ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ? ಲಿಂಗದೀಕ್ಷೆಯಾದ ನಂತರ ಪಂಚಸೂತಕವಿರುವುದಿಲ್ಲ
ಸಾಂಪ್ರದಾಯಿಕ ಹಿಂದೂಗಳು ಐದು ಸೂತಕಗಳನ್ನು ಆಚರಿಸುತ್ತಾರೆ. ಅವೆಂದರೆ, ಜಾತಿಸೂತಕ, ಜನನಸೂತಕ, ಪ್ರೇತಸೂತಕ, ರಜಸ್ಸೂತಕ, ಎಂಜಲಸೂತಕ.
ಬೇರೆ ಜಾತಿಯವರನ್ನು ಮುಟ್ಟಬಾರದು, ಅವರು ಮುಟ್ಟಿದುದನ್ನೂ ಮುಟ್ಟಬಾರದು ಎಂಬುದು
ಜಾತಿಸೂತಕ. ಹಡೆದವಳನ್ನೂ ಆಕೆ ಮುಟ್ಟಿದುದನ್ನೂ ಮುಟ್ಟಬಾರದೆಂಬುದು
ಜನನಸೂತಕ; ರಜಸ್ವಲೆಯಾದವಳನ್ನೂ
ಆಕೆ ಮುಟ್ಟಿದುದನ್ನೂ ಮುಟ್ಟಬಾರದೆಂಬುದು
ರಜಸ್ಸೂತಕ; ಪ್ರೇತಸೂತಕವೆಂದರೆ ಸತ್ತವರ ಮನೆಯಲ್ಲಿರುವವರನ್ನು
ಮುಟ್ಟಬಾರದು;
ಎಂಜಲಸೂತಕವೆಂದರೆ ಬೇರೆಯವರು ತಿಂದುಳಿದುದನ್ನು ತಿನ್ನಬಾರದು. ಶರಣರು ಈ ಸಾಂಪ್ರದಾಯಿಕ
ಪದ್ಧತಿಯನ್ನು ಇಡಿಯಾಗಿ ಖಂಡಿಸಿದ್ದಾರೆ. ಅವರ ಪ್ರಕಾರ, ಲಿಂಗದೀಕ್ಷೆಯು ನಮ್ಮಲ್ಲಿರುವ ಎಲ್ಲ ದೋಷಗಳನ್ನೂ ನಾಶ ಮಾಡುವುದಲ್ಲದೆ, ಮತ್ತೆ ಯಾವ ದೋಷವೂ ನಮಗೆ ಅಂಟದಷ್ಟು ನಮ್ಮನ್ನು ಶುದ್ಧಮಾಡುತ್ತದೆ.
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ?
ಕುಲವುಂಟೆ ಜಂಗಮವಿದ್ದೆಡೆಯಲ್ಲಿ?
ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ,
ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದಿಲ್ಲ - ೧/೭೭೦
[1]
ಪ್ರೇತಸೂತಕ ಬಿಡದು, ರಜಸ್ಸೂತಕ ಬಿಡದು, ಎಂಜಲುಸೂತಕ ಬಿಡದು,
ಭ್ರಾಂತುಸೂತಕ ಬಿಡದು, ವರ್ಣಸೂತಕ ಬಿಡದು,
ಇವರೆಂತು ಭಕ್ತರಹರು?
ಹೂಸಿ ಹುಂಡನ ಮಾಡಿದಲ್ಲಿ, ಬಾಯಿಗೆ ಬೆಲ್ಲವ ತೊಡೆದಲ್ಲಿ
ಸದ್ಗುರು ಲಿಂಗವು ಮೂಗ ಕೊಯ್ಯದೆ ಮಾಬನೆ?
ಕಾಡು ಕಿಚ್ಚಿನ ಕೈಯಲ್ಲಿ ಕರಡದ ಹುಲ್ಲ ಕೊಯ್ಸಿದಂತಿರಬೇಕು ಭಕ್ತಿ.
ಹಿಂದೆ ಮೆದೆಯಿಲ್ಲ, ಮುಂದೆ ಹುಲ್ಲಿಲ್ಲ.
ಇದು ಕಾರಣ ಕೂಡಲಚೆನ್ನಸಂಗನ ಭಕ್ತಿಸ್ಥಲ
ನಿಮ್ಮ ಶರಣಂಗಲ್ಲದೆ ಅಳವಡುದು- ೩/೧೧೯
[1]
ಶ್ರೀ ಗುರು ಕರುಣಕಟಾಕ್ಷದಲ್ಲಿ ಉತ್ಪತ್ಯವಾದ ಅಜಾತಂಗೆ
ಜಾತಿಸೂತಕ, ಜನನ ಸೂತಕ, ಪ್ರೇತ ಸೂತಕ ರಜಸ್ಸೂತಕವುಂಟೆಂಬವಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲವಯ್ಯಾ
ಕೂಡಲಚೆನ್ನಸಂಗಯ್ಯ - ೩/೧೬೮
[1]
ಜನನಸೂತಕ, ಕುಲಸೂತಕ, ರಜಃಸೂತಕ, ಎಂಜಲಸೂತಕ, ಪ್ರೇತಸೂತಕ
ಎಂಬಿವಾದಿಯಾದ ಸರ್ವಸೂತಕಂಗಳು
ಅಂಗಲಿಂಗ ಸಂಬಂಧಿಗಳಾದ ಲಿಂಗಭಕ್ತರಿಗಿಲ್ಲ ನೋಡಾ, ಅದೆಂತೆಂದೊಡೆ;
’ಆದಿಬಿಂದುರ್ಭವೇದ್ಬೀಜಂ ಬೀಜಮಧ್ಯಸ್ಥಿತಂ ಕುಲಂ
ಬೀಜಂ ನಾಸ್ತಿ ಕುಲಂ ನಾಸ್ತಿ ತಸ್ಮೈ ಶಿವಕುಲಂ ಭವೇತ್ ’ ಎಂದುದಾಗಿ
ಪೂರ್ವಾಚಾರವನಳಿದು ಪುನರ್ಜಾತನಾಗಿ,
ಅಂಗದ ಮೇಲೆ ಲಿಂಗಸಾಹಿತ್ಯನಾದ ಭಕ್ತಂಗೆ ಜನನಸೂತಕವೆಂಬುದೆ ಪಾತಕ ನೋಡಾ.
ಶಿವಭಕ್ತರಾದ ಬಳಿಕ ಭವಿನೇಮಸ್ತರ ಕಳೆದು
ಶಿವಕುಲವೆ ಕುಲವಾದ ಭಕ್ತರಿಗೆ ಕುಲಸೂತಕವೆಂಬುದೆ ಪಾತಕ ನೋಡಾ.
ಗುರುಪಾದತೀರ್ಥ, ಲಿಂಗಪಾದತೀರ್ಥ, ಜಂಗಮಪಾದತೀರ್ಥ ಆದಿಯಾದ
ಲಿಂಗೋದಕ, ಪಾದೋದಕ, ಪ್ರಸಾದೋದಕ ಎಂಬ ತ್ರಿವಿಧೋದಕದಲ್ಲಿ
ಸರ್ವಪಾಕಪ್ರಯತ್ನ, ನಾನಾ ಕ್ರಿಯಾವಿಧಾನ, ಸ್ನಾನಪಾನಂಗಳಿಂದ
ಬಾಹ್ಯಾಭ್ಯಂತರಂ ಶುಚಿಯಾದ, ಶುದ್ಧನಿರ್ಮಲದೇಹಿಯಾದ ಭಕ್ತಂಗೆ ರಜಃಸೂತಕವೆಂಬುದೆ ಪಾತಕ ನೋಡಾ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಯುಕ್ತವಾದ ಸದಾಸನ್ನಹಿತ ಭಕ್ತಂಗೆ
ಎಂಜಲಸೂತಕವೆಂಬುದೆ ಪಾತಕ ನೋಡಾ.
ಗುರುವಿನಿಂ ಜನನ, ಚರಲಿಂಗದಿಂ ಸ್ಥಿತಿ,
ಪರಮಪಾವನ ಘನಮಹಾಲಿಂಗದೊಳೈಕ್ಯ. ಅದೆಂತೆಂದೊಡೆ;
’ಸದ್ಗುರೋಃ ಪಾಣಿಜಾತಸ್ಯ ಸ್ಥಿತೇ ಸದ್ಭಕ್ತಸಂಗಿನಾಂ
ಲೀಯತೇ ಚ ಮಹಾಲಿಂಗೀ ವೀರಶೈವೋತ್ತಮೋತ್ತಮಂ ಎಂದುದಾಗಿ,
ನಿಜಲಿಂಗೈಕ್ಯವಾದ ಸದ್ಭಕ್ತಂಗೆ
ಪ್ರೇತಸೂತಕವೆಂಬುದೆ ಪಾತಕ ನೋಡಾ.
ಇಂತೀ ಪಂಚಸೂತಕವನುಳ್ಳ ಪಾತಕಂಗಳ
ಪಂಚಾಚಾರಯುಕ್ತನಾದ ಸದ್ಭಕ್ತಂಗೆ ಕಲ್ಪಿಸುವ
ಪಂಚಮಹಾಪಾತಕರ ಅಘೋರ ನರಕದಲ್ಲಿಕ್ಕುವ ಕೂಡಲಸಂಗಯ್ಯ. -೧/೧೧೯೬
[1]
ಪೂರ್ವಜಾತವಳಿದು ಪುನರ್ಜಾತರೆನಿಸಿ, ಅಂಗದ ಮೇಲೆ ಲಿಂಗವ ಧರಿಸಿ
ಲಿಂಗವಂತರೆನಿಸಿದ ಮೇಲೆ;
ಮತ್ತೆ ಜಾತಿಸೂತಕ ಜನನಸೂತಕ ಪ್ರೇತಸೂತಕ ರಜಸ್ಸೂತಕ,
ಎಂಜಲಸೂತಕ ಬಿಡದನ್ನಕ್ಕರ ಇವರನೆಂತು ಭಕ್ತರೆಂಬೆನಯ್ಯಾ ?
ಇವರನೆಂತು ಯುಕ್ತರೆಂಬೆನಯ್ಯಾ ? ಇವರನೆಂತು ಮುಕ್ತರೆಂಬೆನಯ್ಯಾ ?
ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು,
ಹಸ್ತಮಸ್ತಕಸಂಯೋಗವಂ ಮಾಡಿ, ಕರ್ಣಮಂತ್ರಮಂ ತುಂಬಿ,
ಕರಸ್ಥಲಕೆ ಶಿವಲಿಂಗಮಂ ಬಿಜಯಂಗೈಸಿ ಕೊಟ್ಟ ಬಳಿಕ
ಕಾಡ್ಗಿಚ್ಚಿನ ಕೈಯಲ್ಲಿ ಕರಡವ ಕೊಯ್ಸಿದಂತಿರಬೇಕು ಭಕ್ತನು !
ಹಿಂದೆ ಮೆದೆಯಿಲ್ಲ ಮುಂದೆ ನಿಲವಿಲ್ಲ-ಇದು ಕಾರಣ
ಕೂಡಲಚೆನ್ನಸಂಗಯ್ಯಾ, ನಿಮ್ಮ ಸದ್ಭಕ್ತರು ಸೂತಕವ ಮಾಡಲಿಲ್ಲ -೩/೧೩೪೮
[1]
ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು
ಪುನರ್ಜಾತನಂ ಮಾಡಿದ ಬಳಿಕ,
ಪಂಚಭೂತಕಾಯವ ಕಳೆದು
ಪ್ರಸಾದಕಾಯವ ಮಾಡಿದ ಬಳಿಕ,
ವಾಯುಪ್ರಾಣಿಯ ಕಳೆದು
ಲಿಂಗಪ್ರಾಣಿಯ ಮಾಡಿದ ಬಳಿಕ,
ಎಲ್ಲಿಯ ಕುಲಸೂತಕ, ಎಲ್ಲಿಯ ಛಲಸೂತಕ,
ಎಲ್ಲಿಯ ತನುಸೂತಕ ಎಲ್ಲಿಯ ಮನಸೂತಕ
ಎಲ್ಲಿಯ ನೆನಹುಸೂತಕ ಎಲ್ಲಿಯ ಭಾವಸೂತಕ,
-ಇವನೆಂತೂ ಹಿಡಿಯಲಾಗದು, ಸದ್ಭಕ್ತನು.
ಕುಲಸೂತಕವುಳ್ಳನ್ನಕ್ಕರ ಭಕ್ತನಲ್ಲ
ಛಲಸೂತಕವುಳ್ಳನ್ನಕ್ಕರ ಮಹೇಶ್ವರನಲ್ಲ
ತನುಸೂತಕವುಳ್ಳನ್ನಕ್ಕರ ಪ್ರಸಾದಿಯಲ್ಲ
ಮನಸೂತಕವುಳ್ಳನ್ನಕ್ಕರ ಪ್ರಾಣಲಿಂಗಿಯಲ್ಲ
ನೆನಹುಸೂತಕವುಳ್ಳನ್ನಕ್ಕರ ಶರಣನಲ್ಲ
ಭಾವಸೂತಕವುಳ್ಳನ್ನಕ್ಕರ
ಐಕ್ಯನಲ್ಲ
ಇಂತೀ ಸೂತಕವ ಮುಂದುಗೊಂಡಿಪ್ಪವರ
ಮುಖವ ನೋಡಲಾಗದು ಗುಹೇಶ್ವರ./1549
[1]
ಉಂಬುದು ಉಡುವುದು ಶಿವಾಚಾರ,
ಕೊಂಬುದು ಕೊಡುವುದು ಕುಲಾಚಾರ ಎಂಬ
ಅನಾಚಾರಿಯ ಮಾತ ಕೇಳಲಾಗದು.
ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರ ಒಂದೆ ಎಂದು
ಕೊಟ್ಟು ಕೊಂಬುದು ಸದಾಚಾರ, ಉಳಿದುದೆಲ್ಲ ಅನಾಚಾರ.
ಅದೆಂತೆಂದಡೆ;
ಸ್ಫಟಿಕದ ಕೊಡದಲ್ಲಿ ಕಾಳಿಕೆಯನರಸುವ ಹಾಗೆ,
ಸಿಹಿಯೊಳಗೆ ಕಹಿಯನರಸುವ ಹಾಗೆ,
ರಜಸ್ಸೂತಕ ಕುಲಸೂತಕ ಜನನಸೂತಕ ಪ್ರೇತಸೂತಕ ಉಚ್ಛಿಷ್ಟಸೂತಕ ಎಂದಡೆ,
ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ತೀರ್ಥಪ್ರಸಾದವಿಲ್ಲ.
ಇಂತೀ ಪಂಚಸೂತಕವ ಕಳೆದಲ್ಲದೆ ಭಕ್ತನಾಗ.
ಇಂತಹ ಭಕ್ತರಲ್ಲಿ ಕೊಟ್ಟು ಕೊಂಬುದು ಸದಾಚಾರ-
ಕೂಡಲಚೆನ್ನಸಂಗಮದೇವಾ - ೩/೧೦೧೮
[1]
ಕುಲಗೋತ್ರಜಾತಿಸೂತಕದಿಂದ ಕೆಟ್ಟವರೊಂದು ಕೋಟ್ಯಾನುಕೋಟಿ.
ಜನನಸೂತಕದಿಂದ ಕೆಟ್ಟವರು ಅನಂತಕೋಟಿ.
ಮಾತಿನಸೂತಕದಿಂದ ಮೋಸವಾದವರು ಮನು ಮುನಿಸ್ತೋಮ ಅಗಣಿತಕೋಟಿ.
ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು ಹರಿಹರ ಬ್ರಹ್ಮಾದಿಗಳೆಲ್ಲರು.
'ಯದ್ದೃಷ್ಟಂ ತನ್ನಷ್ಟಂ' ಎಂಬುದನರಿಯದೆ
ಹದಿನಾಲ್ಕುಲೋಕವೂ ಸಂಚಿತಾಗಾಮಿಯಾಗಿ
ಮರಳಿ ಮರಳಿ ಹುಟ್ಟುತ್ತಿಪ್ಪರಯ್ಯ.
ಇಂತೀ ಸೂತಕದ ಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ
ಪರಬ್ರಹ್ಮ ದೊರಕುವದೆ ಅಯ್ಯಾ ?
ಇದು ಕಾರಣ, ನಾಮರೂಪುಕ್ರೀಗಳಿಗೆ ಸಿಲ್ಕುವನಲ್ಲವಯ್ಯ.
ಅಗಮ್ಯ ಅಪ್ರಮಾಣ ಅಗೋಚರವಯ್ಯ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ
ರಾಜೇಶ್ವರಲಿಂಗವಲ್ಲದೆ ಉಳಿದವರಿಗಿಲ್ಲವೆಂಬೆನು. - ಬಾಚಿಕಾಯಕದ ಬಸವಣ್ಣ /೨೧೦
ಅಯ್ಯಾ, ನಿಮ್ಮ ಶರಣ ಜನನಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಗುರುವಿನ ಕರಪದ್ಮದಲ್ಲಿ ಜನಿಸಿಬಂದವನಾಗಿ.
ಅಯ್ಯಾ, ನಿಮ್ಮ ಶರಣ ಜಾತಿಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಅನಾದಿಸಂಸಿದ್ಧನಿರಂಜನ ಶಿವಾಂಶಿಕ ತಾನಾಗಿ.
ಅಯ್ಯಾ, ನಿಮ್ಮ ಶರಣ ರಜಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಮಂತ್ರಮೂರುತಿ ಪರಮಪವಿತ್ರ ತಾನಾಗಿ.
ಅಯ್ಯಾ, ನಿಮ್ಮ ಶರಣ ಉಚ್ಫಿಷ್ಟ ಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಚರಣ ಜಲಶೇಷ ಸುಖಮಯನಾಗಿ.
ಅಯ್ಯಾ, ನಿಮ್ಮ ಶರಣ ಪ್ರೇತಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಲೀನವಾಗಿರ್ದನಾಗಿ. - ದೇಶಿಕೇಂದ್ರ ಸಂಗನಬಸವಯ್ಯ/೭೨೪
ಪಂಚಾಂಗ ಪಂಚಾಂಗವೆಂದು ಕಳವಳಗೊಂಡು ಜೋಯಿಸನ ಕರೆಯಿಸಿ,
ಕೈಮುಗಿದು ಕಾಣಿಕೆಯನಿಕ್ಕಿ ಎಲೆ ಅಡಿಕೆಯಂ ಕೊಟ್ಟು,
ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು,
ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ
ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು ?
ಪಂಚಾಂಗವೆಂಬ ಶಬ್ದಕ್ಕೆ ಅರ್ಥವ ಹೇಳಲರಿಯದೆ ಜೋಯಿಸರು ಕೆಟ್ಟರು ;
ಕೇಳಲರಿಯದೆ ಅನಂತ ಹಿರಿಯರು ನರಕಕ್ಕೆ ಇಳಿದರು.
ಪಂಚಾಂಗವೆಂದರೆ ಹೇಳಿಹೆ ಕೇಳಿರಣ್ಣಾ.
ಪಂಚ ಅಂದರೆ ಐದು ; ಅಂಗವೆಂದರೆ ದೇಹ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ-
ಈ ಐದು ಕೂಡಿ ದೇಹವಾಯಿತ್ತು.
ಆ ದೇಹದೊಳಗೆ ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರದಚ್ಚು ಮುರಿಯುವುದೇ ಪಂಚಾಂಗ.
ಸತ್ವ ರಜ ತಮವೆಂಬ ಅಹಂಕಾರವ ತುಳಿವುದೆ ಪಂಚಾಂಗ.
ಆಣವಮಲ ಮಾಯಾಮಲ ಕಾರ್ಮಿಕ ಮಲವ
ಮುಟ್ಟದಿರುವುದೇ ಪಂಚಾಂಗ.
ತನ್ನ ಸತಿಯ ಸಂಗವಲ್ಲದೆ
ಪರಸತಿಯರ ಮುಟ್ಟದಿರುವುದೇ ಪಂಚಾಂಗ.
ತನ್ನ ಇಷ್ಟಲಿಂಗವಲ್ಲದೆ ಭೂಮಿಯ ಮೇಲೆ ಇಟ್ಟು
ಪೂಜೆಯ ಮಾಡುವ ದೇವರಿಗೆ ಕೈಮುಗಿಯದಿರುವುದೆ ಪಂಚಾಂಗ.
ಜಾತಿಸೂತಕ ಜನನಸೂತಕ ಉಚ್ಫಿಷ್ಟಸೂತಕ
ಮೃತ್ಯುಸೂತಕ ರಜಸ್ಸೂತಕ - ಈ ಪಂಚಸೂತಕವ
ಶರಣರು ಕಳೆವರಾಗಿ, ನಮ್ಮ ಶಿವಭಕ್ತರಿಗೆ ಸಲ್ಲದೆಂಬುದೆ ಪಂಚಾಂಗ.
ಸೂತಕ ನಾಸ್ತಿಯಾದುದೆ ಪಂಚಾಂಗ.
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವೆ ಪಂಚಾಂಗ.
ಲಿಂಗಾಚಾರ ಸರ್ವಾಚಾರ ಭೃತ್ಯಾಚಾರ
ಶಿವಾಚಾರ ಗಣಾಚಾರವೆ ಪಂಚಾಂಗ.
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ,
ಗಣಪ್ರಸಾದ, ಮಹಾಪ್ರಸಾದವ ಕೊಂಬುವುದೆ ಪಂಚಾಂಗ.
ಇಂತೀ ಪಂಚಾಂಗದ ನಿಲವನರಿಯದೆ
ಪಂಚಸೂತಕದೊಳಗೆ ಹೊಡೆದಾಡುವ ಪಂಚಮಹಾಪಾತಕರ
ಎನಗೊಮ್ಮೆ ತೋರದಿರಯ್ಯ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ. - ನಿರಾಲಂಬ ಪ್ರಭುದೇವ /೧೨೪೪
ಶುದ್ಧ-ಅಶುದ್ಧ, ಪವಿತ್ರ-ಅಪವಿತ್ರವೆಂಬ ವರ್ಗೀಕರಣದಲ್ಲಿನ ತಾರತಮ್ಯವನ್ನು ವಚನ ಸಂಸ್ಕೃತಿಯು ತನ್ನ ಸಮಾನತೆ ಕುರಿತ ವಿಚಾರ ಪ್ರಣಾಳಿಕೆ ಮೂಲಕ ತಿರಸ್ಕರಿಸಿತು. ಸಮಾನತೆಯ ವಿಚಾರ ಪ್ರಣಾಳಿಕೆಯನ್ನು ಒಪ್ಪಿಕೊಂಡ ವಚನ ಸಂಸ್ಕೃತಿಯು ಸಹಜವಾಗಿ ಸೂತಕಾಚರಣೆಯನ್ನು ತಿರಸ್ಕರಿಸಬೇಕಾಯಿತು. ವಚನ ಸಂಸ್ಕೃತಿಯಲ್ಲಿ ಸೂತಕಕ್ಕೆ ಸ್ಥಾನವಿಲ್ಲ.ಅದರ ಅಸ್ತಿತ್ವವನ್ನೇ ವಚನ ಸಂಸ್ಕೃತಿ ಪ್ರಶ್ನೆ ಮಾಡಿತು.
[1] ಈ ತರಹದ ಸಂಖ್ಯೆಯ ವಿವರ: ಸವಸ-1/770 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-770 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)