ದೇವನನ್ನು ಇಷ್ಟಲಿಂಗ ರೂಪದಲ್ಲಿ ಪೂಜಿಸುವುದು. :👈 👉:ಅಲ್ಲಮ ಪ್ರಭುವಿನ ವಚನಗಳಲ್ಲಿ ಖಗೋಳ ವಿಜ್ಞಾನ

ಆದಯ್ಯ ಶರಣರ ವಚನದಲ್ಲಿ ಖಗೋಳ ವಿಜ್ಞಾನದ ಅಂಶಗಳು

ವಚನಗಳಲ್ಲಿ ಅರ್ಥಶಾಸ್ತ್ರ

ಬಸವಾದಿ ವಚನಕಾರರ ಚಿಂತನೆಯ ಕೇಂದ್ರ 'ಲಿಂಗ' (ಇಷ್ಟಲಿಂಗ). ಇಡೀ ಜೀವನವನ್ನು ಆವರಿಸಿಕೊಂಡು, ಸ್ವಂತ ಅನುಭಾವದ ಆಧಾರದ ಮೇಲೆ ಅವರ ಚಿಂತನ ತಮ್ಮ ಅರಿವು, ಆಚಾರ, ಆಚರಣೆ, ವಿಚಾರ, ಭಾವನೆಗಳನ್ನು ಅರ್ಥೈಸಿಕೊಂಡು ಪರೀಕ್ಷಿಸಿ ಪರಿಷ್ಕರಿಸುತ್ತದೆ. ಚಿಂತನೆಯ ಗುರಿ 'ಲಿಂಗ' ಅಹುದಹುದೆನ್ನುವಂತೆ ಬದುಕಿ, 'ಲಿಂಗಾಂಗ ಸಾಮರಸ್ಯ' ವನ್ನು ಹೊಂದುವುದು. ಅದಕ್ಕಾಗಿ ಹಿಂದಿನ ಸಂಪ್ರದಾಯ, ಶಾಸ್ತ್ರ ಸೂತ್ರ ನಿಯಮಗಳನ್ನು ಸೋಸಿ, ಸರಿಪಡಿಸುವುದು, ಇಲ್ಲವೆ ತಿರಸ್ಕರಿಸಿ ಹೊಸ ಹಾದಿಯನ್ನು ಕಂಡುಕೊಳ್ಳುವುದು ಅದರ ಉದ್ದೇಶ. ಮೂಢನಂಬಿಕೆಗಳು, ಅರ್ಥಹೀನ ಆಡಂಬರದ ಆಚರಣೆಗಳು, ಅನ್ಯಾಯ ಶೋಷಣೆಗಳು ಹೀಗೆ ತಿರಸ್ಕೃತಗೊಂಡವುಗಳಲ್ಲಿ ಪ್ರಮುಖ.

ಹಳೆಯ ಸಂಪ್ರದಾಯವನ್ನು ಸ್ವಂತ ಅನುಭವದಲ್ಲಿ ಪರೀಕ್ಷಿಸಿ ಸರಿಯೆನಿಸಿದ ರೀತಿಯಲ್ಲಿ ಬದಲಿಸುವುದು ಅವರ ಚಿಂತನೆಯ ವೈಜ್ಞಾನಿಕ ವಿಚಾರ ಚೌಕಟ್ಟನ್ನು ತೋರಿಸುತ್ತದೆ. ಬಸವಣ್ಣ ತನ್ನ ವಚನವೊಂದರಲ್ಲಿ (ಸಂ.೧ ವ೫೯) "ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ" ಎಂದು ಆರಂಭಮಾಡಿ "ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ" ಎಂದು ಕೇಳಿದ ಪ್ರಶ್ನೆ ಇದಕ್ಕೊಂದು ಉದಾಹರಣೆ.

ಅರ್ಥಶಾಸ್ತ್ರದಲ್ಲಿ ಪ್ರಮುಖ ಮೂಲಭೂತ ಅಂಶಗಳು ಉತ್ಪಾದನೆ ಮತ್ತು ಅದರ ಬಳಕೆ, ಉತ್ಪಾದನೆಯಿಂದ ಉತ್ಪನ್ನ, ಆ ಉತ್ಪನ್ನದಿಂದ ಬಳಕೆಯ ಖರ್ಚು, ಉತ್ಪಾದನೆಯನ್ನು ಬಳಕೆದಾರನಿಗೆ ತಲುಪಿಸುವುದು ವಿನಿಮಯ, ವ್ಯವಹಾರ. ಈ ಎಲ್ಲ ಕಾರ್ಯ ಸಾಧನೆಗೆ ಸೇವೆ. ಯಾವುದೇ ಸಮಾಜದಲ್ಲಿಯ ಆರ್ಥಿಕ ವ್ಯವಸ್ಥೆ ಇವೆಲ್ಲವನ್ನೂ ಹೊಂದಿಸುತ್ತದೆ. ಸಮಾಜದ ಸದಸ್ಯ ವ್ಯವಸ್ಥೆಯಲ್ಲಿ ತಂತಮ್ಮ ಪಾತ್ರಗಳನ್ನು ನಿರ್ವಹಿಸಿದರೆ ಸಮಾಜದ ಸ್ಥಿತಿಗತಿ ೧೨ನೆ ಶತಮಾನದ ವಚನಕಾರರು ಅನುಭವಿಸುತ್ತಿದ್ದ ಆರ್ಥಿಕ ವ್ಯವಸ್ಥೆ ಬಹಳ ಹಿಂದಿನಿಂದ ಬಂದದ್ದು. ಅದರ ರೂಪರೇಖೆಗಳು ವೇದಕಾಲದಿಂದ ಜಾರಿಯೊಳಗಿದ್ದ ವರ್ಣವಿಭಜನೆಯನ್ನಾಧರಿಸಿದ್ದವಾದವು. ಸಮಾಜದಲ್ಲಿ ಸ್ಥೂಲವಾಗಿ ಎರಡು ವರ್ಗಗಳಿದ್ದವು. "Haves and Have nots" - ಉಳ್ಳವರು ಮತ್ತು ಇಲ್ಲದವರು. ಉಳ್ಳವರಿಗೆ ಧರ್ಮ, ಶಾಸ್ತ್ರ, ಪಾಂಡಿತ್ಯ, ಶಕ್ತಿ, ಅಧಿಕಾರ, ಧನ ಇವುಗಳ ಬೆಂಬಲವಿತ್ತು. ಅವರು ಇಲ್ಲದವರಲ್ಲಿ ಮೂಢನಂಬಿಕೆ, ಕೀಳರಿಮೆ, ದೈನ್ಯಗಳನ್ನು ಉಂಟುಮಾಡಿ, ಶಾಶ್ವತವೆನ್ನುವಂತಾಗಿಸಿದರು. ಈ ಎರಡನೆಯ ವರ್ಗದವರು ಹೆಚ್ಚಾಗಿ ಶೂದ್ರವರ್ಣದ ರೈತ, ಕೂಲಿ, ಕೆಲಸಗಾರರು, ಕುಶಲಕರ್ಮಿಗಳಿದ್ದು, ಮೇಲ್ವರ್ಗದವರ ಉತ್ಪಾದನೆ, ವಿನಿಮಯಗಳ ಸೇವೆಗಳಲ್ಲಿ ತೊಡಗಿದ್ದರು. ಈ ಆರ್ಥಿಕ ವಿಭಜನೆಯಲ್ಲಿ ಲಾಭದ ಸಿಂಹಪಾಲು ಮೇಲ್ವರ್ಗದವರಿಗಾಗಿ ಅವರಿಂದ ಸಮಾಜಕ್ಕೆ ದೊರೆಯುವುದು ಅತಿ ಕಡಿಮೆ. ಕೆಳಗಿನ ವರ್ಗದವರಿಗೆ ಲಾಭದಲ್ಲಿ ಅತಿಸಣ್ಣಪಾಲು. ಅದು ಮರುದಿನ ಅವರು ಮಾಡಲೇಬೇಕಾದ ಸೇವೆ ಮಾಡಲು ಅಗತ್ಯವಿದ್ದಷ್ಟೇ. ಆದರೆ ಅವರು ಸಮಾಜಕ್ಕೆ ಕೊಡಬೇಕಾದ್ದು ಸಿಂಹಪಾಲು. ಹೀಗೆ ಅತಿ ಹೆಚ್ಚಿನ ಅಸಮಾನತೆ, ಅನ್ಯಾಯ, ಶೋಷಣೆಗಳು ಆಗಿನ ವ್ಯವಸ್ಥೆಯಲ್ಲಿದ್ದವು. ಇಂತಹ ಪರಿಸ್ಥಿತಿಯಲ್ಲಿಯೇ ಆಧುನಿಕ ಯುಗದಲ್ಲಿ ಫ್ರಾನ್ಸ್, ರಶಿಯಾಗಳಲ್ಲಿ ಹಿಂಸಾಕ್ರಾಂತಿಗಳಾದದ್ದು. ೧೨ನೆಯ ಶತಮಾನದಲ್ಲಿಯೂ ಬೇರೊಂದು ರೀತಿಯ ಕ್ರಾಂತಿ ಜರುಗಿತು. ಬಸವಾದಿ ವಚನಕಾರರ ಮುಖಂಡತ್ವದಲ್ಲಿ ಅಸಮಾನತೆ, ಅನ್ಯಾಯ, ಶೋಷಣೆಗಳಿಲ್ಲದ ಒಂದು ಪರ್ಯಾಯ ವ್ಯವಸ್ಥೆಯನ್ನು ವೈಜ್ಞಾನಿಕ ತಳಹದಿಯ ಮೇಲೆ ಕಂಡುಕೊಂಡರು. ಹಾಗೆಯೇ ಅದು ಅವರ ಪ್ರಮುಖ ಉದ್ದೇಶವಾಗಿದ್ದ 'ಲಿಂಗಾಂಗ ಸಾಮರಸ್ಯ'ದ ಸಾಧನೆಗೂ ಉಪಯುಕ್ತವಾಯಿತು. ಇದೇ ಕಾಯಕ-ದಾಸೋಹ.

ಮೈಮನ ಬಳಲಿಸಿದ ಉತ್ಪಾದನೆ, ವಿನಿಮಯ; ಸೇವಾಕ್ಷೇತ್ರಗಳಲ್ಲಿನ ಸದಸ್ಯರೆಲ್ಲರೂ ತಾವು ಆರಿಸಿಕೊಂಡ, ಅದರಿಂದ ಸಮಾಜಕ್ಕೂ ಹಿತವಾಗುವ ಪ್ರಾಮಾಣಿಕ ಕೆಲಸವೇ ಸತ್ಯಶುದ್ಧ ಕಾಯಕ, ಕಾಯಕದ ಫಲವನ್ನು ಅಂದರೆ ತಾವು ಮಾಡಿದ ಉತ್ಪನ್ನವನ್ನು ತಮ್ಮ ಅಗತ್ಯಗಳಿಗುಪಯೋಗಿಸಿಕೊಂಡು ಉಳಿದುದೆಲ್ಲವನ್ನೂ ಸಮಾಜಸೇವೆಯಲ್ಲಿ ಸೇವಾ ಭಾವದಿಂದ ತೊಡಗಿಸುವುದೇ ದಾಸೋಹ. ಇವೆರಡರ ಪರಸ್ಪರ ಜೋಡಣೆ ಈ ಪರ್ಯಾಯ ಆರ್ಥಿಕ ಸುವ್ಯವಸ್ಥೆಗಾಗಿ, ಮತ್ತು ಅವರ ಪ್ರಮುಖ ಗುರಿಯಾದ ಲಿಂಗಾಂಗಸಾಮರಸ್ಯ ಸಾಧನೆಗಾಗಿ, ಅದಕ್ಕಾಗಿ ಕೆಲವು ನಿಯಮಗಳನ್ನು ರೂಪಿಸಿದರು.

೧. ಕಾಯಕದಲ್ಲಿ ಎಲ್ಲರೂ ತೊಡಗಬೇಕು. ಜೀವನೋಪಾಯಕ್ಕೆ ಸತ್ಯ ಶುದ್ಧ ಕಾಯಕವೊಂದೇ ಹಾದಿ, ಭಿಕ್ಷೆ ಮುಂತಾದ ಇತರ ಉಪಾಯಗಳು ನಿಷೇಧ.

ನುಲಿಯ ಚಂದಯ್ಯ :

ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.

ಮನಸಂದ ಮಾರಿತಂದೆ :

ಕಾಯವಿಡಿದಿಹನ್ನಬರ ಶಿವಭಕ್ತಂಗೆ ಕಾಯಕವೆ ಕೈಲಾಸ
ಕಾಯವಿಲ್ಲದವನ ಅರಿವು ಮಾಯವಾಗಿತ್ತು.
ಅಡುಗೂಲಿಯ ಮನೆಯಂತೆ ಗಡಿಗೆಯ ಗಂಜಿಯಾಸೆಬೇಡ.
ಕೊಡುವರೆಂದೊಬ್ಬರ ಮನೆಗೆ ಅಡಿಗಡಿಗೆ ಹೋಗಬೇಡ.
ಇಂತಿವರಡಿಯ ಕಾಬುದಕೂ ಮೊದಲೆ ಅಡಗಿದೆಯಲ್ಲಾ
ಮನಸಂದಿತ್ತು ಮಾರೇಶ್ವರಾ

ಚನ್ನಬಸವಣ್ಣ (ಸಂ.೨, ವ.೫೦೮) :

ಗತಿಪದ ಮುಕ್ತಿಯ ಬಯಸಿ ಮಾಡುವಾತ ಭಕ್ತನಲ್ಲ.
ಜೀವನೋಪಾಯಕ್ಕೆ ಬೇಡುವಾತ ಜಂಗಮವಲ್ಲ.

ಅಲ್ಲಮಪ್ರಭು (ಸಂ.೨, ವ.೧೫೬೭) :

ಸಂಸಾರವ ಬಿಟ್ಟೆನೆಂದು ನಿರಾಶಾಪದವ ಮಾಡಿ,
ತಲೆಯ ಬೋಳಿಸಿಕೊಂಡು,
ಕುದಿದು ಕೋಟಲೆಗೊಂಡು, ಮನೆಮನೆ ತಪ್ಪದೆ ಭಿಕ್ಷವ ಬೇಡಿ,
ಉಂಡು, ಎದ್ದು ಹೋಗಿ, ತತ್ವವ ಬೋಧಿಸಿ
ಈಗ ಉದರವ ಹೊರೆವಂದು ಮುನ್ನವಿಲ್ಲದೆ
ಕಾಡಿ ಬೇಡಿ ಹಾಡಿ ಒಡಲ ಹೊರೆವಂಗೆ, ಮುಕ್ತಿಯುಂಟೆ ಮರುಳಾ?

ಬಸವಣ್ಣ (ಸಂ.೧, ವ.೭೦೯) :

ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು.
ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು.
ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು,
ನಾನಾವಾವ ಕರ್ಮಂಗಳ ಮಾಡಿದಡೆಯೂ
ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು.
ನಿಮ್ಮ ಸೊಮ್ಮಿಂಗೆ ಸಲಿಸುವೆನು ಕೂಡಲಸಂಗಮದೇವಾ,

೨. ಕಾಯಕದ ದುಡಿಮೆ ಪ್ರಾಮಾಣಿಕವಿರಬೇಕು, ಅಂದಿಂಗಂದಿಗೆ, ಸಂಗ್ರಹಕ್ಕಲ್ಲ.

ಆಯ್ದಕ್ಕಿ ಮಾರಯ್ಯ (ಸಂ.೬, ವ.೧೧೯೫) :

ಹಾಗದ ಕಾಯಕವ ಮಾಡಿ ಹಣವಡ್ಡವ ತಾ ಎಂಬಲ್ಲಿ
ಸತ್ಯದ ಕಾಯಕವುಂಟೆ? ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ
ತಾ ಎಂಬುದು ಅಮರೇಶ್ವರ ಲಿಂಗಕ್ಕೆ ಚಿತ್ತಶುದ್ಧ ಕಾಯಕ,

ಸೂಳೆಸಂಕವ್ವ (ಸಂ.೫, ೪.೧೧೩೪) :

ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.
ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ.
ವ್ರತಹೀನನರಿದು ಬೆರೆದಡೆ
ಕಾದಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ಯುವರಯ್ಯಾ,
ಒಲ್ಲೆನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜೇಶ್ವರಾ.

ಗಾವುದಿಮಾಚಯ್ಯ (ಸಂ.೭, ವ.೨೭೭) :

ಭಕ್ತರು ದ್ರವ್ಯವ ಗಳಿಸಿದಲ್ಲಿ
ತಮ್ಮ ತನುವಿದ್ದಲ್ಲಿಯೆ ಗುರುಲಿಂಗ ಜಂಗಮಕ್ಕೆ ರ್ಪಿಸುವುದು,
ಇದೇ ಸದ್ಭಕ್ತಿಯ ಹೊಲಬು.
ತಾನಳಿದು ಮತ್ತೆ ಮನೆಮಕ್ಕಳಿಗೆಂದಡೆ
ಅದೆ ಆಚಾರಕ್ಕೆ ಭಂಗ, ಆತ ಸ್ವಾಮಿಗೆ ಸ್ವಾಮಿದ್ರೋಹಿ.
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ಕೇಳಿ ಎಲ್ಲರೂ ಸತ್ಯವೆನ್ನಿರಣ್ಣಾ.

೩. ಕಾಯಕದ ಫಲ "ಶಿವನ ಸೊಮ್ಮು" ಅಂದರೆ ಸಮಾಜದ್ದು, ಅದು ದಾಸೋಹಕ್ಕೆ ವಿನಿಯೋಗವಾಗಬೇಕು. ಎಲ್ಲರೂ ಸತ್ಯಶುದ್ಧ ಕಾಯಕದಲ್ಲಿ ತೊಡಗುವುದರಿಂದ (ಕೂತು ತಿನ್ನುವವರಿಲ್ಲದಾಗ) ಬಡತನವೇ ಇಲ್ಲದಾಗುತ್ತದೆ. ಎಲ್ಲರಿಗೂ ಅಗತ್ಯ ಪದಾರ್ಥ ಸಿಗುತ್ತದೆ. ಚಿಂತೆಗವಕಾಶವಿಲ್ಲ.

ಬಸವಣ್ಣ (ಸಂ.೧, ವ.೭೫೫) :

ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು
ಓರೆಯಾವಿನ ಬೆನ್ನ ಹರಿಯಲದೇಕಯ್ಯಾ?
ಲಜ್ಜೆ ಗೆಡಲೇಕೆ ನಾಣುಗೆಡಲೇಕೆ
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ?

ಬಸವಣ್ಣ (ಸಂ.೧, ವ೯೬೧) :

ಅಂಗದ ಮೇಲೆ ಲಿಂಗ ಆಯತವಾಗಿ.....
ಕಾಯದ ಕಳವಳವು ದಾಸೋಹದ ಮುಖದಲ್ಲಿ ಅಲ್ಲದೆ ಹರಿಯದೆಂದು

ಬಸವಣ್ಣ (ಸಂ.೧, ವ.೧೧೭೨)

ಗುರುಲಿಂಗ ಜಂಗಮದ ಹೆಸರಿನಿಂದ ಕಾಯಕವ ಮಾಡಿ
ಗುರುಚರಕೆ ವಂಚಿಸಿ, ತಾಯಿತಂದೆ ಬಂಧುಬಳಗ ಹೆಂಡತಿ
ಒಡ ಹುಟ್ಟಿದವರು ಎಂದು ಸಮಸ್ತ ಪದಾರ್ಥವ ಚಾಗೆಯ ಮಾಡುವನೊಬ್ಬ
ಭಕ್ತದ್ರೋಹಿ ನೋಡಾ ಕೂಡಲಸಂಗಮದೇವಾ.

ಆಯ್ದಕ್ಕಿ ಮಾರಯ್ಯ (ಸಂ.೬, ವ.೧೧೭೮)

ತವನಿಧಿಯ ಬೆಳೆವಂಗೆ ಕಣಜದ ಹಂಗುಂಟೆ?
ವಿರಕ್ತಗೆ ಆರೈಕೆಗೊಂಬವರುಂಟೆ?
ಕಾಯಕಮಾಡುವ ಭಕ್ತಂಗೆ ಇನ್ನಾರುವ ಕೂಡಲೇತಕೊ?
ಆ ಗುಣ ಅಮರೇಶ್ವರಲಿಂಗಕ್ಕೂ ದೂರ.

ಆಯ್ದಕ್ಕಿ ಲಕ್ಕಮ (ಸಂ.೫, ವ.೭೨೩)

ಭಕ್ತಂಗೆ ಬಡತನವುಂಟೆ? ನಿತ್ಯಂಗೆ ಮರಣವುಂಟೆ?
ಭಕ್ತರು ಬಡವರೆಂದು ಮತ್ತೊಂದು ಕೊಟ್ಟೆಹೆನೆಂದಡೆ
ಮಾರಯ್ಯಪ್ರಿಯ ಅಮರೇಶ್ವರಲಿಂಗವು ಸಂದಿಗಲ್ಲದೆ ಬಡತನವಿಲ್ಲ.

ಜೇಡರ ದಾಸಿಮಯ್ಯ (ಸಂ.೭, ವ.೭೩೧)

ಇಂದಿಂಗೆಂತು ನಾಳಿಂಗೆಂತೆಂದು ಚಿಂತಿಸಲೇಕೆ
ತಂದಿಕ್ಕುವ ದೇವಂಗೆ ಬಡತನವೆ ರಾಮನಾಥ?

೪. ದಾಸೋಹಕ್ಕೆ ಕೊಡುವುದು ಸತ್ಯ ಶುದ್ಧ ಕಾಯಕದ ಫಲಮಾತ್ರ. ಉಳಿದ ರೀತಿಯಲ್ಲಿ ತಂದದ್ದಲ್ಲ.

ಆಯ್ದಕ್ಕಿ ಲಕ್ಕಮ್ಮ (ಸಂ.೫, ವ.೭೨೪)

ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು
ಒಮ್ಮನವ ತಂದು ಒಮ್ಮನದಲ್ಲಿಯೆ ಮಾಡಿ
ಇಮ್ಮನವಾಗದ ಮುನ್ನವೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ಸಲಬೇಕು ಮಾರಯ್ಯಾ,

ಆಯ್ದಕ್ಕಿ ಮಾರಯ್ಯ (ಸಂ.೬, ವ.೧೧೮೨)

ಬೇಡಿ ತಂದು ದಾಸೋಹವ ಮಾಡುವನ್ನಬರ
ಪಂಗುಳನ ಪಯಣದಂತೆ.
ಯಾಚಕತ್ವ ಭಕ್ತಂಗುಂಟೆ?
ಭಕ್ತನಾಗಿ ಹುಟ್ಟಿ ಭಕ್ತರ ಬೇಡಿತಂದು ಮಾಡಿ ಮುಕ್ತಿಯನರಸಲುಂಟೆ?
ಅದು ಅಮರೇಶ್ವರ ಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.

ನುಲಿಯ ಚಂದಯ್ಯ (ಸಂ.೭, ವ.೧೨೯೧)

ಕಂದಿಸಿ ಕುಂದಿಸಿ ಬಂಧಿಸಿ ಕಂಡವರ ಬೇಡಿ ತಂದು
ಜಂಗಮಕ್ಕೆ ಮಾಡಿದೆನೆಂಬ ದಂದುಗದೋಹರ ಲಿಂಗಕ್ಕೆ ನೈವೇದ್ಯ ಸಲ್ಲ.
ತನು ಕರಗಿ ಮನಬಳಲಿ ಬಂದ ಚರದ ಅನುವರಿತು
ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ
ದಾಸೋಹ ಮಾಡುವುದೆ ಮಾಟ.
ಕಾರೆಯ ಕಾಯಿ ಕಾಡಿನ ಸೊಪ್ಪಾಯಿತ್ತಾದಡೂ
ಕಾಯಕದಿಂದ ಬಂದುದು ಲಿಂಗಾರ್ಪಿತ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು.

ನುಲಿಯ ಚಂದಯ್ಯ (ಸಂ.೭, ವ.೧೩೧೩)

ಜಲಚರಕ್ಕೇಕೆ ತೆಪ್ಪದ ಹಂಗು? ವಿಹಂಗಗೇಕೆ ಅಡಿವಜ್ಜೆಯ ಮೆಟ್ಟು?
ಮಧುರರಸಕ್ಕೇಕೆ ಮೇಲಪ್ಪ ಸಿಹಿ? ಕಲ್ಪವೃಕ್ಷಕ್ಕೇಕೆ ಕಾಲದ ಹಂಗು?
ದಾಸೋಹವನರಿದು ಮಾಡುವಂಗೆ ಇನ್ನೇತರ ಪೂಜೆ ಪುಣ್ಯ?
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕೆ ಎಡೆದೆರಪಿಲ್ಲ.

ಮೋಳಿಗೆಯ ಮಾರಯ್ಯ (ಸಂ.೮, ವ.೧೮೯೪)

ಪರರ ಕಾಡಿ ಬೇಡಿ ಮಾಡಿಹೆನೆಂಬ ಮೋಡಿ ಏತಕ್ಕೊ?
ಕಾಡಸೊಪ್ಪಾದಡೇನು ಬೇಡದೆ ಉಂಬ ಆರೂಢಂಗೆ
ಮೂರಡಿಗೊಮ್ಮೆ ನಮೋ ನಮೋ ಎಂಬೆ ನಿಃಕಳಂಕಮಲ್ಲಿಕಾರ್ಜುನಾ.

ಈ ಕಾಯಕ ದಾಸೋಹ ವ್ಯವಸ್ಥೆಗೆ ಒಂದು ಸಹಾಯಕ ಅಂಶದಂತೆ ಇರುವ ಜೋಡಣೆಯನ್ನೂ ನಾವು ತಿಳಿದುಕೊಳ್ಳಬೇಕು. ದುಂದು-ಅಪವ್ಯಯ, ಉಳ್ಳವರು- ಇಲ್ಲದವರು ಎಂದು ಮಾಡಿದ ವಿಭಜನೆಯ ವ್ಯವಸ್ಥೆಯಲ್ಲಿ ಉಳ್ಳವರಿಗೆ ತೂಕದಿಂದ ಖರ್ಚುಮಾಡುವ ಅವಶ್ಯಕತೆಯಿರಲಿಲ್ಲ. ಬದಲಾಗಿ ತಮ್ಮ "ಉಳ್ಳತನವನ್ನು ಆಡಂಬರದಿಂದ ಪ್ರದರ್ಶಿಸುವುದಿತ್ತು. ಹೀಗಾಗಿ ಯಾಗ ಯಜ್ಞಾದಿಗಳು, ಪೂಜೆ, ಆಚರಣೆಗಳಲ್ಲಿ ತುಪ್ಪ, ಧಾನ್ಯ, ಪ್ರಾಣಿವಧೆ, ಪದಾರ್ಥದ ಅಪವ್ಯಯ ಯಥೇಚ್ಛವಾಗಿ ಆಗುತ್ತಿತ್ತು. ಇಲ್ಲದವರಿಗೆ ಊಟಕ್ಕೂ ಕೊರತೆಯಿದ್ದರೂ ಈ ದುಂದು ಖರ್ಚಿಗೆ ಯಾವ ಹಿಡಿತವೂ ಇರಲಿಲ್ಲ. ಬಸವಣ್ಣನವರು ಇದನ್ನು ಈ ವಚನದಲ್ಲಿ ವೀಕ್ಷಿಸುತ್ತಾರೆ.

ಬಸವಣ್ಣ (ಸಂ.೧, ವ.೧೯೪)

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು,
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ.
ಉಂಬ ಜಂಗಮ ಬಂದಡೆ ನಡೆಯೆಂಬುರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ
ಕಲ್ಲ ತಾಗಿದ ಮಿಟ್ಟಿಯಂತಪ್ಪರಯ್ಯಾ,

ಪೂಜೆಯ ಆಡಂಬರವನ್ನು ಹೀಗೆ ಹೀಯಾಳಿಸುತ್ತಾರೆ:

ಬಸವಣ್ಣ (ಸಂ.೧, ವ.೧೮೪)

ಬಂಡಿತುಂಬ ಪತ್ರೆಯ ತಂದು ಕಂಡಕಂಡಲ್ಲಿ ಮಜ್ಜನಕ್ಕೆರೆವಿರಿ.
ತಾಪತ್ರಯವ ಕಳೆದು ಪೂಜಿಸಿ, ತಾಪತ್ರಯವ ಲಿಂಗನೊಲ್ಲ.
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ?

[1] ಈ ತರಹದ ಸಂಖ್ಯೆಯ ವಿವರ: ಸವಸ-7/845 :- ಸಮಗ್ರ ವಚನ ಸಂಪುಟ -7, ವಚನ ಸಂಖ್ಯೆ-845 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
ದೇವನನ್ನು ಇಷ್ಟಲಿಂಗ ರೂಪದಲ್ಲಿ ಪೂಜಿಸುವುದು. :👈 👉:ಅಲ್ಲಮ ಪ್ರಭುವಿನ ವಚನಗಳಲ್ಲಿ ಖಗೋಳ ವಿಜ್ಞಾನ