*
ಲಿಂಗವಂತನಿಗೆ ಕುಂಕುಮಧಾರಣೆ ನಿಷಿದ್ಧ.
ಕೊಂಬನೂದುವ ಹೊಲೆಯಂಗೆ
ಕುಂಕುಮ ಹಣೆಯಲ್ಲಲ್ಲದೆ ಶ್ರೀವಿಭೂತಿ ಒಪ್ಪುವುದೆ?
ಲಿಂಗಲಾಂಛನವ ತೊಟ್ಟು, ಗುರೂಪದೇಶವ ಹೇಳಿ,
ನೊಸಲಲ್ಲಿ ವಿಭೂತಿಪಟ್ಟವ ಕಟ್ಟಿದ ಬಳಿಕ,
ಮರಳಿ ಗುರುನಿಂದಕನಾಗಿ,
ಹಣೆಯಲ್ಲಿ ಕುಂಕುಮಾದಿ ತಿಲಕವ ಕೊಂಡಡವನಾ
ಕೊಂಬಿನ ಹೊಲೆಯಂಗಿಂದ ಕನಿಷ್ಠವೆಂದ,
ಕಲಿದೇವಯ್ಯ. /571 - ಶ್ರೀ ಮಡಿವಾಳ ಮಾಚಿದೇವರು
ಲಿಂಗವಂತ ಸ್ತ್ರೀಯರಿಗೂ ಕುಂಕುಮ ಧಾರಣೆ ನಿಷಿದ್ಧ
ಬಸವ ಮೊದಲಾದ ಮಹಾಪ್ರಮಥಗಣಂಗಳ ಸಮೂಹಕ್ಕೆ ಕಾರಣರಾದ,
ಮರ್ತ್ಯಲೋಕದ ಮಹಾಗಣಂಗಳ ಅಂಶೋದ್ಧಾರಕರಾದ,
ಲಿಂಗಾಚಾರ ಭಕ್ತಮಾಹೇಶ್ವರರ ಪಾಣಿಗ್ರಹಣ *ಕ್ರಿಯಾಶಕ್ತಿಯರು*
ಸದಾವಾಸ ಪರಿಯಂತರ ಇಷ್ಟಮಹಾಲಿಂಗವ
ತಮ್ಮ ಅಂಗವ ಬಿಟ್ಟು ಅಗಲಿಸಲಾಗದು.
ನಿರಂತರ ಶ್ರೀಗುರುಲಿಂಗಜಂಗಮದ ಚರಣೋದ್ಧೂಳನವನ್ನು
ಲಲಾಟದಲ್ಲಿ ತ್ರಿಪುಂಡ್ರ ರೇಖೆಗಳ ಧರಿಸಿ,
ಮಂತ್ರಸ್ಮರಣೆಯಿಂದ ಲಿಂಗಜಂಗಮಕ್ಕೆ ಪಾಕವ ಮಾಡಿ ಸಮರ್ಪಿಸಿ,
ಕುಶಬ್ದವನಳಿದು ಆಚರಿಸುವದೆ ಸತ್ಯಸದಾಚಾರ.
ಈ ಸನ್ಮಾರ್ಗವ ಬಿಟ್ಟು, ಭವಿಪ್ರಾಣಿಗಳಂತೆ ಸರ್ವಾಂಗಕ್ಕೆ ಹಚ್ಚೆಯನೂರಿಸಿಕೊಂಡು,
ಲಲಾಟದಲ್ಲಿ ಕುಂಕುಮಗಂಧದ ಬೊಟ್ಟು, ಏಕಾಂತವಾಸದಲ್ಲಿ ಹಲವು ಪ್ರಸಂಗ.
ಭವಿಜನ್ಮಾತ್ಮರು ತೊಳೆದ ಹೊದಿಕೆ, ಅವರ ಸಂಸರ್ಗ ಮೊದಲಾದ
ದುಷ್ಕೃತ್ಯವ ಮಾಡಿದಲ್ಲಿ ಕಂಡು ಸುಮ್ಮನಿರಲಾಗದು.
ಭಕ್ತಮಾಹೇಶ್ವರರು ಆ ಸ್ತ್ರೀಯರಿಗೆ ಪ್ರತಿಜ್ಞೆಯ ಮಾಡು(ಡಿಸು)ವದು.
ಅದ ಮೀರಿದಡೆ ಅವರಿಂದ ಪಾಕವ ಕೊಳ್ಳಲಾಗದು.
ಈ ಮಾರ್ಗವನಾಚರಿಸದಿರ್ದಂಥ ಭಕ್ತನಲ್ಲಿ, ಗುರುಚರಮೂರ್ತಿಗಳು,
ಅವನ ಮನೆಯ ಹೊಕ್ಕು, ಲಿಂಗಾರ್ಚನೆ ಲಿಂಗಾರ್ಪಣವ ಮಾಡಲಾಗದು.
ಗುರುವಾಕ್ಯವ ಮೀರಿ, ಅರ್ಥದಿಚ್ಫೆಗೆ ಹೊಕ್ಕು ಬೆರಸಿದಡೆ,
ಅನಾದಿ ಗುರುಲಿಂಗಜಂಗಮ ಭಕ್ತಪ್ರಸಾದಕ್ಕೆ ಹೊರಗಾಗಿ,
ಅಂತ್ಯದಲ್ಲಿ ಶತಸಹಸ್ರ ವೇಳೆ ಶುನಿಸೂಕರಾದಿಗಳಲ್ಲಿ
ಬಪ್ಪುದು ತಪ್ಪದು ನೋಡಾ, ಕಲಿದೇವರದೇವ. /684 - ಶ್ರೀ ಮಡಿವಾಳ ಮಾಚಿದೇವರು
ಆನೆಯನೇರಿಕೊಂಡು ಹೋದಿರೇ ನೀವು,
ಕುದುರೆಯನೇರಿಕೊಂಡು ಹೋದಿರೇ ನೀವು,
ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ !
ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ !
ಅಹಂಕಾರವೆಂಬ ಸದಮದಗಜವೇರಿ
ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ !
ನಮ್ಮ ಕೂಡಲಸಂಗಮದೇವನರಿಯದೆ
ನರಕಕ್ಕೆ ಭಾಜನವಾದಿರಲ್ಲಾ 1/638 ! - ಗುರು ಬಸವಣ್ಣ.
[1] ಈ ತರಹದ ಸಂಖ್ಯೆಯ ವಿವರ: ಸವಸ-1/554 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-554 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)