Previous ಶರಣನ ಕಂಡು, *ಶರಣು* ಎಂದು ಕರವ ಮುಗಿವುದೆ ಭಕ್ತಿ ಲಕ್ಷಣ ಆದಯ್ಯ ಶರಣರ ವಚನದಲ್ಲಿ ಖಗೋಳ ವಿಜ್ಞಾನದ ಅಂಶಗಳು Next

ದೇವನನ್ನು ಇಷ್ಟಲಿಂಗ ರೂಪದಲ್ಲಿ ಪೂಜಿಸುವುದು.

*

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ.. ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. - ೧/೭೪೪[1]


ಗುರುವೆಂಬ ತೆತ್ತಿಗನು
ಲಿಂಗವೆಂಬಲಗನು ಮನನಿಷ್ಠೆಯೆಂಬ ಕೈಯಲ್ಲಿ ಕೊಡಲು,
ಕಾದಿದೆ ಗೆಲಿದೆ ಕಾಮನೆಂಬವನ,
ಕ್ರೋಧಾದಿಗಳು ಕೆಟ್ಟು, ವಿಷಯಂಗಳೋಡಿದವು.
ಅಲಗು ಎನ್ನೊಳು ನಟ್ಟು ಆನಳಿದ ಕಾರಣ ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ. ೫/೨೦೨[1]

ಪಾತಾಳವಿತ್ತತ್ತ, ಪಾದಂಗಳತ್ತತ್ತ,
ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ,
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ,
ಚೆನ್ನಮಲ್ಲಿಕಾರ್ಜುನಯ್ಯ
ನೀವೆನ್ನ ಕರಸ್ಥಳಕೆ ಬಂದು ಚುಳುಕಾದಿರಲ್ಲಾ ಲಿಂಗವೆ 5/279[1]

ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ,
ಎನಗಿದು ಸೋಜಿಗ, ಎನಗಿದು ಸೋಜಿಗ !
ಅಹುದೆನಲಮ್ಮೆನು, ಅಲ್ಲೆನಲಮ್ಮೆನು,
ಗುಹೇಶ್ವರಲಿಂಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ ! -೨/೬೦[1]

ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗವಿಲ್ಲದಲ್ಲಿಂದತ್ತ ನೋಡಾ,
ಧರೆಯು ಬ್ರಹ್ಮಾಂಡವು ಮೂರುತಿಗೊಳ್ಳದಲ್ಲಿಂದತ್ತ ನೋಡಾ!
ಘನಪ್ರಸಾದವ ಸಾಧಿಸಿ ತಂದು ಎನ್ನ ಕೈಯಲಿ ನಿಕ್ಷೇಪ[ವಾಗಿ] ಕೊಟ್ಟನಯ್ಯಾ
ಕೂಡಲಚೆನ್ನಸಂಗಾ ನಿಮ್ಮ ಶರಣನು. -೩/೨೧[1]

ಇಲ್ಲಿ ಚೆನ್ನಬಸವಣ್ಣನವರು ಬ್ರಹ್ಮಾಂಡದಲ್ಲೆಲ್ಲಾ ಚೈತನ್ಯ ಸ್ವರೂಪವಾಗಿ ಇದ್ದಂತಹ ಪರಮಾತ್ಮನನ್ನು ಗುರುಬಸವಣ್ಣನವರು (ನಿಕ್ಷೇಪವಾಗಿ) ಲಿಂಗ ರೂಪದಲ್ಲಿ ಸಾಧಿಸಿ ತಂದು ನಮ್ಮ ಕರಸ್ಥಲಕ್ಕೆ ಕೊಟ್ಟಿದ್ದಾರೆಂದು ವಿವರಿಸಿದ್ದಾರೆ. ಈ ಕರಸ್ಥಲದ ಇಷ್ಟಲಿಂಗ(ಕಂಥೆ)ವು ಬ್ರಹ್ಮಾಂಡದಲ್ಲಿರುವ ಪರಮಾತ್ಮನ ಸ್ವರೂಪವೂ ಹೌದು ಪಿಂಡಾಂಡದಲ್ಲಿರುವ ಪರಮಾತ್ಮನ ಸ್ವರೂಪವು ಹೌದು.
ಅದೆ ರೀತಿ ಮನುಷ್ಯನ ಶರೀರದಲ್ಲಿ

ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯವಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೆ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೆ ಕಿರಣಂಗಳಾಗಿ
ಬೆಳಗುವ ಚಿದಂಶವೆ ಪ್ರಾಣಲಿಂಗವು,
ಆ ಮೂಲಚೈತನ್ಯವೆ ಭಾವಲಿಂಗವು.
ಇದನರಿದು, ನೋಡುವ ನೋಟ ಭಾವಪರಿಪೂರ್ಣವಾಗಿ
ತಾನು ತಾನಾದಲ್ಲದೆ, ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ. -೧/೯೭೧ [1]

ಸರ್ವವ್ಯಾಪಿಯಾದ ಪರಮಾತ್ಮನು ಸರ್ವರ ಹೃದಯದಲ್ಲಿ ಜ್ಯೋತಿ ಸ್ವರೂಪದಲ್ಲಿ ಸತ್-ಚಿತ್ ಆನಂದ ರೂಪವಾಗಿ ನೆಲೆಸಿರುತ್ತಾನೆ. ಇಲ್ಲಿ ಹೃದಯವೆಂದರೆ ದೇಹದ ಮುಖ್ಯವಾದ ಭಾಗವೆಂದು ಅರ್ಥ. ಅದು ಮಿದುಳಿನ ಮಧ್ಯಭಾಗವಾಗಿದೆ. ಅನೇಕರು ಇದನ್ನು ರಕ್ತಪರಿಚಲನೆಯಲ್ಲಿ ಮುಖ್ಯ ಕೆಲಸಮಾಡುತ್ತಿರುವ ಹೃದಯವೆಂದು ಭಾವಿಸಿದ್ದಾರೆ. ಆದರೆ ಹೃದಯವು ಆತ್ಮನ ವಾಸ ಸ್ಥಾನವಿರುವುದರಿಂದ ಈ ಹೃದಯವನ್ನು ಅಂದರೆ ಮಿದುಳನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುವುದಿಲ್ಲ ಆದರೆ ರಕ್ತಪರಿಚಲನೆಯಲ್ಲಿ ಮುಖ್ಯ ಪಾತ್ರವಹಿಸುವ ಹೃದಯವನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಅಲ್ಲಿ ಆತ್ಮನಿದ್ದರೆ ಈ ಕೆಲಸ ಅಸಾಧ್ಯವಾಗುತ್ತಿತ್ತು. ಕಾರಣ ಹೃದಯವೆಂದರೆ ಮಿದುಳಿನ ಮಧ್ಯಭಾಗವಾಗಿರುತ್ತದೆ. ಶರಣರ ವಚನಗಳಲ್ಲಿ ಇದಕ್ಕೆ ಊಧ್ರ್ವಹೃದಯ, ಮಧ್ಯಹೃದಯ, ಪೂರ್ವಹೃದಯವೆಂದೂ, ಹಾಗೂ ಬಯಲು, ಆಕಾಶ, ಭ್ರೂಮಧ್ಯ, ಸಾಸಿರದಳ ಕಮಲ, ಆಷ್ಟದಳಕಮಲ, ನಾಭಿಸ್ಥಾನವೆಂದೂ ಮತ್ತು ಆಧಾರವೆಂದು ಅನೇಕ ಪರ್ಯಾಯ ಪದಗಳನ್ನು ಶರಣರು ತಮ್ಮ ವಚನಗಳಲ್ಲಿ ಉಪಯೋಗಿಸುದ್ದಾರೆ.

ಹೃದಯಕಮಲದಲ್ಲಿ ವಾಸವಾಗಿರುವಾತನೊಬ್ಬನು.
ಮನದ ಕೊನೆಯಲ್ಲಿ ಇರುವಾತನೊಬ್ಬನು,
ಚಿದಾಕಾಶದಲ್ಲಿರುವಾತನೊಬ್ಬನು.
ಇವರೆಲ್ಲರಲ್ಲಿ ಇರುವಾತನೊಬ್ಬನು,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನು. -೪/೧೧೭೮ [1]

ಶ್ರೀ ಸೊನ್ನಲಾಪುರದ ಸಿದ್ಧರಾಮೇಶ್ವರರು ಈ ವಚನದಲ್ಲಿ ಒಂದೇ ಪರವಸ್ತು ಮೂರಾಗಿದೆ, ಮೂರು ಒಂದೇ ಆಗಿದೆ ಎಂದು ಹೇಳಿದ್ದಾರೆ. ಈ ಮೂವರು ಒಂದಾದ ಜ್ಯೋತಿ ಸ್ವರೂಪವಾದ ಮಹಾಘನಲಿಂಗವನ್ನು ಶ್ರೀಗುರು ಕರಸ್ಥಲಕ್ಕೆ ಇಷ್ಟಲಿಂಗ ರೂಪವಾಗಿ ಕೊಟ್ಟ ಈ ಲಿಂಗವು ಒಳಗಿರತಕ್ಕ ಪ್ರಾಣ (ಜ್ಞಾನ)ಸ್ವರೂಪವಾಗಿದೆ.

ಇಷ್ಟಲಿಂಗವೇ ಪ್ರಾಣ, ಪ್ರಾಣಲಿಂಗವೆ ಇಷ್ಟ
ದೃಷ್ಟಿ ಬಲಿಯಲು ಉಭಯ ಒಂದಾದುದು
ಇಷ್ಟವನು ನೋಡ ನೋಡಲು ಸಕಲ ಸಂಧಾನದ
ನಿಷ್ಕಲದ ಹೊನಲಯ್ಯ ಯೋಗಿನಾಥ - ಸಿದ್ಧರಾಮೇಶ್ವರ

ಇಲ್ಲಿ ಇಷ್ಟಲಿಂಗ ಮತ್ತು ಒಳಗಿರತಕ್ಕ ಪ್ರಾಣ ಎರಡೂ ಒಂದೇ ಆಗಿರುತ್ತವೆ. ಇನ್ನೂ ವಿವರವಾಗಿ ವಿಚಾರಿಸುವದಾದರೆ ಪರಮಾತ್ಮನೆ ತನ್ನ ಚಿತ್‍ಶಕ್ತಿಯ ಚಲನೆ ಮಾತ್ರದಿಂದ ಒಂದು ಅಂಗಸ್ಥಲ, ಒಂದು ಲಿಂಗಸ್ಥಲ ಎಂದು ಎರಡಾಗಿ ಒಂದು ಉಪಾಸ್ಯ ಒಂದು ಉಪಾಸಕವೆನಿಸಿತು.

[1] ಈ ತರಹದ ಸಂಖ್ಯೆಯ ವಿವರ: ಸವಸ-೧/೭೪೪ :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-೭೪೪ (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಶರಣನ ಕಂಡು, *ಶರಣು* ಎಂದು ಕರವ ಮುಗಿವುದೆ ಭಕ್ತಿ ಲಕ್ಷಣ ಆದಯ್ಯ ಶರಣರ ವಚನದಲ್ಲಿ ಖಗೋಳ ವಿಜ್ಞಾನದ ಅಂಶಗಳು Next