Previous ಶರಣರು ಮತ್ತು ಮಹಿಳಾ ಸ್ವಾತಂತ್ಯ್ರ ಲಿಂಗಾಯತ ಧರ್ಮ ಶುದ್ಧ ಸಸ್ಯಾಹಾರಿಗಳ ಧರ್ಮ Next

ಯೋಗದ ಬಗ್ಗೆ....

*

ಯೋಗಾಭ್ಯಾಸದ ಬಗ್ಗೆ .

1492
ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ
ಯೋಗವು ಅಭ್ಯಾಸವೆ ? ಅಭ್ಯಾಸವು ಯೋಗವೆ ಅಯ್ಯಾ ?
ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ ?
ಯೋಗವ ನುಡಿವರೆ ಅಯ್ಯಾ ?
ಗುರುಮತದಿಂ ಭಾವಿಸಲು ಸರ್ವವೂ ಪರಬ್ರಹ್ಮ,
ಶ್ರೀಗುರುವಿನ ಶ್ರೀಪಾದಧ್ಯಾನವೇ ಯೋಗ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

1316
ಇಂತಪ್ಪ ಶಿವಯೋಗಿಯಂ
ಇಂದ್ರಿಯಂಗಳು ಕೂಡಿಯಾಡುವ ಮಾನವನು
ಬಹು ಚೆಚ್ಚಿಯನುಳ್ಳ ವಾನರನಂ ಬಂಧಿಸಿ ತನ್ನಿಚ್ಛೆಯಲಿ ಆಡಿಸುವ
ಯಕ್ಷನ ಹಾಂಗೆ ಉಲಾಯೋಗ ಸ್ಥಾನಂಗಳಲ್ಲಿ ಬ್ರಹ್ಮಾನುಸಂಧಾನದಲ್ಲಿಯುಂ
ಎಲ್ಲಾ ಪದಾರ್ಥಂಗಳು ತಟ್ಟು ಮುಟ್ಟಂಗಳಲ್ಲಿಯವುಬಹುದೆ ?
ಸಂಸಾರ ಪ್ರಪಂಚವ ಪರಿಹರಿಸುವೆ ಪರಮಾರ್ಥವ ಕಾಣಬಹುದೆ ?
ತೆರೆಯಲ್ಲದೆ ಜಲದ ವರ್ತನೆ ನಡೆವುದೆ ?
ಆ ಜಲವನು ಪ್ರಯೋಗಿಸುವಂತೆ
ಪರವನು ಪ್ರಯೋಗಿಸುವುದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

೯೫೩
ಯೋಗದ ನೆಲೆಯನರಿದೆನೆಂಬಾತ
ಲಿಂಗಾರ್ಚನೆಯ ಮಾಡಯ್ಯ.
ಮನತ್ರಯ ಮದತ್ರಯ ಮಲತ್ರಯಂಗಳ ಕಳೆದು
ತನುತ್ರಯಂಗಳನೇಕೀಭವಿಸಿ
ಲಿಂಗತ್ರಯದಲ್ಲಿ ಶಬ್ದಮುಗ್ಧನಾಗಿ
ಲಿಂಗಾರ್ಚನೆಯ ಮಾಡಯ್ಯಾ.
ಅದು ನಿಸ್ತಾರ ಸಮಸ್ತ ಯೋಗಿಗಳ ಮೀರಿದದು
ನಿಮ್ಮ ಕೂಡಿ ಬೆರಸುವ ಶಿವಯೋಗವಿಂತುಟಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.

364
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,
ಧ್ಯಾನ, ಧಾರಣ, ಸಮಾಧಿ ಎಂದು
ಈಯೆಂಟು ಅಷ್ಟಾಂಗಯೋಗಂಗಳು.
ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು ಎರಡು ಪ್ರಕಾರವಾಗಿಹವು.
ಯಮಾದಿ ಪಂಚಕವೈದು ಪೂರ್ವಯೋಗ;
ಧ್ಯಾನ, ಧಾರಣ, ಸಮಾಧಿಯೆಂದು ಮೂರು ಉತ್ತರಯೋಗ. ಇವಕ್ಕೆ ವಿವರ:
ಇನ್ನು ಯಮಯೋಗ ಅದಕ್ಕೆ ವಿವರ: ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ ಇಂತಿವೈದನು ಬಿಟ್ಟು
ಲಿಂಗಪೂಜೆಯ ಮಾಡುವುದೀಗ ಯಮಯೋಗ.
ಇನ್ನು ನಿಯಮಯೋಗ- ಅದಕ್ಕೆ ವಿವರ: ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ
ಆಗಮಧರ್ಮಂಗಳಲ್ಲಿ ನಡೆವವನು.
ಶಿವನಿಂದೆಯ ಕೇಳದಿಹನು.
ಇಂದ್ರಿಯಂಗಳ ನಿಗ್ರಹವ ಮಾಡುವವನು.
ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ
ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು.
ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷಿಯ ಧರಿಸಿ
ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಭೀತನಾಗಿಹನು.
ಇದು ನಿಯಮಯೋಗ.
ಇನ್ನು ಆಸನಯೋಗ- ಅದಕ್ಕೆ ವಿವರ: ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ, ಪರ್ಯಂಕಾಸನ
ಈ ಐದು ಆಸನಯೋಗಂಗಳಲ್ಲಿ
ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು
ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ.
ಇನ್ನು ಪ್ರಾಣಾಯಾಮ- ಅದಕ್ಕೆ ವಿವರ: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ,
ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು.
ಇವಕ್ಕೆ ವಿವರ: ಪ್ರಾಣವಾಯು ಇಂದ್ರ ನೀಲವರ್ಣ. ಹೃದಯಸ್ಥಾನದಲ್ಲಿರ್ದ
ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ
ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು
ಅನ್ನ ಜೀರ್ಣಿಕರಣವಂ ಮಾಡಿಸುತ್ತಿಹುದು.
ಅಪಾನವಾಯು ಹರಿತವರ್ಣ.
ಗುಧಸ್ಥಾನದಲ್ಲಿರ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ
ಆಧೋದ್ವಾರಮಂ ಬಲಿದು ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು.
ವ್ಯಾನವಾಯು ಗೋಕ್ಷಿರವರ್ಣ.
ಸರ್ವಸಂದಿಗಳಲ್ಲಿರ್ದು
ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ
ಅನ್ನಪಾನವ ತುಂಬಿಸುತ್ತಿಹುದು.
ಉದಾನವಾಯ ಎಳೆಮಿಂಚಿನವರ್ಣ.
ಕಂಠಸ್ಥಾನದಲ್ಲಿರ್ದು
ಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ
ಛರ್ದಿ ನಿರೋಧನಂಗಳಂ ಮಾಡಿ
ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು.
ಸಮಾನವಾಯು ನೀಲವರ್ಣ.
ನಾಭಿಸ್ಥಾನದಲ್ಲಿರ್ದು
ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ
ಅನ್ನರಸವನು
ಎಲ್ಲಾ[ಲೋ] ಮನಾಳಂಗಳಿಗೆ ಹಂಚಿಕ್ಕುವುದು.
ಈ ಐದು ಪ್ರಾಣಪಂಚಕ.
ಇನ್ನು ನಾಗವಾಯು ಪೀತವರ್ಣ.
[ಲೋ] ಮನಾಳಂಗಳಲ್ಲಿರ್ದು
ಚಲನೆಯಿಲ್ಲದೆ ಹಾಡಿಸುತ್ತಿಹುದು.
ಕೂಮವಾಯುವ ಶ್ವೇತವರ್ಣ.
ಉದರ ಲಲಾಟದಲ್ಲಿರ್ದು
ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು
ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ
ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು.
ಕೃಕರವಾಯು ಅಂಜನವರ್ಣ.
ನಾಸಿಕಾಗ್ರದಲ್ಲಿರ್ದು
ಕ್ಷುಧಾದಿ ಧರ್ಮಂಗಳಂ ನೆಗಳೆ
ಗಮನಾಗಮನಂಗಳಂ ಮಾಡಿಸುತ್ತಿಹುದು.
ದೇವದತ್ತವಾಯು ಸ್ಫಟಿಕವರ್ಣ.
ಗುಹ್ಯ[ಕಟಿ] ಸ್ಥಾನದಲ್ಲಿರ್ದು
ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ
ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು.
ಧನಂಜಯವಾಯು ನೀಲವರ್ಣ.
ಬ್ರಹ್ಮರಂಧ್ರದಲ್ಲಿರ್ದು
ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ
ಮರಣಗಾಲಕ್ಕೆ ನಿರ್ಘೋಷಮಪ್ಪುದು.
ಈ ಪ್ರಕಾರದಲ್ಲಿ ಮೂಲವಾಯುವೊಂದೇ
ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು.
ಆ ಪವನದೊಡನೆ ಪ್ರಾಣ ಕೂಡಿ
ಪ್ರಾಣದೊಡನೆ ಪವನ ಕೂಡಿ
ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ,
ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳ ಮೇಲೆ ಸುಳಿದು
ನವನಾಳಂಗಳೊಳಗೆ ಚರಿಸುತ್ತಿಹುದು.
ಅಷ್ಟದಳಂಗಳೇ ಆಶ್ರಯವಾಗಿ
ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು
ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ
ಅಲ್ಲಿಂದ ನಾಸಿಕಾಗ್ರದಲ್ಲಿ
ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು;
ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು.
ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು
ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು.
ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ
ರೇಚಕ ಪೂರಕಂಗಳ ಭೇದವನರಿದು
ಮನ ಪವನಂಗಳ ಮೇಲೆ ಲಿಂಗವ ಸಂಬಂಧಿಸಿ
ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ
ಲಿಂಗ ಸ್ವರೂಪವ ಮಾಡಿ
ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ
ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ
ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ.
ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ: ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು,
ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ.
ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ
ಜೀವಂಗೆ ಭವ ಭವದ ಬಂಧನವನೊಡಗೂಡಿ
ಆಯಸಂ ಬಡುತ್ತಿಪ್ಪರಜ್ಞ್ಞಾನ ಕರ್ಮಿಗಳು;
ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು.
ಅದರಿಂದಲಾಹಾರಮಂ ಕ್ರಮ ಕ್ರಮದಿಂದ
ಉದರಕ್ಕೆ ಹವಣಿಸುತ್ತ ಬಹುದು.
ಗುರು ಕೃಪೆಯಿಂದ ಈ ಪ್ರಕಾರದಲ್ಲಿ
ಸರ್ವೆಂದ್ರಿಯಂಗಳನು ಲಿಂಗಮುಖದಿಂದ
ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ.
ಈ ಐದು ಪೂರ್ವಯೋಗಂಗಳು.
ಇನ್ನು ಧ್ಯಾನ, ಧಾರಣ, ಸಮಾಧಿಯೆಂದು ಮೂರು
ಉತ್ತರಯೋಗಂಗಳು.
ಇನ್ನು ಧ್ಯಾನಯೋಗ- ಅದಕ್ಕೆ ವಿವರ: ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ
ಶಿವಲಿಂಗ ಸ್ವರೂಪವ ಮಾಡಿ
ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ
ಆ ಕರಸ್ಥಲದಲ್ಲಿದ್ದ ಶಿವಲಿಂಗವೇ
ಪರಮಾರ್ಥಚಿಹ್ನವೆಂದರಿದು
ಆ ಲಿಂಗವನೇ
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ,
ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ
ಆ ಶಿವಲಿಂಗಮೂರ್ತಿಯನೆ
ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ.
ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ
ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ.
ಆ ಸತ್ಕ್ರಿಯಾ ಜ್ಞಾನಯೋಗದಿಂದ
ಪ್ರಾಣಂಗೆ ಶಿವಕಳೆಯ ಸಂಬಂಧಿಸಿ
ಇಷ್ಟ, ಪ್ರಾಣ, ಭಾವವೆಂಬ
ಲಿಂಗತ್ರಯವನು ಏಕಾಕಾರವ ಮಾಡಿ
ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ
ಮಹಾಲಿಂಗದೊಳಗೆ ಸಂಯೋಗವಾಗಿ
ಭಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾಧಿಯೋಗ.
ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ
ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ.
ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು-
ಅವಾವವೆಂದಡೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ
ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ
ಈ ಐದು ಕರ್ಮಯೋಗಂಗಳು.
ಅವರು ಲಕ್ಷಿಸುವಂಥಾ ವಸ್ತುಗಳು
ಉತ್ತರಯೋಗವಾಗಿ ಮೂರು ತೆರ.
ಅವಾವವೆಂದಡೆ: ನಾದಲಕ್ಷ, ಬಿಂದುಲಕ್ಷ, ಕಲಾಲಕ್ಷ ವೆಂದು ಮೂರು ತೆರ.
ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು.
ಬಿಂದುವೇ ಆಕಾರ, ಉಕಾರ, ಮಕಾರ,
ಈ ಮೂರು ಶುದ್ಧಬಿಂದು ಸಂಬಂಧವೆಂದೂ.
ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ
ಲಕ್ಷಿಸುವರು.
ಕಲೆಯೇ ಚಂದ್ರನ ಕಲೆಯ ಹಾಂಗೆ,
ಸೂರ್ಯನ ಕಿರಣಂಗಳ ಹಾಂಗೆ,
ಮಿಂಚುಗಳ ಪ್ರಕಾಶದ ಹಾಂಗೆ,
ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ,
ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷಯ.
ಈ ಎಂಟು ಇತರ ಮತದವರು ಮಾಡುವ ಯೋಗಂಗಳು.
ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು.
ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ.
ಅದುಕಾರಣ ಇವ ಮುಟ್ಟಲಾಗದು.
ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ:
ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ
ಭಾವ, ಮನ, ಕರದಲ್ಲಿ ಶ್ರೀಗುರು ತಂದು
ಸಾಹಿತ್ಯವ ಮಾಡಿದನಾಗಿ
ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ,
ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ,
ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ,
ಒಂದೇ ವಸ್ತು ತನು, ಮನ, ಭಾವಂಗಳಲ್ಲಿ
ಇಷ್ಟ, ಪ್ರಾಣ, ಭಾವವಾದ ಭೇದವನರಿದು
ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ
ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ
ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ
ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ
ಲಿಂಗವೇ ತಾನು ತಾನಾಗಿ
ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

736
ಇನ್ನು ಯೋಗೀಶ್ವರರ ಧ್ಯಾನಯೋಗಕ್ಕೆ ಸ್ಥಾನಂಗಳಾವುವೆನೆ :
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ
ಆಜ್ಞೇಯ ಭ್ರೂಮಧ್ಯಾದಿ ಸ್ಥಾನಂಗಳಲ್ಲಿ
ಬಂಧಮುದ್ರೆಗಳಿಂದೆ ಧ್ಯಾನಮಂ ಮಾಳ್ಪುದೆಂತೆನೆ :
ಆಧಾರಚಕ್ರಗಳ ನಾಲ್ಕೆಸಳಮಧ್ಯದಲ್ಲಿ
ಇಷ್ಟಾರ್ಥಮಂ ಕೊಡುವ ಸುವರ್ಣ ಕಾಂತಿಯನುಳ್ಳ
ಆಧಾರಶಕ್ತಿಯಂ ಧ್ಯಾನಿಸುವುದು.
ಸ್ವಾಧಿಷ್ಠಾನಚಕ್ರ ಆರೆಸಳಮಧ್ಯದಲ್ಲಿ ಸಕಲವರ್ಣದಿಂ
ಲಿಂಗಸ್ವರೂಪನಾದ ಶಿವನಂ ಧ್ಯಾನಿಸುವುದು.
ಮಣಿಪೂರಕಚಕ್ರ ಹತ್ತೆಸಳಮಧ್ಯದಲ್ಲಿ
ಸುಪ್ತ ಸಪರ್ಾಕಾರದ ಮಿಂಚಿಗೆ ಸಮಾನದೀಪ್ತಿಯುಳ್ಳ
ಸಕಲಸಿದ್ಧಿಗಳಂ ಕೊಡುವ ಕುಂಡಲಿಶಕ್ತಿಯಂ ಧ್ಯಾನಿಸುವುದು.
ಅನಾಹತಚಕ್ರ ಹನ್ನೆರಡೆಸಳಮಧ್ಯದಲ್ಲಿ
ಜ್ಯೋತಿರ್ಮಯಲಿಂಗಮಂ ಧ್ಯಾನಿಸುವುದು.
ವಿಶುದ್ಧಿಚಕ್ರ ಷೋಡಶದಳಮಧ್ಯದಲ್ಲಿ
ಸುಸ್ಥಿರಮಾದ ಆನಂದರೂಪಿಣಿಯಾದ
ಸುಷುಮ್ನೆಯಂ ಧ್ಯಾನಿಸುವುದು.
ಆಜ್ಞಾಚಕ್ರ ದ್ವಿದಳಮಧ್ಯದಲ್ಲಿ ವಾಕ್ಸಿದ್ಧಿಯಂ ಕೊಡುವ
ದೀಪದ ಜ್ವಾಲೆಗೆ ಸಮಾನವಾದ ಜ್ಞಾನನೇತ್ರವೆನಿಸುವ
ಶುದ್ಧಪ್ರಸಾದಜ್ಯೋತಿಯಂ ಧ್ಯಾನಿಸುವುದೇ
ಧ್ಯಾನಯೋಗ ನೋಡಾ ಅಖಂಡೇಶ್ವರಾ.

737
ಇನ್ನು ಧಾರಣಯೋಗದ ಲಕ್ಷಣವೆಂತೆನೆ : ಸಂಕಲ್ಪ ವಿಕಲ್ಪಾತ್ಮಕವಾದ ಮನಸ್ಸು
ಕಾಕಾಕ್ಷಿಯಂತೆ ಬಾಹ್ಯಾಭ್ಯಂತರಗಳಿಗೆ ತಾನೇ ಕಾರಣವಪ್ಪುದರಿಂದೆ
ಆ ಮನಮಂ ಮುದ್ರಾಕರಣಬಂಧಂಗಳಿಂದಂತಮರ್ುಖಮಂ ಮಾಡಿ,
ಅನವಚ್ಛಿನ್ನ ತೈಲಧಾರೆಯಂತೆ ಶಿವಧ್ಯಾನಮಂ ಮಾಡುತಿರಲು
ಆ ಧ್ಯಾನಾಕಾರದಿಂ ಕರಿಗೊಂಡ ವಸ್ತುವಿನೊಳು
ಆ ಮನವು ನಿಶ್ಚಲಮಾಗಲದೇ ಧಾರಣಯೋಗ ನೋಡಾ
ಅಖಂಡೇಶ್ವರಾ.

738
ಇನ್ನು ಸಮಾಧಿಯೋಗವೆಂತೆಂದೊಡೆ :
ಸುಖದುಃಖ ಪುಣ್ಯಪಾಪ ಪೂಜಾಪೂಜಂಗಳು
ಸಂಕಲ್ಪವಿಕಲ್ಪಂಗಳೇನೂ ತೋರದೆ,
ತಾನೆಂಬ ಅಹಂಭಾವವಳಿದು
ಅಖಂಡಪರಿಪೂರ್ಣಮಾದ ಪರಬ್ರಹ್ಮದಲ್ಲಿ ಕೂಡಿದ
ಸಮರಸಭಾವವೇ ಸಮಾಧಿಯಯ್ಯಾ ಅಖಂಡೇಶ್ವರಾ.

728
ಯೋಗ ಯೋಗವೆಂದು ನುಡಿಯುತಿರ್ಪರೆಲ್ಲರು ;
ಯೋಗದೊಳಗಣ ಯೋಗವನಾರೂ ಅರಿಯರಲ್ಲ !
ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗವೆಂದು
ಯೋಗ ಚತುರ್ವಿಧದೊಳಗೆ,
ಮೊದಲು ಮಂತ್ರಯೋಗದ ಭೇದವೆಂತೆಂದೊಡೆ :
ಆವನಾನೊಬ್ಬ ಯೋಗಸಿದ್ಧಿಯ ಪಡೆವಾತನು
ಪಕ್ಷಿಗಳುಲಿಯದ ಮುನ್ನ, ಪಶುಗಳು ಕೂಗದ ಮುನ್ನ,
ಪ್ರಕೃತಿ ಆತ್ಮರು ಸುಳಿಯದ ಮುನ್ನ,
ಶುಭಮುಹೂರ್ತದಲ್ಲಿ ಶಿವಧ್ಯಾನಮಂ ಮಾಡುತೆದ್ದು
ಶೌಚಾಚಮನ ದಂತಧಾವನಂಗಳಂ ಮಾಡಿ ಜಲಸ್ನಾನಂಗೈದು,
ಏಕಾಂತಸ್ಥಳದಲ್ಲಿ ಕಂಬಳಾಸನದಿ ಗದ್ದುಗೆಯಲ್ಲಿ
ಪೂರ್ವಮುಖವಾಗಲಿ ಉತ್ತರಮುಖವಾಗಲಿ
ತನಗಿಷ್ಟಾಸನದಲ್ಲಿ ಕುಳ್ಳಿರ್ದು, ಭಸ್ಮಸ್ನಾನಂಗಳನಾಚರಿಸಿ
ಆಗಮೋಕ್ತದಿಂದೆ ಈಶ್ವರಾರ್ಚನೆಯಂ ಮಾಡಿ
ಬಳಿಕ ಅಂತರಾಳಹೃದಯಕಮಲ ಕರ್ಣಿಕಾಸ್ಥಲದಲ್ಲಿಹ
ಹಕಾರವೆಂಬ ಬೀಜಾಕ್ಷರಮಧ್ಯದಲ್ಲಿ
ಮೂರ್ತಿಧ್ಯಾನಂ ಮಾಡುವುದೆಂತೆನೆ :
ಶುದ್ಧಪದ್ಮಾಸನನಾಗಿ ಚಂದ್ರಕಲಾಧರನಾದ
ಪಂಚಮುಖ ತ್ರಿನೇತ್ರಂಗಳುಳ್ಳ
ಶೂಲ ವಜ್ರ ಖಡ್ಗ ಪರಶು ಅಭಯಂಗಳಾಂತ
ಪಂಚ ದಕ್ಷಿಣಹಸ್ತಂಗಳುಳ್ಳ
ನಾಗ ಪಾಶ ಘಂಟೆ ಅನಲ ಅಂಕುಶಂಗಳಾಂತ
ಪಂಚ ವಾಮಕರಂಗಳುಳ್ಳ
ಕಿರೀಟಾದ್ಯಾಭರಣಂಗಳಿಂದಲಂಕೃತನಾದ
ಸ್ಫಟಿಕದ ಕಾಂತಿಮಯನಾದ ಸದಾಶಿವಮೂರ್ತಿಯ ಧ್ಯಾನಿಸುತ್ತೆ ,
``ಓಂ ಅಸ್ಯ ಶ್ರೀಷಡಕ್ಷರಮಂತ್ರಸ್ಯ ವಾಮದೇವ ಋಷಿಃ
ಪಂಕ್ತಿಃ ಛಂದಃ ಶ್ರೀಸದಾಶಿವೋ ದೇವತಾ
ಓಂ ಬೀಜಂ ಉಮಾಶಕ್ತಿಃ ಉದಾತ್ತಸ್ವರಃ
ಶ್ವೇತವರ್ಣಃ ಸದಾಶಿವಪ್ರೀತ್ಯರ್ಥೆ ಜಪೇ ವಿನಿಯೋಗಃ|''
ಎಂಬ ಷಡಕ್ಷರಮಂತ್ರಾನುಷ್ಠಾನಾದಿ ಅಖಿಳಮಂತ್ರಗಳಿಂದೆ
ಕರಶಿರಾದಿ ಷಡಂಗನ್ಯಾಸಂಗಳಂ ಮಾಡಿ
ನಿತ್ಯಜಪಾನುಷ್ಠಾನಮಂ ಮೋಕ್ಷಾರ್ಥಿಯಾದಾತನು
ರುದ್ರಾಕ್ಷಿ ನೂರೆಂಟರಿಂದಾದಡೂ ಇಪ್ಪತ್ತೈದರಿಂದಾದಡೂ
ಆಗಮೋಕ್ತಮಾರ್ಗದಿಂದೆ ಜಪಮಾಲಿಕೆಯಿಂದೆ
ಅಂಗುಷ್ಠಮಧ್ಯಮೆಗಳಿಂದೆ ಉಪಾಂಶುರೂಪದಿಂದೆ
ಧ್ಯಾನಪೂರ್ವಕದಿಂ ಜಪವಂ ಮಾಡುವುದೆ
ಮಂತ್ರಯೋಗವೆನಿಸಿತ್ತು ಅಖಂಡೇಶ್ವರಾ.

729
ಈಡಾ ಪಿಂಗಳೆಯಲ್ಲಿ ತುಂಬಿ ಸೂಸುವ
ಹಂಸರೂಪವಾದ ಪ್ರಕೃತಿಪ್ರಾಣವಾಯುವನು
ಸೋಹಂಭಾವದಿಂದೆ ವೈಕೃತಪ್ರಾಣನಂ ಮಾಡಿ
ಧ್ಯಾನಮೂರ್ತಿಯಲಾದಡೂ
ಪ್ರಾಣಾತ್ಮಕವಾದ ಸುನಾದದಲಾದಡೂ ಲಕ್ಷ್ಯಂಗಳಲಾದಡೂ
ಮನೋಮಾರುತಂಗಳೊಳಗೂಡಿ ಲಯಿಸುವುದೆ
ಲಯಯೋಗ ನೋಡಾ ಅಖಂಡೇಶ್ವರಾ.

730
ಇನ್ನು ಹಠಯೋಗಕ್ಕೆ ಸಾಧನಮಾದ
ಬಂಧತ್ರಯಂಗಳ ಭೇದವೆಂತೆಂದೊಡೆ :
ವಾಮಪಾದದ ಹಿಮ್ಮಡದಿಂ ಯೋನಿಸ್ಥಾನವನೊತ್ತಿ
ಬಲಪಾದಮಂ ನೀಡಿ,
ಎರಡು ಹಸ್ತಗಳಿಂದೆ ಅಂಗುಷ್ಠಮಂ ಪಿಡಿದು,
ಕಂಠಸ್ಥಾನದಲ್ಲಿ ಚುಬುಕವನಿರಿಸಿ,
ವಾಯುಧಾರಣಮಂ ಮಾಡುವುದೆ ಜಾಲಂಧರಬಂಧವೆನಿಸುವುದು.
ವಾಮಪಾದದ ಹಿಮ್ಮಡದಿಂದಾಧಾರವನೊತ್ತಿ ,
ಎಡದ ತೊಡೆಯ ಮೇಲೆ ಬಲದ ಪಾದವನಿರಿಸಿ
ವಾಯುಪೂರಣಮಂ ಮಾಡಿ,
ಜಾಲಂಧರಮಂ ಬಂಧಿಸುವುದೆ ಮಹಾಬಂಧವೆನಿಸುವುದು.
ನಾಭಿಯ ಊಧ್ರ್ವ ಅಧೋಭಾಗಂಗಳನು
ಬಲಾತ್ಕಾರದಿಂ ಬಂಧಿಪುದೆ ಉಡ್ಯಾಣಬಂಧವೆನಿಸುವುದು.
ಈ ಬಂಧತ್ರಯಂಗಳಿಂದೆ
ಛೇದನ ಚಾಲನ ದೋಹನಾದಿ ಕ್ರೀಯಂಗಳಿಂದೆ
ಪೆಚ್ಚಿರ್ದ ಜಿಹ್ವೆಯನು ಭ್ರೂಮಧ್ಯಸ್ಥಾನಕ್ಕೇರಿಸಿ
ಸ್ಥಿರದೃಷ್ಟಿಯಾಗಿಹುದೇ ಹಠಯೋಗ ನೋಡಾ ಅಖಂಡೇಶ್ವರಾ.

731
ಈ ಹಠಯೋಗಕ್ಕೆ ನಿಜದಂಗವಾಗಿರ್ಪ
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನ ಧಾರಣ ಸಮಾಧಿಗಳೆಂಬ ಅಷ್ಟಾಂಗಯೋಗದೊಳಗೆ
ಮೊದಲು ಯಮಯೋಗದ ಲಕ್ಷಣವೆಂತೆಂದೊಡೆ :
ಪರಸ್ತ್ರೀಯರ ಸಂಗವಿರಹಿತವಾಗಿಹುದು.
ಪರದ್ರವ್ಯವನಪಹರಿಸದಿಹುದು.
ಪರಹಿಂಸೆಯ ಮಾಡದಿಹುದು.
ದುಃಖಿತರಿಗೆ ಹಿತವ ಚಿಂತಿಸುವುದು.
ಶೋಕಭೀತಿಗಳಿಲ್ಲದಿಹುದು, ಅಲ್ಪಾಹಾರಿಯಾಗಿಹುದು.
ಕುಟಿಲತೆಯಿಲ್ಲದಿಹುದು, ಕಾರ್ಪಣ್ಯವಿಲ್ಲದಿಹುದು.
ಸತ್ಯವಚನವ ನುಡಿವುದು.
ಜಲಸ್ನಾನ ಭಸ್ಮಸ್ನಾನಾದಿಗಳನಾಚರಿಸುವುದು.
ಯಮಯೋಗವೆನಿಸುವುದಯ್ಯಾ ಅಖಂಡೇಶ್ವರಾ.

732
ಬಳಿಕ ನಿಯಮದ ಲಕ್ಷಣವೆಂತೆಂದೊಡೆ : ಸಕಲ ವಿಷಯಂಗಳಲ್ಲಿ ಉದಾಸೀನತ್ವವು.
ಶಿವಾಗಮೋಕ್ತಂಗಳಲ್ಲಿ ವಿಶ್ವಾಸವು.
ಸತ್ಕೃತ್ಯದಲ್ಲಿ ಎರಕತೆಯು.
ದೇಹಶೋಷಣರೂಪವಾದ ತಪವು.
ನಾನಾರು ಮೋಕ್ಷವೆಂತಪ್ಪುದು ಎಂಬಾಲೋಚನೆಯು.
ಭಸ್ಮನಿಷ್ಠಾದಿ ವ್ರತವು, ಶಿವಲಿಂಗಾರ್ಚನೆಯು.
ಪ್ರಣವ ಪಂಚಾಕ್ಷರಾದಿ ಮಂತ್ರಜಪವು.
ಲೋಕವಿರುದ್ಧ ವೇದವಿರುದ್ಧವಾದ
ಮಾರ್ಗಂಗಳಲ್ಲಿ ಮನವೆರಗದಿಹುದು.
ಯೋಗಶಾಸ್ತ್ರಂಗಳ ಕೇಳುವುದು.
ಸತ್ಪಾತ್ರದಾನಯುಕ್ತವಾಗಿಹುದು
ನಿಯಮಯೋಗ ನೋಡಾ ಅಖಂಡೇಶ್ವರಾ.

733
ಇನ್ನು ಆಸನದ ಭೇದವೆಂತೆಂದೊಡೆ: ಒಂದು ಹಿಮ್ಮಡದಿಂ ಯೋನಿಸ್ಥಾನವನೊತ್ತಿ ,
ಮತ್ತೊಂದು ಹಿಮ್ಮಡಮಂ ಮೇಢ್ರದ ಮೇಲಿರಿಸಿ,
ಏಕಚಿತ್ತನಾಗಿ ಋಜುಕಾಯನಾಗಿ,
ಭ್ರೂಮಧ್ಯದಲ್ಲಿ ದೃಷ್ಟಿಯುಳ್ಳಾತನಾಗಿಹುದೇ ಸಿದ್ಧಾಸನವೆನಿಸುವುದು.
ಎರಡು ತೊಡೆಗಳ ಮೇಲೆ
ಎರಡು ಪಾದಂಗಳ ಮೇಲುಮುಖವಾಗಿರಿಸಿ,
ಎರಡು ಕರತಳಂಗಳನು ನಡುವೆ ಮೇಲುಮುಖವಾಗಿರಿಸಿ,
ರಾಜದಂತಗಳನಡುವೆ ರಸನಾಗ್ರವನಿಟ್ಟು,
ನಾಸಾಗ್ರದೃಷ್ಟಿಯಿಂದಿಹುದೆ ಪದ್ಮಾಸನವೆನಿಸುವುದು.
ಎರಡು ತೊಡೆ ಕಿರಿದೊಡೆಗಳ ಸಂದಿಗಳಲ್ಲಿ
ಎರಡು ಪಾದಂಗಳನಿರಿಸಿ,
ಋಜುಕಾಯನಾಗಿಹುದೇ ಸ್ವಸ್ತಿಕಾಸನವೆನಿಸುವುದು.
ಮೇಢ್ರದ ಮೇಲೆ ಎಡದ ಹಿಮ್ಮಡವನಿರಿಸಿ,
ಅದರ ಮೇಲೆ ಬಲದ ಹಿಮ್ಮಡವನಿರಿಸಿ,
ಋಜುಕಾಯನಾಗಿಹುದೆ ಮುಕ್ತಾಸನವೆನಿಸುವುದು.
ಬಲದ ಹಿಮ್ಮಡಮಂ ಎಡದ ಪೊರವಾರಿನೊಳಿಟ್ಟು
ಎಡದ ಹಿಮ್ಮಡಮಂ ಬಲದ ಪೊರವಾರಿನೊಳಿಟ್ಟು
ಜಾನುಗಳೆರಡನು ಗೋಮುಖಾಕಾರಮಂ ಮಾಳ್ಪುದೇ
ಗೋಮುಖಾಸನವೆನಿಸುವುದು.
ಈ ಸಕಲ ಆಸನಗಳಿಂದೆ ಯೋಗಮಂ ಸಾಧಿಸುವುದೇ
ಆಸನಯೋಗ ನೋಡಾ ಅಖಂಡೇಶ್ವರಾ.

734
ಇನ್ನು ಪ್ರಾಣಾಯಾಮದ ಲಕ್ಷಣವೆಂತೆಂದೊಡೆ :
ಪ್ರಾಕೃತಪ್ರಾಣಾಯಾಮವೆಂದು, ವೈಕೃತಪ್ರಾಣಾಯಾಮವೆಂದು,
ಆ ಎರಡರಿಂ ಪೊರತಾದ ಕೇವಲ ಕುಂಭಕವೆಂದು,
ಮೂರು ಪ್ರಕಾರವಾಗಿರ್ಪುದದೆಂತೆನೆ :
ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು
ಹಂಸ ಹಂಸವೆಂದುಚ್ಚರಿಸುವ
ಅಹಂಕಾರಾತ್ಮಕವಾದ ಜೀವಜಪವೇ
ಪ್ರಾಕೃತ ಪ್ರಾಣಾಯಾಮವೆನಿಸುವುದು.
ಮತ್ತಾ ಜೀವಜಪವನು ಗೂರೂಪದೇಶದಿಂದೆ ಲೋಪವಮಾಡಿ
ಸೋಹಂ ಸೋಹಂ ಎಂಬ ಮಂತ್ರಸಂಸ್ಕಾರದಿಂದುಚ್ಚರಿಸುವುದೆ
ವೈಕೃತಪ್ರಾಣಾಯಾಮವೆನಿಸುವುದು.
ಆ ವೈಕೃತಪ್ರಾಣಾಯಾಮವೆ
ಇನ್ನೊಂದು ಪ್ರಕಾರವಾಗಿ ಪೇಳಲ್ಪಡುವುದದೆಂತೆನೆ :
ಕನಿಷ್ಠೆ ಅನಾಮಿಕೆಗಳಿಂದೆ ಈಡನಾಡಿಯಂ ಬಲಿದು,
ಪಿಂಗಳನಾಡಿಯಿಂದೆ ದೇಹಾಂತರ್ಗತ ವಾಯುಮಂ
ಅಕಾರೋಚ್ಚರಣದಿಂ ಪನ್ನೆರಡು ಮಾತ್ರೆ ರಚಿಸಿ,
ಮತ್ತೆ ಪಿಂಗಳನಾಡಿಯಂ ಅಂಗುಷ್ಠದಿಂ ಬಲಿದು,
ಈಡಾನಾಡಿಯಿಂದೆ ಪನ್ನೆರಡು ಮಾತ್ರೆ ಉಕಾರೋಚ್ಚರಣದಿಂ ಪೂರಿಸಿ,
ನಾಭಿ ಹೃದಯ ಕಂಠವೆಂಬ ತ್ರಿಸ್ಥಾನದೊಳೊಂದರಲ್ಲಿ
ಪನ್ನೆರಡು ಮಾತ್ರೆ ಮಕಾರೋಚ್ಚರಣದಿಂ ತುಂಬಿಪುದೆ
ಕನಿಷ್ಠಪ್ರಾಣಾಯಾಮವೆನಿಸುವುದು.
ಅದೆಂತೆಂದೊಡೆ : ಶೀಘ್ರವಲ್ಲದೆ ವಿಳಂಬವಲ್ಲದೆ ಜಾನುಪ್ರದಕ್ಷಿಣಮಂ ಮಾಡಿ,
ಅಂಗುಲಿಸ್ಫೋಟನಮಂ ಮಾಡಿದರೆ ಒಂದು ಮಾತ್ರೆ ಎನಿಸುವುದು.
ಇಂತಹ ಮಾತ್ರೆ ಪನ್ನೆರಡು ಆದರೆ ಕನಿಷ್ಠವೆನಿಸುವುದು.
ಮತ್ತಾ ಮಾತ್ರೆ ಇಪ್ಪತ್ತು ನಾಲ್ಕಾದರೆ ಮಧ್ಯಮವೆನಿಸುವುದು.
ಬಳಿಕಾ ಮಾತ್ರೆ ಮೂವತ್ತಾರಾದರೆ ಉತ್ತಮವೆನಿಸುವುದು.
ಇಂತೀ ಮೂವತ್ತಾರು ಮಾತ್ರೆಗಳು
ಮಂತ್ರ ಸ್ಮರಣೆ ಧ್ಯಾನ ಸಹಿತಮಾಗಿ ಮಾಳ್ಪುದೆ
ಪ್ರಾಣಾಯಾಮದಲ್ಲಿ ಉತ್ತಮ ಪ್ರಾಣಾಯಾಮವೆನಿಸುವುದು.
ಇನ್ನು ಕೇವಲ ಕುಂಭಕವೆಂತೆನೆ :
ವಾಮಭಾಗದ ಈಡಾನಾಡಿಯೇ ಚಂದ್ರನಾಡಿಯೆಂದು
ಯಮುನಾನದಿ ಎಂದು ಪೇಳಲ್ಪಡುವುದು.
ದಕ್ಷಿಣಭಾಗದ ಪಿಂಗಳನಾಡಿಯೇ ಸೂರ್ಯನಾಡಿಯೆಂದು
ಗಂಗಾನದಿಯೆಂದು ಪೇಳಲ್ಪಡುವುದು.
ಸುಷುಮ್ನೆಯೆಂಬ ಮಧ್ಯನಾಡಿಯೇ ಅಗ್ನಿಯೆಂದು
ಸರಸ್ವತಿನದಿಯೆಂದು ಪೇಳಲ್ಪಡುವುದಾಗಿ,
ಆ ನದಿತ್ರಯಂಗಳ ಸಂಬಂಧದಿಂ ತ್ರಿವೇಣಿಯೆಂಬ ಯೋಗಸ್ಥಲಕೆ
ತ್ರಿಕೂಟವೆಂದು, ಮಧ್ಯಹೃದಯವೆಂದು, ಕಾಶಿಕ್ಷೇತ್ರವೆಂದು,
ಕೂರ್ಚವೆಂದು ಆಜ್ಞಾಚಕ್ರವೆಂದು, ಪರ್ಯಾಯ ನಾಮಂಗಳನುಳ್ಳ
ಶಿವಧ್ಯಾನಕ್ಕೆ ರಹಸ್ಯವಾದ ಭ್ರೂಮಧ್ಯಸ್ಥಾನದಲ್ಲಿ
ಮನೋಮಾರುತಂಗಳನೈದಿಸಿ ಯೋಗಮಂ ಸಾಧಿಸಲ್ತಕ್ಕುದೇ
ಪ್ರಾಣಾಯಾಮಾಭ್ಯಾಸ ನೋಡಾ ಅಖಂಡೇಶ್ವರಾ.

[1] ಈ ತರಹದ ಸಂಖ್ಯೆಯ ವಿವರ: ಸವಸ-೧/೭೪೪ :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-೭೪೪ (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಶರಣರು ಮತ್ತು ಮಹಿಳಾ ಸ್ವಾತಂತ್ಯ್ರ ಲಿಂಗಾಯತ ಧರ್ಮ ಶುದ್ಧ ಸಸ್ಯಾಹಾರಿಗಳ ಧರ್ಮ Next