ಕೋಪದ ಬಗ್ಗೆ, ಶರಣರ ಸಲಹೆ ಸೂಚನೆಗಳು | ಶರಣರು ಮತ್ತು ಮಹಿಳಾ ಸ್ವಾತಂತ್ಯ್ರ |
ಮಾನವೀಯ ಮೌಲ್ಯಗಳ ಪ್ರತಿಪಾದಕ ವಚನ ಸಾಹಿತ್ಯ |
- ನಾಗಶೆಟ್ಟಿ ಕಂಟೆಪ್ಪ ಶೆಟಕಾರ ಎಂಎ, ಎಂಫಿಲ್, ಪಿಹೆಚ್.ಡಿ,
ಓಂ ಶ್ರೀಗುರು ಬಸವಲಿಂಗಾಯ ನಮಃ
ಜೀವನ ನಶ್ವರ, ಜಗತ್ತು ಮಿಥ್ಯ ಎಂದೆಲ್ಲ ಜೀವನದ ಅಪಮೌಲ್ಯಮಾಡಿದ ವೇದ ಶಾಸ್ತ್ರಗಳನ್ನು ಖಂಡಿಸಿ ಅರ್ಥವಾಗದ ಸಂಸ್ಕøತ ಭಾಷೆಯನ್ನು ಧಿಕ್ಕರಿಸಿ ಆಡುಭಾಷೆ ಕನ್ನಡದಲ್ಲಿ ಜಗನ್ನಿಯಾಮಕ ತತ್ವಗಳನ್ನು ತಿಳಿಯಪಡಿಸಿದ ಕ್ರಾಂತಿಕಾರಿ ಸಾಹಿತ್ಯವೇ ವಚನ. ವಚನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಉನ್ನತರನ್ನು ಒಳಗೊಂಡು ಪ್ರತಿಯೊಬ್ಬರ ಜೀವನಾನುಭದಿಂದ ರೂಪಿತವಾದ ಅನುಭವಜನ್ಯ ಪ್ರಮಾಣ(ಶಪಥ)ಗಳು. ಆದುದರಿಂದ ಅವು ಜೀವನಕ್ಕೆ ತೀರಾ ಹತ್ತಿರವಾಗಿವೆ. ಯಾರೋ ಒಬ್ಬ ಕುಳಿತಲ್ಲೇ ತನ್ನ ವಿಚಾರ ಲಹರಿಯನ್ನು ಹರಿಯಬಿಟ್ಟು ಕಾಲ್ಪನಿಕ ಅಂಶಗಳನ್ನು ದಾಖಲಿಸಿದ ಸಾಹಿತ್ಯ ಖಂಡಿತ ಅಲ್ಲ. ಅತೀ ಸರಳ ಸುಂದರ ಆಡು ಭಾಷೆಯ ನಿರೂಫಣೆಯಲ್ಲಿ ಬಸವಾದಿ ಶರಣರು ದಿವ್ಯ ಜ್ಞಾನದ ಪರಿಚಯವನ್ನು, ಪ್ರೇರಕ ಶಕ್ತಿಯ ರೂಪದಲ್ಲಿ ವಚನಸಾಹಿತ್ಯದ ಮೂಲಕ ಮನುಕುಲಕ್ಕೆ ನೀಡಿದ್ದಾರೆ.
*ವಚನಧರ್ಮ ಅತ್ಯುನ್ನತ ಸಾಧನೆ ಮೆರೆದಿದೆ. ಅದನ್ನು ಆದರ್ಶವನ್ನಾಗಿಸಿಕೊಂಡು ಮುನ್ನಡೆದಲ್ಲಿ ಯಶ ಖಂಡಿತ. ಪರ್ಯಾಯ ಹುಡುಕುವುದು ಮುಖಭಂಗಕ್ಕೆ ನಾಂದಿ.
ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆ ಮಳಲು,
ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು,
ಬೆರೆ ಬಾವಿಯ ತೋಡಿ ಉಪ್ಪನೀರನುಂಬವನ ವಿಧಿಯಂತೆ
ಆಯಿತ್ತೆನ್ನ ಮತಿ, ಕೂಡಲಸಂಗಮದೇವಾ. - ಬಸವಣ್ಣ ಸವಸ 1/291
ಬಹುದೇವತೋಪಾಸನೆಯ ಕಾರಣದಿಂದಾಗಿ ಭಾರತೀಯರ ಬಹುತೇಕ ಸಂಪನ್ಮೂಲ ವೃಥಾ ಹರಿದು ಹೋಗುತ್ತಿದೆ. ಅಜ್ಞಾನದ ಕತ್ತಲೆಯಲ್ಲಿ ಶತಶತಮಾನಗಳಿಂದ ಮಾನವ ಜೀವನ ಕತ್ತಲೆಯಲ್ಲಿ ಲೀನವಾಗುತ್ತಿದೆ. ಅರ್ಥಹೀನ ಸಂಪ್ರದಾಯಗಳನ್ನು ಸರ್ವರ ಹಿತಾಸಕ್ತಿಯನ್ನು ಕಾಯಲು ಎಡವಿರುವ ವೇದ ಶಾಸ್ತ್ರಗಳನ್ನು ಅನುಸರಿಸುವುದರಲ್ಲಿ ಅರ್ಥವಿಲ್ಲ.
ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಸುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು ನೇಣು ಹರಿದು,ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು. - ಅಲ್ಲಮಪ್ರಭುದೇವರ ವಚನ ಸವಸ 2/460
ಕರಾಳ ಹಿಡಿತದಲ್ಲಿದ ಸಮಾಜವನ್ನು ಬಿಡುಗಡೆಗೊಳಿಸಿ ಮತ್ರ್ಯದ ಜೀವಿಗಳು ಹೇಳ ಹೆಸರಿಲ್ಲದಂತೆ ನಾಶವಾಗಬಾರದೆಂದು ಉಳಿಸಲು ಭುವಿಗೆ ಬಂದ ಪ್ರವಾದಿ ಬಸವಣ್ಣ. ಅವರು ಕಾರಣಿಕ ಪರುಷ, ಜೀವನಕ್ಕೆ ಒಂದು ಗುರಿಯನ್ನು ನಿಗದಿ ಪಡಿಸಿಕೊಳ್ಳಬೇಕು. ಅದರ ಸಾಧನೆಗಾಗಿ ನಿರಂತರ ಪ್ರಯತ್ನದಲ್ಲಿರಬೇಕು. ಈ ಕೆಳಕಂಡ ವಚನ ನಿದರ್ಶನದಲ್ಲಿ ಗುರು ಬಸವಣ್ಣನವರ ಧ್ಯೇಯ ಕೈಗೂಡಿದ ಅಪರಿಮಿತ ಆನಂದವನ್ನು, ಬಸವಣ್ಣವರು ಮತ್ರ್ಯಲೋಕ ಶಿವಲೋಕದ ಭೇಧವನ್ನು ಕಿತ್ತು ಹಾಕಿದ ದಿಗ್ವಿಜಯದ ದಾಖಲೆಯನ್ನು ಅಲ್ಲಮ ಪ್ರಭುಗಳು ಈ ವಚನದಲ್ಲಿ ದಾಖಲಿಸಿದ್ದಾರೆ.
ಮತ್ರ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶರಣನ!
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವಮಾಡಿ
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿದುತಂದು
ಅಮರಗಣಂಗಳೆಂದು ಹೆಸರಿಟ್ಟು ಕರೆದು,
ಅಗಣಿತಗಣಂಗಳೆಲ್ಲರ ಹಿಡಿತಂದು,
ಅಸಂಖ್ಯಾತರೆಂಬ ಹೆಸರಿಟ್ಟು ಕರೆದು,
ಭಕ್ತಿಯ ಕುಳಸ್ಥಲವ ಶ್ರುತದೃಷ್ಟಪವಾಡದಿಂದ ಮೆರೆದುತೊರಿ,
ಜಗವರಿಯಲು ಶಿವಾಚಾರದ ಧ್ವಜವನೆತ್ತಿಸಿ
ಮತ್ರ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಣಿಗೆಯಾದನು,
ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಡು,
ಎನ್ನ ಮನ ಉಬ್ಬಿ ಕೊಬ್ಬಿ ಓಲಾಡುತ್ತಿದ್ದೆನಯ್ಯಾ!
ನಮ್ಮ ಗುಹೇಶ್ವರನ ಶರಣ ಸಂಗನಬಸವಣ್ಣನ
ದಾಸೋಹದ ಘನವನೇನೆಂದೆನಬುಹುದು ನೋಡಾ ಸಿದ್ದರಾಮಯ್ಯ. - ಅಲ್ಲಮಪ್ರಭುದೇವರ ವಚನ ಸವಸ2/1454
ಜೀವನ ನಶ್ವರ ಖಂಡಿತ ಅಲ್ಲ ಬದುಕಿ ಇರುವವರೆಗೂ ಸಮಾಜದ ದೇಶದ ಬಗ್ಗೆ ನಿರಂತರ ಚಿಂತನೆ ಸಮಾಜ ಸೇವೆಯನ್ನು ಕಾರ್ಯಗತ ಗೋಳಿಸುತ್ತಿರಬೇಕು. ಜೀವಿತ ಅವಧಿಯ ಕಾಲವನ್ನೆಲ್ಲ ಉತ್ಸಾಹಿಯಾಗಿ ಆನಂದದಿಂದ ಅರ್ಥಪೂರ್ಣವಾಗಿ ಬದುಕುವ ಕಲೆಯನ್ನು ರೂಢಿಸಿಕೊಟ್ಟ ನಿದರ್ಶನವಿದು.
ತೊಟ್ಟು ಬಿಡುವನ್ನಕ್ಕ ಮತ್ತಾ ಬುಡದಾಸೆ ಬೇಕು.
ಮತ್ರ್ಯದ ಹಂಗುಳ್ಳನ್ನಕ್ಕ
ಸತ್ಯಶರಣರ ಸಂಗ, ನಿತ್ಯ ಜಂಗಮ ಸೇವೆ ಕೃತ್ಯವಿರಬೇಕು
ಅಮರೇಶ್ವರಲಿಂಗವನರಿವುದಕ್ಕೆ. - ಆಯ್ದಕ್ಕಿ ಮಾರಯ್ಯ ಸವಸ 6/ 1179/16
ಜೀವಿಸುವ ಹಕ್ಕು ಪ್ರತಿಯೊಬ್ಬನಿಗಿದೆ ಹಾಗೆಯೇ ಕಾಯಕದ ಜವಾಬ್ದಾರಿಯು ಕೂಡ ಪ್ರತಿಯೋಬ್ಬನಿಗಿದೆ. ಸತ್ಯಶುಧ್ಧ ಕಾಯಕ ದೇವ ಸ್ಮರಣೆಗಿಂತಲೂ ಮಹತ್ವದ್ದು. ಕಾಯಕದಿಂದ ತನ್ನ ಉಪಜೀವನ ಮಾತ್ರವಲ್ಲದೇ ಸಮಷ್ಟಿಯ ಹಿತವೂ ಕೂಡ ಸಾಧಿತವಾಗಬೇಕು.
ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗುಹರಿಯಬೇಕು.
ಕಾಯಕವೇ ಕೈಲಾಸವಾದ ಕರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು. - ಆಯ್ದಕ್ಕಿ ಮಾರಯ್ಯ ಸವಸ 6/ 1170/7
ಬರಿಯ ಉಪದೇಶಕ್ಕೆ ಯಾವುದೇ ಬೆಲೆ ನೆಲೆ ಇಲ್ಲ, ಆಚರಣೆ ಇಲ್ಲದ ಯಾರೂ ಮಾನ್ಯರಲ್ಲ. ವಚನಸಾಹಿತ್ಯವು ಆಚಾರಕ್ಕೆ ಮಾನ್ಯಮಾಡಿದೆ. ಶರಣ ಸಂಕುಲವು ತಾವಾಡಿದ ಮಾತುಗಳನ್ನೆಲ್ಲ ಮೊದಲು ಜೀವನದಲ್ಲಿ ಆಚರಿಸಿದ ನಂತರವೇ ಸಾಹಿತ್ಯದ ರೂಪದಲ್ಲಿ ದಾಖಲಿಸಿರುವುದಕ್ಕೆ ಸ್ವತಃ ವಚನ ಸಾಹಿತ್ಯವೇ ಸಾಕ್ಷಿಯಾಗಿದೆ.
ಗುರುವಾದಡೂ ಆಚಾರಭೃಷ್ಟನಾದಡೆ ಅನುಸರಿಸಲಾಗದು.
ಲಿಂಗವಾದಡೂ ಆಚಾರದೋಹಳವಾದಲ್ಲಿ ಪೂಜಿಸಲಾಗದು.
ಜಂಗಮವಾದಡೂ ಆಚಾರ ಅನುಸರಣೆಯಾಗದಲ್ಲಿ ಕೂಡಲಾಗದು.
ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಜ್ಞಾನ, ಜ್ಞಾನವೆ ಆಚಾರ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. - ಅಕ್ಕಮ್ಮ ಸವಸ 5/481/47
ಮಾನವೀಯತೆಯನ್ನು ಮರೆತು ಮನಷ್ಯರಲ್ಲಿ ನಿರ್ಮಿಸಲಾಗಿದ್ದ ಭೇಧ ಭಾವಗಳ ಸಂಕೊಲೆಗಳನ್ನು ನಿದಾಕ್ಷಿಣ್ಯವಾಗಿ ಕಿತ್ತೊಗೆದು ಸರ್ವ ಸಮಾನತೆಯನ್ನು ಸಾರಿದರು, ತನ್ನ ಹೆತ್ತ ತಾಯಿ, ಒಡಹುಟ್ಟಿದ ಸಹೋದರಿ, ಸಹಜೀವಿ ಸ್ತ್ರೀಯು (ಶರಣೆರು) ಯಾವುದೇ ಸಂಸ್ಕಾರ. ಅಧಿಕಾರ, ಆಸ್ತಿಗಳೀಂದ ವಂಚಿತವಾಗಿ ಭೋಗದ ವಸ್ತುವಾಗಿ, ಪುರುಷರ ಸೇವೆಯ ಸರಕಾಗಿರುವಂತಹ ಪರಿಸ್ಥಿಯನ್ನು ಅಲ್ಲಗಳೆದು. ಅವಳಲ್ಲಿರುವ ಆತ್ಮವೂ ಗಂಡಿಗಿಂತ ಯಾವುದೇ ರೀತಿಯಲ್ಲಿ ಕೀಳಲ್ಲ.ಎಂದು ಸಾರುತ್ತಿದೆ ಈ ಕೆಳಕಂಡ ವಚನ.
ಮೊಲೆ, ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ!! - ಜೇಡರ ದಾಸಿಮಯ್ಯ ಸವಸ7/845/136
ಪ್ರಯತ್ನವಾದಿಯಾಗಿ ಸಾಧಿಸಬಹುದು. ಜ್ಞಾನವೇ ಕ್ರಿಯೆ ಕ್ರಿಯೆಯೆ ಜ್ಞಾನ, ಚಟುವಟಿಕೆಯೇ ಜೀವಂತಿಕೆ. ಆಲಸ್ಯವನ್ನು ಖಡಾಖಂಡಿತವಾಗಿ ಅಲ್ಲಗಳೆಯುತ್ತದೆ .ವಚನಸಾಹಿತ್ಯ
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಇಕ್ಷುವಿನೊಳಗಣ ಮಧುರ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ತಿಲದೊಳಗಣ ತೈಲ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕ್ಷೀರದೊಳಗಣ ಘೃತ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕಾಷ್ಠದೊಳಗಣ ಅಗ್ನಿ?
ಇದು ಕಾರಣ
ನಮ್ಮ ಗುಹೇಶ್ವರಲಿಂಗವ ತನ್ನೊಳರಿದೆನೆಂಬ ಮಹಂತಂಗೆ
ಸತ್‍ಕ್ರಿಯಾಚರಣೆಯೆ ಸಾಧನ ಕಾಣಿಭೋ. - ಅಲ್ಲಮಪ್ರಭುದೇವರ ವಚನ ಸವಸ 2/1149
ಪರಮಾತ್ಮನೊಂದಿಗೆ ಬಹಿರಂಗವಾಗಿ ಸವಾಲು ಹಾಕಿ ಅಪ್ರತಿಮ ವಿಜಯ ಸಾಧಿಸಿದ ಮೈನವಿರೇಳಿಸುವ ಧೀರರ ನಿರ್ಮಾತೃ ವಚನ ಸಾಹಿತ್ಯ ಐತಿಹಾಸಿಕ ದಾಖಲೆ ಅದು ಸೃಷ್ಟಿಕರ್ತಪರಮಾತ್ಮನನ್ನೆ ಪ್ರಶ್ನಿಸಿ ಗೆಲ್ಲುವ ಸಾಮರ್ಥೃವನ್ನು ಕರುಣಿಸಿದೆ. ಲೌಕಿಕದ ಬದುಕು ನಶ್ವರವಲ್ಲ
ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ. - ಬಸವಣ್ಣ ಸವಸ 1/678
ಸುಧಾರಣೆಯನ್ನುವುದು ಮೊಟ್ಟಮೊದಲು ತನ್ನಿಂದಲೇ ಪ್ರಾರಂಭವಾಗಬೇಕೆನ್ನುವುದು ವಚನಸಾಹಿತ್ಯದಲ್ಲಿ ಪ್ರತಪಾದಿತವಾದ ಸ್ಪಷ್ಟ ನಿಲುವು. ಸಾಕ್ಷಾತ್ಕಾರಕ್ಕಾಗಿ ತನ್ನ ತನುವನ್ನೇ ಸಾಧನವನ್ನಾಗಿ ಮಾಡಿಕೊಂಡು ಲಿಂಗೈಕ್ಯವನ್ನು ಸಾಧಿಸುವ ಮಾರ್ಗದರ್ಶನ ಅಲ್ಲಮ ಪ್ರಭುಗಳು ಈ ಕೆಳಕಂಡಂತೆ ನೀಡುತ್ತಾರೆ.
ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆÉಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ.
ಅಖಂಡ ಮಂಡಲವೆಂಬ ಭಾವಿ, ಪವನವೆ ರಾಟಾಳ
ಸುಷುಮ್ನನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆಗಳೆಂಬ ಬೇಲಿಯನಿಕ್ಕಿ,
ಆವಾಗಳೂ ಈ ತೋಂಟದಲ್ಲಿ ಜÁಗರವಿದ್ದು
ಸಸಿಯ ಸಲಹಿದೆನು ಕಾಣಾಗುಹೇಶ್ವರ - ಅಲ್ಲಮಪ್ರಭುದೇವರ ವಚನ ಸವಸ 2/1229
ಆದರ್ಶಗಳೋಂದಿಗೆ ಬದುಕುವವರಿಗೆ ನಿಂದನೆಗಳು ಟೀಕೆ-ಟಿಪ್ಪಣಿಗಳು ಬರುವುದು ಸಹಜ ಅವುಗಳನ್ನು ಮೆಟ್ಟಿನಿಲ್ಲುವ ಎದೆಗಾರಿಕೆ ಬೆಳೆಸಿಕೊಳ್ಳುವಂತೆ ಗುರು ಬಸವಣ್ಣನವರು ತಾಕೀತು ಮಾಡುತ್ತಾರೆ. ಸ್ಪಷ್ಟ ನಿಲವು ಹೊಂದಿರುವವರು ಕುಹುಕಿಗಳ ವಿತಂಡವಾದಗಳಿಗೆ ಕಿವಿಗೊಡಬೇಕಾಗಿಲ್ಲ.
ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ: ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ. - ಬಸವಣ್ಣ ಸವಸ 1/754
ವಚನ ಸಾಹಿತ್ಯ ಜೀವನವನ್ನು ಸರ್ವಾಂಗ ಸುಂದರವಾಗಿ ರೂಪಿಸಿಕೊಳ್ಳಲು ಸಹಕಾರಿ. ಬದುಕಿನಲ್ಲಿ ವೈಯಕ್ತಿಕ ವಿಕಾಸ, ವೈಜ್ಞಾನಿಕ ಮನೋಭಾವ ಅಳವಡಿಕೆ, ವಿಶಾಲ ಮನೋಭಾವ, ಸಾಮಾಜಿಕ ಹೊಣೆಗಾರಕೆ, ಆರ್ಥಿಕ ಚಿಂತನೆ ಹಾಗು ಸುಧಾರಣೆ, ನೈತಿಕ ಪ್ರಗತಿ, ಒಳಗೊಂಡಂತೆ ಪ್ರತಿಯೊಂದು ರಂಗದಲ್ಲಿ ಮಾರ್ಗದರ್ಶನ ನೀಡಬಲ್ಲ ನಿರಂತರ ಸ್ಪೂರ್ತಿಯ ಚಿಲುಮೆ. ಉಹೆ ಕಲ್ಪನೆಗಳನ್ನು ದೂರವಿರಿಸಿ ಜೀವಂತ ವಿಚಾರಗಳ ಪ್ರತಿಪಾದಕ. ಮಾನವೀಯತೆಯ ಗೌರವಿಸುವ ನಿರ್ದೇಶಕ.
ನಾಗಶೆಟ್ಟಿ ಕಂಟೆಪ್ಪ ಶೆಟಕಾರ
9-9-80/120 “ಶರಣ ಸಂಗಮ” ಅಕ್ಕಮಹಾದೇವಿ ಕಾಲೋನಿ
ಹಾರೂರಗೇರಿ ರಸ್ತೆ, ಗಾಂಧಿ ಗಂಜ , ಬೀದರ. 585403
ಇಮೇಲ್ : nagshetty866@gmail.com
ಕೋಪದ ಬಗ್ಗೆ, ಶರಣರ ಸಲಹೆ ಸೂಚನೆಗಳು | ಶರಣರು ಮತ್ತು ಮಹಿಳಾ ಸ್ವಾತಂತ್ಯ್ರ |