| ಕುಂಕುಮದ ಬಗ್ಗೆ ವಚನ :👈 | 👉:ವಚನ ಸಾಹಿತ್ಯ Vachana Sahitya |
ವಚನ ಸಾಹಿತ್ಯದಲ್ಲಿ ಶಿವನ ಬಗ್ಗೆ |
"ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ
ನಾದವ ಮಾಡಿದ ರಾವಣಂಗೆ ಅರೆಯಾಯುಷವಾಯ್ತು
ವೇದವನೋದಿದ ಬ್ರಹ್ಮನ ಶಿರಹೋಯ್ತು
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ" - ಬಸವಣ್ಣ
“ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು.
ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು.
ಪೃಥ್ವಿಯೆ ಪೀಠ ಆಕಾಶವೆ ಲಿಂಗ_ಅಂತಹ ಆತನೊಬ್ಬ ಗಣೇಶ್ವರನು.
ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು.
ಸಿರಿಯಾಳನ ಮಗನ ಭಿಕ್ಷವ ಬೇಡಿದಾತನೊಬ್ಬ ಗಣೇಶ್ವರನು.
ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ ನೀಲಕಂಠನೆಂಬಾತನೊಬ್ಬ ಗಣೇಶ್ವರನು.
ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು.”
“ಶಿವ, ಗುರುವೆಂದು ಬಲ್ಲಾತನೆ ಗುರು.
ಶಿವ, ಲಿಂಗವೆಂದು ಬಲ್ಲಾತನೆ ಗುರು.
ಶಿವ, ಜಂಗಮವೆಂದು ಬಲ್ಲಾತನೆ ಗುರು.
ಶಿವ, ಪ್ರಸಾದವೆಂದು ಬಲ್ಲಾತನೆ ಗುರು.
ಶಿವ, ಆಚಾರವೆಂದು ಬಲ್ಲಾತನೆ ಗುರು.
ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ
ಮಹಾಮಹಿಮ ಸಂಗನಬಸವಣ್ಣನು
ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು
ಕಾಣಾ ಗುಹೇಶ್ವರಾ.” -ಅಲ್ಲಮಪ್ರಭು
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಗೌತಮ ಮುನಿಗೆ ಗೋವಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಕರ್ಣನ ಕವಚ ಹೋಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ಪರುಶುರಾಮ ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
ನಾಗರ್ಜುನನ ತಲೆ ಹೋಯಿತ್ತು.
ದೇವಾ, ಭಕ್ರನೆಂದು ನಂಬಿದ ಕಾರಣ
ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು. - ಬಸವಣ್ಣ
"ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನೇರಿಸಿಕೊಂಡು
ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ?
ಕೃತಯುಗ್ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ
ಸವೆದ ಪಾಷಾಣ!
ನಮ್ಮ ಕೂಡಲಸಂಗನ ಶರಣರ ಪ್ರಸಾದ ಜೀವಿಗಳಲ್ಲದವರು
ಏಸು ಕಾಲವಿರ್ದಡೆನು, ಅದರಂತು ಕಾಣಿರಣ್ಣಾ." - ಬಸವಣ್ಣ
"ಮಹಂತಿನ ಕೂಡಲದೇವರೆಂಬ ಪಾಷಂಡಿ, ವೇಷಧಾರಿ!
ಇವರ, ಘಾತಕ ಮೂಳ ಮೂಳ ಹೊಲೆಯರನೇನೆಂಬೆನಯ್ಯಾ,
ಮಹಂತಿನ ಪರಿವ್ರತವೆಂತೆಂದರಿಯರು,
ಆ ಮಹಂತಿನ ಘನವನೆಂತೆಂದಡೆ:
ಅಂತ:ಪರಂಜ್ಯೋತಿಸ್ವರೂಪನು,
ನಿತ್ಯ ನಿರಂಜನನು,
ನಿ:ಕಳಂಕನು, ನಿರ್ದೇಹನು, ನಿರಾಮಯನು, ನಿಶ್ಯೂನ್ಯನು,
ಅನಂತಬ್ರಹ್ಮಾಂಡಗಳ ನೆನಹು ಮಾತ್ರದಲ್ಲಿ ನಿರ್ಮಿಸಿದ, ಕರ್ತೃ,
ಪಾದದಲ್ಲಿ ಪಾತಾಳಲೋಕ, ನೆತ್ತಿಯಲ್ಲಿ ಸತ್ಯಲೋಕ,
ಕುಕ್ಷಿಯಲ್ಲಿ ಹದಿನಾಲ್ಕು ಲೋಕವ ತಾಳಿಹ, ವಿಶ್ವಪರಿಪೂರ್ಣನು.
ಇಂತಪ್ಪ ಪರಂಜ್ಯೋತಿಮಹನು
ಇಂತಿವರೆಲ್ಲ ತನ್ನ ಸರ್ವಾಂಗದಲ್ಲಿ ಮಡುಗಿಸಿಕೊಂಡು,
ನಿಬ್ಬೆರಗಿಯಾಗಿ, ಶಬ್ದ ಶೂನ್ಯನಾಗಿರಬಲ್ಲಡೆ
ಮಹಂತಿನ ಕೂಡಲದೇವರೆಂಬೆನಯ್ಯಾ.
ಇದನರಿಯದ ವೇಷಧಾರಿ ಲಾಂಛನಿ ಗರ್ವಿಗಳನೇನೆಂಬೆನಯ್ಯಾ?
ಕೂಡಲಸಂಗಮದೇವರಲ್ಲಿ ಸಲ್ಲದ ನರಕಿಗಳು." - ಬಸವಣ್ಣ
"ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ." - ಬಸವಣ್ಣ
“ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ.
ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ.
ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ.
ಭೈರವನು ಭಯಂಕರಹರನ ಮಗನೆಂಬ ಭವಹರಗುರುದ್ರೋಹಿಗಳು ನೀವು ಕೇಳಿರೆ.
ಅಜಾತನ ಚರಿತ್ರ ಪವಿತ್ರ.
ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ,
ಆದಿಯ ಲಿಂಗ ಅನಾದಿಯ ಶರಣ
ಗುರುವಿನ ಗುರು ಪರಮಗುರುವರನ ತೋರಿದನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು”. - ಅಲ್ಲಮ ಪ್ರಭುದೇವ
"ಹರಶಕ್ತಿಗಳಲ್ಲಿ ಹುಟ್ಟಿದ ಬೆನಕ ಭೈರವ ಷಣ್ಮುಖರ
ಮಹಾಹರನ ಮಕ್ಕಳೆಂಬ ಪಾತಕ ನೀ ಕೇಳೊ.
ಹರಿಹರನು ಒಂದೆಂಬ ಶಿವದ್ರೋಹಿ ನೀ ಕೇಳೊ.
ಹರಿ ಸಹಿತಾರರಿಂದತ್ತ ಅಜಾತನಚರಿತ್ರ ಅಪ್ರತಿಮಮಹಿಮ
ಕೂಡಲಸಂಗಮದೇವನೊಬ್ಬನೆ ಕಾಣಿ ಭೋ." - ಬಸವಣ್ಣ
"ಬೇಡವೊ ಇಲಿಚಯ್ಯಾ !
ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ,
ಇಂದು ಬಂದು ನಮ್ಮ ವಸ್ತ್ರವ ಕಡಿದೆ.
ಬೇಡವೋ ಇಲಿಚಯ್ಯಾ !
ನಿನಗಂಜರು ನಿನ್ನ ಗಣಪತಿಗಂಜರು;
ಕೂಡಲಚೆನ್ನಸಂಗನ ಶರಣರು ಕಂಡಡೆ,
ನಿನ್ನ ಹಲ್ಲ ಕಳೆವರು, ದಂತವ ಮುರಿವರು." - ಚೆನ್ನಬಸವಣ್ಣ
"ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದಡೆ ರಂಜನೆಯಹುದಲ್ಲದೆ ಅದರ ಗಂಜಳ ಬಿಡದಣ್ಣಾ,
ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದಡೆ ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣಾ.
ಲೋಕದ ಮಾನವಂಗೆ ದೀಕ್ಷೆಯ ಕೊಟ್ಟಡೆ ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ. - ಬಸವಣ್ಣ
"ಅರಗಿನ ಪುತ್ಥಳಿಯನುರಿದು ನಾಲಗೆ ಮಾತಾನಾಡುವ ಸರಸ ಬೇಡ
ಬೆಣ್ಣೆಯ ಬೆನಕನಂತೆಹೊಯಿದು ಕೆಂಡದುಂಡೆಲಿಗೆಯ ಮಾಡಿ ಚಲ್ಲವಾಡಿದಡೆ
ಹಲ್ಲು ಹೋಹುದು ಕೂಡಲಸಂಗನ ಶರಣರೊಡನೆ ಸರಸವಾಡಿದಡೆ ಅದು ವಿರಸ ಕಾಣಿರಯ್ಯಾ. - ಬಸವಣ್ಣ
"ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ !
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ !
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ !
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ !
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ ಕೂಡಲಸಂಗಮದೇವಾ." - ಬಸವಣ್ಣ
[1] ಈ ತರಹದ ಸಂಖ್ಯೆಯ ವಿವರ: ಸವಸ-1/590 :- ಸಮಗ್ರ ವಚನ ಸಂಪುಟ-೧, ವಚನ ಸಂಖ್ಯೆ-590 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
| ಕುಂಕುಮದ ಬಗ್ಗೆ ವಚನ :👈 | 👉:ವಚನ ಸಾಹಿತ್ಯ Vachana Sahitya |