ವ್ರತಗಳು; ವ್ರತಗಳು ಹೇಗಿರಬೇಕು | ವೀರಶೈವ ಲಿಂಗವಂತ/ಲಿಂಗಾಯತ ಎರಡೂ ಬೇರೆ ಬೇರೆ |
ಲಿಂಗಾಯತರು "ಶೈವ"ರಲ್ಲ |
ಹಾದರದ ಮಿಂಡನ ಹತ್ತಿರ ಮಲಗಿಕೊಂಡು,
ಮನೆಯ ಗಂಡನ ಒಲ್ಲೆನೆಂದಡೆ ಒಲಿವನೆ?
ತಾ ಶಿವಭಕ್ತನಾಗಿ, ತನ್ನಂಗದ ಮೇಲೆ ಲಿಂಗವಿದ್ದು
ಮತ್ತೆ ಭಿನ್ನಶೈವಕ್ಕೆರುಗುವುದೆ ಹಾದರ,
ಕೂಡಲಸಂಗಯ್ಯನು ಅವರ ಮೂಗ ಕೊಯ್ಯದೆ ಮಾಣ್ಬನೆ? -೧/೧೪೧೫ [1]
ಕಾಯದ ಕಳವಳದಲ್ಲಿ ಹುಟ್ಟಿ ಲಿಂಗವನರಿಯದಂ[ತವರಿ]ರಲಿ,
ಷಡು ಮಹಾವೇದ ಶಾಸ್ತ್ರಗಮಪುರಾಣದರ್ಥವನೋದಿ
ಲಿಂಗ ಉಂಟು, ಇಲ್ಲೆಂಬ ಅಜ್ಞಾನಿಗಳಂತಿರಲಿ.
ಷಡುಶೈವರು ಹಂಚಾಗಿ ಹೋದರು.
ಎಂತು ನಿಜಲಿಂಗವಂತಂಗೆ ಸರಿಯೆಂಬೆ
ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು
ಬುದ್ಧಿತಪ್ಪಿಕ್ರಮಗೆಟ್ಟು ಹೋದರು,
ಬ್ರಹ್ಮ ನಾನೆಂದು ಶಿರವ ಹೋಗಾಡಿಕೊಂಡನು,
ಬ್ರಹ್ಮಾದಿದೇವತೆಗಳು ಮಹಾಲಿಂಗಕ್ಕೆ ದೂರವಾಗಿ ಹೋದರು,
ಹಮ್ಮಿಲ್ಲದ ಕಾರಣ
ಕೂಡಲಸಂಗನ ಶರಣರು ಜಂಗವಂದ್ಯರಾದರು. -೧/೧೧೪೨[1]
ಕರಸ್ಥಲದಲ್ಲಿ ಲಿಂಗವ ಧರಿಸಿ
ಅನ್ಯದೈವಕ್ಕೆ ತಲೆವಾಗದಾತನ ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿ ಭವಿಸಂಗವ ಮಾಡದಾತನ ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಜಡಶೈವರ ಹೊದ್ದಲಾಗದು,
ಶೈವರು ಹೇಳಿದ ಶಾಸ್ತ್ರವ ಓದಲಾಗದು,
ಅನ್ಯಮಂತ್ರ ಅನ್ಯಜಪಮಾಲಿಕೆಯ ಮಾಡಲಾಗದು,
ಲಿಂಗಬಾಹ್ಯ ಸತಿಸುತರ ಸೋಂಕಲಾಗದು.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಉದಯಾಸ್ತಮಾನವೆನ್ನದೆ
ಶಿವಪೂಜೆ ಶಿವಮಂತ್ರ ಶಿವಾರ್ಪಣ ಶಿವಶಾಸ್ತ್ರ
ಶಿವಯೋಗದಲ್ಲಿರುವಾತನೆ ಲಿಂಗವಂತನೆಂಬೆನಯ್ಯಾ.
ಇದಮೀರಿ; ಕರಸ್ಥಲದಲ್ಲಿ ಲಿಂಗವ ಧರಿಸಿ
ತನ್ನ ಮನೆಯಲ್ಲಿ ಅನ್ಯದೈವ ಭವಿಮಿಶ್ರ ಅನ್ಯಬೋಧೆ
ಭವಿಶಾಸ್ತ್ರವುಳ್ಳಾತನ ಶುದ್ಧಭವಿಯೆಂಬೆನಯ್ಯಾ.
ಅದೆಂತೆಂದಡೆ;
``ಅಭಕ್ತಜನಸಂಗಶ್ಚ ಆಮಂತ್ರಂಚ ಅನಾಗಮಃ
ಅನ್ಯದೈವಪರಿತ್ಯಾಗೋ ಲಿಂಗಭಕ್ತಸ್ಯ ಲಕ್ಷಣಂ
ಶಿವಸ್ಯ ಶಿವಮಂತ್ರಸ್ಯ ಶಿವಾಗಮಸ್ಯ ಪೂಜನಂ
ಶಿವಶೇಷಶೀಲಸಂಬಂಧೋ ಲಿಂಗಭಕ್ತಸ್ಯ ಲಕ್ಷಣಂ
ಲಿಂಗಧಾರೀ ಸುಭಕ್ತಶ್ಚ ಲಿಂಗಬಾಹ್ಯಸತೀಸುತಃ
ಅಲಿಂಗಿನೀ ಚುಂಬಕಶ್ಚ ರೌರವಂ ನರಕಂ ವ್ರಜೇತ್ ಎಂದುದಾಗಿ
ಗುರುವಾಕ್ಯವ ಮೀರಿ ನಡೆವ ಮಹಾಪಾತಕರ ಮುಖವ ತೋರದಿರಾ,
ಸೆರೆಗೊಡ್ಡಿ ಬೇಡಿಕೊಂಬೆ, ದಯದಿಂದ ನೋಡಿ ರಕ್ಷಿಸು
ಕೂಡಲಚೆನ್ನಸಂಗಮದೇವಾ. -೩/೧೦೯೩ [1]
ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಭಕ್ತನಾಗಲಿ ಜಂಗಮನಾಗಲಿ ತನ್ನ ಅಂಗದ ಮೇಲೆ
ಅನ್ಯ ಮಣಿಮಾಲೆ ನಂದಿವುಂಗುರ ನಾಗಕುಂಡಲ ಮೊದಲಾದ
ಭವಿಶೈವದ ಮುದ್ರೆಗಳ ಧರಿಸಲಾಗದು.
ಭೂತೇಶನೆಂಬ ಲಿಂಗವನರ್ಚಿಸಿ ಪ್ರಸಾದವ ಕೊಂಡೆವೆಂಬ ದ್ರೋಹಿಗಳ
ಕುಂಬಿಪಾಕ ನಾಯಕನರಕದಲ್ಲಿಕ್ಕುವ ಕೂಡಲಚೆನ್ನಸಂಗಮದೇವ. -೩/೮೫೪ [1]
ನಮಗೆ ಲಿಂಗವುಂಟು,
ನಾವು ಲಿಂಗವಂತರೆಂದು ನುಡಿವರು.
ಮತ್ತೆ ಮರಳಿ ಭವಿಶೈವದೈವಂಗಳಿಗೆರಗುವ
ಈ ಮಂಗಮಾನವರನೇನೆಂಬೆನಯ್ಯಾ,
ಕಲಿದೇವಯ್ಯ. -೮/೬೩೭ [1]
474
ಅಯ್ಯಾ, ಸದಾಚಾರವೆಂದಡೆ ಗುರುಲಿಂಗಜಂಗಮದಾರ್ಚನೆ,
ಪಾದೋದಕ ಪ್ರಸಾದ ಸೇವನೆ, ಪಂಚಾಕ್ಷರ ಷಡಕ್ಷರ ಸ್ತೋತ್ರ,
ಚಿದ್ಘನ ಮಹಾಲಿಂಗಧ್ಯಾನ, ಪರದ್ರವ್ಯ ನಿರಸನ.
ಇಂತಿದು ನಿತ್ಯವೆಂದು ಸದ್ಗುರು ಮುಖದಿಂ ತಿಳಿದು,
ಭಿನ್ನವಿಲ್ಲದೆ ಆಚರಿಸುವದೆ ಆಚಾರವಲ್ಲದೆ
ಶುದ್ಧಶೈವರ ಹಾಂಗೆ ನಂದಿ ವೀರಭದ್ರ ಹಾವುಗೆ
ಗದ್ದುಗೆ ಕಂಥೆ ಕಮಂಡಲು ಲಿಂಗಂಗಳೆಂದು
ಇದಿರಿಟ್ಟು ಪೂಜಿಸುವವನ ಮನೆಯ ಪಾಕ,
ಮದ್ಯ ಮಾಂಸ ಕಾಣಾ ಕಲಿದೇವರದೇವ.
ಗುರು ಕೊಟ್ಟ ಲಿಂಗ ತನ್ನ ಕರಸ್ಥಲದಲ್ಲಿರುತಿರಲು,
ಧರೆಯ ಮೇಲೆ ಪ್ರತಿಷ್ಠಿಸಿದ ಭವಿಶೈವದೈವ,
ತೀರ್ಥಕ್ಷೇತ್ರಂಗಳಿಗೆ ಹರಿದುಹೋಗುವ ಪರವಾದಿಗಳಿಗೆ
ಅಘೋರನರಕ ತಪ್ಪದೆಂದ, ಕಲಿದೇವಯ್ಯ. -೮/೫೮೧ [1]
ಹರ ಹರ ಶಿವ ಶಿವ ಗುರುವೆ ಕರಸ್ಥಲದ ಶಾಂತಲಿಂಗ,
ಜಂಗಮ ಭಕ್ತ ಶರಣಗಣಂಗಳ ಚರಣವ ನೆನೆಯದೆ,
ಧರೆಯ ಮೇಲೆ ನೆಲಸಿಪ್ಪ ಭವಿಶೈವದೈವಂಗಳ ನೆನೆವ
ನರಕಿನಾಯಿಗಳನೇನೆಂಬೆನಯ್ಯಾ ಕಲಿದೇವಯ್ಯ. -೮/೭೬೮ [1]
ಕಾಯದ ಕಳವಳದಲ್ಲಿ ಹುಟ್ಟಿ, ಸಂಸಾರವನೆ ತೊರೆದು,
ಲಿಂಗಮುಖವರಿಯದವರೆಲ್ಲಾ ಅಂತಿರಲಿ ಅಂತಿರಲಿ.
ಬ್ರಹ್ಮೋಪದೇಶವನೆ ಕೊರಳಲ್ಲಿರಿಸಿಕೊಂಡು,
ವಿಷಯಾದಿಗಳ ಕೊಂಡಾತನಂತಿರಲಿ, ಅಂತಿರಲಿ.
ಪಂಚಮಹಾವೇದಶಾಸ್ತ್ರವನೋದಿ,
ಲಿಂಗವುಂಟು ಇಲ್ಲಾಯೆಂಬ ಶ್ವಾನರಂತಿರಲಿ, ಅಂತಿರಲಿ.
ತನುವ ಹೊತ್ತು ತೊಳಲಿ ಬಳಲುವ
ಕಾಲವಂಚಕ ಯೋಗಿಗಳೆಲ್ಲಾ ಅಂತಿರಲಿ, ಅಂತಿರಲಿ.
ಪಂಚಮಹಾಶೈವರು ಭ್ರಷ್ಟರಾಗಿಹೋದರು.
ಎಂತು ಲಿಂಗವಂತಂಗೆ ಸರಿಯೆಂಬೆ ?
ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು,
ಬುದ್ಧಿ ತಪ್ಪಿ, ಗಮನಗೆಟ್ಟುಹೋದರು.
ಅದೃಶ್ಯಂ ಭಾವನೋ ನಾಸ್ತಿ ದೃಶ್ಯಮೇವ ವಿನಶ್ಯತಿ |
ಸದ್ಬ್ರಹ್ಮಂ ತು ನಿರಾಕಾರಂ, ತಥ್ಯಂ ಧ್ಯಾಯಂತಿ ಯೋಗಿನಃ |
ಎಂದುದಾಗಿ, ಬ್ರಾಹ್ಮಣನೆಂದಡೆ
ಬ್ರಹ್ಮನ ಶಿರವ ದಂಡವ ಕೊಂಡರು.
ಬ್ರಹ್ಮವಾದಿಗಳು ಲಿಂಗಕ್ಕೆ ದೂರವಾಗಿ ಹೋದರು.
ಅಹಮಿಲ್ಲದ ಕಾರಣ, ಸಕಳೇಶ್ವರದೇವಯ್ಯಾ,
ನಿಮ್ಮ ಶರಣರು ಜಗವಂದಯರಾದರು. /೪೧೨ [1]
[1] ಈ ತರಹದ ಸಂಖ್ಯೆಯ ವಿವರ: ಸವಸ-1/653 :- ಸಮಗ್ರ ವಚನ ಸಂಪುಟದ ಸಂಖ್ಯೆ -1, ವಚನ ಸಂಖ್ಯೆ-1653 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*ವ್ರತಗಳು; ವ್ರತಗಳು ಹೇಗಿರಬೇಕು | ವೀರಶೈವ ಲಿಂಗವಂತ/ಲಿಂಗಾಯತ ಎರಡೂ ಬೇರೆ ಬೇರೆ |