಎಂಬುದು ಹುಟ್ಟಿದ ವಿಕೃತಿಯಲ್ಲ. ಅದು ಸಾಮಾಜಿಕವಾಗಿ ಕಟ್ಟಿಕೊಂಡಿರುವ ಉಪಾದಿಯಾಗಿದೆ ಎಂಬುದರ ಬಗ್ಗೆ ನಮ್ಮ ಗಮನ ಸೆಳೆಯುತ್ತಿದೆ. ವಚನ ಸಂಸ್ಕೃತಿಯು ಸಮಾನತೆಯನ್ನು ಕುರಿತಂತೆ ಕಟ್ಟಿರುವ ಸಂಕಥನವು ಬಹುರೂಪಿ ಯಾದುದಾಗಿದೆ. ಅದಕ್ಕೆ ವರ್ಗ ಸ್ವರೂಪವಿದೆ. ಜಾತಿ ನೆಲೆಯಿದೆ, ಲಿಂಗ ಸ್ವರೂಪವಿದೆ. ನಿಜವಾಗಿ ಹೇಳಬೇಕೆಂದರೆ ಅಲ್ಲಿ ಸಮಾನತೆ ವಿಚಾರ ಪ್ರಣಾಳಿಕೆಯು ವರಮಾನಕ್ಕಿಂತ ಬದುಕಿನ ಉಳಿದ ನೆಲೆಗಳಿಗೆ ಹೆಚ್ಚು ಅನ್ವಯವಾಗುವಂತಿದೆ.
ಜಾತಿಯಲ್ಲಿನ ಶ್ರೇಷ್ಠ-ಕನಿಷ್ಠವೆಂಬ ತಾರತಮ್ಯವನ್ನು ಮಾದಾರ ಚೆನ್ನಯ್ಯನು ಅತ್ಯಂತ ಸರಳ ರೀತಿಯಲ್ಲಿ ಮಂಡಿಸುತ್ತಾನೆ. ಅವನ ವಚನವು ತುಂಬಾ ಸರಳವಾದುದಾಗಿದೆ. ಅವನ ಪ್ರಕಾರ
‘ಆಚಾರವೇ ಕುಲ : ಅನಾಚಾರವೇ ಹೊಲೆ.’
ಮುಂದುವರಿದು ಆತ ತನ್ನ ವಚನವೊಂದರಲ್ಲಿ ಹೀಗೆ ಹೇಳುತ್ತಾನೆ.
ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ
ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ
ಕಶ್ಯಪ ಕಮ್ಮಾರ, ರೋಮಜ ಕಂಚುಗಾರ
ಕೌಂಡಿಲ್ಯ ನಾವಿದನೆಂಬುದನರಿದು
ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ?
ಇಂತೀ ಸಪ್ತ ಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದ ನರಿಯದೆ
ಅಸತ್ಯದಲ್ಲಿ ನುಡಿದು, ವಿಪ್ರರು ನಾವು ಘನವೆಂದು
ಹೋರುವ ಹೊತ್ತು ಹೋಕರ ಮಾತೇತಕ್ಕೆ?
ಕೈಯುಳಿ ಕತ್ತಿ ಅಡಿ ಗೂಂಟಕ್ಕಡಿಯಾಗಬೇಡ,
ಅರಿ ನಿಜಾತ್ಮ ರಾಮ ರಾಮನಾ.
ಹೊಲೆಯನ್ನು ಕುಲವನ್ನು ಏಕನೆಲೆಯಲ್ಲಿ ಮಾದಾರಚೆನ್ನಯ್ಯನು ತಿರಸ್ಕರಿಸುತ್ತಿದ್ದಾನೆ. ಏಕೆಂದರೆ ಸಪ್ತಋಷಿಗಳೆಲ್ಲರೂ, ಯಾವುದನ್ನು ಕೀಳುಜಾತಿಯೆಂದು ಕರೆಯಲಾಗಿದೆಯೋ ಆ ಜಾತಿಗಳಿಂದ ಬಂದವರೆ! ಆದರೆ ಅವರಿಗೆ ಸತ್ಯದ ದರ್ಶನವಾಗಿದೆ. ಅಂದ ಮೇಲೆ ಕುಲ-ಹೊಲೆಗಳು ಮುಖ್ಯವಲ್ಲ. ಅವು ಅಸತ್ಯ. ವಿಪ್ರರು ಹುಟ್ಟಿನಿಂದ ಪವಿತ್ರರೆಂದು ಮೆರೆಯುತ್ತಾರೆ. ಆದರೆ ಅವರ ಹುಟ್ಟು ಘನವಾದುದೇನಲ್ಲ.
[1] ಈ ತರಹದ ಸಂಖ್ಯೆಯ ವಿವರ: ಸವಸ-1/590 :- ಸಮಗ್ರ ವಚನ ಸಂಪುಟ-೧, ವಚನ ಸಂಖ್ಯೆ-590 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*ಬಸವಣ್ಣನವರ ವಚನಗಳು, Basava Vachana | ಎಲ್ಲ ದಿನವೂ ಶುಭ ದಿನವೇ! ಎಲ್ಲಾ ಕಾಲವೂ ಶುಭವೇ! |