Previous ವಿದ್ಯೆಯ ಬಗ್ಗೆ ಶರಣರ ವಚನಗಳು. ಸಪ್ತಶೀಲಗಳು Next

ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ ?

*

ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ ?
ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ ?
ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ ?
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ ?
ಇಂತೀ ಇವಕೆ ಆತ್ಮ ಒಂದೆಂದಡೆ
ತಮ್ಮ ತಮ್ಮ ಸ್ವಸ್ಥಾನಂಗಳಲ್ಲಿ ಅಲ್ಲದೆ
ದೃಷ್ಟವ ಕಾಣಬಾರದು.

ಆವ ಸ್ಥಲ ನೆಮ್ಮಿದಡೂ ಆ ಸ್ಥಲಕ್ಕೆ ವಿಶ್ವಾಸಬೇಕು.
ಇದು ಸಂಗನಬಸವಣ್ಣನ ಭಕ್ತಿ ಬ್ರಹ್ಮೇಶ್ವರ ಲಿಂಗವನರಿವುದಕ್ಕೆ ಇಕ್ಕಿದ ಭಿತ್ತಿ.

ಶರಣ ಬಾಹೂರು ಬೊಮ್ಮಣ್ಣ
--------------------------------------------
ವಚನ ಅನುಸಂಧಾನ

ಶರಣರು; ವರ್ತಮಾನದ ಬದುಕನ್ನು - ಪ್ರಕೃತಿ ಸಹಜ ರೀತಿಯಲ್ಲಿ ಹದವರಿತು ಹಾಗೂ ಅದರ ಇತಿಮಿತಿಯ ಅರಿತು, 'ಕಾಯ'ದ ಮಹತ್ವದ ಬಗ್ಗೆ ಶರಣತತ್ವ ಸಿದ್ಧಾಂತದ ಮೂಲಕ ಅರಿತುಕೊಂಡು ಅದರಂತೆ ಆಚರಿಸಿ ವ್ಯಷ್ಟಿ(ಪಿಂಡಾಂಡ/ವ್ಯಕ್ತಿ) ಮತ್ತು ಸಮಷ್ಟಿ(ಬ್ರಹ್ಮಾಂಡದ)ಯ ಸಾಂಗತ್ಯದಲ್ಲಿ ಇಹ(ಲೌಕಿಕ) ಪರ(ಅಲೌಕಿಕ)ದ ಜೀವನವನ್ನು ಇದೇ ಜನ್ಮದಲ್ಲಿ ಅರಿವು ಆಚರಣೆಯ ಮೂಲಕ ಅನುಭಾವದ ಅನನ್ಯವಾದ ಜ್ಞಾನಜ್ಯೋತಿಯನ್ನು ಬೆಳಗಿಸಿಕೊಂಡು ಬಾಳಿ ಬದುಕನ್ನು ಬಳಗಬೇಕು ಎಂದು ಅಪ್ಪ ಬಸವಾದಿ ಶರಣರು ತಮ್ಮ ಲೌಕಿಕ ಬದುಕಿನ ಲೋಕಾನುಭವದ ಜೊತೆಗೆ ಆಧ್ಯಾತ್ಮಿಕ ಬದುಕಿನ ಅನುಭಾವವನ್ನು ಸಮನ್ವಯಗೊಳಿಸಿ, ಅದನ್ನು ತಮ್ಮದೇ ಆದ ಪರಿಭಾಷೆಯ ಮೂಲಕ ವಚನ ಸಾಹಿತ್ಯದಲ್ಲಿ ಎರಕಹೊಯ್ದು ಇಂತಹ ಈ ಜ್ಞಾನ ಸಂಪತ್ತನ್ನ ಜಗದ ಜನಮಾನಸ ಮುಟ್ಟಲಿ ಎಂದು ಶರಣರು ತಮ್ಮ ಪ್ರಾಣವನ್ನ ಬಲಿಕೊಟ್ಟು ಈ ವಚನ ವಾಙ್ಮಯವ ಕೊಟ್ಟು ಹೋಗಿದ್ದಾರೆ. ಇಲ್ಲಿ ಪ್ರಸ್ತುತ ಶರಣ ಬಾಹೂರು ಬೊಮ್ಮಣ್ಣರ ಈ ಮೇಲಿನ ವಚನದ ಅನುಸಂಧಾನವ ಮಾಡಿ ಕಂಡು ಕೊಳ್ಳೋಣ.
ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ ?
ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ ?
ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ ?
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ?
ಇಂತೀ ಇವಕೆ ಆತ್ಮ ಒಂದೆಂದಡೆ
ತಮ್ಮ ತಮ್ಮ ಸ್ವಸ್ಥಾನಂಗಳಲ್ಲಿ ಅಲ್ಲದೆ
ದೃಷ್ಟವ ಕಾಣಬಾರದು .

ವಚನದ ಈ ಮೇಲಿನ ಸಾಲುಗಳಲ್ಲಿ; ಶರೀರದ ಪ್ರಮುಖ ಅಂಗಾಗಳಾದ - ಬಾಯಿ, ನಾಸಿಕ (ಮೂಗು), ಕಣ್ಣು, ಕಿವಿಗಳಿಗೆ ಅವುಗಳಿಗೆಂದೇ ನಿಗದಿ ಮಾಡಿದ ಕೆಲಸವನ್ನು ಅವು ಮಾಡಬೇಕು. ಅದನ್ನು ಬಿಟ್ಟು ಒಂದರ ನಿಗದಿತ ಕೆಲಸವನ್ನು ಮತ್ತೊಂದು ಆ ನಿಗದಿತ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಇವುಗಳೆಲ್ಲದರ ಆತ್ಮವು ಒಂದೇ ಆಗಿದ್ದರೂ ಸಹಿತವಾಗಿ ಆ ಅಂಗಾಂಗಗಳು ತಮ್ಮ ತಮ್ಮ ನಿಗದಿತ ಕೆಲಸವನ್ನು ತಮ್ಮ ಸ್ವಸ್ಥಾನದಲ್ಲಿ ಇದ್ದೇ ಮಾಡುದು ಕಂಡು ಬರುತ್ತದೆ ಈ ಕ್ರಮವು ಪ್ರಕೃತಿ ಸಹಜಧರ್ಮ ಎಂದು ಹೇಳಿ, ಈ ಲೌಕಿಕ ರೂಪಕದ ದೃಷ್ಟಾಂತವನ್ನೇ ಪ್ರಸ್ತುತ ವಚನ - ತನ್ನ ಮುಂದಿನ ಸಾಲಿನಲ್ಲಿ ಆಧ್ಯಾತ್ಮಿಕ ಅನುಭೂತಿಯ ಸಂಗತಿಯನ್ನ ಮನವರಿಕೆ ಮಾಡಿಕೊಡಲು ಇಲ್ಲಿ ಇದನ್ನೇ ಬಳಸಿಕೊಂಡಿದೆ. ಅದನ್ನೀಗ ವಚನದ ಆ ಸಾಲುಗಳನ್ನು ಇಲ್ಲಿ ಈಗ ಅವಲೋಕಿಸೋಣ.

ಆವ ಸ್ಥಲ ನೆಮ್ಮಿದಡೂ ಆ ಸ್ಥಲಕ್ಕೆ ವಿಶ್ವಾಸಬೇಕು.
ಇದು ಸಂಗನ ಬಸವಣ್ಣನ ಭಕ್ತಿ,
ಬ್ರಹ್ಮೇಶ್ವರ ಲಿಂಗವನರಿವುದಕ್ಕೆ ಇಕ್ಕಿದ ಭಿತ್ತಿ.


ಈ ಮೇಲೆ ವಿವರಿಸಿದ ಶರೀರದ ಅಂಗಾಂಗಗಳ ರೂಪಕ ದೃಷ್ಟಾಂತದಂತೆ; ಶರೀರದ ಹೋರಗಡೆ ತೋರುವ ಅವಯವಗಳು ಹೇಗೆ ತಮ್ಮ ತಮ್ಮ ನಿಗದಿತ ಕೆಲಸವನ್ನು ತಾವು ಒಂದೇ ಆತ್ಮದ ಅಡಿ ಯಲ್ಲಿದ್ದರೂ ತಾವು ಮಾಡಲು ನಿಗದಿ ಮಾಡಿದ ಚಟುವಟಿಕೆಯನ್ನ ಮಾತ್ರ ಅವುಗಳು ಮಾಡುತ್ತಿ ರುವುದು ಕಂಡು ಬರುತ್ತದೆ. ಅದರಂತೆಯೇ ಈ ಶರೀರದ ಒಳಗಿರುವ ಷಟಸ್ಥಳ; ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಈ ಯಾವುದೇ ಸ್ಥಲವನ್ನು ಸಾಧಕನು ನೆಚ್ಚಿ ವಿಶ್ವಾಸ ವಿಟ್ಟು ಸಾಧನೆಯನ್ನ ಮಾಡಿದರೂ ಆತ ಆಯಾ ಸ್ಥಲಕ್ಕೆ ಅದಮ್ಯವಾದ ವಿಶ್ವಾಸ ಹೊಂದಿಬೇಕು. ಅಂದರೆ, ಭಕ್ತಸ್ಥಲದ ಕೆಲಸವನ್ನು ಮಹೇಶಸ್ಥಲ ಮಾಡಲು ಬಾರದು. ಯಾಕೆಂದರೆ ಇದು ಸಂಗನ ಬಸವಣ್ಣನ ಭಕ್ತಿ, ಬ್ರಹ್ಮೇಶ್ವರ ಲಿಂಗವನರಿವುದಕ್ಕೆ ಪ್ರಕೃತಿ ಇಕ್ಕಿದ ಭಿತ್ತಿ ಎಂದು ಹೇಳುವ ವಚನವು; ಷಟಸ್ಥಳ ಸಿದ್ಧಾಂತದ ಪ್ರಕಾರ ಪ್ರತಿಯೊಂದು ಸ್ಥಲದ ದೃಷ್ಟಾನುಷ್ಠಾನವನ್ನು ಆಯಾ ಸ್ಥಲಕ್ಕೆ ನಿಗದಿ ಮಾಡಿದ ಚಟುವಟಿಕೆ ಅದು ಪ್ರಕೃತಿ ದತ್ತ ವಾಗಿ ನಿಗದಿ ಮಾಡಲ್ಪಟ್ಟದ್ದನ್ನೇ ಅನುಭೂತಿಯ ಹೊಂದುತ್ತಾ ಊರ್ಧ್ವಮುಖಿಯಾಗಿ ಮೇಲೇರಿ ಸಾಗಿ ಐಕ್ಯ ಸಾಧಿಸಬೇಕೆಂಬ ಷಟಸ್ಥಳ ತತ್ವ ಸಿದ್ಧಾಂತದ ಸಾಧನೆಯ ಕುರಿತಂತೆ ಈ ವಚನವು ಮನವರಿಕೆ ಮಾಡಿ ಕೊಡುತ್ತದೆಂದು ಅನಿಸುತ್ತದೆ.

*
ಪರಿವಿಡಿ (index)
Previous ವಿದ್ಯೆಯ ಬಗ್ಗೆ ಶರಣರ ವಚನಗಳು. ಸಪ್ತಶೀಲಗಳು Next